ಕಾಂಗ್ರೆಸ್‌ನ ಪ್ರತಿಯೊಬ್ಬ ಕಾರ್ಯಕರ್ತರಿಗೆ ಪಕ್ಷ ತಾಯಿ ಇದ್ದಂತೆ. ತಾಯಿಗೆ ದ್ರೋಹ ಬಗೆಯುವವರ ವಿರುದ್ದ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಕ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಎಚ್ಚರಿಕೆ ನೀಡಿದ್ದಾರೆ.
ತುಮಕೂರು ನಗರದ ಗುಬ್ಬಿ ರಿಂಗ್ ರಸ್ತೆಯ ಅಶ್ವಿನಿ ಆಯುರ್ವೇಧ ಕಾಲೇಜು ಎದುರು ನಿರ್ಮಿಸಿರುವ ಕಾಂಗ್ರೆಸ್ ಪಕ್ಷದ ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು,ಇಂದು ಪಕ್ಷ ಕಷ್ಟದಲ್ಲಿದೆ.ಹಾಗೆಂದ ಮಾತ್ರಕ್ಕೆ, ಅದನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳುವ ಕೆಲಸವನ್ನು ಕಾರ್ಯಕರ್ತರು, ಮುಖಂಡರು ಮಾಡಬಾರದು, ಪಕ್ಷದಲ್ಲಿದ್ದುಕೊಂಡೇ ಪಕ್ಷ ವಿರೋಧಿ ಚಟುವಟಿಕೆ ನಡೆಸಿದರೆ, ಅದಕ್ಕಿಂತ ಮಹಾಪರಾಧ ಮತ್ತೊಂದಿಲ್ಲ. ಪಕ್ಷದಿಂದ ನಿಮಗೆ ತೊಂದರೆಯಾಗಿದ್ದರೆ ಬಿಟ್ಟು ಹೋಗಿ, ನಿಮ್ಮಂತಹ ಹತ್ತು ಜನ ನಾಯಕರು ಹುಟ್ಟಿಕೊಳ್ಳುತ್ತಾರೆ. ಆದರೆ ಉಂಡ ಮನೆಗೆ ದ್ರೋಹ ಬಗೆಯುವ ಕೆಲಸ ಮಾಡಬೇಡಿ, ಇದನ್ನು ಎಂದಿಗೂ ಸಹಿಸುವುದಿಲ್ಲ ಎಂದರು.

ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಮಹಾನಗರಪಾಲಿಕೆಗಳ ಚುನಾವಣೆ ಬಾಗಿಲಲ್ಲಿವೆ. ಇಂತಹ ವೇಳೆ ನಾವು ಪಕ್ಷವನ್ನು ಬಲಪಡಿಸಿ, ನಮ್ಮೆಲ್ಲಾ ಭಿನ್ನಮತಗಳನ್ನು ಬದಿಗಿಟ್ಟು ಹೋರಾಟಕ್ಕೆ ಇಳಿಯದಿದ್ದರೆ ನಮಗಿಂತ ದಡ್ಡರು ಮತ್ತೊಬ್ಬರಿಲ್ಲ. ನಮ್ಮ ಮನೆಯ ಹುಳುಕನ್ನು ಬೀದಿಗೆ ತರುವುದು ಬೇಡ.ಸಾಧ್ಯವಾದಷ್ಟು ಮನೆಯ ಒಳಗೆ ಬಗೆಹರಿಸಿ ಕೊಳ್ಳೋಣ,ಪಕ್ಷ ಯಾರನ್ನೇ ಅಭ್ಯರ್ಥಿ ಎಂದು ಘೋಷಿಸಲಿ ಅವರ ಪರವಾಗಿ ಕೆಲಸ ಮಾಡಿ, ಸ್ವತಂತ್ರವಾಗಿ ತುಮಕೂರು ನಗರಪಾಲಿಕೆ ಸೇರಿದಂತೆ, ನಗರಸಭೆ,ಜಿಲ್ಲಾ ಪಂಚಾಯಿತಿ ಅಧಿಕಾರವನ್ನು ಕಾಂಗ್ರೆಸ್ ಪಕ್ಷ ಹಿಡಿಯುವಂತೆ ಮಾಡುವ ಗುರಿ ನಮ್ಮದಾಗಿರಲಿ.ಮಹಿಳೆಯರಿಗೆ ಶೇ50 ರಷ್ಟು ಮೀಸಲಾತಿ ಇದೆ. ನೀವು ಹೆಚ್ಚು ಸಕ್ರಿಯರಾಗಿ,ವಿರೋಧಪಕ್ಷಗಳ ಟೀಕೆಗಳಿಗೆ ಸರಿಯುತ್ತರ ನೀಡಿ, ಜನರಿಗೆ ಪಕ್ಷದ ಕಾರ್ಯಕ್ರಮಗಳನ್ನು ಮನವರಿಕೆ ಮಾಡಿಕೊಡಿ ಎಂದು ಗೃಹ ಸಚಿವರು ಸಲಹೆ ನೀಡಿದರು.
