ಹಿಂದುಗಳೇ ಆಗಲಿ, ಮುಸ್ಲಿಮರೇ ಆಗಲಿ ಯಾರೂ ಶ್ರೀಮಂತರಲ್ಲ. ಅಂದಂದಿನ ದುಡಿಮೆ ನೆಚ್ಚಿ ಬದುಕುವವರು. ಅಂತಹ ನಾಗಮಂಗಲದಲ್ಲಿ ಕೋಮು ಗಲಭೆಯ ಬೆಂಕಿ ಹಚ್ಚಿದವರು ನಿಜಕ್ಕೂ ನೀಚರು. ಆ ಬೆಂಕಿಯಲ್ಲಿ ಮತ ಬೆಳೆ ತೆಗೆಯಲು ತವಕಿಸುವವರು ದುರುಳರು.
ಭಾರೀ ಡಿಜೆ ಸದ್ದು ಮತ್ತು ಘೋಷಣೆಗಳೊಂದಿಗೆ ಗಣೇಶನ ಮೆರವಣಿಗೆ, ದರ್ಗಾ ಬಳಿ ಬರುತ್ತಿದ್ದಂತೆ ಕಲ್ಲು ತೂರಾಟ, ಪೆಟ್ರೋಲ್ ಬಾಂಬ್ ದಾಳಿ, ಮಚ್ಚು-ಲಾಂಗ್‌ಗಳು ಹೊರಕ್ಕೆ, ಹದಿನಾಲ್ಕು ಅಂಗಡಿಗಳು ಭಸ್ಮ, ಬೈಕ್ ಶೋರೂಂ ಲೂಟಿ, ಹಲವರಿಗೆ ಗಾಯ- ಕೇವಲ ಒಂದು ಗಂಟೆಯೊಳಗೆ ಎಲ್ಲವೂ ಮುಗಿದಿತ್ತು.
ಇಲ್ಲಿಯವರೆಗೆ ದೇಶದಲ್ಲಿ ನಡೆದ ಕೋಮುಗಲಭೆಗಳ ಇತಿಹಾಸವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಎಲ್ಲ ಗಲಭೆಗಳ ಹಿಂದೆ ಕ್ಷುಲ್ಲಕ ಕಾರಣವಿರುವುದು ಸ್ಪಷ್ಟವಾಗುತ್ತದೆ. ಆದರೆ, ಆ ಗಲಭೆಯ ನಂತರ ಮನಸ್ಸಿನಲ್ಲಿ ಮಾಯದ ಗಾಯಗಳನ್ನು ಉಳಿಸುತ್ತವೆ. ತಲೆ ತಲಾಂತರದಿಂದ ಅಣ್ಣ-ತಮ್ಮಂದಿರಂತೆ ಬದುಕಿದ ಹಿಂದು-ಮುಸ್ಲಿಮರು ಬದ್ಧವೈರಿಗಳಾಗುತ್ತಾರೆ. ಒಬ್ಬರನ್ನೊಬ್ಬರು ಅನುಮಾನದಿಂದ ನೋಡುವಂತಾಗುತ್ತದೆ. ಬದುಕು ನರಕವಾಗುತ್ತದೆ. ಅದಕ್ಕೆ ಅವರು ನಂಬಿದ ದೇವರು-ಧರ್ಮವೇ ಕಾರಣವಾಗುತ್ತದೆ. ಅದನ್ನೇ ರಾಜಕಾರಣಿಗಳು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಾರೆ.
