ಹಿಂದೂ ರಾಷ್ಟ್ರದ ಉದ್ದೇಶ ಸಾಕಾರಗೊಳಿಸಲು ಸ್ಥಳೀಯ ಸಂಸ್ಕೃತಿ ನಾಶ ಮಾಡಲು ಹೊರಟಿದ್ದಾರೆ: ಎ ನಾರಾಯಣ

Date:

Advertisements

ಸ್ಥಳೀಯ ಸಂಸ್ಕೃತಿ ನಾಶ ಮಾಡದ ಹೊರತು ಹಿಂದೂ ರಾಷ್ಟ್ರವನ್ನು ದ್ವೇಷ ರಾಜಕಾರಣದ ಮೂಲಕ ಕಟ್ಟುವ ಅವರ ಉದ್ದೇಶ ಈಡೇರುವುದಿಲ್ಲ. ಆ ಅದಕ್ಕಾಗಿ ಇಲ್ಲಿ ಸಂಸ್ಕೃತಿ ವಿನಾಶದ ಕೆಲಸ ನಡೆಯುತ್ತಿದೆ” ಎಂದು ಚಿಂತಕ ಎ ನಾರಾಯಣ ಹೇಳಿದರು. ಶನಿವಾರ ಬೆಂಗಳೂರಿನಲ್ಲಿ ಆಯೋಜಿಸಿದ್ದ ʼಒಕ್ಕೂಟ ಉಳಿಸಿ ಆಂದೋಲನ- ರಾಷ್ಟ್ರೀಯ ಆಂದೋಲನ ಚಾಲನಾ ಸಭೆʼ ಯಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.

ಎ ನಾರಾಯಣ ಅವರ ಭಾಷಣದ ಪೂರ್ಣ ಪಾಠ ಇಲ್ಲಿದೆ…
“ಭಾರತದೊಳಗಣ ಕರ್ನಾಟಕ ದೇಶದ ಜನಗಳೇ…. ನಾನು ಪದಗಳನ್ನು ಜಾಗರೂಕತೆಯಿಂದ ಬಳಸುತ್ತಿದ್ದೇನೆ. ಉದ್ದೇಶಪೂರ್ವಕವಾಗಿ ಹೇಳುತ್ತಿದ್ದೇನೆ. ನಾವು ಮರೆತಂಥ ಒಂದು ಸತ್ಯವನ್ನು ಜ್ಞಾಪಿಸಲು ಈ ಮಾತು ಹೇಳುತ್ತಿದ್ದೇನೆ. ಅದು ಏನೆಂದರೆ ಸಾಂವಿಧಾನಿಕ ಸತ್ಯವೂ, ಭಾರತೀಯ ಸತ್ಯವೂ ಹೌದು. ಭಾರತವೂ ದೇಶ, ಕರ್ನಾಟಕವೂ ದೇಶ. ದೇಶ- ದೇಶ ಎಂದು ಎರಡು ಇರಬಾರದು ಎಂಬ ಉದ್ದೇಶಕ್ಕಾಗಿ ಅನುಕೂಲಕ್ಕಾಗಿ ಭಾರತ ದೇಶದೊಳಗೆ ಕರ್ನಾಟಕ ಎಂದು ಕರೆದುಕೊಂಡೆವು. ಕರ್ನಾಟಕದಂತಹ ಹಲವಾರು ದೇಶಗಳು ಸೇರಿ ಭಾರತ ದೇಶವನ್ನು ಸಂವಿಧಾನದ ಮೂಲಕ ನಾವು ನಿರ್ಮಿಸಿದ್ದು ಎಂದು ಈ ದೇಶಕ್ಕೆ, ದೇಶದ ಜನತೆಗೆ ಮರೆತು ಹೋದ ಕಾರಣ ಇಂತಹ ಸಮಾರಂಭ ಅನಿವಾರ್ಯವಾಗಿ ಏರ್ಪಡಿಸಬೇಕಾದ ಬಂದಿದೆ ಎಂದು ವಿಷಾದದಿಂದ ಹೇಳಬೇಕಾಗಿದೆ ಎಂಬುದನ್ನು ಮೊತ್ತ ಮೊದಲಿಗೆ ಅರಿತುಕೊಳ್ಳಬೇಕಿದೆ.

