ಒಳಮೀಸಲಾತಿಯನ್ನು ಸಿದ್ದರಾಮಯ್ಯ ಸರ್ಕಾರವು ಕೂಡಲೇ ಅನುಷ್ಠಾನಗೊಳಿಸಬೇಕೆಂದಯ ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯು ಬಳ್ಳಾರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ದಲಿತ ಸಂಘರ್ಷ ಸಮಿತಿ, ಪರಿಶಿಷ್ಟ ಜಾತಿಯೊಳಗಿನ ಉಪ ಜಾತಿಗಳಿಗೆ ಒಳಮೀಸಲಾತಿ ಕಲ್ಪಿಸಲು ಸಂವಿಧಾನ ಬದ್ಧವಾದ ಅಧಿಕಾರ ಇದೆ ಎಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಐತಿಹಾಸಿಕವಾಗಿದೆ. ಈ ತೀರ್ಪನ್ನು ರಾಜ್ಯ ಸರ್ಕಾರ ತಕ್ಷಣವೇ ಅನುಷ್ಟಾನಗೊಳಿಸುವಂತೆ ಆಗ್ರಹಿಸಿ ಹಾಗೂ ವಿವಿಧ ಹಕ್ಕೊತ್ತಾಯಗಳ ಈಡೇರಿಕೆಗಾಗಿ ಒತ್ತಾಯಿಸಿದರು. ಬಳಿಕ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾ ಸಂಚಾಲಕರಾದ ಜಿ. ಗೋವರ್ಧನ ಅವರು ಮಾತನಾಡಿ, ಪರಿಶಿಷ್ಟ ಜಾತಿಯೊಳಗಿನ ಉಪ ಜಾತಿಗಳಿಗೆ ಒಳಮೀಸಲಾತಿ ಕಲ್ಪಿಸಲು ಸಂವಿಧಾನ ಬದ್ಧವಾದ ಅಧಿಕಾರ ಇದೆ. ಈ ಆದೇಶವನ್ನು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ಇದೆ ಎಂದು ಸುಪ್ರೀಂ ಕೋರ್ಟ್ 2024 ರ ಆಗಸ್ಟ್ 01 ರಂದು ಐತಿಹಾಸಿಕ ತೀರ್ಪು ನೀಡಿದೆ. ಇದು ಕಳೆದ 30 ವರ್ಷಗಳಿಂದ ಪ್ರೊ. ಬಿ.ಕೃಷ್ಣಪ್ಪ ನವರು ಸ್ಥಾಪಿಸಿದ ದಲಿತ ಸಂಘರ್ಷ ಸಮಿತಿ ಹೋರಾಟಕ್ಕೆ ಸಿಕ್ಕ ಜಯವಾಗಿದೆ. ಅಲ್ಲದೇ ಇದು ಮೀಸಲಾತಿ ವಿಷಯಕ್ಕೆ ಬಹು ಮಹತ್ವದ ಹೆಜ್ಜೆಯಾಗಿದೆ ಎಂದರು.
ಈ ಹಿಂದೆ ಈ ವಿಚಾರದಲ್ಲಿ ಪರಸ್ಪರ ವಿರುದ್ಧವಾದ ತೀರ್ಪಗಳನ್ನು ನ್ಯಾಯಾಲಯಗಳು ನೀಡಿದ್ದವು. ಈಗ ಏಳು ನ್ಯಾಯ ಮೂರ್ತಿಗಳ ಸಂವಿಧಾನ ಪೀಠವು ಈ ವಿಚಾರದಲ್ಲಿದ್ದ ಗೊಂದಲವನ್ನು ಪರಿಹರಿಸಿದೆ. ಒಳ ಮೀಸಲಾತಿ ನೀಡಿಕೆಯು ಸಂವಿಧಾನ ಕಲ್ಪಿಸಿರುವ ಸಮಾನತೆಯ ಹಕ್ಕನ್ನು ಉಲ್ಲಂಘಿಸುವುದಿಲ್ಲ. ವಾಸ್ತವಿಕವಾಗಿ ಸಮಾನತೆಯನ್ನು ಹೆಚ್ಚಿಸಲು ಅಗತ್ಯವಾಗಿದೆ ಎಂದು ನ್ಯಾಯಾಲಯ ಹೇಳಿದೆ. ಬದಲಿಗೆ ವಾಸ್ತವಿಕವಾಗಿ ಸಮಾನತೆಯನ್ನು ಹೆಚ್ಚಿಸಲು ಅನ್ವಯವಾಗಿದೆ ಎಂದು ನ್ಯಾಯಾಲಯ ಹೇಳಿದೆ ಎಂದರು.
ಇದನ್ನು ಓದಿದ್ದೀರಾ? GST ಬಗ್ಗೆ ಪ್ರಶ್ನಿಸಿದ ಖ್ಯಾತ ಉದ್ಯಮಿಯನ್ನು ಕ್ಷಮೆ ಕೇಳುವಂತೆ ಮಾಡಿದ ನಿರ್ಮಲಾ ಸೀತಾರಾಮನ್; ವಿಡಿಯೋ ವೈರಲ್
ಪರಿಶಿಷ್ಟ ಜಾತಿಯ ಸಮುದಾಯಗಳು ಸಮ ರೂಪದಲ್ಲಿಲ್ಲ ಮತ್ತು ಅವುಗಳಿಗೆ ಅಗೋಚರವಾದ ಏಕರೂಪವು ಇಲ್ಲ ಎಂದು ನ್ಯಾಯಾಲಯ ಹೇಳಿದೆ. ಈ ಜಾತಿಗಳ ಒಳಗೆ ಇರುವ ಕೆಲವು ಉಪಜಾತಿಗಳಿಗೆ ಮೀಸಲಾತಿಯ ಪ್ರಯೋಜನವನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ಇಂತಹ ಉಪಜಾತಿಗಳು ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿವೆ. ಹಿಂದುಳಿದಿರುವಿಕೆಯ ಆಧಾರದಲ್ಲಿ ಮೀಸಲಾತಿ ನೀಡಿದರೆ ಈತನಕ ಮೀಸಲಾತಿ ಲಾಭ ಪಡೆದುಕೊಳ್ಳುಲು ಸಾಧ್ಯವಾಗದ ಸಮುದಾಯಗಳಿಗೆ ಕೂಡ ಪ್ರಯೋಜನ ದೊರೆಯಬಹುದು ಎಂದು ಗೋವರ್ಧನ ತಿಳಿಸಿದರು.