ಈಗ ನಾಗಮಂಗಲ ಪಟ್ಟಣ ಮೌನ ಹೊದ್ದು ಮಲಗಿದೆ. ರಸ್ತೆಗಳು ಬಿಕೋ ಎನ್ನುತ್ತಿವೆ. ನಿಷೇಧಾಜ್ಞೆಯ ಭಯ ಮತ್ತು ಭೀತಿಯಲ್ಲಿ ಜನ ಬದುಕುವಂತಾಗಿದೆ. ಕಿಡಿಗೇಡಿಗಳೊಂದಿಗೆ ಕೆಲ ಅಮಾಯಕರ ಬಂಧನವೂ ಆಗಿದೆ. ಅವರ ವಾರಸುದಾರರು ಪೊಲೀಸ್ ಠಾಣೆಗಳಿಗೆ, ಕೋರ್ಟುಗಳಿಗೆ ಅಲೆಯುವಂತಾಗಿದೆ. ಗಲಭೆಯಿಂದಾಗಿ 25 ಕೋಟಿ ನಷ್ಟವಾಗಿದೆ ಎಂದು ಪೊಲೀಸರು ಅಂದಾಜು ಮಾಡಿದ್ದಾರೆ.
ಈ ನಡುವೆ ಬಿಜೆಪಿ-ಜೆಡಿಎಸ್ ನಾಯಕರು ನಾಗಮಂಗಲಕ್ಕೆ ಧಾವಿಸಿ ಸಂತ್ರಸ್ತರಿಗೆ ಸಾಂತ್ವನ ಹೇಳುವ ನೆಪದಲ್ಲಿ, ತಲ್ವಾರ್, ತಾಲಿಬಾನ್, ತುಷ್ಟೀಕರಣ, ಇಸ್ಲಾಮಿಕ್ ರಿಪಬ್ಲಿಕ್, ಬುಲ್ಡೋಜರ್ ಮಾತುಗಳನ್ನು ಆಡುತ್ತಿದ್ದಾರೆ. ಆ ಮೂಲಕ ದ್ವೇಷಾಸೂಯೆಗಳನ್ನು ದುಪ್ಪಟ್ಟು ಮಾಡುತ್ತಿದ್ದಾರೆ. ಅದರಲ್ಲೂ ಕೇಂದ್ರದಲ್ಲಿ ಸಚಿವರಾಗಿರುವ ಎಚ್.ಡಿ. ಕುಮಾರಸ್ವಾಮಿಯವರಂತೂ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ತಮ್ಮ ವಿರೋಧಿ ಚಲುವರಾಯಸ್ವಾಮಿಯನ್ನು ಮುಗಿಸಬೇಕು ಎಂಬ ಹಠಕ್ಕೆ ಬಿದ್ದಿದ್ದಾರೆ. ಬಿಜೆಪಿಗೆ ರಾಜಕೀಯ ಲಾಭವಾಗಿ ಜೆಡಿಎಸ್‌ನ ಅಸ್ತಿತ್ವಕ್ಕೆ ಧಕ್ಕೆಯಾದರೂ ಪರವಾಗಿಲ್ಲ ಎನ್ನುವ ವಿಧ್ವಂಸಕ ತೀರ್ಮಾನಕ್ಕೂ ಬಂದಿದ್ದಾರೆ. ಚನ್ನಪಟ್ಟಣದ ಉಪಚುನಾವಣೆಯಲ್ಲಿ ಮಡದಿಯೋ, ಮಗನೋ ಗೆದ್ದರೆ ಸಾಕು ಎನ್ನುವ ಯೋಚನೆಗೂ ಬಿದ್ದಿದ್ದಾರೆ.
