ದಶಕದ ಬಳಿಕ ಕಲ್ಯಾಣ ಕರ್ನಾಟಕದಲ್ಲಿ ಸಚಿವ ಸಂಪುಟ ಸಭೆ : ಜನರ ನಿರೀಕ್ಷೆಗಳೇನು?

Date:

Advertisements

ಒಂದು ದಶಕದ ಬಳಿಕ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸೆಪ್ಟೆಂಬರ್‌ 17ರಂದು ಕಲ್ಯಾಣ ಕರ್ನಾಟಕ ವಿಭಾಗೀಯ ಕೇಂದ್ರ ಸ್ಥಾನ ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆಯಲು ಕ್ಷಣಗಣನೆ ಶುರುವಾಗಿದೆ. ಕಲ್ಯಾಣ ಭಾಗದ ಜನರಿಗೆ ಈ ಸಚಿವ ಸಂಪುಟದಿಂದ ಸಹಜವಾಗಿಯೇ ಅಭಿವೃದ್ಧಿಯ ನಿರೀಕ್ಷೆಗಳು ಗರಿಗೆದರಿವೆ.

ʼಹೈದರಾಬಾದ್‌ ಕರ್ನಾಟಕʼ ಪ್ರದೇಶ ನಿಜಾಮನ ಆಡಳಿತದಿಂದ ಬಿಡುಗಡೆ ಹೊಂದಿ ಇದೀಗ 75 ವರ್ಷ ಸಂದಿದೆ ಹಾಗೂ ಕಲ್ಯಾಣ ಕರ್ನಾಟಕ (ಆಗಿನ ಹೈದರಾಬಾದ್‌ ಕರ್ನಾಟಕ) ಹಿಂದುಳಿಕೆ ಹೋಗಲಾಡಿಸಲು ಜಾರಿಯಾದ ಸಂವಿಧಾನದ 371(ಜೆ) ಕಲಂಗೆ ದಶಮಾನೋತ್ಸವ ಸಂಭ್ರಮ. ಇದೇ ಹೊತ್ತಿನಲ್ಲಿ ಸೆಪ್ಟೆಂಬರ್‌ 17ರಂದು ಕಲಬುರಗಿಯಲ್ಲಿ ಸಚಿವ ಸಂಪುಟ ನಡೆಸುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದು ಈ ಭಾಗದ ಜನತೆ ಹರ್ಷ ವ್ಯಕ್ತಪಡಿಸುತ್ತಿದ್ದಾರೆ.

‘ಹೈದರಾಬಾದ್‌ ಕರ್ನಾಟಕ’ ಪ್ರದೇಶವನ್ನು 2019ರಲ್ಲಿ ʼಕಲ್ಯಾಣ ಕರ್ನಾಟಕ’ವೆಂದು ನಾಮಕರಣ ಮಾಡಲಾಗಿತ್ತು. ಅದಾಗಿ ನಾಲ್ಕು ವರ್ಷಗಳು ಗತಿಸಿದರೂ ಈ ಭಾಗದ ಜನರ ಬದುಕು ಕಲ್ಯಾಣವಾಗಲಿಲ್ಲ ಎಂಬ ಕೊರಗು ಇದ್ದೇ ಇದೆ. ಈ ಹೊತ್ತಲ್ಲೇ ʼಕಲ್ಯಾಣ ಅಭಿವೃದ್ಧಿʼಗೆ ಜನರ ಆಶೋತ್ತರಗಳಿಗೆ ಸ್ಪಂದಿಸಲು ರಾಜಕೀಯ ಇಚ್ಚಾಶಕ್ತಿ ಪ್ರದರ್ಶಿಸಿ ಸಂಪುಟ ಸಭೆ ನಡೆಯುತ್ತಿರುವುದರಿಂದ ಎಲ್ಲಿಲ್ಲದ ಮಹತ್ವ ಪಡೆದುಕೊಂಡಿದೆ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷ ಡಾ.ಲಕ್ಷ್ಮಣ ದಸ್ತಿ ಹೇಳುತ್ತಾರೆ.

