ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕಪಗಲ್ ಗ್ರಾಮದ ಹತ್ತಿರ ರೈತರು ರಾಯಚೂರು -ಸಿಂಧನೂರು ರಸ್ತೆಯಲ್ಲಿ ಕಲ್ಮಲದಿಂದ ಸಿಂಧನೂರುವರೆಗಿನ ಚತುಷ್ಪತ ರಸ್ತೆ ಕಾಮಗಾರಿಗಾಗಿ ವಶಪಡಿಸಿಕೊಂಡಿರುವ ಜಮೀನುಗಳಿಗೆ ಶೀಘ್ರವೇ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿದರು.
ಚತುಷ್ಪತ ರಸ್ತೆ ನಿರ್ಮಾಣ ಕಾಮಗಾರಿಗಾಗಿ ವಶಪಡಿಸಿಕೊಂಡಿರುವ ರೈತರ ಜಮೀನುಗಳನ್ನು ಸರ್ವೆ ಮಾಡಿಸಿ, ಗಡಿಯನ್ನು ಗುರುತಿಸಿ ಭೂಮಿಯನ್ನು ಕಳೆದುಕೊಂಡ ರೈತರಿಗೆ ಸೂಕ್ತವಾದ ಪರಿಹಾರವನ್ನು ಒದಗಿಸಬೇಕು. ಇಲ್ಲವಾದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ರೈತ ಮುಖಂಡರಾದ ಹನುಮಂತರಾಯ್ ಕಪಗಲ್ ಮಾತನಾಡಿ, ರಾಯಚೂರು ಜಿಲ್ಲಾಧಿಕಾರಿಗಳು ಕಲ್ಮಲದಿಂದ ಸಿಂಧನೂರುವರೆಗಿನ ವಶಪಡಿಸಿಕೊಂಡ ಭೂಮಿಗಳನ್ನು ಆಳತೆ ಮಾಡಿ, ಗಡಿ ಗುರುತಿಸುವುದಕ್ಕೆ ನೋಟಿಸ್ ನೀಡುವುದಾಗಿ ತಿಳಿಸಿದ್ದರು. ರೈತರಿಗೆ ಪರಿಹಾರ ನೀಡುವವರೆಗೆ ರೈತರ ಜಮೀನಿನಲ್ಲಿ ಯಾವುದೆ ಕಾಮಗಾರಿ ಕೈಗೊಳದಂತೆ ರಸ್ತೆ ನಿರ್ಮಾಣ ಗುತ್ತಿಗೆ ಪಡೆದ ಭಾರತ್ ವಾಣಿಜ್ಯ ಕಂಪನಿಗೂ ಸೂಚನೆ ಹೊರಡಿಸಿದ್ದರು. ಜಿಲ್ಲಾಧಿಕಾರಿಯ ಆದೇಶ ಗಾಳಿಗೆ ತೂರಿ ರಸ್ತೆ ನಿರ್ಮಾಣಕ್ಕೆ ಕಂಪನಿಯವರು ಮುಂದಾಗಿದ್ದಾರೆ. ರೈತರ ಜಮೀನುಗಳಲ್ಲಿ ರಸ್ತೆ ನಿರ್ಮಾಣಕ್ಕಾಗಿ ಭೂಮಿಯನ್ನು ಅಗೆಯಲು ಮುಂದಾಗಿದ್ದಾರೆ ಎಂದು ದೂರಿದರು.
ಈ ಸುದ್ದಿ ಓದಿದ್ದೀರಾ ? ರಾಯಚೂರು | 85ನೇ ಕಾಲುವೆಗೆ ಸಮರ್ಪಕ ನೀರು ಹರಿಸುವಂತೆ ಒತ್ತಾಯಿಸಿ ರೈತರ ಪ್ರತಿಭಟನೆ
ಜಮೀನಿನಲ್ಲಿ ವಾಹನಗಳ ಸಂಚಾರ ಹೆಚ್ಚಾಗಿದ್ದು, ಕಪಗಲ್ ಗ್ರಾಮದ ವ್ಯಾಪ್ತಿಯಲ್ಲಿ ರೈತರು ತಮ್ಮ ಜಮೀನುಗಳಲ್ಲಿ ಬೆಳೆಗಳನ್ನು ಬೆಳೆಯುವುದಕ್ಕೆ ಸಾಧ್ಯವಾಗುತ್ತಿಲ್ಲ. ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದಿರುವ ಬೆಳೆಗಳಿಗೂ ವಾಹನ ಸಂಚಾರದಿಂದ ಹಾನಿಯಾಗುತ್ತಿದೆ. ಇದರಿಂದ ರೈತರಿಗೆ ಭಾರಿ ನಷ್ಟವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೂಡಲೇ ಜಿಲ್ಲಾಧಿಕಾರಿಗಳು ರೈತರಿಗೆ ಬೆಳೆ ನಷ್ಟ ಪರಿಹಾರ ನೀಡಬೇಕು ಹಾಗೂ ರೈತರಿಂದ ಸ್ವಾಧಿನಪಡಿಸಿಕೊಂಡಿರುವ ಜಮೀನಿಗೆ ಸೂಕ್ತವಾದ ಪರಿಹಾರವನ್ನು ನೀಡುವವರೆಗೂ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದರು.
ಕಪಗಲ್ ಗ್ರಾಮದ ರೈತರಾದ ಶರಣಬಸವ ಬೆಟ್ಟದೂರು,ಮುಸ್ತಾಪಸಾಹುಕರ್, ರಮೇಶನಾಯಕ, ಸಾಲಿ ಗೋಕುಲಪ್ಪಸಾಹುಕರ್, ರಾಮಲಿಂಗಪ್ಪ, ಕೃಷ್ಣನಾಯಕ, ಗೋವಿಂದಪ್ಪನಾಯಕ, ಯಲ್ಲಯ್ಯನಾಯಕ, ರಾಜು, ವಿಜಯಕುಮಾರ ಸಾಹುಕರ್, ಚಂದಪ್ಪನಾಯಕ, ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Hi