ಉಕ್ರೇನ್ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾ ಸೇನೆಯಲ್ಲಿ ಸಿಲುಕಿಕೊಂಡಿದ್ದ ರಾಜ್ಯದ ಮೂವರು ಯುವಕರು ಕರ್ನಾಟಕಕ್ಕೆ ಮರಳಿ ಬಂದಿದ್ದಾರೆ. ತಮ್ಮನ್ನು ಸೆಕ್ಯೂರಿಟಿ ಕೆಲಕ್ಕೆಂದು ಕರೆದೊಯ್ದಿದ್ದ ಏಜೆಂಟ್, ಯುದ್ಧಭೂಮಿಯಲ್ಲಿ ಕೆಲಸ ಮಾಡಲು ರಷ್ಯಾ ಸೇನೆಗೆ ಒಪ್ಪಿಸಿದ್ದನೆಂದು ಯುವಕರು ಆರೋಪಿಸಿದ್ದಾರೆ.
ರಷ್ಯಾ ಸೇನೆಯಲ್ಲಿ ಸಿಲುಕಿಕೊಂಡಿದ್ದ ಆರು ಮಂದಿ ಭಾರತೀಯರು ದೇಶಕ್ಕೆ ಮರಳಿದ್ದಾರೆ. ಅವರಲ್ಲಿ ಮೂವರು ರಾಜ್ಯದ ಕಲಬುರಗಿ ಜಿಲ್ಲೆಯವರು. ಕಲಬುರಗಿ ನಗರದ ನೂರಾನಿ ಮೊಹಲ್ಲಾ ನಿವಾಸಿ ಸೈಯದ್ ಇಲಿಯಾಸ್ ಹುಸೇನಿ, ಇಸ್ಲಾಮಬಾದ ಕಾಲೋನಿಯ ನಿವಾಸಿ ಮೊಹಮ್ಮದ್ ಸಮೀರ್ ಹಾಗೂ ಮಿಜಗುರಿ ಪ್ರದೇಶದ ಮೊಹಮ್ಮದ್ ನಯೂಮ್ ತಮ್ಮೂರಿಗೆ ವಾಪಸ್ಸಾಗಿದ್ದಾರೆ.
ತಾವು ರಷ್ಯಾ ಸೇನೆಯಲ್ಲಿ ಎದುರಿಸಿದ ಸವಾಲುಗಳ ಬಗ್ಗೆ ಯುವಕರು ವಿವರಿಸಿದ್ದಾರೆ. “ಮುಂಬೈ ಮೂಲದ ಏಜೆಂಟ್‌ವೊಬ್ಬ ತಮಗೆ ವೆಬ್‌ಸೈಟ್ ಮೂಲಕ ಪರಿಚಯವಾಗಿದ್ದ. ರಷ್ಯಾದಲ್ಲಿ ಹೆಚ್ಚು ಸಂಬಳ ಬರುವ ಸೆಕ್ಯೂರಿಟಿ ಕೆಲಸ ಕೊಡಿಸುವುದಾಗಿ ಹೇಳಿ ರಷ್ಯಾಗೆ ಕರೆದೊಯ್ದಿದ್ದ. ಆದರೆ, ರಷ್ಯಾ ಸೆಕ್ಯೂರಿಟಿ ಕೆಲಸದ ಬದಲಾಗಿ ಯುದ್ಧ ಭೂಮಿಯಲ್ಲಿ ಕೆಲಸ ಮಾಡಲು ರಷ್ಯಾ ಸೇನೆಯ ವಶಕ್ಕೆ ನೀಡಿದ್ದ” ಎಂದು ಹೇಳಿಕೊಂಡಿದ್ದಾರೆ.
ಈ ಹಿಂದೆ, ಈ ಮೂವರು ಮತ್ತು ಇತರ ಮೂವರು ಯುವಕರು ತಮ್ಮನ್ನು ರಷ್ಯಾ ಸೇನೆ ಬಲವಂತವಾಗಿ ಇರಿಸಿಕೊಂಡಿದೆ. ತಮ್ಮನ್ನು ರಕ್ಷಿಸಬೇಕೆಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ವಿಡಿಯೋ ವೈರಲ್ ಆದ ಬಳಿಕ, ಯುವಕರ ರಕ್ಷಣೆಗೆ ಕಾಂಗ್ರೆಸ್ ಅಧ್ಯಕ್ಷ, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದರು. “ವರದಿಗಳ ಪ್ರಕಾರ ಕಳೆದೊಂದು ವರ್ಷದಲ್ಲಿ ನೂರಕ್ಕೂ ಹೆಚ್ಚು ಯುವಕರನ್ನು ರಷ್ಯಾ ಸೇನೆ ತನ್ನ ಕೆಲಸಕ್ಕಾಗಿ ಬಳಸಿಕೊಂಡಿದೆ. ರಷ್ಯಾದಲ್ಲಿ ಸಿಲುಕಿ ಸಂಕಷ್ಟ ಎದುರಿಸಯತ್ತಿರುವ ಎಲ್ಲ ಭಾರತೀಯರು ಹಾಗೂ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಬೇಕು” ಎಂದು ಒತ್ತಾಯಿಸಿದ್ದರು.
ಅದಾಗ್ಯೂ, ಭಾರತೀಯರನ್ನು ದೇಶಕ್ಕೆ ಮರಳಿ ತರಲು ರಷ್ಯಾ-ಉಕ್ರೇನ್ ಯುದ್ಧವನ್ನೇ ಕೆಲ ಗಂಟೆಗಳ ಕಾಲ ನಿಲ್ಲಿಸಿದ್ದ ಎಂದು ಬಡಾಯಿಕೊಚ್ಚಿಕೊಳ್ಳುತ್ತಿದ್ದ ಪ್ರಧಾನಿ ಮೋದಿ, ಈ ಯುವಕರ ರಕ್ಷಣೆಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ಆಕ್ರೋಶ ವ್ಯಕ್ತವಾಗಿತ್ತು.
ಇದೀಗ, ಯುವಕರು ತಮ್ಮೂರಿಗೆ ಮರಳಿದ್ದು, ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.