Advertisements
ಪ್ರಿಯಾಂಕ್ ಖರ್ಗೆ

ಕಲ್ಯಾಣ ಕರ್ನಾಟಕ ಪ್ರದೇಶದ ರಚನಾತ್ಮಕ ಪ್ರಗತಿಗೆ ಮತ್ತು 371ಕಲಂ ಪರಿಣಾಮಕಾರಿ ಅನುಷ್ಠಾನಕ್ಕೆ ಪ್ರತ್ಯೇಕ ಸಚಿವಾಲಯ ಹಾಗೂ ಕಲಬುರಗಿಯಲ್ಲಿ ಪ್ರತ್ಯೇಕ ಟ್ರಿಬ್ಯೂನಲ್ ಸ್ಥಾಪಿಸುವುದು. ಕಲ್ಯಾಣ ಕರ್ನಾಟಕ ಪ್ರದೇಶದ ರಚನಾತ್ಮಕ ಪ್ರಗತಿಗೆ ಮತ್ತು ಪ್ರಾದೇಶಿಕ ಅಸಮತೋಲನೆ ನಿವಾರಣೆಗೆ ʼಕೆಕೆಆರ್‌ಡಿಬಿʼಯಿಂದ 5 ವರ್ಷದ ಕ್ರಿಯಾ ಯೋಜನೆ ರಚಿಸಿ ಕಾಲಮಿತಿಯಲ್ಲಿ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದು. ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಪ್ರತ್ಯೇಕ ಕೃಷಿ ಮತ್ತು ಕೈಗಾರಿಕೆ ನೀತಿ ರೂಪಿಸುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಆಗ್ರಹಿಸಿದೆ.

ಕಕ ಭಾಗದಲ್ಲಿವೆ 21 ಅತ್ಯಂತ ಹಿಂದುಳಿದ ತಾಲೂಕು:

ʼಡಿ.ಎಂ.ನಂಜುಂಡಪ್ಪ ನೇತೃತ್ವದ ಸಮಿತಿ ರಾಜ್ಯದಲ್ಲಿ ಎಂಟು ವರ್ಷಗಳ ಕಾಲ ರಾಜ್ಯಾದಂತ ಸಂಚರಿಸಿ ಒಟ್ಟು 175 ತಾಲೂಕಿನಲ್ಲಿ 114 ಹಿಂದುಳಿದ ತಾಲೂಕುಗಳೆಂದು ಗುರುತಿಸಿತು. ವರದಿಯ ಪ್ರಕಾರ, ರಾಜ್ಯದ ಒಟ್ಟು 175 ತಾಲೂಕುಗಳ ಪೈಕಿ ಶೇ.65% ಅಂದ್ರೆ 175 ರಲ್ಲಿ 114 ತಾಲೂಕು ಹಿಂದುಳಿದಿದ್ದು, ಅದರಲ್ಲಿ ಅತ್ಯಂತ ಹಿಂದುಳಿದ ತಾಲೂಕು 39, ಅತಿ ಹಿಂದುಳಿದ ತಾಲೂಕು 40 ಹಾಗೂ ಹಿಂದುಳಿದ ತಾಲೂಕು 35 ಎಂದು ಮೂರು ಭಾಗವಾಗಿ ವರ್ಗೀಕರಿಸಿತ್ತು.

ನಂಜುಂಡಪ್ಪ ವರದಿಯಲ್ಲಿ ಅತ್ಯಂತ ಹಿಂದುಳಿದ ಒಟ್ಟು 39 ತಾಲೂಕಿನಲ್ಲಿ ಕಲ್ಯಾಣ ಕರ್ನಾಟಕ ಭಾಗದ್ದೇ 21 ತಾಲೂಕುಗಳಿವೆ. ಅಂದರೆ, ಶೇ.60%ಕ್ಕಿಂತ ಹೆಚ್ಚು ಭಾಗ ಹಿಂದುಳಿದುರುವಿಕೆ ಎಂದರ್ಥ. ಇದರಲ್ಲಿ ಉತ್ತರ ಭಾಗದ 26 ಹಾಗೂ ದಕ್ಷಿಣ ಭಾಗದ 13 ತಾಲೂಕು ಅತ್ಯಂತ ಹಿಂದುಳಿದಿವೆʼ ಎಂಬುದು ಗಮನಾರ್ಹ ಸಂಗತಿ.

