ಉತ್ತರ ಪ್ರದೇಶದ ಮೀರತ್‌ನಲ್ಲಿ ಹೆಲಿಕಾಪ್ಟರ್ ‘ಕಳ್ಳತನ’ವಾಗಿದೆ ಎಂಬ ಆರೋಪವು ರಾಜಕೀಯ ಬಿರುಗಾಳಿಯನ್ನು ಸೃಷ್ಟಿಸಿದೆ. ಈ ವಿಚಾರದಲ್ಲಿ ಉತ್ತರ ಪ್ರದೇಶ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಎಸ್‌ಎಆರ್ ಏವಿಯೇಷನ್ ಸರ್ವಿಸ್ ಪ್ರೈವೇಟ್ ಲಿಮಿಟೆಡ್‌ನ ಪೈಲಟ್ ರವೀಂದ್ರ ಸಿಂಗ್ ತನ್ನ ಸಂಸ್ಥೆಯ ಹೆಲಿಕಾಪ್ಟರ್ ಕಳ್ಳತನವಾಗಿದೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಮೇ ತಿಂಗಳಲ್ಲಿ ಕೆಲವರು ಟ್ರಕ್‌ನಲ್ಲಿ ಹೆಲಿಕಾಪ್ಟರ್ ಅನ್ನು ವಿವಿಧ ಭಾಗಗಳಾಗಿ ವಿಂಗಡಿಸಿ ತೆಗೆದುಕೊಂಡು ಹೋಗಿದ್ದಾರೆ ಎಂದು ಸಿಂಗ್ ದೂರಿದ್ದಾರೆ. ಹಾಗೆಯೇ ತನ್ನ ಮೇಲೆ ಈ ಆರೋಪಿಗಳು ಹಲ್ಲೆ ಮಾಡಿರುವುದಾಗಿಯೂ ತಿಳಿಸಿದ್ದಾರೆ.
ಈ ಪ್ರಕರಣ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅಖಿಲೇಶ್ ಯಾದವ್, “ಇದುವರೆಗೂ ಉತ್ತರ ಪ್ರದೇಶದ ಕ್ರಿಮಿನಲ್‌ಗಳು ಕೊಲೆ, ದರೋಡೆ, ಡಕಾಯಿತಿ ಮತ್ತು ಅತ್ಯಾಚಾರದ ಮೂಲಕ ಬಿಜೆಪಿಯ ಕಾನೂನು ಸುವ್ಯವಸ್ಥೆಯನ್ನು ಪುಡಿ ಪುಡಿ ಮಾಡುತ್ತಿದ್ದರು. ಈಗ ಮೀರತ್‌ನಲ್ಲಿ ಹೆಲಿಕಾಪ್ಟರ್ ಅನ್ನು ಟ್ರಕ್‌ನಲ್ಲಿ ತೆಗೆದುಕೊಂಡು ಹೋದ ಸುದ್ದಿ ಬಂದಿದೆ. ಇದು ವಿಮಾನ ನಿಲ್ದಾಣದ ಭದ್ರತೆಯ ಪ್ರಶ್ನೆಯೂ ಹೌದು. ಅಲ್ಲಿನ ಸೆಕ್ಯುರಿಟಿ ರಜೆಯಲ್ಲಿದ್ದರಾ” ಎಂದು ಪ್ರಶ್ನಿಸಿದ್ದಾರೆ.
ಇದನ್ನು ಓದಿದ್ದೀರಾ? ಭಾರೀ ಮಳೆ | ಪುಣೆಯಲ್ಲಿ ನಾಲ್ವರು ಪ್ರಯಾಣಿಕರಿದ್ದ ಹೆಲಿಕಾಪ್ಟರ್ ಪತನ
ಇನ್ನು ಪೊಲೀಸರು ಶೀಘ್ರವಾಗಿ ಇದಕ್ಕೆ ಪ್ರತಿಕ್ರಿಯೆ ನೀಡಿದ್ದು, ಹೆಲಿಕಾಪ್ಟರ್ ಅನ್ನು ಎಸ್‌ಎಆರ್ ಏವಿಯೇಷನ್ ಸರ್ವಿಸ್ ಪ್ರೈವೇಟ್ ಲಿಮಿಟೆಡ್ ಮತ್ತೊಂದು ಸಂಸ್ಥೆಗೆ ಮಾರಾಟ ಮಾಡಿದೆ. ಈ ವಿಷಯ ತಿಳಿದಿರದ ಕಾರಣ ಕಳ್ಳತನದ ಬಗ್ಗೆ ಸಿಂಗ್ ದೂರು ನೀಡಿದ್ದಾರೆ ಎಂದು ಸರ್ಕಲ್ ಅಧಿಕಾರಿ ಅಂತರಿಕ್ಷ್ ಜೈನ್ ಹೇಳಿಕೊಂಡಿದ್ದಾರೆ.
ಇದು ಕಳ್ಳತನವಲ್ಲ, ಇಬ್ಬರು ಪಾಲುದಾರರ ನಡುವಿನ ವಿವಾದವಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಹಾಗೆಯೇ ತನ್ನ ಮೇಲೆ ಹಲ್ಲೆ ನಡೆದಿದೆ ಎಂಬ ಪೈಲಟ್ ರವೀಂದ್ರ ಸಿಂಗ್ ಆರೋಪ ಸಾಬೀತಾಗಿಲ್ಲ ಎಂದು ತಿಳಿಸಿದ್ದಾರೆ.
उप्र में अब तक अपराधी केवल हत्या, लूट, डकैती, दुष्कर्म से भाजपा की क़ानून-व्यवस्था का पुर्ज़ा- पुर्ज़ा खोल रहे थे लेकिन अब तो मेरठ में सच में हैलीकाप्टर का पुर्ज़ा- पुर्ज़ा खोलकर ट्रक पर लादकर ले जाने की ख़बर आयी है। ये हवाईपट्टी की सुरक्षा का भी सवाल है। क्या वहाँ की सुरक्षा…
— Akhilesh Yadav (@yadavakhilesh) September 12, 2024
