ಸಮಾಜ ಕಲ್ಯಾಣ ಇಲಾಖೆಯು ಸೆಪ್ಟೆಂಬರ್ 15ರಂದು ಆಯೋಜಿಸಿರುವ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಬೀದರ್‌ನಿಂದ ಚಾಮರಾಜನಗರದವರೆಗೆ ಮಾನವ ಸರಪಳಿ ನಿರ್ಮಿಸುವ ಮಹತ್ವಾಕಾಂಕ್ಷಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇದನ್ನು ಯಶಸ್ವಿಯಾಗಿ ನಿರ್ವಹಿಸಲು ಎಲ್ಲರ ಸಹಕಾರ ಅಗತ್ಯ ಎಂದು ರಾಮನಗರ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರು ಹೇಳಿದರು.
ತಮ್ಮ ಕಚೇರಿಯಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲು ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಮತ್ತು ನೋಡಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಮನಗರ ಜಿಲ್ಲೆ ಹೆಜ್ಜಾಲದಿಂದ ಪ್ರಾರಂಭವಾಗಿ ಚನ್ನಪಟ್ಟಣ ತಾಲೂಕಿನ ಕೋಲೂರು ಗೇಟ್ ವರೆಗೆ ಮಾನವ ಸರಪಳಿ ನಿರ್ಮಾಣ ಮಾಡಬೇಕಿದೆ. ಈ ಸರಪಳಿಯು ಹಾದು ಹೋಗುವ ಮಾರ್ಗದಲ್ಲಿ ಪ್ರತಿ 100 ಮೀಟರ್ ಮತ್ತು 1 ಕಿಲೋ ಮೀಟರ್ ಅಂತರದಲ್ಲಿ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸರಪಳಿಗೆ ಹಾಜರಾಗಬೇಕು. ಈ ನಿಟ್ಟಿನಲ್ಲಿ ನೋಡಲ್ ಅಧಿಕಾರಿಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದ್ದಾರೆ.
ಯಾವುದೇ ರೀತಿಯ ಸಂವಹನದ ಸಮಸ್ಯೆ ಎದುರಾಗದಂತೆ ವಿಶೇಷವಾಗಿ ಗಮನ ಹರಿಸಬೇಕೆಂದು ಸೂಚನೆ ನೀಡಿದ ಜಿಲ್ಲಾಧಿಕಾರಿಗಳು, ಮಾನವ ಸರಪಳಿಗೆ ಬೇಕಾದ ಸ್ಥಳಾಂತರ ವ್ಯವಸ್ಥೆಗಾಗಿ ಬಸ್‌ಗಳ ವ್ಯವಸ್ಥೆ ಮಾಡಲಾಗುತ್ತದೆ. ಕಾರ್ಯಕ್ರಮವು ಬೆಳಿಗ್ಗೆ 8:30ರಿಂದ 10:30ರವರೆಗೆ ನಡೆಯಲಿದ್ದು, ಎಲ್ಲರೂ 8 ಗಂಟೆಗೆ ಸ್ಥಳದಲ್ಲಿ ಹಾಜರಿರಬೇಕು ಎಂದರು.
ಮುನ್ನೆಚ್ಚರಿಕೆಯ ಭಾಗವಾಗಿ, ಆ್ಯಂಬುಲೆನ್ಸ್ ವ್ಯವಸ್ಥೆ ಮತ್ತು ವಾಹನ ದಟ್ಟಣೆ ನಿಯಂತ್ರಣಕ್ಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ರಜೆ ಇರುವುದಿಲ್ಲ ಮತ್ತು ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು ಮತ್ತು ಲೆಕ್ಕಾಧಿಕಾರಿಗಳ ಪಾತ್ರ ಪ್ರಮುಖವಾಗಿರುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.
ಇದನ್ನು ಓದಿದ್ದೀರಾ? ರಾಮನಗರ | ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪೂರ್ವಭಾವಿ ಸಭೆ: ಪ್ರಗತಿಪರ ಸಂಘಟನೆಗಳಿಂದ ಬಹಿಷ್ಕಾರ
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ತಿಳಿಸಿದರು. ಅಂದಿನ ಕಾರ್ಯಕ್ರಮದಲ್ಲಿ ಯಾವುದೇ ತೊಡಕು ಬಾರದಂತೆ ಮುನ್ನೆಚ್ಚರಿಕೆಯಿಂದ ಕಾರ್ಯ ನಿರ್ವಹಿಸುವಂತೆ ಎಲ್ಲ ಸಿಬ್ಬಂದಿಗಳಿಗೆ ನಿರ್ದೇಶನ ನೀಡಲಾಯಿತು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಶಿವಕುಮಾರ್ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
