ಮಕ್ಕಳು ಎದುರಿಸುವ ಮಾನಸಿಕ ಒತ್ತಡಗಳನ್ನು ಆರಂಭದಲ್ಲಿಯೇ ಗುರುತಿಸುವ ಮೂಲಕ, ತೊಡಕುಗಳಿಗೆ ಪರಿಹಾರಗಳು ಸಿಗುತ್ತವೆ ಎಂಬ ಆತ್ಮವಿಶ್ವಾಸವನ್ನು ತುಂಬಿಸುವುದು ಅತ್ಯಂತ ಮುಖ್ಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ರಾಮನಗರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ನ್ಯಾ. ಸವಿತಾ ಪಿ.ಆರ್. ಅವರು ಹೇಳಿದರು.
ಕಂದಾಯ ಭವನದಲ್ಲಿ ನಡೆದ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಯ ಅಂಗವಾಗಿ ‘ಮನೋಸಂಗಮ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತಾಡಲು ಪೋಷಕರು ಸೂಕ್ತ ವಾತಾವರಣ ಕಲ್ಪಿಸಬೇಕು. ಮಕ್ಕಳು ಹೇಳುವ ಮಾತುಗಳನ್ನು ಪೂರ್ವಾಗ್ರಹವಿಲ್ಲದೆ ಕೇಳಿ, ಅವರಿಗೆ ಬೆಂಬಲ ನೀಡುವುದರಿಂದ ಆಪತ್ತುಗಳನ್ನು ತಪ್ಪಿಸಬಹುದಾಗಿದೆ. ವಿದ್ಯಾರ್ಥಿಗಳು ಶೈಕ್ಷಣಿಕ ಒತ್ತಡದ ನಡುವೆ ಯೋಗ, ಧ್ಯಾನ, ಕ್ರೀಡೆ ಮತ್ತು ವ್ಯಾಯಾಮಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಮಾನಸಿಕ ಒತ್ತಡವನ್ನು ತಾಳಬಹುದು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಕಾನೂನಾತ್ಮಕ ನೆರವು ನೀಡುತ್ತದೆ. ಆತ್ಮಹತ್ಯೆ ತಡೆಯುವ ನಿಟ್ಟಿನಲ್ಲಿ ಜಾಗೃತಿಯನ್ನು ಹೆಚ್ಚಿಸಲು ಸಮಾಜದ ಸಹಕಾರ ಅಗತ್ಯವಿದೆ ಎಂದು ತಿಳಿಸಿದರು.

ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ. ಕುಮಾರ್ ಕೆ. ಮಾತನಾಡಿ, ಮಾನಸಿಕ ಅನಾರೋಗ್ಯಕ್ಕೆ ಚಿಕಿತ್ಸೆಯನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಪಡೆಯಬಹುದು ಎಂದು ವಿವರಿಸಿದರು.
ಮನೋವೈದ್ಯಕೀಯ ಕಾರ್ಯಕರ್ತೆ ಪದ್ಮರೇಖಾ ಮಾತನಾಡಿ, ಪರೀಕ್ಷಾ ಒತ್ತಡ, ಕೌಟುಂಬಿಕ ಸಮಸ್ಯೆ ಇಲ್ಲವೇ ಆತ್ಮಹತ್ಯೆಯ ಆಲೋಚನೆಯಲ್ಲಿರುವವರು 14416 ಟೇಲಿ ಮಾನಸ್ ಸೇವೆ ಬಳಸಿಕೊಂಡು 24/7 ಉಚಿತ ಸಹಾಯ ಪಡೆಯಬಹುದು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಮಂಜುನಾಥ್, ಜಿಲ್ಲಾ ಗ್ರಂಥಪಾಲಕ ಅಧಿಕಾರಿ ಚನ್ನಕೇಶವ, ಮನೋವೈದ್ಯ ಡಾ. ಆದರ್ಶ್, ನಿಮ್ಹಾನ್ಸ್ ಪ್ರಾಂಶುಪಾಲರು ನರ್ಸಿಂಗ್ ಕಾಲೇಜು ಡಾ. ಕಾತ್ಯಾಯಿನಿ, ಬೆಂಗಳೂರು ನಿಮ್ಹಾನ್ಸ್ ಮನೋವೈದ್ಯಕೀಯ ಸಮಾಜಕಾರ್ಯ ಪ್ರಾಧ್ಯಾಪಕ ಡಾ. ಅನೀಶ್. ವಿ ಚೆರಿಯನ್, ಮನೋರೋಗ ತಜ್ಞ ಡಾ. ಶಿವಸ್ವಾಮಿ, ಮನೋರೋಗ ವಿಭಾಗದ ಮುಖ್ಯಸ್ಥರು ಡಾ.ಕೆ. ಜಾನ್ ವಿಜಯ್ ಸಾಗರ್, ನಿಮ್ಹಾನ್ಸ್ ಮನೋರೋಗ ವಿಭಾಗದ ಪ್ರಾಧ್ಯಾಪಕ ಡಾ.ರಾಜೇಂದ್ರ ಕೆ.ಎಂ ಹಾಗೂ ಆರೋಗ್ಯ ಸಿಬ್ಬಂದಿ, ಪೊಲೀಸ್ ಅಧಿಕಾರಿಗಳು, ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು ಹಾಜರಿದ್ದರು.

