ಹನ್ನೆರಡನೇ ಶತಮಾನದಲ್ಲಿ ಕರ್ನಾಟಕದ ಉದ್ದಗಲಕ್ಕೂ ಸಾಮಾಜಿಕ-ಧಾರ್ಮಿಕ ಚಳುವಳಿ ರೂಪಿಸಿ ಜಡ್ಡುಗಟ್ಟಿದ ಸಾಮಾಜಿಕ ವ್ಯವಸ್ಥೆಯನ್ನು ಸುಧಾರಣೆಗಾಗಿ ಶ್ರಮಿಸಿದ ವಿಶ್ವಗುರು ಬಸವಣ್ಣನವರ ಕುರಿತಾದ ʼಬಸವೇಶ್ವರ ದರ್ಶನʼ ನಾಟಕ ಸಮಾಲೋಚನಾ ನಾಳೆ (ಸೆ.14) ಆಯೋಜಿಸಲಾಗಿದೆ.
ʼಬೀದರ್ ನಗರದ ಚಿಕ್ಕಪೇಟೆ ರಸ್ತೆಯಲ್ಲಿರುವ ಲಾವಣ್ಯ ಫಂಕ್ಷನ್ ಹಾಲ್‌ನಲ್ಲಿ ನಾಳೆ ಬೆಳಿಗ್ಗೆ 11ಕ್ಕೆ ನಡೆಯಲಿದೆ. ಬಸವಕಲ್ಯಾಣ ಅನುಭವ ಮಂಟಪ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಸಭೆಯ ನೇತೃತ್ವ ವಹಿಸುವರುʼ ಎಂದು ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ ರಾಜ್ಯ ಸಂಚಾಲಕ ಶ್ರೀಕಾಂತ ಸ್ವಾಮಿ ತಿಳಿಸಿದ್ದಾರೆ.
ʼಬಾಲಿವುಡ್ ನಿರ್ದೇಶಕ , ಲೇಖಕ ಜತಿನ್ ಪಾಟೀಲ್ ʼಬಸವೇಶ್ವರ ದರ್ಶನʼ ಮಹಾನಾಟಕ ತಯಾರಿಸಲು ಸಿದ್ಧತೆ ನಡೆಸಿದ್ದಾರೆ. ಅವರು ಈಗಾಗಲೇ ಬರೆದಿರುವ ʼತತಾಗಥ, ಕ್ರಾಂತಿ ಸೂರ್ಯ, ಮೂಕನಾಯಕ, ರಮಾಯಿ, ಏಕ್ ಜಂಜಾವಾಟʼ ಮಹಾನಾಟಕಗಳು ದೇಶದ ವಿವಿಧೆಡೆ ಯಶಸ್ವಿ ಪ್ರದರ್ಶನ ಕಂಡು ಜನಮಾನಸದಲ್ಲಿ ಹೊಸ ಛಾಪು ಮೂಡಿಸಿವೆ. ಅದೇ ಮಾದರಿಯಲ್ಲಿ ಬಸವಣ್ಣನವರ ಕಲ್ಯಾಣ ಕ್ರಾಂತಿ ಕುರಿತು ʼಬಸವೇಶ್ವರ ದರ್ಶನʼ ಎಂಬ ಮಹಾನಾಟಕ ಮೂಡಿ ಬರಲಿದೆʼ ಎಂದರು.
ಸಮಾಲೋಚನಾ ಸಭೆಯಲ್ಲಿ ಜಿಲ್ಲೆಯ ವಿವಿಧ ಮಠಾಧೀಶರು, ಮಾತಾಜಿ, ಅಕ್ಕವರು ಸಾನಿಧ್ಯ ವಹಿಸುವರು. ಬಸವಾದಿ ಶರಣರ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಬಸವಾನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಲಹೆ, ಸೂಚನೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.