ಸರಕಾರ ಅಧಿಕಾರಕ್ಕೆ ಬಂದು ಒಂದುವರೆ ವರ್ಷ ಕಳೆದಿದೆ.ರಾಜ್ಯದಲ್ಲಿರುವ ಸುಮಾರು 1216 ವಿವಿಧ ನಿಗಮ ಮಂಡಳಿಗಳ ನಿರ್ದೇಶಕರ ಸ್ಥಾನಕ್ಕೆ 15 ಸಾವಿರಕ್ಕೂ ಅಧಿಕ ಅರ್ಜಿಗಳು ಬಂದಿವೆ.ಶಾಸಕರು, ಸ್ಥಳೀಯ ಮುಖಂಡರ ಸಲಹೆ ಪಡೆದು ಸೆಪ್ಟಂಬರ್ ಅಂತ್ಯದ ಒಳಗೆ ಎಲ್ಲಾ ನಿಗಮ ಮಂಡಳಿಗಳ ನಿರ್ದೇಶಕರುಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ.ಇನ್ನೂ ಮೂರು ವರೆ ವರ್ಷ ನಮ್ಮ ಪಕ್ಷ ಆಡಳಿತದಲ್ಲಿ ಇರುತ್ತದೆ. ವಿರೋಧಪಕ್ಷಗಳ ಟೀಕೆ ಸಹಜ.ವಿರೋಧಪಕ್ಷಗಳ ಟೀಕೆಗಳಿಗೆ ತಿರುಗೇಟು ನೀಡಬೇಕಾದ ನಮ್ಮವರೇ ಹಿಯಾಳಿಸುವುದು ತರವಲ್ಲ.ನಾವು ಜನರಿಗೆ ಒಳ್ಳೆಯ ಆಡಳಿತದ ಭರವಸೆ ನೀಡಿದ್ದೇವೆ. ಹಾಗಾಗಿ ನೀವೆಲ್ಲರೂ ಸಹಕರಿಸಿ ಎಂದು ಮನವಿ ಮಾಡಿದರು.

ಜಿಲ್ಲಾ ಕೇಂದ್ರದಲ್ಲಿ ಒಂದು ಕಚೇರಿ ಇಲ್ಲ ಎಂಬ ಕೊರಗು ನಮಗೂ ಇದೆ.ಇದು ತಾತ್ಕಾಲಿಕ ವ್ಯವಸ್ಥೆಯಷ್ಟೇ. ಶೀಘ್ರದಲ್ಲಿಯೇ ಜಾಗ ಖರೀದಿಸಿ, ಶಾಶ್ವತ ಕಚೇರಿ ತೆರೆಯಲಾಗುವುದು.ಅಲ್ಲದೆ,ಅಶೋಕ ರಸ್ತೆಯಲ್ಲಿರುವ ಜೆಡಿಎಸ್ ಕಚೇರಿ ಕಾಂಗ್ರೆಸ್ ಪಕ್ಷದ ಕಚೇರಿಯಾಗಿದ್ದು, ಬೆಂಗಳೂರಿನ ಆನಂದರಾವ್ ಸರ್ಕಲ್‌ನಲ್ಲಿದ್ದ ಜೆಡಿಎಸ್ ಕಚೇರಿಯನ್ನು ಬಿಡಿಸಿದ ಪಕ್ಷಕ್ಕೆ ತೆಗೆದುಕೊಂಡ ರೀತಿಯೇ ತುಮಕೂರು ಜೆಡಿಎಸ್ ಕಚೇರಿಯನ್ನು ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಳ್ಳಲು ನ್ಯಾಯಾಲಯದಲ್ಲಿ ದಾವೆ ಹೂಡಿದ್ದೇವೆ. ಶೀಘ್ರವೇ ನ್ಯಾಯಾಲಯಕ್ಕೆ ಸಕಲ ದಾಖಲೆ ಸಲ್ಲಿಸಿ, ಕಚೇರಿಯನ್ನು ನ್ಯಾಯಾಲಯದ ಆದೇಶದಂತೆಯೇ ಕಾಂಗ್ರೆಸ್ ಪಕ್ಷದ ವಶಕ್ಕೆ ಪಡೆಯುತ್ತೇವೆ ಎಂದು ಕಾರ್ಯಕರ್ತರಿಗೆ, ಮುಖಂಡರಿಗೆ ಭರವಸೆ ನೀಡಿದ ಡಾ.ಜಿ.ಪರಮೇಶ್ವರ್, ಅದಕ್ಕಿಂತಲೂ ಮೊದಲು ನಾವು ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಮತ್ತು ಪಾಲಿಕೆ ಚುನಾವಣೆಗಳಲ್ಲಿ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲು ಹೋರಾಟ ನಡೆಸೋಣ.ಇದಕ್ಕಾಗಿ ಎಲ್ಲರೂ ಒಗ್ಗೂಡಿ ದುಡಿಯೋಣ ಎಂದು ಸಲಹೆ ನೀಡಿದರು.
ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ಸಾಕಷ್ಟು ಬದಲಾವಣೆಯ ಅಗತ್ಯವಿದೆ. ಲೋಕಸಭಾ ಚುನಾವಣೆಯ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಕೆಲಸ ಮಾಡಿದ್ದಾರೆ.ಆದರೂ ಕೆಲವೊಂದು ಕಾರಣಗಳಿಗೆ ಸೋಲಾಗಿದೆ.ಅದನ್ನು ಮರೆತು ಮುಂದಿನ ಚುನಾವಣೆಗಳ ಗೆಲುವಿಗೆ ಪಣ ತೊಟ್ಟು ಕೆಲಸ ಮಾಡಬೇಕಿದೆ.ಇತ್ತೀಚಿನ ದಿನಗಳಲ್ಲಿ ಜನಪ್ರತಿನಿಧಿಗಳ ಮೇಲಿನ ಗೌರವ ಜನರಿಗೆ ಕಡಿಮೆಯಾಗುತ್ತಿದೆ. ಇದಕ್ಕೆ ಇತ್ತೀಚಿಗೆ ಮಂಡ್ಯದ ಗಣೇಶ ಉತ್ಸವದ ವೇಳೆ ಆದ ಘಟನೆ ಕುರಿತು ನಾಯಕರಗಳ ಹೇಳಿಕೆಯೇ ಸಾಕ್ಷಿಯಾಗಿದೆ.ಮಾಜಿ ಮುಖ್ಯಮಂತ್ರಿಯೊಬ್ಬರು ಘಟನೆಯ ಕುರಿತು ಸಲಹೆ ನೀಡುವಂತಿದ್ದರೆ ಒಳ್ಳೆಯದೇ, ಆದರೆ ಅದನ್ನು ಬಿಟ್ಟು ತೇಜೋವಧೆಗೆ ಇಳಿಯುವುದು ತರವಲ್ಲ. ಅದು ಅವರಿಗೆ ಶೋಭೆ ತರುವುದು ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕೆ. ಹೇಳಿಕೆಯನ್ನು ಖಂಡಿಸಿದರು.
ಜಿಲ್ಲಾ ಕಾಂಗ್ರೆಸ ಅಧ್ಯಕ್ಷ ಚಂದ್ರಶೇಖರಗೌಡ ಪ್ರಾಸ್ತಾವಿಕವಾಗಿ ಮಾತನಾಡಿ,ತುರುವೇಕೆರೆ ಮತ್ತು ಚಿಕ್ಕನಾಯಕನಹಳ್ಳಿ ಸ್ಥಳಿಯ ಸಂಸ್ಥೆಗಳನ್ನು ಹೊರತು ಪಡಿಸಿ, ಉಳಿದೆಲ್ಲಾ ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ.ಇದುವರೆಗೂ ತುಮಕೂರು ಮಹಾನಗರಪಾಲಿಕೆಯಲ್ಲಿ ಪಕ್ಷ ಸ್ವತಂತ್ರವಾಗಿ ಅಧಿಕಾರ ಹಿಡಿಯಲು ಸಾಧ್ಯವಾಗಿಲ್ಲ.ಈ ಬಾರಿಯಾದರೂ ಕಾಂಗ್ರೆಸ್ ಪಕ್ಷ ಏಕಾಂಗಿಯಾಗಿ ಅಧಿಕಾರ ಹಿಡಿಯುವಂತೆ ದುಡಿಯಬೇಕಿದೆ. ನಿಮ್ಮೆಲ್ಲರ ಸಹಕಾರ ಇರಲಿ ಎಂದರು.
ಪಾವಗಡ ಶಾಸಕರಾದ ವಿ.ವೆಂಕಟೇಶ್,ಮಾಜಿ ಶಾಸಕರಾದ ಎಸ್.ಷಪಿ ಅಹಮದ್,ಗಂಗಹನುಮಯ್ಯ ಮಾತನಾಡಿದರು. ವೇದಿಕೆಯಲ್ಲಿ ಮಾಜಿ ಶಾಸಕರಾದ ಎಸ್.ರಫೀಕ್ ಅಹಮದ್,ಮುಖಂಡರಾದ ಮುರುಳೀಧರ ಹಾಲಪ್ಪ,ಇಕ್ಬಾಲ್ ಅಹಮದ್, ಕೆಂಚಮಾರಯ್ಯ,ಷಣ್ಮುಖಪ್ಪ, ಸುಲ್ತಾನ್ ಅಹಮದ್, ಗೋವಿಂದರಾಜು, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗೀತಾರಾಜಣ್ಣ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
