ಒಂದೇ ಕುಟುಂಬದ ಮೂವರು ಮಹಿಳೆಯರು ಮತ್ತು ಬಾಲಕಿ ಬಾವಿಯೊಳಗೆ ಶವವಾಗಿ ಪತ್ತೆಯಾಗಿರುವ ಘಟನೆ ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಡಿಯೋರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.
ಮೃತರಲ್ಲಿ ಇಬ್ಬರು ಸಹೋದರಿಯಾಗಿದ್ದಾರೆ. ಇವರಿಬ್ಬರು ಹತ್ತಿರದ ಮರದ ಕಂಬಕ್ಕೆ ಕಟ್ಟಲಾದ ಹಗ್ಗಗಳಿಂದ ಬಾವಿಯೊಳಗೆ ನೇಣುಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ಇನ್ನುಳಿದಂತೆ ಅದೇ ಕುಟುಂಬದ ಮತ್ತೋರ್ವ ಮಹಿಳೆ ಮತ್ತು ಆಕೆಯ ಆರು ವರ್ಷದ ಮಗುವಿನ ಮೃತದೇಹವನ್ನು ನೀರಿನಲ್ಲಿ ಕಂಡುಬಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಕಳೆದ ರಾತ್ರಿ ಊಟದ ನಂತರ ಕುಟುಂಬದ ಸದಸ್ಯರೆಲ್ಲರೂ ಮಲಗಿದ್ದರು. ಮೃತ ಮಹಿಳೆಯೊಬ್ಬರ ಪತಿ ಎದ್ದು ನೋಡಿದಾಗ ತನ್ನ ಪತ್ನಿ ಇಲ್ಲದಿರುವುದನ್ನು ಗಮನಿಸಿದ್ದಾರೆ. ಆಕೆಯನ್ನು ಹುಡುಕಿದಾಗ ಬಾವಿಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾಳೆ ಎಂದು ಪತಿ ತಿಳಿಸಿದ್ದಾರೆ” ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ಲೋಕೇಶ್ ಸಿನ್ಹಾ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಮದುವೆಯಾಗುವುದಾಗಿ ನಂಬಿಸಿ 77 ಮಹಿಳೆಯರಿಗೆ ವಂಚನೆ; ದುಷ್ಕರ್ಮಿ ಬಂಧನ
ಒಟ್ಟು ಮೂವರು ಮಹಿಳೆಯರು ಮತ್ತು ಓರ್ವ ಬಾಲಕಿಯ ಮೃತದೇಹ ಪತ್ತೆಯಾಗಿದ್ದು, ಅವರ ಮೃತ ದೇಹವನ್ನು ಹೊರತೆಗೆಯಲಾಗಿದೆ. ಎಲ್ಲಾ ಕೋನಗಳಿಂದ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಒಂದೇ ಕುಟುಂಬದ ಮೂವರು ಮಹಿಳೆಯರು ಮತ್ತು ಆರು ವರ್ಷದ ಬಾಲಕಿ ಸೇರಿ ಎಲ್ಲ ಹೆಣ್ಣು ಮಕ್ಕಳೇ ಸಾವನ್ನಪ್ಪಿರುವುದು ತೀವ್ರ ಅನುಮಾನಕ್ಕೆ ಕಾರಣವಾಗಿದೆ. ಇದು ಕೊಲೆಯೇ ಅಥವಾ ಆತ್ಮಹತ್ಯೆಯೇ ಎಂಬುದು ಮರಣೋತ್ತರ ಪರೀಕ್ಷೆಯ ವರದಿಯ ನಂತರವೇ ತಿಳಿದುಬರಲಿದೆ.
ಕುಟುಂಬ ಸದಸ್ಯರೊಂದಿಗೆ ಪೊಲೀಸರು ನಡೆಸಿದ ಪ್ರಾಥಮಿಕ ವಿಚಾರಣೆಯಲ್ಲಿ ಶುಕ್ರವಾರ ಸಂಜೆ ಕುಟುಂಬ ಸದಸ್ಯರ ನಡುವೆ ಜಗಳ ನಡೆದಿರುವುದು ಬೆಳಕಿಗೆ ಬಂದಿದೆ.