ಕಲ್ಯಾಣ

ʼಕರ್ನಾಟಕ ಏಕೀಕರಣ ನಂತರ ಬೆಂಗಳೂರು ಕೇಂದ್ರಿತ ಅಭಿವೃದ್ಧಿ ವೇಗವಾಗಿ ನಡೆಯಿತು. ಹೈದ್ರಾಬಾದ್ ಕರ್ನಾಟಕ ಸೇರಿದಂತೆ ಯಾವ ಭಾಗದವರು ಆಡಳಿತ ನಡೆಸಿದರೂ ದಕ್ಷಿಣ ಭಾಗದ ರಾಜಧಾನಿ ಬೆಂಗಳೂರು ಕೇಂದ್ರಿತವಾಗಿಯೇ ಅಭಿವೃದ್ಧಿ ಕಾರ್ಯಗಳು ನಡೆದವು. ಹೀಗಾಗಿ, ಕರ್ನಾಟಕದ ಏಕೀಕರಣವಾದ ದಿನದಿಂದಲೂ ನಮ್ಮ ಭಾಗದವರು ನಿರಂತರವಾಗಿ ಅನ್ಯಾಯಕ್ಕೆ ಒಳಗಾಗುತ್ತಲೇ ಬಂದಿದ್ದಾರೆ. ಕರ್ನಾಟಕದ ರಾಜಧಾನಿಯನ್ನಾಗಿ ಬೆಂಗಳೂರನ್ನು ಆಯ್ಕೆ ಮಾಡಿದ್ದು ವೈಜ್ಞಾನಿಕವಾಗಿ ಸರಿಯಿಲ್ಲ ಎಂಬ ಕೂಗಿಗೆ ನ್ಯಾಯ ಸಿಗಲೇ ಇಲ್ಲ. ಅಲ್ಲಿಂದ ಆರಂಭವಾದ ಅಸಮಾನತೆ ಕೂಗು, ಅರ್ಧ ಶತಮಾನ ಗತಿಸಿದರೂ ಇಂದಿಗೂ ಮುಂದುವರೆದಿದೆʼ ಎಂದು ಕಲಬುರಗಿ ಜಿಲ್ಲಾ ಸಿಪಿಐ ಕಾರ್ಯದರ್ಶಿ ಕೆ.ನೀಲಾ ಬೇಸರ ವ್ಯಕ್ತಪಡಿಸುತ್ತಾರೆ.

ʼಸರಕಾರವು ಉದ್ಯೋಗವನ್ನೇ ಸೃಷ್ಟಿಸದಿದ್ದಾಗ ಜನರಿಗೆ ವಿವಿಧ ಸೌಲಭ್ಯಗಳು ತಲುಪಲು ಹೇಗೆ ಸಾಧ್ಯ. ಈ ಪ್ರದೇಶದ ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ವಿಶ್ವವಿದ್ಯಾಲಯಗಳಿಂದ ಡಿಗ್ರಿ ಪಿಯು ಕಾಲೇಜುಗಳು ನಡೆಯುತ್ತಿರುವುದು ಅತಿಥಿ ಉಪನ್ಯಾಸಕರ ಆಧಾರದಿಂದಲೇ. ಇಂತಹ ಪರಿಸ್ಥಿತಿಯಲ್ಲಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಹೇಗೆ ಸಾಧ್ಯ. ಈ ಪ್ರದೇಶದ ಎಲ್ಲ ಕ್ಷೇತ್ರಗಳಲ್ಲಿನ ಖಾಲಿ ಇರುವ ಹುದ್ದೆಗಳನ್ನು ಕೂಡಲೇ ತುಂಬಬೇಕುʼ ಎಂದು ಒತ್ತಾಯಿಸಿದರು.

ʼಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಕೋಮುವಾದಿ ಚಟುವಟಿಕೆಗಳನ್ನು ತಡೆಗಟ್ಟಬೇಕಿದೆ. ರಾಜ್ಯ ಸರಕಾರ ಕೂಡಲೇ ಕೋಮು ಚಟುವಟಿಕೆ ನಿಗ್ರಹ ಕಾಯ್ದೆ ತರಬೇಕು. ಈ ನಾಡಿನ ಸೌಹಾರ್ದ ಪರಂಪರೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ನಗರಗಳಲ್ಲಿ ನಿರುದ್ಯೋಗ ವ್ಯಾಪಕವಾಗುತ್ತಿರುವ ಕಾರಣದಿಂದ ಯುವಜನರು ಖಿನ್ನತೆಗೆ, ಕ್ರಿಮಿನಲ್ ಅಪರಾಧ, ಆತ್ಮಹತ್ಯೆಗೆ ಒಳಗಾಗುತ್ತಿದ್ದಾರೆ. ಹೀಗಾಗಿ ಸರ್ಕಾರ ನಗರ ಉದ್ಯೋಗ ಖಾತ್ರಿ ಕಾಯ್ದೆ ರೂಪಿಸಲು ಕ್ರಮವಹಿಸಬೇಕುʼ ಎಂದು ಆಗ್ರಹಿಸಿದರು.

ʼಕಲ್ಯಾಣʼ ಎಂಬುದು ʼಕನ್ನಡಿಯೊಳಗಿನ ಗಂಟಾಗಿಯೇʼ ಉಳಿದಿದೆ :

ʼತೊಗರಿ ನಾಡು ಕಲಬುರಗಿಯಲ್ಲಿ ತೊಗರಿ ಮಂಡಳಿಗೆ ಬಲಿಷ್ಠ ಸ್ವರೂಪ ನೀಡಬೇಕು. ಎಲ್ಲ ಬೆಳೆಗಳು ವೈಜ್ಞಾನಿಕ ಬೆಲೆಗೆ ಖರೀದಿಸಬೇಕು. ಕಲ್ಯಾಣ ಕರ್ನಾಟಕದಲ್ಲಿ ಬೆಳೆಯುವ ಎಣ್ಣೆ ಕಾಳುಗಳ ಬೆಳೆಗೆ ಪ್ರೋತ್ಸಾಹ ಧನ ನೀಡಿ ಸಣ್ಣ ರೈತರಿಗೆ ಸ್ಪಂದಿಸಬೇಕು. ಪದೇ ಪದೇ ಅತಿವೃಷ್ಟಿ- ಅನಾವೃಷ್ಟಿಗೆ ತುತ್ತಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿರುವ ರೈತರ ನೆರವಿಗೆ ಧಾವಿಸಿ ವಿಶೇಷ ಯೋಜನೆ ರೂಪಿಸಬೇಕು. ಖಾಲಿಯಿರುವ ಶಿಕ್ಷಕರ ಹುದ್ದೆ ಭರ್ತಿ ಮಾಡಬೇಕುʼ ಎಂದು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಕಲಬುರಗಿ ಜಿಲ್ಲಾಧ್ಯಕ್ಷ ಶರಣಬಸಪ್ಪಾ ಮಮಶೆಟ್ಟಿ ಒತ್ತಾಯಿಸಿದರು.

ʼಕಳೆದ 2023ರ ಎಪ್ರಿಲ್‌ 1 ರಿಂದ 2024ರ ಜುಲೈ 4ರವರೆಗೆ ರಾಜ್ಯದಲ್ಲಿ 1,182 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರಲ್ಲಿ 277 ಅಂದರೆ ಶೇ.25% ಪ್ರತಿಶತ ಕಲ್ಯಾಣ ಕರ್ನಾಟಕ ಜಿಲ್ಲೆಗಳ ರೈತರು ನೇಣಿಗೆ ಕೊರಳೊಡ್ಡಿ ಸಾವಿಗೆ ಶರಣಾಗಿರುವುದು ದುರಂತವೇ ಸರಿ. ರೈತರನ್ನು ಸಾಲದಿಂದ ಋಣ ಮುಕ್ತರಾಗಿ ಮಾಡಲು ಸರ್ಕಾರ ಮುಂದಾಗಬೇಕುʼ ಎಂದರು.

ʼಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ನಿರುದ್ಯೋಗ ಸೇರಿದಂತೆ ನಾನಾ ಕಾರಣದಿಂದ ಜನರು ಪಕ್ಕದ ಮುಂಬೈ, ಹೈದರಾಬಾದ್‌, ಪುಣೆ, ಬೆಂಗಳೂರಿನಂತಹ ಮೆಟ್ರೋ ನಗರಗಳಿಗೆ ವಲಸೆ ಹೋಗುವುದು ಇನ್ನೂ ತಪ್ಪಿಲ್ಲ. ವಲಸೆ ಹೋಗುವುದು ತಪ್ಪಿಸಬೇಕಾದರೆ ಕೃಷಿ ಕ್ಷೇತ್ರದಲ್ಲಿ ಮತ್ತು ಕೃಷಿಯೇತರ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಗೆ ವಿಶೇಷ ಆದ್ಯತೆ ನೀಡಿ ಕೈಗಾರಿಕೆಗಳು ಸ್ಥಾಪಿಸಬೇಕು. ಕೌಶಲ್ಯ ಅಭಿವೃದ್ಧಿ ತರಬೇತಿಗಳು ಸಮಾರೋಪಾದಿಯಲ್ಲಿ ನಡೆಸಬೇಕುʼ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ್‌ ಸತ್ಯಂಪೇಟೆ ಆಗ್ರಹಿಸಿದರು.

kkrdb
ಕಲಬುರಗಿಯಲ್ಲಿರುವ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಿಳಿ ಕಚೇರಿ

ʼಕೃಷ್ಣಾ, ಗೋದಾವರಿ ಕಣಿವೆ ಪ್ರದೇಶದ ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳು ಕಾಲಾವಧಿಯಲ್ಲಿ ಪೂರ್ಣಗೊಳಿಸಬೇಕು. ಬ್ರಿಡ್ಜ್-ಕಂ-ಬ್ಯಾರೇಜುಗಳು ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಿಸಿ ನೀರಿನ ಸದುಪಯೋಗ ಮಾಡಿಕೊಳ್ಳುವ ರೀತಿ ಯೋಜನೆ ರೂಪಿಸಬೇಕು. ಬರೀ ʼನಾಮ್‌ ಕೇ ವಾಸ್ತೆʼ ಸಚಿವ ಸಂಪುಟ ನಡೆಸಿ ನಿರ್ಣಯಗಳು ಸಮಪರ್ಕವಾಗಿ ಅನುಷ್ಠಾನಗೊಳ್ಳದಿದ್ದರೆ ಈ ಭಾಗದ ಜನರ ಕಲ್ಯಾಣ ಎಂಬುದು ʼಕನ್ನಡಿಯೊಳಗಿನ ಗಂಟಾಗಿಯೇʼ ಉಳಿಯುವುದು ಖಚಿತʼ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಕಲ್ಯಾಣ ಕರ್ನಾಟಕದ ಒಟ್ಟು 41 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ಸಿನ 26 ಶಾಸಕರಿದ್ದರೆ, ಲೋಕಸಭೆಯಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಗೆದ್ದು ಬಂದಿರುವ 6 ಜನ ಕಾಂಗ್ರೆಸ್‌ ಸಂಸದರಿದ್ದಾರೆ. ಜನರು ಪಕ್ಷದ ಮೇಲೆ ಇಟ್ಟಿರುವ ವಿಶ್ವಾಸ ಮತ್ತು ಅವರ ಋುಣ ತೀರಿಸಲು ವಿಶೇಷ ಸಚಿವ ಸಂಪುಟ ಸಭೆ ನಡೆಸುತ್ತಿದೆ. ಜನರ ನಿರೀಕ್ಷೆಯಂತೆ ಸರ್ಕಾರ ಕೊಡುಗೆಗಳನ್ನು ನೀಡಬೇಕು ಎಂಬುದು ಪ್ರಜ್ಞಾವಂತ ನಾಗರಿಕರ ಅಭಿಮತ.