ನಮ್ಮ ನಡುವಿನ ಬಹುದೊಡ್ಡ ಸಂಸ್ಕೃತಿ ಚಿಂತಕ ರಹಮತ್‌ ತರಿಕೆರೆಯವರು ಇತ್ತೀಚೆಗೆ ಮಾತನಾಡುತ್ತಾ, ಕರ್ನಾಟಕದ ಏಕೀಕರಣದ ಸಂದರ್ಭವನ್ನು ನೆನಪಿಸುತ್ತಾ, ಆಲೂರು ವೆಂಕಟರಾಯರು ಬರೆದ ಸಣ್ಣ ಲೇಖನವನ್ನು ಪ್ರಸ್ತಾಪಿಸಿದ್ದರು. ಅದರಲ್ಲಿ ಅವರು ಹೇಳಿದ ಒಂದು ಸತ್ಯವನ್ನು ಜ್ಞಾಪಿಸಿಕೊಳ್ಳಬೇಕು ಎಂದು ಹೇಳಿದ್ದರು. ಆಲೂರು ಏನು ಹೇಳಿದ್ದರು ಎಂದರೆ, “ನನಗೆ ಕರ್ನಾಟಕತ್ವ ಇಲ್ಲದ ಭಾರತತ್ವ ಬೇಡ. ಇದ್ರೆ ಕರ್ನಾಟಕತ್ವ ಮತ್ತು ಭಾರತತ್ವವನ್ನು ಏಕ ಕಾಲದಲ್ಲಿ ಅನುಭವಿಸಬೇಕೇ ಹೊರತು, ಕರ್ನಾಟಕತ್ವ ಇಲ್ಲದ ಭಾರತತ್ವ ನನಗೆ ಬೇಡ” ಎಂದು ಅಂದು ಆಲೂರು ಹೇಳಿದ್ದರು. ಆ ಒಟ್ಟು ಹಿನ್ನೆಲೆ ಇಟ್ಟುಕೊಂಡು ನೋಡಿದ್ರೆ ಎಷ್ಟು ಗಂಭೀರವಾದ ವಿಚಾರ ಹೇಳಿದ್ದಾರೆ ಎಂದು ಅರ್ಥವಾಗುತ್ತದೆ. ಇವತ್ತು ಮತ್ತೆ ಆ ಮಾತು ಪುನರುಚ್ಚರಿಸಬೇಕಾಗಿದೆ. ಕರ್ನಾಟಕತ್ವ ಬಿಟ್ಟು ಭಾರತತ್ವಕ್ಕೆ, ಅದೂ ನಾವು ಒಪ್ಪಿಕೊಂಡ ಭಾರತತ್ವ ಅಲ್ಲ, ಯಾರೋ ಒಂದು ವರ್ಗದವರು ಒಪ್ಪಿಕೊಂಡ ಭಾರತತ್ವಕ್ಕೆ ಶರಣಾಗಿ ಎಂಬ ರೀತಿಯ ದೊಡ್ಡ ಒತ್ತಡ ಬರುತ್ತಿದೆ. ಅದನ್ನು ಎದುರಿಸಬೇಕಾಗಿದೆ.

