ಬಲವಂತವಾಗಿ ರಷ್ಯಾ ಸೇನೆಗೆ ನೇಮಕಗೊಂಡು ಯುದ್ಧ ಪೀಡಿತ ರಷ್ಯಾ-ಉಕ್ರೇನ್ ಗಡಿಯಲ್ಲಿರುವ ತನ್ನನ್ನು ರಕ್ಷಿಸುವಂತೆ ತೆಲಂಗಾಣ ಮೂಲದ ಮೊಹಮ್ಮದ್ ಸೂಫಿಯಾನ್ ಮನವಿ ಮಾಡಿದ ಸುಮಾರು ಏಳು ತಿಂಗಳ ನಂತರ ರಕ್ಷಣೆ ಮಾಡಲಾಗಿದೆ. ಶುಕ್ರವಾರ ಸೂಫಿಯಾನ್ ಜೊತೆಗೆ ನಮ್ಮ ಕರ್ನಾಟಕದ ಮೂವರೂ ಭಾರತಕ್ಕೆ ವಾಪಸ್ ಬಂದಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಕನಿಷ್ಠ 60 ಭಾರತೀಯ ಯುವಕರು ಉದ್ಯೋಗ ವಂಚನೆಗೆ ಬಲಿಯಾಗಿದ್ದು, ಇನ್ನೂ ಹಲವಾರು ಮಂದಿ ವಿದೇಶಿ ನೆಲದಲ್ಲಿ ನರಳುತ್ತಿದ್ದಾರೆ. ರಷ್ಯಾದಲ್ಲಿ ಭದ್ರತಾ ಸಿಬ್ಬಂದಿ ಅಥವಾ ಸಹಾಯಕ ಕೆಲಸಕ್ಕಾಗಿ 2023ರ ಡಿಸೆಂಬರ್‌ನಲ್ಲಿ ಭಾರತದಿಂದ ಹಲವಾರು ಯುವಕರು ರಷ್ಯಾಕ್ಕೆ ಹೋಗಿದ್ದಾರೆ. ಆದರೆ ಅಲ್ಲಿ ಬಲವಂತವಾಗಿ ರಷ್ಯಾ ಸೇನೆಗೆ ಸೇರಿಸಿ ಉಕ್ರೇನ್ ವಿರುದ್ಧ ಯುದ್ಧಕ್ಕೆ ಕಳುಹಿಸಲಾಗುತ್ತಿದೆ ಎಂದು ವರದಿಯಾಗಿದೆ.
“ನಮ್ಮನ್ನು ಗುಲಾಮರಂತೆ ನಡೆಸಿಕೊಳ್ಳಲಾಗಿದೆ. ನಮ್ಮನ್ನು ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಎಬ್ಬಿಸಲಾಗುತ್ತಿತ್ತು. 15 ಗಂಟೆಗಳ ಕಾಲ ನಿರಂತರವಾಗಿ ಕೆಲಸ ಮಾಡಿಸಲಾಗುತ್ತಿತ್ತು. ಸರಿಯಾಗಿ ವಿಶ್ರಾಂತಿ ಅಥವಾ ನಿದ್ರೆ ಇರಲಿಲ್ಲ. ಪರಿಸ್ಥಿತಿ ಅಮಾನವೀಯವಾಗಿತ್ತು” ಎಂದು ನಾರಾಯಣಪೇಟೆಯ ಸೂಫಿಯಾನ್ ಹೈದರಾಬಾದ್‌ಗೆ ಬಂದಿಳಿದ ಬಳಿಕ ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಉಕ್ರೇನ್ ಯುದ್ಧ ಟೀಕಿಸಿದ ರಷ್ಯಾದ ಪತ್ರಕರ್ತನಿಗೆ 8 ವರ್ಷ ಜೈಲು ಶಿಕ್ಷೆ!
“ಸ್ವಲ್ಪ ಆಹಾರ ನೀಡಲಾಗುತ್ತಿತ್ತು. ನಾವು ಆಯಾಸವಾದಂತೆ ಕಂಡರೆ ಇನ್ನಷ್ಟು ಕೆಲಸನವನು ಮಾಡಿಸುತ್ತಿದ್ದರು. ನಮ್ಮ ಮೇಲೆ ಗುಂಡು ಹಾರಿಸಲಾಗುತ್ತಿತ್ತು. ಪ್ರೊಜೆಕ್ಟ್ ಎಂದರೆ ಕೆಲಸವಾಗಿರಲಿಲ್ಲ. ಕಂದಕಗಳನ್ನು ಅಗೆಯುವುದು, ರೈಫಲ್ ಹಾರಿಸುವುದು, ಹ್ಯಾಂಡ್ ಗ್ರೆನೇಡ್ ಮತ್ತು ಇತರ ಸ್ಫೋಟಕಗಳನ್ನು ಹಾರಿಸುವುದು, ಎಕೆ -12 ಮತ್ತು ಎಕೆ -74 ಹಾರಿಸುವುದು ಹೇಗೆಂದು ತರಬೇತಿ ನೀಡಲಾಗಿತ್ತು. ಜೊತೆಗೆ ಪ್ರಪಂಚದ ಇತರ ಭಾಗಗಳಿಗೆ ಯಾವುದೇ ಸಂಪರ್ಕವಿಲ್ಲದೆ ಬದುಕಬೇಕಾಗಿತ್ತು. ಇದು ಅತೀ ಕಠಿಣವಾಗಿತ್ತು. ಕುಟುಂಬಸ್ಥರೊಂದಿಗೂ ಮಾತನಾಡಲು ಅವಕಾಶ ಇರಲಿಲ್ಲ” ಎಂದು ಹೇಳಿಕೊಂಡಿದ್ದಾರೆ.

“ನಮ್ಮ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ತರಬೇತಿಯ ಸಮಯದಲ್ಲಿ ಕುಟುಂಬದೊಂದಿಗೆ ಮಾತನಾಡಲು ಅವಕಾಶವಿರಲಿಲ್ಲ” ಎಂದು ಕರ್ನಾಟಕದ ಅಬ್ದುಲ್ ನಯೀಮ್ ಹೇಳಿದ್ದಾರೆ. ಕರ್ನಾಟಕದ ಕಲಬುರಗಿ ನಿವಾಸಿ ಸೈಯದ್ ಇಲಿಯಾಸ್ ಹುಸೇನಿ, “ಪ್ರತಿದಿನ ಇದು ನಮ್ಮ ಕೊನೆಯ ದಿನವೆಂದು ನಾವು ಭಾವಿಸುತ್ತಿದ್ದೆವು” ಎಂದು ಕಣ್ಣೀರಿಟ್ಟಿದ್ದಾರೆ.
