ವೈಯಕ್ತಿಕ ನಿಂದನೆ ಬಿಟ್ಟು ಅಭಿವೃದ್ಧಿ ವಿಚಾರ ಮಾತನಾಡಿ : ಕಾಂಗ್ರೆಸ್ ಎಸ್ಸಿ ಘಟಕ ಎಚ್ಚರಿಕೆ
ಸಂಸದರೇ ತಮ್ಮ ಹಳೆಯ ಚಾಳಿಯನ್ನು ಬಿಟ್ಟು, ಜಿಲ್ಲೆಯ ಅಭಿವೃದ್ಧಿ ವಿಚಾರ ಮಾತನಾಡಿ. ವೈಯಕ್ತಿಯ ತೇಜೋವಧೆ, ನಿಂದನೆ ನಿಮಗೆ, ನಿಮ್ಮ ಚೇಲಾಗಳಿಗೆ ಶೋಭೆ ತರುವುದಿಲ್ಲ. ನಾವೇ ವೇದಿಕೆ ಸಿದ್ಧಗೊಳಿಸುತ್ತೇವೆ, ಧೈರ್ಯ ಇದ್ದರೆ ಬಹಿರಂಗ ಚರ್ಚೆಗೆ ಬನ್ನಿ ಎಂದು ಕಾಂಗ್ರೆಸ್ ಮುಖಂಡ ಸುಧಾ ವೆಂಕಟೇಶ್ ಸವಾಲೆಸೆದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಾಸಕರು ತಮ್ಮ ಸ್ವಂತ ಖರ್ಚಿನಲ್ಲಿ ಆಂಬುಲೆನ್ಸ್, ಶೌಚಾಲಯ ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ತಂದು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ ಎಂದರು.
ಅಭಿವೃದ್ಧಿ ವಿಚಾರವಾಗಿ ಪ್ರಶ್ನೆ ಮಾಡಿ. ಇದೆಲ್ಲವನ್ನು ಬಿಟ್ಟು ಶಾಸಕರ ವೈಯಕ್ತಿಕ ನಿಂದನೆ, ಟೀಕೆಯನ್ನು ಜನ ಒಪ್ಪುವುದಿಲ್ಲ. ನಿಮ್ಮ ಚಾಳಿ ಮುಂದುವರಿಸಿದರೆ ಮುಂದಿನ ದಿನಗಳಲ್ಲಿ ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದರು.

ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ಮಾತನಾಡಿ, ಒಂದು ಪೆನ್ಸಿಲ್ ಕೊಟ್ಟರೂ ಪ್ಲೆಕ್ಸ್, ಬ್ಯಾನರ್ ಹಾಕಿಸಿಕೊಳ್ಳುವ ನಿಮಗೆ ಸೀರೆ ವಿತರಣೆ, ಆಂಬುಲೆನ್ಸ್ ಸೇವೆ ವಿಚಾರವಾಗಿ ಟೀಕೆ ಮಾಡುವ ನೈತಿಕತೆ ಇಲ್ಲ. ಶಾಸಕರ ಆಂಬುಲೆನ್ಸ್ ಸೇವೆ ಸಾವಿರಾರು ಬಡವರ, ಧೀನ ದಲಿತರ ಜೀವ ಉಳಿಸಿದೆ. ಇಂತಹ ಟೀಕೆಗಳು ನಿಲ್ಲಬೇಕು ಎಂದು ಎಚ್ಚರಿಕೆ ನೀಡಿದರು.
ಸಂಸದರಾದ ಮೇಲೆ ನಿಮ್ಮ ದರ್ಪ ಶುರುವಾಗಿದೆ. ಯಾವ ಸಮುದಾಯವನ್ನು ಯಾವ ರೀತಿ ನಡೆಸಿಕೊಂಡಿದ್ದೀರಿ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ನಿಮ್ಮ ಆಟ ನಡೆಯುವುದಿಲ್ಲ ಎಂದು ಗುಡುಗಿದರು.
ಮತ್ತೊಬ್ಬ ಮುಖಂಡ ಸುಬ್ಬರಾಯಪ್ಪ ಮಾತನಾಡಿ, 2016 ರಿಂದ 2022ರವರೆಗೆ ಕೊಳವೆ ಬಾವಿಗಳ ಪಟ್ಟಿ ಸಹ ಕೊಡಲಿಲ್ಲ. ದೊಡ್ಡಬಳ್ಳಾಪುರದಲ್ಲಿ 650 ಕೋಟಿ ಕೊಳವೆ ಬಾವಿ ಹಗರಣದ ಕುರಿತು ಪ್ರಕರಣ ದಾಖಲಾಗಿದೆ. ಶಾಸಕರ ವೈಯಕ್ತಿಕ ನಿಂದನೆ ಕಿಡಿಗೇಡಿಗಳ ವರ್ತನೆ. ಅದು ಪತ್ರಿಕಾಗೋಷ್ಠಿಯ ವಿಚಾರವಲ್ಲ. ಇದಕ್ಕೆ ಪ್ರತಿಯಾಗಿ ನೀವು ದಾಖಲೆ ತನ್ನಿ, ನಾವು ತರುತ್ತೇವೆ ಎಂದು ಕಿಡಿಕಾರಿದರು.