Advertisements

ನಾನು ಕರ್ನಾಟಕವೂ ದೇಶ, ಭಾರತವೂ ದೇಶ ಅಂತ ಎಂದಾಗ ಕೆಲವರಿಗೆ ಕಸಿವಿಸಿಯಾಗಿರಬಹುದು. ರಾಷ್ಟ್ರೀಯ ಪ್ರಜ್ಞೆಗೆ ಘಾಸಿಯಾಗಿರಬಹುದು. ಅದರಲ್ಲಿ ಘಾಸಿಯಾಗುವಂತಹ ಕಸಿವಿಸಿಯಾಗುವಥದ್ದು ಏನೂ ಇಲ್ಲ. ಈ ರಾಷ್ಟ್ರ ಹೇಗೆ ಸೃಷ್ಟಿಯಾಯ್ತು, 1950ರಲ್ಲಿ ಈ ದೇಶಕ್ಕೆ ಸಂವಿಧಾನ ಬರುವವರೆಗೆ ಈ ರಾಜಕೀಯವಾಗಿ ಭಾರತ ಎಂದು ಯಾವುದನ್ನು ಗುರುತಿಸುತ್ತೇವೆಯೋ ಅದು ಇರಲಿಲ್ಲ. ಅದನ್ನು ಸೃಷ್ಟಿಸಿದ್ದು ಸಂವಿಧಾನ. ಸಂವಿಧಾನ ಈ ದೇಶವನ್ನು ಹೇಗೆ ಸೃಷ್ಟಿಸಿತೆಂದರೆ, ಕರ್ನಾಟಕದಂತಹ ಸಾವಿರಾರು ಸಣ್ಣ ಸಣ್ಣ ಸಾರ್ವಭೌಮ ದೇಶಗಳನ್ನು ಸೇರಿಸಿ ಈ ರಾಜಕೀಯ ಭಾರತವೆಂಬ ದೇಶವನ್ನು ಸೃಷ್ಟಿಲಾಗಿದೆ. ಹಾಗಾಗಿ ಕರ್ನಾಟಕವೆಂದರೆ ಅದು ಭಾರತ ಎಂದರೆ ದೇಶ, ಕರ್ನಾಟಕ ಅದರ ಅಧೀನ ಎಂಬ ಭಾವನೆ ಇದ್ದರೆ ಅದನ್ನು ಕಿತ್ತು ಹಾಕಿ. ಬಿಟ್ಟುಬಿಡಲು ಆಲೂರು ವೆಂಕಟರಾಯರು ಆಗಲೇ ಕರೆ ಕೊಟ್ಟಿದ್ದರು. ನಾವೂ ಒಂದು ದೇಶ ಎಂಬ ಕಲ್ಪನೆ ನಮಗೆ ಇರಬೇಕು.

ನಮ್ಮ ರಾಷ್ಟ್ರಗೀತೆಯಲ್ಲಿ ʼಜೈ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆʼ ಎಂದು ಕುವೆಂಪು ಹೇಳಿದ್ದಾರೆ. ಅದರಲ್ಲಿ ತಾಯಿ ಮಗಳ ಸಂಬಂಧವಿದೆ. ಅದರಲ್ಲಿ ಒಂದು ತತ್ವ ಇದೆ, ನೀನು ಯಾಕೆ ತಾಯಿಯಾಗಿದ್ದು ಅಂದ್ರೆ, ನಾನು ಮಗಳಾಗಿರುವ ಕಾರಣಕ್ಕೆ, ನಾನು ಯಾಕೆ ಮಗಳಾಗಿದ್ದೇನೆ ಅಂದ್ರೆ ನೀನು ತಾಯಿಯಾಗಿರುವ ಕಾರಣಕ್ಕೆ. ಮಗಳು ಇಲ್ಲದಿದ್ದರೆ ತಾಯಿ ಇಲ್ಲ, ತಾಯಿಯನ್ನು ಬಿಟ್ಟು ಮಗಳಿಲ್ಲ. ನನ್ನಂತ ಸಾವಿರಾರು ಮಗಳುಗಳು ಇಲ್ಲದಿದ್ದರೆ ನೀನಿಲ್ಲ ಎಂಬ ಸಂದೇಶವಿದೆ. ಇದನ್ನು ಬಹಳ ಮಂದಿ ಮತ್ತೆ ಮತ್ತೆ ಹೇಳಿದ್ದಾರೆ. ಪ್ರಾಕೃತಿಕವಾಗಿ ತಾಯಿ ಮೊದಲು ಬರುವುದು, ಮಗಳು ನಂತರ ಬಂದಿದ್ದು. ಆದರೆ ಇಲ್ಲಿ, ಮಗಳು ಮೊದಲು ಬಂದಿದ್ದು ನಂತರ ತಾಯಿ ಆಗಿದ್ದು. ಇಲ್ಲಿ ಕರ್ನಾಟಕ, ಕೇರಳ, ತಮಿಳುನಾಡಿ, ಬಿಹಾರ, ಬಂಗಾಳ, ಒರಿಸ್ಸಾದಂತಹ ನೂರಾರು ಮಗಳಂದಿರು ಸೇರಿ ಈ ತಾಯಿಯನ್ನು ಸೃಷ್ಟಿಸಿದ್ದು ಎನ್ನುವ ಸಂದೇಶ ಕೂಡಾ ಇದೆ.

