ಮೋದಿ | ಅಭಿವೃದ್ಧಿಯ ಮಾತಿಲ್ಲ, ಮಣಿಪುರಕ್ಕೆ ಹೋಗಲಿಲ್ಲ, ಗೋವು-ಗಣೇಶನನ್ನು ಬಿಡುತ್ತಿಲ್ಲ!

Date:

Advertisements

ಅತೀ ಆತ್ಮವಿಶ್ವಾಸದಲ್ಲಿದ್ದ ಬಿಜೆಪಿ, ಲೋಕಸಭೆ ಚುನಾವಣೆಯಲ್ಲಿ ದೇಶದ ಮತದಾರರಿಂದ ತಕ್ಕ ಪಾಠವನ್ನು ಕಲಿಯಿತು. ಪ್ರತಿ ಚುನಾವಣಾ ಭಾಷಣಗಳಲ್ಲಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇನೆಂದು ಬೀಗುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಂಗಡಿಗರಿಗೆ ಮುಖಭಂಗವಾಯಿತು. ಬಹುಮತಕ್ಕಿಂತ ಕಡಿಮೆ ಮತ ಪಡೆದಿರುವ ಬಿಜೆಪಿ ಮಿತ್ರಪಕ್ಷಗಳನ್ನು ನೆಚ್ಚಿಕೊಂಡು ಮುಂದಿನ 5 ವರ್ಷಗಳ ಕಾಲ ಅಧಿಕಾರ ನಡೆಸಬೇಕಾದ ಪರಿಸ್ಥಿತಿ ಎದುರಾಗಿದೆ. ಮತ್ತೆ ಚುನಾವಣೆಗಳ ಪರ್ವ ಶುರುವಾಗಲಿದ್ದು ಹರಿಯಾಣ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಮಹಾರಾಷ್ಟ್ರ ಹಾಗೂ ದೆಹಲಿ ರಾಜ್ಯಗಳ ಜನಾದೇಶ ಮುಂದಿನ ಐದು ತಿಂಗಳುಗಳಲ್ಲಿ ಪೂರ್ಣಗೊಳ್ಳಲಿದೆ. ಯಾವುದೇ ಅಭಿವೃದ್ಧಿಯ ಸರಕು ಇಲ್ಲದ ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿಯ ನಾಯಕರು ಚುನಾವಣೆಗಳನ್ನು ಗೆಲ್ಲಲು ಈಗ ಮತ್ತೆ ಗೋವು ಮತ್ತು ಗಣೇಶನ ಮೊರೆ ಹೋಗಿದ್ದಾರೆ.

ಗಣೇಶ ಹಬ್ಬದ ಸಂದರ್ಭದಲ್ಲಿ ಮಂಡ್ಯದ ನಾಗಮಂಗಲದಲ್ಲಿ ಯಾವುದೋ ಕ್ಷುಲ್ಲಕ ಕಾರಣಕ್ಕೆ ಉಂಟಾಗಿದ್ದ ಗಲಭೆಯನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯ ನಾಯಕರು ರಾಷ್ಟ್ರಮಟ್ಟಕ್ಕೆ ಎಳೆದುಕೊಂಡು ಹೋಗುವ ಪ್ರಯತ್ನ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ 60 ಸಾವಿರ ಗಣೇಶನ ಮೂರ್ತಿಗಳನ್ನು ಹಬ್ಬದ ಸಂದರ್ಭದಲ್ಲಿ ಪ್ರತಿಷ್ಠಾಪಿಸಲಾಗಿತ್ತು. ಆದರೆ, ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ಮೆರವಣಿಗೆ ಸಂದರ್ಭದಲ್ಲಿ ಗಲಭೆಯಾಗಿತ್ತು. ಅದರ ಬಗ್ಗೆ ಕಾಂಗ್ರೆಸ್ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲವೆಂದು ಸಂಘಪರಿವಾರದವರು ಬೆಂಗಳೂರಿನ ಟೌನ್ ಹಾಲ್ ಬಳಿ ಗಣೇಶನ ಮೂರ್ತಿ ಹಿಡಿದುಕೊಂಡು ಪ್ರತಿಭಟಿಸಿದ್ದರು. ಅಲ್ಲಿ ಪ್ರತಿಭಟಿಸಲು ಅವಕಾಶವಿಲ್ಲ ಜೊತೆಗೆ ಅನುಮತಿಯನ್ನು ಪಡೆದಿರಲಿಲ್ಲ. ಆದಕಾರಣ ಪೊಲೀಸರು ಬಂದು ಮೂರ್ತಿಯನ್ನು ತೆಗೆದುಕೊಂಡು ಹೋಗಿ ವಿಸರ್ಜಿಸಿದ್ದರು.