ಮುಖಂಡ ಗ.ನ.ಅಶ್ವತ್ಥ್ ಮಾತನಾಡಿ, ಸಂಸದರೇ ಚಿಕ್ಕಬಳ್ಳಾಪುರ ಉತ್ಸವ ನಡೆದಾಗ ನಿಮ್ಮ ನಡತೆ ಹೇಗಿತ್ತು ಎಂಬುದು ತಿಳಿದಿದೆ. ಸ್ಥಳೀಯ ಕಲಾವಿದರನ್ನು ಪ್ರೋತ್ಸಾಹಿಸುವ ಸಲುವಾಗಿ ಮಂಜೂರಾಗಿದ್ದ 200 ಕೋಟಿ ಹಣವನ್ನು ಬೇರೆ ಬೇರೆ ನಿಮ್ಮ ಏಜೆಂಟರನ್ನು ಕರೆಸಿ ಕೊಟ್ಟಿದ್ದೀರಿ. ಸ್ಥಳೀಯ ಕಲಾವಿದರಿಗೆ ಮೋಸ ಮಾಡಿದ್ದೀರಿ. ಅಹಿಂದ ನಾಯಕರ ಬಗೆಗಿನ ನಿಮ್ಮ ಮಾತು ಸರಿಯಲ್ಲ ಎಂದರು.
ಮತ್ತೋರ್ವ ಕಾಂಗ್ರೆಸ್ ಮುಖಂಡ ಮಾತನಾಡಿ, ನಾಗರಾಜು ಅವರೇ ಅಜ್ಜವಾರದಲ್ಲಿ ದಲಿತರ ಭೂಮಿಯನ್ನು ಕಿತ್ತು ಸವರ್ಣಿಯರಿಗೆ ಕೊಡಿಸಿದ್ದೀರಿ. ಅಕ್ರಮವಾಗಿ ಬಿಲ್‌ಗಳನ್ನು ಮಾಡಿಸಿದ್ದೀರಿ. ವೀಣಾ ರಾಮು ಅವರನ್ನು ಶಾಸಕರಿಗೆ ಪರಿಚಯ ಮಾಡಿಸಿದ್ದು ಯಾರು?. ಗಜೇಂದ್ರ ಅವರು ವಿನಾಯಕ ಕಲ್ಯಾಣ ಮಂಟಪದ ಬಳಿ ಟೌನ್ ಪ್ಲಾನ್ ಇಲ್ಲದೆ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಿದ್ದೀರಿ. ಗಜೇಂದ್ರ ಮತ್ತು ನಾಗರಾಜು ಅವರ ಸಾಕಷ್ಟು ಹಗರಣಗಳಿವೆ ಎಂದು ಕಿಡಿಕಾರಿದರು.
ಮುಖಂಡ ವೆಂಕಟ್ ಮಾತನಾಡಿ, ಪ.ಪಂಗಡದವರ ಭವನಕ್ಕೆ ಕೊಟ್ಟಿದ್ದ 3 ಎಕರೆ ಜಾಗಕ್ಕೆ ಬದಲಾಗಿ 30 ಗುಂಟೆ ಜಾಗ ಮಂಜೂರು ಮಾಡಿಸಿದ್ದೀರಿ. 5-10ಕೋಟಿಗಳ ಕಾಮಗಾರಿಗಳನ್ನ್ ಆಂಧ್ರ ಮೂಲದ ಗುತ್ತಿಗೆದಾರರಿಗೆ ಗುತ್ತಿಗೆ ನೀಡಿ ಕಮಿಷನ್ ಪಡೆದಿದ್ದೀರಿ. ಗಾಜಿನ ಮನೆ ಕೆರೆಯಲ್ಲಿ ಕಟ್ಟಿದ್ದೀರಿ. ಇದು ನಿಮ್ಮ ಅಭಿವೃದ್ಧಿಯೇ ಎಂದು ಪ್ರಶ್ನಿಸಿದರು.
ಈ ಸುದ್ದಿ ಓದಿದ್ದೀರಾ? ಶಿಡ್ಲಘಟ್ಟ | ಪ್ರೀತಿ ನಿರಾಕರಣೆ: ಜೋಡಿ ಆತ್ಮಹತ್ಯೆ
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಎಸ್ಸಿ ಘಟಕದ ಮುಖಂಡರಾದ ಆನಂದ್, ಗೌತಮ್ ಗಂಗಾಧರ್, ವೆಂಕಟೇಶ್, ತಿರುಮಲಪ್ಪ, ನಾರಾಯಣ್ ಸೇರಿದಂತೆ ಇತರೆ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.