ಬೀದರ್ ಜಿಲ್ಲೆಯ ಔರಾದ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಜಲ ಜೀವನ್ ಮಿಷನ್ (ಜೆಜೆಎಂ) ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಕೂಡಲೇ ತನಿಖೆ ನಡೆಸಬೇಕೆಂದು ಆಗ್ರಹಿಸಿ ಕರ್ನಾಟಕ ಪ್ರಜಾ ಶಕ್ತಿ ಸಮಿತಿಯಿಂದ ನಗರದ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಎದುರುಗಡೆ ಧರಣಿ ಸತ್ಯಾಗ್ರಹ ನಡೆಸಿದರು.
ʼಔರಾದ ತಾಲೂಕಿನ ನಿಡೋದಾ, ಬೆಡಕುಂದಾ, ಬಳತ (ಬಿ) ಬಳತ (ಕೆ), ನಾಗೂರ (ಎಂ), ಹೆಡಗಾಪೂರ, ರಕ್ಷಾಳ, ಆಲೂರ (ಕೆ), ಬೋರಾಳ, ಅಲ್ಲಾಪೂರ, ಸಂತಪೂರ, ಬಲ್ಲೂರ, ಸುಂಧಾಳ, ಮಮದಾಪೂರ, ಕೌಡಗಾಂವ, ಕೌಠಾ, ಜವಲತಾಂಡಾ, ಕಾರಬಾರ ತಾಂಡ, ಮಾಹರಾಜವಾಡಿ ತಾಂಡಾ ಸೇರಿದಂತೆ ಹಲವು ಗ್ರಾಮಗಳಲ್ಲಿ ಕೈಗೊಂಡಿರುವ ಜಲ ಜೀವನ್ ಮಿಷನ್ ಕಾಮಗಾರಿ ಕಳಪೆ ಮಟ್ಟದಿಂದ ನಡೆಸಿ, ನಕಲಿ ಬಿಲ್ ಸೃಷ್ಟಿಸಿ ಸರ್ಕಾರದ ಕೋಟ್ಯಾಂತರ ಹಣ ಲೂಟಿ ಮಾಡಿದ್ದಾರೆʼ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ʼಈ ಸಂಬಂಧ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಹಲವು ಬಾರಿ ಖುದ್ದು ಭೇಟಿಯಾಗಿ ಮನವಿ ಸಲ್ಲಿಸಿದರೂ ಇಲ್ಲಿಯವರೆಗೂ ಪರಿಶೀಲನೆ ನಡೆಸಿಲ್ಲ. ಸಂಬಂಧಪಟ್ಟ ಅಧಿಕಾರಿಗಳ, ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಂಡಿಲ್ಲ. ಈಗಲಾದರೂ ಉನ್ನತ ಮಟ್ಟದ ತನಿಖೆ ತಂಡ ರಚಿಸಿ ತಪ್ಪಿಸ್ಥ ಅಧಿಕಾರಿಗಳ, ಗುತ್ತಿಗೆದಾರರ ವಿರುದ್ಧ ಕಾನೂನಿನ ಕ್ರಮ ಜರುಗಿಸಬೇಕು. ಒಂದು ವಾರದೊಳಗೆ ಕ್ರಮ ತೆಗೆದುಕೊಳ್ಳದಿದ್ದರೆ ಜಿಲ್ಲಾ ಉಸ್ತುವಾರಿ ಸಚಿವರ ಮನೆ ಮುಂದೆ ಆಮರಣ ಉಪವಾಸ ಸತ್ಯಗ್ರಹ ನಡೆಸಲಾಗುವುದುʼ ಎಂದು ಎಚ್ಚರಿಸಿದರು.
ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರಿಗೆ ಸಲ್ಲಿಸಿದರು..
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬುಲ್ಡೋಜರ್, ತಲವಾರು ಹೇಳಿಕೆ; ಬಿಜೆಪಿ ಮುಖಂಡರಿಗೆ ಸೌಹಾರ್ದ ಕರ್ನಾಟಕ ಬೇಕಿಲ್ಲವೇ?!
ಕರ್ನಾಟಕ ಪ್ರಜಾ ಶಕ್ತಿ ಸಮಿತಿ ಜಿಲ್ಲಾಧ್ಯಕ್ಷ ಸಾಯಿ ಶಿಂಧೆ, ನಗರ ಘಟಕ ಅಧ್ಯಕ್ಷ ವಿನೋದ ಶಿಂಧೆ, ಉಪಾಧ್ಯಕ್ಷ ಮಹೇಂದ್ರಕುಮಾರ ಹೊಸಮನಿ ಸೇರಿದಂತೆ ಪ್ರಮುಖರಾದ ಶಿವ ಬೇಲೂರೆ, ಆಕಾಶ ತ್ರಿಮುಖೆ, ಧನರಾಜ ಮೇತ್ರೆ, ಗುರು ನೇಮತಾಬಾದ, ಸಂದೀಪ ಕಾಂಟೆ, ಸಂಗಮೇಶ ಭಾವಿದೊಡ್ಡಿ, ಜೈಭೀಮ ಖ್ಯಾದೆ, ಗೌತಮ ಪ್ರಸಾದ, ಅಖೀಲೇಶ ಸಾಗರ ಉಪಸ್ಥಿತರಿದ್ದರು.