ಇದನ್ನು ಓದಿದ್ದೀರಾ?: ನಾಗಮಂಗಲ ಗಲಭೆ | ಚನ್ನಪಟ್ಟಣ ಉಪಚುನಾವಣೆಗಾಗಿ ಕಾಂಗ್ರೆಸ್ ಪಿತೂರಿ: ಕುಮಾರಸ್ವಾಮಿ ಆರೋಪ
ನಾಗಮಂಗಲದ ಗಲಭೆಯನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಿ, ಮಾನವೀಯ ನೆಲೆಯಲ್ಲಿ ನೋಡಬೇಕಾದ ಮಾಧ್ಯಮಗಳು, ಬೆಂಕಿ ಉಗುಳುವವರ ಬಾಯಾಗಿವೆ. ಏಕೆಂದರೆ, ಮಾಧ್ಯಮ ಸಂಸ್ಥೆಗಳ ಮಾಲೀಕರು ಮುಸ್ಲಿಮರಲ್ಲ, ಮಾಧ್ಯಮ ಸಂಸ್ಥೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರಿಲ್ಲ, ಇದ್ದರೂ ನಿರ್ಣಾಯಕ ಸ್ಥಾನದಲ್ಲಿಲ್ಲ. ಹಾಗಾಗಿ ಸುದ್ದಿಗಳೆಲ್ಲವೂ ಏಕಮುಖವಾಗಿವೆ. ಕೆಲ ಮುದ್ರಣ ಮಾಧ್ಯಮಗಳು ಕೊಂಚ ಸಂಯಮದಿಂದ ವರ್ತಿಸಿ ಸುದ್ದಿ ಮಾಡಿದರೆ; ಟಿವಿ ಚಾನಲ್‌ಗಳು ಮತ್ತು ಯೂಟ್ಯೂಬ್‌ಗಳಲ್ಲಿ ಬೆಂಕಿ ಈಗಲೂ ಉರಿಯುತ್ತಲೇ ಇದೆ.
ಇಂತಹ ಸ್ಥಿತಿಯನ್ನು ಅರಿತು ಅರ್ಥ ಮಾಡಿಕೊಳ್ಳಬೇಕಾದ; ಸಿಕ್ಕ ಅಧಿಕಾರವೆಂಬ ಅಪೂರ್ವ ಅವಕಾಶವನ್ನು ಸರಿಯಾಗಿ ಬಳಸಬೇಕಾದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ, ತನ್ನ ಎಂದಿನ ಜಡತ್ವಕ್ಕೇ ಅಂಟಿಕೊಂಡಿದೆ. ಅಧಿಕಾರದ ಅಮಲಿನಲ್ಲಿ ತೇಲಾಡತೊಡಗಿದೆ. ಗೆಲ್ಲಿಸಿ ಗದ್ದುಗೆ ಮೇಲೆ ಕೂರಿಸಿದವರನ್ನೇ ಮರೆತಿದೆ. ಎಲ್ಲಕ್ಕೂ ಇದೇ ಕಾರಣವಾಗಿದೆ.
ಎಲ್ಲಕ್ಕಿಂತ ಮುಖ್ಯವಾಗಿ, ನಾಗಮಂಗಲದ ಶಾಸಕ, ಕೃಷಿ ಸಚಿವ ಚಲುವರಾಯಸ್ವಾಮಿ ಮೈಯೆಲ್ಲ ಕಣ್ಣಾಗಿರಬೇಕಿತ್ತು. ತಮ್ಮನ್ನು ಕಂಡರಾಗದ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ, ಮಂಡ್ಯ ಲೋಕಸಭಾ ಕ್ಷೇತ್ರದಿಂದ ಗೆದ್ದಾಗಲೇ ಜಾಗೃತರಾಗಬೇಕಾಗಿತ್ತು. ಕೇಂದ್ರ ಸಚಿವರಾದಾಗಲೇ ಎಚ್ಚರ ವಹಿಸಬೇಕಾಗಿತ್ತು. ನಾಗಮಂಗಲದ ಮುಸ್ಲಿಮರ ಮತಗಳನ್ನು ಗಳಿಸಲಾಗದೆ ಸೋತಿದ್ದ ಸ್ಥಳೀಯ ಜೆಡಿಎಸ್ ಅಭ್ಯರ್ಥಿ, ಗಣೇಶನ ನೆಪದಲ್ಲಿ ಏನು ಬೇಕಾದರೂ ಮಾಡಬಹುದು ಎಂಬ ಮುಂದಾಲೋಚನೆ ಇರಬೇಕಾಗಿತ್ತು. ಅದಕ್ಕೆ ಪೂರಕವಾಗಿ ಕಳೆದ ವರ್ಷದ ಗಣೇಶನ ಗಲಭೆ ಕಣ್ಮುಂದೆಯೇ ಇತ್ತು. ಇಷ್ಟಾದರೂ, ಸಚಿವ ಚಲುವರಾಯಸ್ವಾಮಿಯವರು, ಅಧಿಕಾರದ ಅಮಲಿನಲ್ಲಿ ತೇಲುತ್ತ ಅಮೆರಿಕ ಪ್ರವಾಸ ಹೋಗಿದ್ದು ಅಕ್ಷಮ್ಯ ಅಪರಾಧ. ಅವರಿಲ್ಲದ ಸಮಯ ನೋಡಿಕೊಂಡ ವಿರೋಧಿಗಳು, ಪೂರ್ವನಿಯೋಜಿತ ಕೃತ್ಯಕ್ಕೆ ಕೈ ಹಾಕಿ, ಜಯ ಸಾಧಿಸಿದ್ದಾರೆ. ನಾಗಮಂಗಲದ ಅಮಾಯಕ ಜನರ ಬದುಕನ್ನು ನರಕ ಮಾಡಿದ್ದಾರೆ.