ಕರ್ನಾಟಕ ಆ ತಾಯಿ ಮಕ್ಕಳ ಸಂಬಂಧವನ್ನು ಗುರುತಿಸಿಕೊಂಡೇ ಈ ಹಕ್ಕೊತ್ತಾಯ ಮಾಡುತ್ತಿದ್ದೇವೆ. ಕೇರಳ, ತಮಿಳುನಾಡು, ಆಂಧ್ರಪ್ರದೇಶದ ನಾಡಗೀತೆಯನ್ನು ನೋಡಿ ಅಲ್ಲಿ ಎಲ್ಲಿಯೂ ಈ ಸಂಬಂಧ ಇಲ್ಲ. ಕೇರಳದ ನಾಡಗೀತೆಯಲ್ಲಿ, “ಮಹಾಬಲಿಯ ಕಾಲದಲ್ಲಿ ಮುನುಷ್ಯರೆಲ್ಲ ಒಂದಾಗಿ ಬದುಕುತ್ತಿದ್ದರು, ಅಂತಹ ನಾಡನ್ನು ಮತ್ತೆ ಕಟ್ಟುತ್ತೇವೆ” ಎಂದು ಹೇಳಿದೆ. ಆದರೆ ನಾವು ಅದಕ್ಕಿಂತ ಬಹಳ ಮುಂದೆ ಬಂದು ಸಂವಿಧಾನದ ಜೊತೆ ಗುರುತಿಸಿಕೊಂಡು ಸಂವಿಧಾನದ ಹಾಕಿಕೊಟ್ಟ ಗೆರೆಮೀರದೇ, ಜೈ ಭಾರತ ಜನನಿಯ ತನುಜಾತೆ ಎಂದೇ ಗುರುತಿಸಿದ್ದೇವೆ. ಆದರೆ ಆ ತಾಯಿ ಮಗಳ ಸಂಬಂಧ ಏನೆಂದು ಸರಿಯಾಗಿ ಅರಿತುಕೊಳ್ಳದೇ, ಮಗಳು ಅಂದ್ರೆ ಕೆಳಗೆ; ತಾಯಿ ಅಂದ್ರೆ ಮೇಲೆ, ತಾಯಿ ಪ್ರಭಾವಶಾಲಿ; ಮಗಳು ತಾಯಿಯ ಅಡಿಯಲ್ಲಿ ಬರುವ ಘಟಕ ಎಂಬ ಕಲ್ಪನೆ ಇದ್ರೆ ಅದನ್ನು ಬಿಟ್ಟುಬಿಡಿ.

ಒಂದು ರಾಷ್ಟ್ರ ಇನ್ನೊಂದು ರಾಷ್ಟ್ರದ ಮೇಲೆ ದಂಡೆತ್ತಿ ಬಂದು ಘರ್ಷಣೆ ಆದರೆ ಅದನ್ನು ಯುದ್ಧ ಎಂದು ಕರೆಯುತ್ತೇವೆ. ಒಂದು ದೇಶದೊಳಗಿನ ಜನ ತಮ್ಮ ತಮ್ಮ ಮಧ್ಯೆಯೇ ಕಚ್ಚಾಡಿಕೊಂಡರೆ ಅದನ್ನು ಅಂತರ್ಯುದ್ಧ ಎಂದು ಕರೆಯುತ್ತೇವೆ. ಅಮೆರಿಕದಲ್ಲಿ ಅಂತರ್ಯುದ್ಧ ಆಗಿತ್ತು. ಒಂದು ದೇಶ, ʼಇನ್ನೊಂದು ದೇಶ ತನ್ನ ಮೇಲೆ ದಾಳಿ ಮಾಡಬಹುದುʼ ಎಂದು ಶಸ್ತ್ರಾಸ್ತ್ರ ಗಳನ್ನು ಸೇರಿಸ್ತಾ ಹೋದರೆ ಅದನ್ನು ಶೀತಲಯುದ್ಧ ಎಂದು ಕರೆಯುತ್ತೇವೆ. ಒಂದು ದೇಶ ಆ ದೇಶದೊಳಗೆ ಮತ್ತೊಂದು ದೇಶವೇ ಆಗಿರುವ ರಾಜ್ಯದ ಮೇಲೆ ದಾಳಿ ಮಾಡಿದಾಗ ಅದನ್ನು ಏನು ಅಂತ ಕರೆಯುವುದು?

