ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಅಧ್ಯಕ್ಷೆ ಮಾಧಬಿ ಪುರಿ ಬುಚ್ ವಿರುದ್ಧ ಲೋಕಪಾಲ್‌ಗೆ ದೂರು ಸಲ್ಲಿಸಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಮೊಯಿತ್ರಾ ಪೋಸ್ಟ್ ಮಾಡಿದ್ದಾರೆ. “ಪುರಿ ಬುಚ್ ವಿರುದ್ಧ ನಾನು ಎಲೆಕ್ಟ್ರಾನಿಕ್ ಮತ್ತು ಭೌತಿಕ ರೂಪದಲ್ಲಿ ಲೋಕಪಾಲ್‌ಗೆ ದೂರು ಸಲ್ಲಿಸಿದ್ದೇನೆ” ಎಂದು ತಿಳಿಸಿದ್ದಾರೆ.
“ಲೋಕಪಾಲ್ ಪ್ರಾಥಮಿಕ ತನಿಖೆಗಾಗಿ ಮತ್ತು ನಂತರ ಪೂರ್ಣ ಎಫ್‌ಐಆರ್ ವಿಚಾರಣೆಗಾಗಿ 30 ದಿನಗಳ ಒಳಗೆ ಪ್ರಕರಣವನ್ನು ಸಿಬಿಐ/ಇಡಿಗೆ ನೀಡಬೇಕು. ಈ ಪ್ರಕರಣದಲ್ಲಿ ಒಳಗೊಂಡಿರುವ ಪ್ರತಿಯೊಂದು ಘಟಕದ, ಪ್ರತಿ ಮೂಲದ ತನಿಖೆಯಾಗಬೇಕು” ಎಂದು ಹೇಳಿದ್ದಾರೆ.
ತನ್ನ ದೂರಿನಲ್ಲಿ ಮೊಯಿತ್ರಾ, ಸೆಬಿ ಅಧ್ಯಕ್ಷೆ ಬುಚ್ ಅವರನ್ನು ಸರಣಿ ಅಪರಾಧಿ ಎಂದು ಉಲ್ಲೇಖಿಸಿದ್ದಾರೆ. ದೂರಿನಲ್ಲಿ ಬುಚ್ ಅವರನ್ನು ಏಪ್ರಿಲ್ 2017ರಿಂದ ಅಕ್ಟೋಬರ್ 2021ರವರೆಗೆ ಸೆಬಿಯ ಸದಸ್ಯರಾಗಿ ನೇಮಕ ಮಾಡಿರುವುದನ್ನು ಮತ್ತು ಮಾರ್ಚ್ 2022ರಲ್ಲಿ ಅಧ್ಯಕ್ಷರಾಗಿ ಮಾಡಿರುವುದನ್ನು ಉಲ್ಲೇಖಿಸಲಾಗಿದೆ.
ಇದನ್ನು ಓದಿದ್ದೀರಾ? ಮಾಧವಿ ಬುಚ್ ವಿರುದ್ಧ ತಿರುಗಿಬಿದ್ದ ಸೆಬಿ ಉನ್ನತಾಧಿಕಾರಿಗಳು
ಭಾರತದ ಶ್ರೀಮಂತ ವ್ಯಕ್ತಿ ಗೌತಮ್ ಅದಾನಿ ಗ್ರೂಪ್‌ನ ವಂಚನೆಯನ್ನು ಕಳೆದ ವರ್ಷ ಬಹಿರಂಗಪಡಿಸಿದ್ದ ಅಮೆರಿಕ ಮೂಲದ ಶಾರ್ಟ್ ಸೆಲ್ಲರ್ ಕಂಪನಿ ಹಿಂಡನ್‌ಬರ್ಗ್ 2024ರ ಆಗಸ್ಟ್ 10ರಂದು ಭಾರತಕ್ಕೆ ಸಂಬಂಧಿಸಿದ ಮತ್ತೊಂದು ಸ್ಪೋಟಕ ವರದಿಯನ್ನು ಬಹಿರಂಗಪಡಿಸಿದೆ.
ಭಾರತೀಯ ಷೇರು ಪೇಟೆ ನಿಯಂತ್ರಣ ಮಂಡಳಿ (ಸೆಬಿ) ಅಧ್ಯಕ್ಷೆ ಮಾಧವಿ ಬುಚ್ ಮತ್ತು ಅವರ ಪತಿ ಧವಲ್ ಬುಚ್ ಅದಾನಿ ಮನಿ ಸೈಫನಿಂಗ್ ಹಗರಣದಲ್ಲಿ ಬಳಸಲಾದ ಆಫ್‌ಶೋರ್ ಫಂಡ್‌ನಲ್ಲಿ ಪಾಲನ್ನು ಹೊಂದಿದ್ದರು ಎಂದು ಹಿಂಡನ್‌ಬರ್ಗ್ ಆರೋಪಿಸಿದೆ.
ಆದರೆ ಈ ಆರೋಪವನ್ನು ಸೆಬಿ ಅಧ್ಯಕ್ಷೆ ಮತ್ತು ಅವರ ಪತಿ ಅಲ್ಲಗಳೆದಿದ್ದಾರೆ. ಈ ಆರೋಪಗಳು ಆಧಾರರಹಿತವಾಗಿದೆ. ನಮ್ಮ ಹಣಕಾಸು ವ್ಯವಹಾರಗಳು ತೆರೆದ ಪುಸ್ತಕವಿದ್ದಂತೆ. ಸೆಬಿಯಿಂದ ಶೋಕಾಸ್ ನೋಟಿಸ್ ಪಡೆದಿರುವ ಹಿಂಡನ್‌ಬರ್ಗ್ ಈಗ ಚಾರಿತ್ರ್ಯ ಹರಣಕ್ಕೆ ಮುಂದಾಗಿದೆ ಎಂದು ದಂಪತಿ ಹೇಳಿಕೊಂಡಿದ್ದಾರೆ.
My LokPal complaint against Ms. Puri-Buch been filed electronically & in physical form. LokPal must within 30 days refer it to CBI/ED for a preliminary investigation and then a full FIR enquiry. Every single entity involved needs to be summoned & every link investigated.… pic.twitter.com/5aZ4f2se9n
— Mahua Moitra (@MahuaMoitra) September 13, 2024
