ಉಡುಪಿ ಜಿಲ್ಲೆಯ ಮಣಿಪಾಲದ ಎಂಐಟಿ ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ತಂತ್ರಜ್ಞರಾಗಿರುವ ಪರ್ಕಳದ ಆರ್. ಮನೋಹರ್ ಅವರು ಅಭಿವೃದ್ಧಿ ಪಡಿಸಿದ ಎರಡು ದೂರದರ್ಶಕಗಳು (ಬೈನಾಕ್ಯುಲರ್) ಲಂಡನ್ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಹಾಗೂ ದಿ ಬ್ರಿಟಿಷ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದುಕೊಂಡಿವೆ.
ಅಯೋಧ್ಯೆ ಯ ರಾಮಮಂದಿರದ ಉದ್ಘಾಟನೆ ಸಂದರ್ಭ ಇವರು ತಯಾರಿಸಿದ್ದ ಬೈನಾಕ್ಯುಲರ್ ಅನ್ನು ಬಳಕೆ ಮಾಡಲಾಗಿತ್ತು. ಇದಲ್ಲದೆ, ಕೇಂದ್ರ ಸರಕಾರ ಕೂಡ ಇವರ ಬೈನಾಕ್ಯುಲರ್‌ಗೆ ಆರ್ಡರ್ ನೀಡಿದೆ.

ಮನೋಹರ್ ಅವರು ಅಭಿವೃದ್ಧಿಪಡಿಸಿರುವ ಅತಿ ಶಕ್ತಿಶಾಲಿ ಹಾಗೂ ವಿಶಿಷ್ಟ, 200ರಿಂದ 240 ಮೆಗ್ನಿಫಿಕೇಷನ್ ಇರುವ ಬೈನಾಕ್ಯುಲರ್ ಅನ್ನು ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆಗೊಳಿಸಲಾಗಿದೆ. ಈ ಸಂಬಂಧ ಸಂಸ್ಥೆ ಆರ್.ಮನೋಹರ್ ಅವರಿಗೆ ಪ್ರಮಾಣ ಪತ್ರವನ್ನೂ ನೀಡಿದೆ.
ಸುಮಾರು ಎರಡು ಕೆ.ಜಿ.ತೂಕದ 4 ಅಡಿ ಉದ್ದದ ಬೈನಾಕ್ಯುಲರ್ ಅನ್ನು ಸತತ ಪ್ರಯೋಗದ ಬಳಿಕ ಮನೋಹರ್ ಅವರು ಅಭಿವೃದ್ಧಿಪಡಿಸಿದ್ದಾರೆ. ಇದರಲ್ಲಿ ಎರಡೂ ಕಣ್ಣುಗಳ ಮೂಲಕ ನೇರವಾಗಿ ಚಂದ್ರನ ಮೇಲ್ಮೈಯನ್ನೂ ಸ್ಪಷ್ಟವಾಗಿ ವೀಕ್ಷಿಸಬಹುದಾಗಿದೆ.
ಹೆಚ್ಚಿನ ದೂರದರ್ಶಕಗಳು ಬಗ್ಗಿ ನೋಡುವ ರೀತಿಯಲ್ಲಿದ್ದರೆ, ನೇರವಾಗಿ ಎರಡೂ ಕಣ್ಣುಗಳ ಮೂಲಕ ನೋಡುವ ಸೌಲಭ್ಯವನ್ನು ಇವರ ದೂರದರ್ಶಕ ಹೊಂದಿದೆ. ಇವರು ಅಭಿವೃದ್ಧಿಪಡಿಸಿದ ಒಂದೂವರೆ ಅಡಿ ಉದ್ದದ 40ರಿಂದ 60 ಮೆಗ್ನಿಫಿಕೇಷನ್ ಹೊಂದಿರುವ ಸಣ್ಣ ದೂರದರ್ಶಕ ದಿ ಬ್ರಿಟಿಷ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದಿದೆ. ಮನೋಹರ್ ಅವರು ತಯಾರಿಸಿರುವ ಎರಡು ದೂರದರ್ಶಕಗಳ ಮೂಲಕವೂ ಆಕಾಶಕಾಯಗಳನ್ನು ಆರಾಮವಾಗಿ ವೀಕ್ಷಿಸಬಹುದು.
ಇವರ ಆವಿಷ್ಕಾರವು ಗಿನ್ನೆಸ್ ವಿಶ್ವ ದಾಖಲೆ ಹಾಗೂ ಭಾರತದ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲೂ ಸ್ಥಾನ ಪಡೆಯುವ ಪ್ರಕ್ರಿಯೆ ಜಾರಿಯಲ್ಲಿದೆ.