ಕಲಬುರಗಿಯಲ್ಲಿ ನಡೆಯುತ್ತಿರುವುದು 4ನೇ ಸಚಿವ ಸಂಪುಟ ಸಭೆ :

ಕಲಬುರಗಿಯಲ್ಲಿ ಮೊದಲ ಬಾರಿ 1982ರ ಅಕ್ಟೋಬರ್‌ನಲ್ಲಿ ಆರ್‌.ಗುಂಡೂರಾವ್‌ ಮುಖ್ಯಮಂತ್ರಿ ಇದ್ದಾಗ ಸಚಿವ ಸಂಪುಟ ಸಭೆ ನಡೆದಿತ್ತು. ಅದಾದ ಎರಡೂವರೆ ದಶಕದ ಬಳಿಕ ಬಿ.ಎಸ್‌.ಯಡಿಯೂರಪ್ಪ ಸಿಎಂ ಇದ್ದಾಗ 2008ರ ಸೆಪ್ಟೆಂಬರ್‌ 26ರಂದು ಸಂಪುಟ ಸಭೆ ನಡೆಸಿ, ಗಮನ ಸೆಳೆದಿತ್ತು. ಸಿದ್ದರಾಮಯ್ಯ ಮೊದಲ ಬಾರಿ ಸಿಎಂ ಆದ ಬಳಿಕ 2014ರಲ್ಲಿ ಕಲಬುರಗಿಯಲ್ಲಿ ವಿಶೇಷ ಸಚಿವ ಸಂಪುಟ ಸಭೆ ನಡೆದಿತ್ತು.

ಈಗ ಎರಡನೇ ಅವಧಿಗೆ ಸಿಎಂ ಆದ ಬಳಿಕ ಎರಡನೇ ಸಲ ಸಚಿವ ಸಂಪುಟ ನಡೆಯುತ್ತಿದೆ. ಹೀಗೆ ಒಂದು-ಎರಡು ದಶಕಗಳಿಗೊಮ್ಮೆ ಸಚಿವ ಸಂಪುಟ ನಡೆಸುವ ಮೂಲಕ ಈ ಭಾಗದ ಸಮಗ್ರ ಅಭಿವೃದ್ಧಿಗೆ ರಾಜಕೀಯ ಇಚ್ಚಾಶಕ್ತಿ ಪ್ರದರ್ಶಿಸಿದರೂ, ರಾಜ್ಯದ ಉಳಿದ ಪ್ರದೇಶಗಳಂತೆ ಹೇಳಿಕೊಳ್ಳುವಷ್ಟು ಅಭಿವೃದ್ಧಿ ಕಂಡಿಲ್ಲ ಎಂಬುದು ಯೋಚಿಸಬೇಕಾದ ವಿಷಯ.

WhatsApp Image 2024 09 16 at 4.27.19 PM 3
ಬೀದರ್‌ನಲ್ಲಿ 815 ದಿನಗಳಿಂದ ನಡೆಯುತ್ತಿರುವ ಕಾರಂಜಾ ಮುಳುಗಡೆ ಸಂತ್ರಸ್ತರ ರೈತರ ಹೋರಾಟ ನಡೆಯುತ್ತಿರುವುದು.

ʼಕಕ ಭಾಗದ ಜಿಲ್ಲೆಗಳು ಎಸ್‌ಎಸ್‌ಎಲ್‌ಸಿ, ಪಿಯುಸಿ ಫಲಿತಾಂಶದಲ್ಲಿ ಕೊನೆ ಸ್ಥಾನದಲ್ಲಿದೆ. ನಿರುದ್ಯೋಗ, ಬಡತನ, ಗುಳೆ ಹೋಗುವುದು, ಅನಕ್ಷರತೆ, ಅಪೌಷ್ಟಿಕತೆ, ಮೂಲ ಸೌಕರ್ಯ ಕೊರತೆ ಸೇರಿದಂತೆ ಎಲ್ಲದರಲ್ಲೂ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ. ಈ ಭಾಗದ ತಾಲೂಕು, ಜಿಲ್ಲಾ ಕೇಂದ್ರಗಳ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ, ಶಿಕ್ಷಕರ ಕೊರತೆ ಅಷ್ಟೇ ಅಲ್ಲದೇ, ಅದೆಷ್ಟೋ ಹಳ್ಳಿಗಳ ಜನರಿಗೆ ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಹರಸಾಹಸ ನಡೆಸುತ್ತಾರೆ. ಕಕ ಭಾಗ ಸಮಗ್ರ ರೀತಿಯಲ್ಲಿ ಅಭಿವೃದ್ಧಿ ಕಾಣಬೇಕಾದರೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅನುದಾನ ಸಮಪರ್ಕವಾಗಿ ಬಳಕೆಯಾಗಬೇಕುʼ ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಮರೆಪ್ಪಾ ಹಳ್ಳಿ ಹೇಳುತ್ತಾರೆ.

