ಹರಿಯಾಣ ಬಿಜೆಪಿಯಹಲ್ಲಿ ನಾನೇ ಅತ್ಯಂತ ಹಿರಿಯ ಶಾಸಕ. ಅಕ್ಟೋಬರ್ 5ರಂದು ನಡೆಯಲಿರುವ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ, ಮುತ್ಯಮಂತ್ರಿ ಸ್ಥಾನಕ್ಕೆ ಹಕ್ಕು ಮಂಡಿಸುತ್ತೇನೆ ಎಂದು ಬಿಜೆಪಿ ಹಿರಯ ನಾಯಕ, ಮಾಜಿ ಸಚಿವ ಅನಿಲ್ ವಿಜ್ ಹೇಳಿದ್ದಾರೆ.
ಹರಿಯಾಣದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ನಯಾಬ್ ಸಿಂಗ್ ಸೈನಿ ಅವರೇ ಮತ್ತೆ ಮುಖ್ಯಮಂತ್ರಿಯಾಗುತ್ತಾರೆ ಎಂದು ಪಕ್ಷವು ಈಗಾಗಲೇ ಸ್ಪಷ್ಟಪಡಿಸಿದೆ. ಚುನಾವಣೆಯಲ್ಲಿ ಮುಖ್ಯಮಂತ್ರಿ ಮುಖವೂ ಸೈನಿ ಅವರೇ ಆಗಿದ್ದಾರೆ. ಅದಾಗ್ಯೂ, ಹಿರಿತನದ ಆಧಾರದ ಮೇಲೆ ನನಗೆ ಮುಖ್ಯಮಂತ್ರಿ ಹುದ್ದೆ ಕೊಡಬೇಕೆಂದು ಆರು ಬಾರಿ ಶಾಸಕರಾಗಿರುವ ಅನಿಲ್ ವಿಜ್ ಪ್ರತಿಪಾದಿಸಿದ್ದಾರೆ.
“ನಾನು ಇವತ್ತಿನವರೆಗೂ ಪಕ್ಷದಿಂದ ಏನನ್ನೂ ಕೇಳಿಲ್ಲ. ಹರಿಯಾಣದ ಜನರು ನನ್ನನ್ನು ಭೇಟಿಯಾಗಲು ಬರುತ್ತಿದ್ದಾರೆ. ಅಂಬಾಲದ ಜನರು ನನ್ನನ್ನು ಹಿರಿಯ ಎನ್ನುತ್ತಾರೆ – ನಾನು ಯಾಕೆ ಸಿಎಂ ಆಗಲಿಲ್ಲ – ಎಂದು ಪ್ರಶ್ನಿಸುತ್ತಾರೆ. ಜನರ ಬೇಡಿಕೆಯ ಮೇರೆಗೆ ಮತ್ತು ಹಿರಿತನದ ಆಧಾರದ ಮೇಲೆ ನಾನು ಈ ಬಾರಿ ಮುಖ್ಯಮಂತ್ರಿಯಾಗಲು ಹಕ್ಕು ಮಂಡಿಸುತ್ತೇನೆ” ಎಂದು ವಿಜ್ ಹೇಳಿದ್ದಾರೆ.
“ಪಕ್ಷ ನನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡುತ್ತದೆಯೋ ಇಲ್ಲವೋ. ಅದು ಅವರಿಗೆ ಬಿಟ್ಟದ್ದು. ಆದರೆ ಅವರು ನನ್ನನ್ನು ಮುಖ್ಯಮಂತ್ರಿ ಮಾಡಿದರೆ, ನಾನು ಹರಿಯಾಣದ ‘ತಕ್ದೀರ್ ಮತ್ತು ತಸ್ವೀರ್’ಅನ್ನು (ಹಣೆಬರಹ ಮತ್ತು ಮುಖ) ಬದಲಾಯಿಸುತ್ತೇನೆ” ಎಂದು ಅವರು ಹೇಳಿದ್ದಾರೆ.