ಅದೂ ಯುದ್ಧ, ಇದೂ ಯುದ್ಧ. ಆದರೆ ಯುದ್ಧ ಎಂದು ಕರೆಯಬಾರದು. ಆದರೆ ಯುದ್ಧ ಎಂದು ಅನುಭವಿಸಬೇಕು. ಇಲ್ಲದೇ ಹೋದರೆ ಪ್ರತಿರೋಧಕ್ಕೆ ಬೇಕಾದ ಶಕ್ತಿ ಬರಲ್ಲ. ಅದು ಎಲ್ಲಿಂದ ಬರುತ್ತದೆ ಎಂದರೆ ಸಾತ್ವಿಕ ಸಿಟ್ಟು ಹುಟ್ಟಿಕೊಂಡಾಗ. ಅದು ಯಾವಾಗ ಹುಟ್ಟಿಕೊಳ್ಳುವುದು ಎಂದರೆ, ಯಾವಾಗ ಎಂದರೆ ರಾಜ್ಯದ ಮೇಲೆ ಆಗುವ ಎಲ್ಲ ದಾಳಿಗಳನ್ನು, ಒಂದು ದೇಶ ಮತ್ತೊಂದು ದೇಶದ ಮೇಲೆ ದಾಳಿ ಮಾಡಿದಾಗ ಯಾವ ರೀತಿ ಅನುಭವಿಸುತ್ತಾರೆ ಅದೇ ರೀತಿ ಅನುಭವಿಸಿದಾಗ ಮಾತ್ರ ಸಾಧ್ಯ. ಈ ಸತ್ಯ ಅರಿವಿರಬೇಕು.

ಈಗ ಯಾರು ಆಡಳಿತ ನಡೆಸುತ್ತಾರೆ ಅವರು ದೇಶವನ್ನು ಬಹಳ ಹಿಂದಕ್ಕೆ ಕೊಂಡೊಯ್ಯುತ್ತಿದ್ದಾರೆ ಎಂದು ಎಚ್ಚರಿಸುತ್ತಲೇ ಬಂದಿದ್ದೇವೆ. ಬಹುಶಃ ಆಗ ಜನರಿಗೆ ಅರ್ಥವಾಗಿಲ್ಲ. ಆದರೆ ಈಗ ಈ ಯುದ್ಧ ಈ ದೇಶವನ್ನು ಹಿಂದಕ್ಕೆ ತೆಗೆದುಕೊಂಡು ಹೋಗುವ ವಿಧಾನ. ಆ ಕಾಲಕ್ಕೆ ಚರಿತ್ರೆಯಲ್ಲಿ ಹಿಂದಕ್ಕೆ ನೋಡುವ ಹಾಗೆ ಮಾಡುವವರು. ದೆಹಲಿಯಲ್ಲೊಬ್ಬ ರಾಜ ಇದ್ರೆ, ಆತನಿಗೆ ಸದಾ ಚಿಂತೆ ʼನನ್ನ ರಾಜ್ಯ ಹೇಗೆ ವಿಸ್ತರಣೆ ಮಾಡುವುದುʼ ಎಂಬುದು. ಈಗಲೂ ಅದೇ ಮನೋಭಾವನೆ, ಈ ವಿಸ್ತರಣೆಯ ಧೋರಣೆಯ ಭಾಗವಾಗಿಯೇ ರಾಜ್ಯಗಳ ಮೇಲೆ ದಾಳಿಯಾಗುತ್ತಿದೆ. ಹಾಗಾಗಿ ಯುದ್ಧ ಎಂದೇ ಭಾವಿಸಬೇಕು.