ಇಷ್ಟೆಲ್ಲ ಮಾಡಿದ ಮೇಲೆ ತುಷ್ಟೀಕರಣ, ತಾಲಿಬಾನ್, ತಲ್ವಾರ್ ಮಾತುಗಳ ಮೂಲಕ ದ್ವೇಷವನ್ನೂ ಬಿತ್ತುತ್ತಿದ್ದಾರೆ; ಕೋಮು ಗಲಭೆಯನ್ನು ನಿಯಂತ್ರಿಸಲಾಗದ ಅಸಮರ್ಥ ಸರ್ಕಾರ ಎಂದು ದೂರುತ್ತಲೂ ಇದ್ದಾರೆ. ಒಟ್ಟಾರೆ ಕಾಂಗ್ರೆಸ್ ಸರ್ಕಾರಕ್ಕೆ ಮಸಿ ಬಳಿಯುತ್ತಿದ್ದಾರೆ. ಆ ಮಸಿ ಮತದಾರನ ಬೆರಳಿಗೆ ಬೀಳುವ ಮಸಿಯನ್ನಾಗಿ ಮಾರ್ಪಡಿಸುವ ಮೂಲಕ ಅಧಿಕಾರ ಹಿಡಿಯುವ ಹಪಾಹಪಿಯಲ್ಲಿದ್ದಾರೆ.
ನಾಗಮಂಗಲ ಹತ್ತಿ ಉರಿದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ, ‘ಗಣೇಶ ವಿಸರ್ಜನೆಯ ವೇಳೆ ನಡೆದಿರುವ ಕಲ್ಲು ತೂರಾಟ ಕಿಡಿಗೇಡಿಗಳ ದುಷ್ಕೃತ್ಯ. ದುರುಳರು ಯಾವುದೇ ಧರ್ಮದವರಾಗಿರಲಿ ಕ್ರಮ ಕೈಗೊಳ್ಳಲಾಗುವುದು’ ಎಂಬ ಖಡಕ್ ಎಚ್ಚರಿಕೆಯ ಮಾತುಗಳು ಹೊರಬಿದ್ದಿವೆ. ಅದು ಅವರ ಎಂದಿನ ಧಾಟಿಯಲ್ಲಿಯೇ ಇದೆ. ಸರಿಯಾಗಿಯೇ ಇದೆ.