ಅಂದಹಾಗೆ, 2014ರಲ್ಲಿ ಮೊದಲ ಬಾರಿಗೆ ಬಿಜೆಪಿ ತನ್ನ ಸ್ವಂತ ಬಲದಲ್ಲಿ ಹರಿಯಾಣದಲ್ಲಿ ಸರ್ಕಾರ ರಚನೆ ಮಾಡಿತ್ತು. ಆ ಸರ್ಕಾರದಲ್ಲಿ ವಿಜ್ ಮತ್ತು ರಾಮ್ ಬಿಲಾಸ್ ಶರ್ಮಾ ಸೇರಿದಂತೆ ಬಿಜೆಪಿ ಪ್ರಮುಖ ನಾಯಕರು ಮುಖ್ಯಮಂತ್ರಿ ಹುದ್ದೆಯ ರೇಸ್‌ನಲ್ಲಿದ್ದರು. ಆದರೆ, ಮನೋಹರ್ ಲಾಲ್ ಖಟ್ಟರ್ ಅವರನ್ನು ಮುಖ್ಯಮಂತ್ರಿಯಾಗಿ ಬಿಜೆಪಿ ಹೈಕಮಾಂಡ್ ನೇಮಿಸಿತು. 2019ರ ರಚನೆಯಾದ ಬಿಜೆಪಿ-ಜೆಜೆಪಿ ಸಮ್ಮಿಶ್ರ ಸರ್ಕಾರದಲ್ಲಿಯೂ ಖಟ್ಟರ್ ಮುಖ್ಯಮಂತ್ರಿಯಾಗಿದ್ದರು.
ಗಮನಾರ್ಹವಾಗಿ, ಮನೋಹರ್ ಲಾಲ್ ಖಟ್ಟರ್ ಅವರನ್ನು ಇದೇ ವರ್ಷದ ಮಾರ್ಚ್‌ನಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿ, ಸೈನಿ ಅವರನ್ನು ಬಿಜೆಪಿ ಮುಖ್ಯಮಂತ್ರಿ ಸ್ಥಾನಕ್ಕೆ ನೇಮಿಸಿತು. ಈಗ, 90 ಸ್ಥಾನಗಳನ್ನು ಹೊಂದಿರುವ ಹರಿಯಾಣ ವಿಧಾನಸಭೆಗೆ ನಡೆಯುವ ಚುನಾವಣೆಯನ್ನು ಸೈನಿ ಅವರ ನೇತೃತ್ವದಲ್ಲಿಯೇ ಬಿಜೆಪಿ ಎದುರಿಸಲು ಮುಂದಾಗಿದೆ. ಅಕ್ಟೋಬರ್ 5ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 8ರಂದು ಮತ ಎಣಿಕೆ ನಡೆಯಲಿದೆ.
ಅದಾಗ್ಯೂ, ಬಿಜೆಪಿಯಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾದ ಬಳಿಕ ಭಾರೀ ಬಂಡಾಯ ಆರಂಭವಾಗಿದೆ. ಸುಮಾರು 50ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಬಂಡಾಯದ ಬಿಸಿಯನ್ನು ಎದುರಿಸುತ್ತಿದೆ. ಹಲವರು ಈಗಾಗಲೇ ಪಕ್ಷವನ್ನೂ ತೆರೆದಿದ್ದಾರೆ. ಇನ್ನೂ ಕೆಲವರು ಬಿಜೆಪಿಯ ಅಧಕೃತ ಅಭ್ಯರ್ಥಿಗಳ ವಿರುದ್ಧ ಸ್ವತಂತ್ರ ಅಭ್ಯರ್ಥಿಗಳಾಗಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ. ಅವರಲ್ಲಿ,ರಂಜಿತ್ ಸಿಂಗ್ ಚೌತಾಲಾ, ಲಕ್ಷ್ಮಣ್ ನಾಪಾ, ಕರಣ್ ದೇವ್ ಕಾಂಬೋಜ್, ರಾಮ್ ಬಿಲಾಸ್ ಶರ್ಮಾ, ಸೇರಿದಂತೆ ಹಲವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.