ನಾವು ಈ ವಿಚಾರ ಗ್ರಹಿಸುವ ಹೊತ್ತಿಗೆ, ಅನುಭವಿಸುವ ಹೊತ್ತಿಗೆ ನಮ್ಮ ಒಳಗಿನ ಭಾವನೆಯ ದಟ್ಟಣೆ, ಸಾಂದ್ರತೆ ಕಡಿಮೆಯಾಗದಂತೆ ನೋಡಿಕೊಳ್ಳಬೇಕು. ಕಡಿಮೆ ಮಾಡುವ ಒಂದು ವಿಚಾರ ಎಲ್ಲಾ ಕಾಲದಲ್ಲಿಯೂ ಇದು ಆಗಿದೆ. ಕೆಲವರು ಈ ದಾಳಿ 1950ರಿಂದ ಇಲ್ಲಿಯ ತನಕ ಆಗುತ್ತಲೇ ಇದೆ ಎಂದು ಹೇಳುತ್ತಾರೆ. ಹೌದು ಆಗುತ್ತಿದೆ. ಚಾರಿತ್ರಿಕ ಸತ್ಯವನ್ನು ಅಳಿಸಲು ಸಾಧ್ಯವಿಲ್ಲ. ಆದರೆ ಕಾಂಗ್ರೆಸ್‌ ಕಾಲದ ದಾಳಿಗೂ, ಜನತಾ ಪಕ್ಷದ ಸರ್ಕಾರ ಇದ್ದಾಗ ಆದ ದಾಳಿಗೂ, ಈಗ ಆಗುತ್ತಿರುವ ದಾಳಿಗೂ ವ್ಯತ್ಯಾಸ ಇದೆ. ಅದನ್ನು ಅರ್ಥ ಮಾಡಿಕೊಳ್ಳಿಲ್ಲ ಅಂದ್ರೆ ಸಾತ್ವಿಕ ಸಿಟ್ಟು ಬರಲು ಸಾಧ್ಯವಿಲ್ಲ. ಏನು ವ್ಯತ್ಯಾಸ ಅಂದ್ರೆ, ಆಗ 356 ವಿಧಿಯನ್ನು ಹಿಡಿದುಕೊಂಡು ರಾಜ್ಯಗಳ ಸರ್ಕಾರವನ್ನು ಬರ್ಖಾಸ್ತುಗೊಳಿಸಿ ಕೇಂದ್ರದ ಆಡಳಿತ ಹೇರುತ್ತಿದ್ದರು. ಅಲ್ಲಿ ರಾಜಕೀಯ ಉದ್ದೇಶ ಮಾತ್ರ ಇತ್ತು. ನಮ್ಮ ಪಕ್ಷ ಮಾತ್ರ ಇರಬೇಕು, ನಮ್ಮ ಪಕ್ಷವೇ ಆಗಿದ್ದರೂ ನಮಗೆ ವಿಧೇಯರಾಗಿರುವ ನಾಯಕರು ಇರಬೇಕು ಎಂಬ ಉದ್ದೇಶ ಇತ್ತೇ ಹೊರತು ರಾಜ್ಯಗಳ ಅಸ್ತಿತ್ವವನ್ನು ಅಳಿಸಿಬಿಡುವ, ಸಾಂಸ್ಕೃತಿಕವಾಗಿ ನಾಶ ಮಾಡುವಂಥ ಉದ್ದೇಶ ಇರಲಿಲ್ಲ.