ಆದರೆ ಅದಕ್ಕಿಂತಲೂ ಖಡಕ್ ಮಾತುಗಳು ಹಾಗೂ ಕಟ್ಟಿನಿಟ್ಟಿನ ಕ್ರಮಗಳು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರಿಂದ ಬರಬೇಕಾಗಿತ್ತು. ಕಳೆದವರ್ಷ, ಇದೇ ಸಂದರ್ಭದಲ್ಲಿ, ಇದೇ ಜಾಗದಲ್ಲಿ ಸಣ್ಣಪುಟ್ಟ ಗಲಭೆಗಳಾಗಿದ್ದವು. ಅದನ್ನು ಸ್ಥಳೀಯ ಪೊಲೀಸ್ ಅಧಿಕಾರಿಗಳು ಮುಂದಾಗಿಯೇ ಗ್ರಹಿಸಬೇಕಾಗಿತ್ತು. ಗಣೇಶನ ಕೂರಿಸಲು ಅನುಮತಿ ಕೇಳಲು ಬಂದಾಗಲೇ ಪೊಲೀಸರು ಎಚ್ಚರ ವಹಿಸಬೇಕಾಗಿತ್ತು. ಅವರಿಗೆ ನಿರ್ಬಂಧನೆಗಳನ್ನು ಹೇರಿ ಅವರ ಮೇಲೆ ನಿಗಾ ಇಡಬೇಕಿತ್ತು. ಹಾಗೆಯೇ ಮುಸ್ಲಿಂ ಸಮುದಾಯದ ಹಿರಿಯರನ್ನು ಕರೆದು ಮಾತನಾಡಿ, ಸಂಯಮದಿಂದ ವರ್ತಿಸುವಂತೆ, ಇಲ್ಲದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಬೇಕಾಗಿತ್ತು.

ಆದರೆ, ಪೊಲೀಸರೂ ಚುರುಕಾಗಲಿಲ್ಲ, ಗೃಹ ಸಚಿವರೂ ಖಡಕ್ಕಲ್ಲ. ಪರಿಣಾಮವಾಗಿ ನಾಗಮಂಗಲ ಉರಿಯುವುದನ್ನೂ ತಡೆಯಲಾಗಲಿಲ್ಲ. ಈಗ ಪೊಲೀಸ್ ಅಧಿಕಾರಿ ಅಮಾನತು ಮಾಡಲಾಗಿದೆ. ಈ ಕ್ರಮ ಮೇಲ್ನೋಟಕ್ಕೆ ಸರಿ ಎನಿಸಿದರೂ, ಪೊಲೀಸರನ್ನು ನಿಯಂತ್ರಿಸುವ, ಆಯಕಟ್ಟಿನ ಜಾಗಗಳಿಗೆ ನಿಯೋಜಿಸುವ ಹೊಣೆ ಅಧಿಕಾರಸ್ಥ ರಾಜಕಾರಣಿಗಳದೇ ಅಲ್ಲವೇ, ಎಂದೂ ಯೋಚಿಸಬೇಕಾಗಿದೆ.
ನಾಗಮಂಗಲ ಹೇಳಿಕೇಳಿ ಬರದ ಬೆಂಗಾಡು. ಬಯಲುಸೀಮೆಯ ನಾಡು. ಬೆವರು ಸುರಿಸಿ ಕೆಲಸ ಮಾಡುವ ಇಲ್ಲಿನ ಶ್ರಮಿಕರು ಬಾಂಬೆ, ಭದ್ರಾವತಿ, ಬೆಂಗಳೂರಿನ ಕಡೆಗೆ ವಲಸೆ ಹೋಗುವುದು ನಿತ್ಯ ನಿರಂತರ. ಇಲ್ಲಿನ ಹಿಂದುಗಳೇ ಆಗಲಿ, ಮುಸ್ಲಿಮರೇ ಆಗಲಿ ಯಾರೂ ಶ್ರೀಮಂತರಲ್ಲ. ಅಂದಂದಿನ ದುಡಿಮೆ ನೆಚ್ಚಿ ಬದುಕುವವರು. ಅಂತಹ ನಾಗಮಂಗಲದಲ್ಲಿ ಕೋಮು ಗಲಭೆಯ ಬೆಂಕಿ ಹಚ್ಚಿದವರು ನಿಜಕ್ಕೂ ನೀಚರು. ಆ ಬೆಂಕಿಯಲ್ಲಿ ಮತ ಬೆಳೆ ತೆಗೆಯಲು ತವಕಿಸುವವರು ದುಷ್ಟರು ಮತ್ತು ದುರುಳರು. ಇವರು ಯಾರು ಎನ್ನುವುದು ನಾಗಮಂಗಲದ ಜನಕ್ಕೆ ಅರ್ಥವಾಗುವುದು ಒಳ್ಳೆಯದು.

ಲೇಖಕ, ಪತ್ರಕರ್ತ