‘ಗುಲ್ಬರ್ಗ ಹೆಸರನ್ನು ‘ಕಲಬುರಗಿ’ ಎಂದು ಬದಲಾಗಿ ದಶಕ‌ ಕಳೆಯುತ್ತಿದೆ. ಆದರೆ ‘ಗುಲ್ಬರ್ಗ ವಿಶ್ವವಿದ್ಯಾಲಯ’ ಹೆಸರು ಇಂದಿಗೂ ಬದಲಾಗಿಲ್ಲ. ಬೀದರ್ ನಗರದ ಅನೇಕ ಕಚೇರಿಗಳಿಗೆ ಸ್ವಂತ ಕಟ್ಟಡಗಳಿಲ್ಲ. ಈ ಭಾಗದಲ್ಲಿ ವಿಪುಲವಾಗಿ ಸಿಗುವ ನೈಸರ್ಗಿಕ ಸಂಪನ್ಮೂಲ ಸದ್ಬಳಕೆ ಮಾಡಿಕೊಂಡರೆ ರೈತರ ಆರ್ಥಿಕ ಆದಾಯ‌ ಹೆಚ್ಚಳಕ್ಕೆ ಅನುಕೂಲವಾಗುತ್ತದೆ. ಪ್ರವಾಸಿಗರನ್ನು ಸೆಳೆಯಲು ಈ ಭಾಗದ ಪ್ರವಾಸಿ ತಾಣಗಳ ಅಭಿವೃದ್ಧಿಗೊಳಿಸಲು ಮುಂದಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಚರ್ಚಿಸಬೇಕುʼ ಎಂದು ಬೀದರಿನ ಹೋರಾಟಗಾರ ರಮೇಶ್ ಬಿರಾದಾರ್ ಆಗ್ರಹಿಸಿದರು.

‘ಬೀದರ್ ಜಿಲ್ಲೆಯ ಜೀವನಾಡಿ ಕಾರಂಜಾ ಜಲಾಶಯದಲ್ಲಿ ಭೂಮಿ ಕಳೆದುಕೊಂಡ ಸಂತ್ರಸ್ತ ರೈತರು ಪರಿಹಾರಕ್ಕೆ ಆಗ್ರಹಿಸಿ ನಗರದಲ್ಲಿ 815 ದಿನಗಳಿಂದ ನಿರಂತರವಾಗಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದೇವೆ. ರಾಜ್ಯ ಸರ್ಕಾರ ಒಮ್ಮೆ ಸಭೆ ಕರೆದು ಚರ್ಚಿಸಿತ್ತು.‌ ಆದರೆ ಇಲ್ಲಿಯವರೆಗೆ ಯಾವುದೇ ಪರಿಹಾರ ನೀಡಲಿಲ್ಲ. ಕಲಬುರ್ಗಿಯಲ್ಲಿ ನಡೆಯುತ್ತಿರುವ ಸಚಿವ ಸಂಪುಟದಲ್ಲಿ ಕಾರಂಜಾ ಮುಳುಗಡೆ ಸಂತ್ರಸ್ತರ ಬೇಡಿಕೆಗಳಿಗೆ ಸ್ಪಂದಿಸಿ ಪರಿಹಾರ ಒದಗಿಸಬೇಕು’ ಎಂದು ಕಾರಂಜಾ ಮುಳುಗಡೆ ಸಂತ್ರಸ್ತರ ಹೋರಾಟ ಸಮಿತಿ ಅಧ್ಯಕ್ಷ ಚಂದ್ರಶೇಖರ ಪಾಟೀಲ ಮನವಿ ಮಾಡಿದರು.