ಹಿಂದಿ ಹೇರಲಿಲ್ಲವೇ ಎಂದು ಕೇಳಬಹುದು. ಹೇರಿದ್ದಾರೆ, ಅದಕ್ಕೂ ಒಂದು ಬೇರೆ ಕಾರಣ ಇತ್ತು. ಈ ದೇಶದಲ್ಲಿ ರಾಷ್ಟ್ರೀಯತೆ ಹುಟ್ಟು ಹಾಕುವ ವಿಚಿತ್ರ ಕಲ್ಪನೆ ಇತ್ತೇ ಹೊರತು, ರಾಜ್ಯಗಳ ಅಸ್ತಿತ್ವ ನಾಶಬೇಕು ಎಂಬ ಉದ್ದೇಶ ಎರಡೂ ಪಕ್ಷಗಳಿಗೆ ಇರಲಿಲ್ಲ. ಈಗ ಆಗುವ ದಾಳಿ ಕನ್ನಡತ್ವದ ಮೇಲೆ ಆಗುವ ದಾಳಿ. ರಾಜ್ಯದ ಅಸ್ತಿತ್ವವನ್ನೇ ಅವರು ಒಪ್ಪಿಕೊಳ್ಳಲ್ಲ. ಏಕಚಕ್ರಾಧಿಪತ್ಯ ಸಾಧಿಸುವ ಉದ್ದೇಶ ಇದೆ. ಕರ್ನಾಟಕ, ಕೇರಳ, ತಮಿಳುನಾಡು, ಬಂಗಾಳ, ಒರಿಸ್ಸಾ ಈ ನಾಡಿನ ಸಂಸ್ಕೃತಿಯಲ್ಲಿರುವ ಮಾನವೀಯವಾದ ವಿಷಯಗಳು, ವಿಶ್ವಮಾನವ ಪರಿಕಲ್ಪನೆಯ ವಿಚಾರಗಳು ಇರುವಷ್ಟು ಕಾಲ ಅವರ ಉದ್ದೇಶ ಈಡೇರುವುದಿಲ್ಲ ಎಂಬುದು ಮನವರಿಕೆಯಾಗಿದೆ.

ಈಗ ಇರುವ ಸಾಂವಿಧಾನಿಕವಾಗಿ ಕಟ್ಟಿದ ಸೆಕ್ಯುಲರ್‌ ರಾಷ್ಟ್ರವನ್ನು ಹಿಂದೂ ರಾಷ್ಟ್ರ ಮಾಡುವ ಉದ್ದೇಶಕ್ಕೆ ಅಡ್ಡಿಯಾಗಿರುವುದು ಕೇವಲ ರಾಜ್ಯಗಳು ಮಾತ್ರವಲ್ಲ, ಸರ್ಕಾರಗಳು ಮಾತ್ರವಲ್ಲ, ರಾಜ್ಯಗಳ ನಾಯಕತ್ವ ಮಾತ್ರವಲ್ಲ, ರಾಜ್ಯಗಳ ಸ್ಥಳೀಯ ಸಂಸ್ಕೃತಿ. ಕನ್ನಡ ಸಂಸ್ಕೃತಿ ಅದನ್ನು ವಿರೋಧಿಸುತ್ತದೆ. ಅಂತಹ ದ್ವೇಷದ ರಾಜಕಾರಣವನ್ನು ಎಲ್ಲಾ ರಾಜ್ಯಗಳು ವಿರೋಧಿಸುತ್ತವೆ. ಅವರ ಹಿಂದೂ ರಾಷ್ಟ್ರದ ಉದ್ದೇಶ ಸಾಕಾರವಾಗಬೇಕಿದ್ದರೆ ಸ್ಥಳೀಯ ಸಂಸ್ಕೃತಿ ನಾಶ ಮಾಡದ ಹೊರತು ಹಿಂದೂ ರಾಷ್ಟ್ರವನ್ನು ದ್ವೇಶ ರಾಜಕಾರಣದ ಮೂಲಕ ಕಟ್ಟುವ ಅವರ ಉದ್ದೇಶ ಈಡೇರುವುದಿಲ್ಲ. ಆ ಅದಕ್ಕಾಗಿ ಇಲ್ಲಿ ಸಂಸ್ಕೃತಿ ವಿನಾಶದ ಕೆಲಸ ನಡೆಯುತ್ತಿದೆ. ಆ ಉದ್ದೇಶಕ್ಕಾಗಿ ಇಲ್ಲಿನ ನಾಯಕತ್ವ ನಾಶ ಮಾಡುವುದು ಹಣಕಾಸನ್ನು ಹಿಡಿದಿಟ್ಟುಕೊಳ್ಳುವುದು, ಡಬಲ್‌ ಎಂಜಿನ್‌ ಸರ್ಕಾರ ಮಾಡುತ್ತೇವೆ ಎನ್ನುವಂತದ್ದು, ಒಟ್ಟು ರಾಜ್ಯ ರಾಜ್ಯಗಳ ಸಂಸ್ಕೃತಿ ನಾಶ ಆಗದ ಹೊರತು ನಮ್ಮ ಸಾಂಸ್ಕೃತಿಕ ಏಕಚಕ್ರಾಧಿಪತ್ಯ ಕಟ್ಟಲು ಸಾಧ್ಯವಿಲ್ಲ ಎಂಬ ಯೋಜನೆಯ ಬಗ್ಗೆ ಎಚ್ಚರವಾಗಿರಬೇಕು.

