ಕಡಿಮೆ ಅವಧಿಯಲ್ಲಿ ನಿಮ್ಮ ಹಣ ಡಬಲ್ ಮಾಡುತ್ತೇವೆ ಎಂದು ಹಣ ತುಂಬಿಸಿಕೊಂಡು ಸಾವಿರಾರು ಜನರಿಗೆ ಕೋಟ್ಯಂತರ ರೂ. ವಂಚಿಸಿರುವ ವಿವಿಧ ಕಂಪನಿಗಳಿಂದ ನ್ಯಾಯ ಕೊಡಿಸುವಂತೆ ಆಗ್ರಹಿಸಿ ವಂಚನೆ ಸಂತ್ರಸ್ತ ಠೇವಣಿದಾರರು ಕುಟುಂಬದವರ ಸಂಸ್ಥೆ (ತಗಿ ಪೀಡಿತ ಜಮಾಕರ್ತ ಪರಿವಾರ) ವತಿಯಿಂದ ಹಾವೇರಿ ಜಿಲ್ಲೆಯ ದೇವಗಿರಿಯ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಅಸಹಕಾರ ಚಳವಳಿ ನಡೆಸಿದ್ದು ಹನ್ನೆರಡನೇ ದಿನಕ್ಕೆ ಕಾಲಿಟ್ಟಿದೆ.
ಈ ಧರಣಿಯಲ್ಲಿ ವಂಚನೆ ಸಂತ್ರಸ್ತ ಠೇವಣಿದಾರರು ಕುಟುಂಬದವರ ಸಂಸ್ಥೆಯ ರಾಜ್ಯಾಧ್ಯಕ್ಷ ಅಪ್ಪಾಸಾಹೇಬ್ ಬುಗಡೆ ಮಾತನಾಡಿ, “ಅನೇಕ ಕಂಪನಿಗಳು ಜಿಲ್ಲೆ ಸೇರಿದಂತೆ ದೇಶಾದ್ಯಂತ ಒಂದು ಸಲ ಹಣ ಠೇವಣಿ ಇಟ್ಟರೆ ಐದು, ಆರು ವರ್ಷಗಳಲ್ಲಿ ದುಪ್ಪಟ್ಟು ಮಾಡಿಕೊಡುತ್ತೇವೆ. ಷೇರು ಹಣ ಪಾವತಿಸಿದರೆ, ಹತ್ತಾರು ಪಟ್ಟು ಲಾಭ ದೊರೆಯುತ್ತದೆ ಎಂದೆಲ್ಲ ನಂಬಿಸಿ ಕೋಟ್ಯಂತರ ರೂ. ಪಾವತಿಸಿಕೊಂಡು ಕಚೇರಿಗಳನ್ನು ಬಂದ್ ಮಾಡಿಕೊಂಡು ಪರಾರಿಯಾಗಿವೆ. ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರಗಳೇ ಕಾರಣ” ಎಂದು ಆರೋಪಿಸಿದರು.
ಮೊದಲಿಗೆ ಸರಕಾರಗಳೆ ಈ ಕಂಪನಿಗಳಿಗೆ ಲೈಸೆನ್ಸ್ ಕೊಟ್ಟಿತು. 2014-15ರಲ್ಲಿ ಸೆಬಿ ಮುಖಾಂತರ ಎಲ್ಲ ಕಂಪನಿಗಳನ್ನು ಬಂದು ಮಾಡಿ, ಆ ಕಂಪನಿಯಲ್ಲಿರುವ ಹಣವನ್ನು ಜಪ್ತಿ ಮಾಡಿತು. ಈ ಎಲ್ಲ ಹಣ ಸರಕಾರ ವಶದಲ್ಲಿದೆ. ಹತ್ತು ವರ್ಷಗಳಾದರು ಗ್ರಾಹಕರಿಗೆ ಹಣ ಕೊಡುವ ನಿಟ್ಟಿನಲ್ಲಿ ಮನಸ್ಸು ಮಾಡಿಲ್ಲ. ಗ್ರಾಹಕರು ತುಂಬಿದ ಹಣ ಸರಕಾರ ಕೊಡುವುದಿಲ್ಲ ಎಂದು ಹೇಳುತ್ತಿದ್ದು, ಕ್ರೂರ ಧೋರಣೆ ಹೊಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜನರಿಗೆ ಹಾವೇರಿ ಜಿಲ್ಲೆಯೊಂದರಲ್ಲೇ ಒಂದು ಕಂಪನಿ 40 ಕೋಟಿ ರೂ. ವಂಚಿಸಿದೆ. ಇಂತಹ ಅನೇಕ ಸಂಸ್ಥೆಗಳು ವಂಚನೆ ಮಾಡಿವೆ. ವಂಚನೆಗೀಡಾದವರಿಗೆ ಬರ್ಡ್ಸ್ ಕಾಯ್ದೆಯಡಿ ಅರ್ಜಿ ಸ್ವೀಕರಿಸಿ, 180 ದಿನದೊಳಗೆ ಎಲ್ಲ ಅರ್ಜಿದಾರರಿಗೆ ಹಣ ಕೊಡಿಸಬೇಕೆಂದು ಅಪ್ಪಾ ಸಾಹೇಬ್ ಬುಗಡಿ ಆಗ್ರಹಿಸಿದರು.
ಈ ಧರಣಿಯಲ್ಲಿ ಟಿಪಿಜೆಪಿ ಜಿಲ್ಲಾಧ್ಯಕ್ಷ ಸೋಮಶೇಖರೆಡ್ಡಿ ಮೈದೂರ, ಉಪಾಧ್ಯಕ್ಷರು ಸುರೇಶ ಬಸಪ್ಪ ವನಹಳ್ಳಿ, ಕಾರ್ಯದರ್ಶಿ : ಸೈಯ್ಯದಸಾಬ್ ಹುಲಗೂರು, ಶಿಗ್ಗಾವ್ ತಾಲೂಕು ಅಧ್ಯಕ್ಷ, ರಮೇಶ್ ಮರಿಯಪ್ಪ ಹರಿಜನ ಹಾಗೂ ವಂಚನೆಗೆ ಒಳಗಾದ ಸಂತ್ರಸ್ತರು ಉಪಸ್ಥಿತರಿದ್ದರು.