ಈ ಬಗ್ಗೆ ಆರ್ ಮನೋಹರ್ ಈ ದಿನ.ಕಾಮ್ ಜೊತೆಗೆ ಮಾತನಾಡಿ, “ಸಣ್ಣ ಪ್ರಾಯದಿಂದಲೂ ನನಗೆ ಬೈನಾಕ್ಯುಲರ್ ಬಗ್ಗೆ ತುಂಬಾ ಆಸಕ್ತಿ. ಇದನ್ನು ಇಟ್ಟುಕೊಂಡು ಏನಾದರೂ ಸಾಧನೆ ಮಾಡಬೇಕು ಎಂಬ ಛಲ ಇದ್ದದ್ದರಿಂದ ಈಗ ಇದನ್ನು ಆವಿಷ್ಕಾರಿಸಲು ಸಹಕಾರಿ ಆಯಿತು. ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಇದರ ಬಗ್ಗೆ ಮಾಹಿತಿಯನ್ನು ಸಹ ನೀಡುತ್ತಿದ್ದೆ. ಆಕಾಶದಲ್ಲಿ ಆಗಾಗ ಸಂಭವಿಸುವ ವಿಶಿಷ್ಟ ವಿದ್ಯಮಾನಗಳನ್ನು ನಾನು ಅಭಿವೃದ್ಧಿಪಡಿಸಿದ ದೂರದರ್ಶಕಗಳ ಮೂಲಕ ಆರಾಮವಾಗಿ ಹಾಗೂ ಹೆಚ್ಚು ಸ್ಪಷ್ಟವಾಗಿ ನೋಡಬಹುದು. ಇವುಗಳಲ್ಲಿರುವ ಲೆನ್ಸ್‌ಗಳ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸುವ ಮೂಲಕ ದೂರದ ವಸ್ತುಗಳು ಇನ್ನಷ್ಟು ಸ್ಪಷ್ಟವಾಗಿ ಗೋಚರಿಸುವಂತೆ ಮಾಡುವ ಪ್ರಯತ್ನ ನಡೆಸಿದ್ದೇನೆ” ಎಂದು ಹೇಳಿದರು.

ಈ ಬಗ್ಗೆ ಈ ದಿನ ಜೊತೆ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಗಣೇಶ್‌ರಾಜ್ ಸರಳೇಬೆಟ್ಟು, “ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ಗೆ ನಮ್ಮ ಉಡುಪಿಯ ಮನೋಹರ್ ಅವರ ಹೆಸರು ಸೇರಿರುವುದು ತುಂಬಾ ಸಂತೋಷ ತಂದಿದೆ. ಅವರು ಅಭಿವೃದ್ಧಿ ಪಡಿಸಿದ 200-240 ಎಕ್ಸ್ ಎಲ್ ದೂರದರ್ಶಕಕ್ಕೆ ಭಾರತೀಯ ಸೇನೆಯಿಂದ ಬೇಡಿಕೆ ಸಹ ಬಂದಿದೆ. ಸೈನಿಕರ ಅಭ್ಯಾಸದ ವೇಳೆ ದೂರದ ಗುರಿಯ ನಿಖರತೆಯನ್ನು ತಿಳಿಯಲು ಇದನ್ನು ಬಳಸುವ ಸಾಧ್ಯತೆ ಇದೆ. ಸುಮಾರು 500ರಷ್ಟು ದೂರದರ್ಶಕಕ್ಕೆ ಅದು ಬೇಡಿಕೆ ಇಟ್ಟಿದೆ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಉಡುಪಿ | ಬ್ರಹ್ಮಾವರದ ನಿರ್ಮಲಾ ಶಾಲೆಯಲ್ಲಿ ಜಿಲ್ಲಾಮಟ್ಟದ ಹ್ಯಾಂಡ್ ಬಾಲ್ ಪಂದ್ಯಾಟ
ರಾಜ್ಯ ಸರ್ಕಾರವು ಇವರ ಆವಿಷ್ಕಾರ ಗಮನಿಸಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಇವರ ಹೆಸರನ್ನು ಆಯ್ಕೆ ಮಾಡುವಂತೆ ಇದೇ ವೇಳೆ ಅವರು ವಿನಂತಿಸಿದ್ದಾರೆ.