WhatsApp Image 2024 09 16 at 4.35.48 PM

ʼಈ ಭಾಗದ ಇಲಾಖಾವಾರು ಸಮಗ್ರ ಅಭಿವೃದ್ಧಿ ಕುರಿತು ಚರ್ಚಿಸಿ ನೀಲಿ ನಕ್ಷೆ ತಯಾರಿಸುವ ಬಗ್ಗೆ ಕೂಡಾ ನಿರ್ಧರಿಸಲಾಗುವುದು. ನಮ್ಮ ಭಾಗದ ಎಲ್ಲ ಶಾಸಕರ ಬೇಡಿಕೆಯ ಪಟ್ಟಿ ನೋಡಿದರೆ ರಾಜ್ಯದ ಬಜೆಟ್‌ ಗಾತ್ರದಷ್ಟಾಗುತ್ತದೆ. ಆದರೆ ಮ್ಯಾಕ್ರೋ ಯೋಜನೆಯಡಿಯಲ್ಲಿ ಕಾರ್ಯಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಕೊನೆ ಪಕ್ಷ ಈ ಸಲ ಯೋಜನೆಗಳ ಬಗ್ಗೆ ಚರ್ಚಿಸಿದರೆ ಮುಂದಿನ ವರ್ಷವಾದರೂ ಯೋಜನೆ ಬರುತ್ತವೆ’ ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆಹೇಳಿದರು.

ಈ ಸುದ್ದಿಓದಿದ್ದೀರಾ? ಈ ದಿನ ಸಂಪಾದಕೀಯ | ಮಮತಾ ರಾಜೀನಾಮೆ – ಭಾವನಾತ್ಮಕ ರಾಜಕೀಯವೇಕೆ?

ಕಲ್ಯಾಣ ಕರ್ನಾಟಕ ಭಾಗದ ಜನರ ಆಶೋತ್ತರಗಳಿಗೆ ಸ್ಪಂದಿಸಲು ಸರ್ಕಾರ ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆಸಲು ನಿರ್ಧರಿಸಿದೆ. ಅಭಿವೃದ್ಧಿ ಮತ್ತು ಜನಪರ ಯೋಜನೆಗಳ ಬಗ್ಗೆ ಸಮಗ್ರವಾಗಿ ಚರ್ಚಿಸಿ, ಅದಕ್ಕೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಲಿ ಎಂಬುದು ಕಲ್ಯಾಣ ಭಾಗದ ಜನರ ಒಕ್ಕೊರಲ ಮನವಿಯಾಗಿದೆ.

WhatsApp Image 2025 02 06 at 11.55.32 e1738823214905
ಬಾಲಾಜಿ ಕುಂಬಾರ್
+ posts

ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಕಲೇಶಪುರ | ಮಿತಿ ಮೀರಿರುವ ಮಾದಕ ವಸ್ತು ಸೇವನೆ ಆಧುನಿಕತೆಗೆ ಮಾರಕವಾಗಿದೆ: ಗಾಂಧಿವಾದಿ ಪ್ರಸನ್ನ

ಮಾದಕ ವಸ್ತು ಮುಕ್ತ ಭಾರತವನ್ನು ಕಟ್ಟುವ ಸಕಲೇಶಪುರದ ಜನತೆಯ ಜತೆಗೆ ನಾನೂ...

ಚಿತ್ರದುರ್ಗ | ಒಳಮೀಸಲಾತಿ ವರ್ಗೀಕರಣದಲ್ಲಿ ಅಲೆಮಾರಿಗಳಿಗೆ ಅನ್ಯಾಯ ಸರಿಪಡಿಸಿ; ಮಹಾನಾಯಕ ದಲಿತ ಸೇನೆ

ಒಳಮೀಸಲಾತಿ ವರ್ಗೀಕರಣದಲ್ಲಿ ಅಲೆಮಾರಿಗಳಿಗೆ ಪ್ರತ್ಯೇಕ ಮೀಸಲಾತಿ ಕಲ್ಪಿಸಿ ಸಾಮಾಜಿಕ ನ್ಯಾಯ ಎತ್ತಿ...

ಉಡುಪಿ | ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುವ ಅಕ್ಕ ಕೆಫೆ ಪ್ರಾರಂಭ

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ...

ಸಕಲೇಶಪುರ | ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ: ಅವಿನಾಶ್‌ ಕಾಕಡೆ

ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯ. ಹಾಗಾಗಿ ಮನೆಯಿಂದಲೇ...

Download Eedina App Android / iOS

X