ಮಹಿಳೆಯರಿಗೆ ಪ್ರತಿ ತಿಂಗಳು ನೀಡಬೇಕಾಗಿದ್ದ ಎರಡು ಸಾವಿರ ರೂ. ಗೃಹಲಕ್ಷ್ಮಿ ಹಣವನ್ನು ಕಳೆದ ಮೂರು ತಿಂಗಳಿಂದ ನೀಡಲಾಗದೇ ಕಾಂಗ್ರೆಸ್ ಸರ್ಕಾರ ಪಾಪರ್ ಆಗಿದೆ ಎಂದು ಜೆಡಿಎಸ್ ಆರೋಪಿಸಿದೆ.
ಎಕ್ಸ್ ತಾಣದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಅವರು, “ಫ್ರೀ ಫ್ರೀ ಫ್ರೀ ಎಂದು ಬೊಗಳೆ ಬಿಟ್ಟು ಅಧಿಕಾರಕ್ಕೇರಿದ ಕಾಂಗ್ರೆಸ್, ವಚನ ಭ್ರಷ್ಟ ಸಿದ್ದರಾಮಯ್ಯ ಸರ್ಕಾರ ಮತದಾರರಿಗೆ ಮಹಾದ್ರೋಹ ಎಸಗಿದೆ. ದಿವಾಳಿಯತ್ತ ಕಾಂಗ್ರೆಸ್ ಸರ್ಕಾರ ಮುಖಮಾಡಿದೆ” ಎಂದು ಟೀಕಿಸಿದೆ.
“ಪ್ರತಿ ತಿಂಗಳೂ ತಾಂತ್ರಿಕ ಸಮಸ್ಯೆ ಎನ್ನುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರೇ, ಸದ್ದಿಲ್ಲದೆ ರಾಜ್ಯದಲ್ಲಿ ಎರಡು ಲಕ್ಷ ಮಹಿಳೆಯರಿಗೆ 2,000 ರೂ. ಗೃಹಲಕ್ಷ್ಮಿ ಹಣ ಸ್ಥಗಿತಗೊಳಿಸಿದ್ದೀರಿ. ನಿಮ್ಮದು ವಚನಭ್ರಷ್ಟ ಸರ್ಕಾರ ಅಲ್ಲವೇ” ಎಂದು ಪ್ರಶ್ನಿಸಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಜೆಪಿಯ ದ್ವೇಷ ರಾಜಕಾರಣದ ವಿರುದ್ಧ ಒಗ್ಗಟ್ಟಿನ ಮಂತ್ರವೇ ಮದ್ದು
“ಗೃಹಲಕ್ಷ್ಮಿ ಹಣಕ್ಕೆ 3 ತಿಂಗಳಿಂದ ತಾಂತ್ರಿಕ ಸಮಸ್ಯೆ, ಈಗ ರಾಜ್ಯದಲ್ಲಿ 2 ಲಕ್ಷ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಸ್ಥಗಿತ, ಕಾಂಗ್ರೆಸ್ ಯೋಗ್ಯತೆಗೆ ಪೂರ್ತಿ 10 ಕೆಜಿ ಅಕ್ಕಿ ಕೊಡಲು ಸಾಧ್ಯವೇ ಆಗಿಲ್ಲ. ಈಗ 20 ಲಕ್ಷ ರೇಷನ್ ಕಾರ್ಡ್ ರದ್ದು ಮಾಡುತ್ತಿದ್ದೀರಿ. 200 ಯೂನಿಟ್ ಉಚಿತ ವಿದ್ಯುತ್ ಯಾರಿಗೂ ಸಿಗುತ್ತಿಲ್ಲ. ಯುವ ನಿಧಿ ಯಾರಿಗೂ ಸಿಕ್ಕಿಲ್ಲ, ಸಿಗುವುದು ಇಲ್ಲ ಇದು ಮಾತ್ರ ಗ್ಯಾರಂಟಿ” ಎಂದು ಜೆಡಿಎಸ್ ಲೇವಡಿ ಮಾಡಿದೆ.