ಇದುವರೆಗೆ ದಂಡೆತ್ತಿ ಬಂದ ಯಾರೂ ಸಂಸ್ಕೃತಿ ನಾಶ ಮಾಡಿಲ್ಲ. ಮೊಗಲರು ಬಂದ್ರು ಆಳಿದ್ರು, ಈ ಸಂಸ್ಕೃತಿಯಲ್ಲಿ ಬರೆತ್ರೋ ಬಿಟ್ರೋ ಗೊತ್ತಿಲ್ಲ. ಬ್ರಿಟೀಷರು ಬಣಂದ್ರು 200 ವರ್ಷ ಆಳಿದ್ರು ಕೊಳ್ಳೆ ಹೊಡೆದುಕೊಂಡು ಹೋದ್ರು. ಹೊಸ ವಿಚಾರ ತಂದ್ರು, ಕೆಲವನ್ನು ನಾಶ ಮಾಡಿದ್ರು. ಆದ್ರೆ ಯಾವ ರಾಜ್ಯದ ಸಂಸ್ಕೃತಿಯನ್ನೂ ನಾಶಮಾಡಿಲ್ಲ. ಇವತ್ತಿನ ಏಕಚಕ್ರಾಧಿಪತ್ಯದ ಹುನ್ನಾರ ರಾಜ್ಯ ರಾಜ್ಯಗಳ ಸಂಸ್ಕೃತಿಯನ್ನು ನಾಶ ಮಾಡುತ್ತಿದೆ. ಇದು ಐತಿಹಾಸಿಕವಾಗಿ ಮೊದಲ ಬಾರಿಗೆ ಆಗುತ್ತಿರುವ ದಾಳಿ. ನಮ್ಮ ಪ್ರತಿರೋಧ ಈ ಹಿನ್ನೆಲೆಯಲ್ಲಿ ಇರಬೇಕು”.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಟ್ರಾಫಿಕ್ ದಂಡಗಳಿಗೆ ಶೇ. 50 ರಿಯಾಯಿತಿ: ಬೆಂಗಳೂರು ಸಂಚಾರ ಪೊಲೀಸರ ಘೋಷಣೆ

ಬೆಂಗಳೂರು ಸಂಚಾರ ಪೊಲೀಸರು (ಬಿಟಿಪಿ) ಗುರುವಾರ ಬಾಕಿ ಇರುವ ಟ್ರಾಫಿಕ್ ದಂಡಗಳ...

ಬೆಂಗಳೂರಿನಲ್ಲಿ ಬೈಕ್‌ ಟ್ಯಾಕ್ಸಿ ಪುನರಾರಂಭ; ಸೀಮಿತ ಆ್ಯಪ್‌ಗಳಲ್ಲಿ ಮಾತ್ರ ಲಭ್ಯ

ಬೆಂಗಳೂರಿನಲ್ಲಿ ಗುರುವಾರದಿಂದ (ಆಗಸ್ಟ್‌ 21) ಮತ್ತೆ ಬೈಕ್‌ ಟ್ಯಾಕ್ಸಿ ಸೇವೆಗಳು ಪುನಾರಂಭವಾಗಿವೆ....

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಕಳಂಕಿತ ನೈಸ್ ಕಂಪನಿಗೆ ಯಾವುದೇ ಕಾಮಗಾರಿ ನೀಡದಂತೆ ಸರ್ಕಾರಕ್ಕೆ ನೈಸ್ ಭೂ ಸಂತ್ರಸ್ತ ರೈತರ ಆಗ್ರಹ

ಬಿಎಂಐಸಿ-ನೈಸ್ ಕಂಪನಿ ಕುರಿತು ಮುಂದಿನ ನಿರ್ಧಾರ ಕೈಗೊಳ್ಳಲು ರಾಜ್ಯ ಸರ್ಕಾರ ಸಲಹಾ...

Download Eedina App Android / iOS

X