ಅದನ್ನು ಬಿಜೆಪಿಯ ನಾಯಕರು ‘ಕರ್ನಾಟಕ ಕಾಂಗ್ರೆಸ್ ಸರ್ಕಾರ ಗಣೇಶನನ್ನು ಬಂಧಿಸಿದೆ’, ‘ದೇವರನ್ನು ಬಂಧಿಸಿ ಜೈಲಿಗೆ ಹಾಕಿದೆ’ ಎಂದೆಲ್ಲ ಸುಳ್ಳು ಹಬ್ಬಿಸತೊಡಗಿದರು. ಅದರ ಹಿಂದೆ-ಮುಂದೆ ಯೋಚಿಸದ ಬಿಜೆಪಿಗರು, ಸಾಮಾಜಿಕ ಜಾಲತಾಣದಲ್ಲಿ ಅದನ್ನೇ ಯಥಾವತ್ ಹಂಚಿದ್ದರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಂಡ್ಯದಲ್ಲಿ ಗಣೇಶನನ್ನು ಜೈಲಿಗೆ ಹಾಕಲಾಗಿದೆ ಎಂದು, ತಾವೇ ಖುದ್ದಾಗಿ ಕಂಡಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಅದನ್ನು ನಂಬಿದ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಹರಿಯಾಣದ ಚುನಾವಣಾ ಪ್ರಚಾರ ಭಾಷಣದಲ್ಲಿ, ಕರ್ನಾಟಕದ ಕಾಂಗ್ರೆಸ್ ಆಡಳಿತದಲ್ಲಿ ಗಣೇಶನನ್ನು ಬಂಧಿಸಲಾಗಿದೆ ಎಂದು ಸುಳ್ಳು ಹೇಳಿ, ಕರ್ನಾಟಕವನ್ನು ಅವಮಾನಿಸಿದ್ದರು. ಹರಿಯಾಣದ ಜನತೆಯಲ್ಲಿ ಕಾಂಗ್ರೆಸ್ ಬಗ್ಗೆ ದ್ವೇಷ ಬಿತ್ತಿ, ಭಾವನಾತ್ಮಕ ಬೆಳೆ ತೆಗೆಯಲು ಹವಣಿಸಿದ್ದರು. ಆ ಮೂಲಕ ದೇಶದ ಅಭಿವೃದ್ಧಿಗಿಂತ ಗೋವು ಹಾಗೂ ಗಣೇಶನ ವಿಚಾರಗಳೆ ಮುಖ್ಯ ಎಂಬುದನ್ನು ಸಾಬೀತುಪಡಿಸಿದ್ದರು.

Advertisements

ಮೋದಿ ಅವರ 10 ವರ್ಷದ ಭಾಷಣಗಳಲ್ಲಿ ಅವರೇ ನೀಡಿದ್ದ 2 ಕೋಟಿ ಉದ್ಯೋಗ, 15 ಲಕ್ಷ ಹಣ, ಬುಲೆಟ್ ಟ್ರೈನ್, ರೈತರ ಆದಾಯ ದ್ವಿಗುಣ ಸೇರಿದಂತೆ ಯಾವುದೇ ಯೋಜನೆಗಳು ಕಾರ್ಯಗತಗೊಳ್ಳಲಿಲ್ಲ. ತಾವು ದೇಶದ ಜನತೆಗೆ ಎಷ್ಟು ಗ್ಯಾರಂಟಿ ಯೋಜನೆಗಳನ್ನು ನೀಡಿದ್ದೇನೆ, ದೇಶದ ಅಭಿವೃದ್ಧಿ ಯಾವ ಹಂತದಲ್ಲಿದೆ ಎಂಬುದನ್ನು ಒಮ್ಮೆಯೂ ತಿಳಿಸಲಿಲ್ಲ. ಚುನಾವಣೆ ಸಂದರ್ಭ ಬಂದಾಗ ಮತ್ತದೆ ದೇವರು, ಗೋವು ಸೇರಿದಂತೆ ಭಾವನಾತ್ಮಕ ವಿಷಯಗಳನ್ನು ಜನರ ಮನಸ್ಸಿನಲ್ಲಿ ಬಿತ್ತುತ್ತಿದ್ದಾರೆ.

ಗಣೇಶನ ಬಂಧನ, ಕಾಂಗ್ರೆಸ್‌, ಕರ್ನಾಟಕ ಸರ್ಕಾರ, ಚುನಾವಣಾ ಭಾಷಣ, ಮೋದಿ ಸುಳ್ಳು, ಪ್ರಧಾನಿ ಮೋದಿ, ದ್ವೇಷ ಭಾಷಣ, ಮೋದಿ ದ್ವೇಷ ಭಾಷಣ, Ganesha Bandhan, Congress, Karnataka Government, Election Speech, Modi Lies, Prime Minister Modi, Hate Speech, Modi Hate Speech,

ಈ ಹಿಂದಿನ ಸರ್ಕಾರಗಳು ಹೆಚ್ಚಿನ ಸಾರ್ವಜನಿಕ ವಲಯದ ಉದ್ಯಮಗಳು, ಬೃಹತ್ ಅಣೆಕಟ್ಟುಗಳು, ವಿಶ್ವವಿದ್ಯಾನಿಲಯಗಳು, ಉನ್ನತ ಮಟ್ಟದ ಶೈಕ್ಷಣಿಕ ಸಂಸ್ಥೆಗಳು ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳನ್ನು ಸಾಕಾರಗೊಳಿಸಿದ್ದವು. ಈ ಸಾಮಾಜಿಕ-ಆರ್ಥಿಕ ರಚನೆಯು ಬಡವರಿಗೆ ಸಹಾಯ ಮಾಡುವುದರೊಂದಿಗೆ ದೇಶವನ್ನು ಅಭಿವೃದ್ಧಿ ಪಥದತ್ತ ತೆಗೆದುಕೊಂಡು ಹೋಗುವ ಗುರಿಯನ್ನು ಹೊಂದಿದ್ದವು. ಆದರೆ ಇವೆಲ್ಲವನ್ನು ಬಿಜೆಪಿ ಸರ್ಕಾರ ಕಳೆದ 10 ವರ್ಷಗಳಲ್ಲಿ ರದ್ದು ಮಾಡುತ್ತ ಬರುತ್ತಿದೆ. ಕಳೆದ ಒಂದು ದಶಕದಲ್ಲಿ ಬಡವರಿಗೆ ಉಚಿತ ಅಥವಾ ಅನುದಾನಿತ ಶಿಕ್ಷಣವನ್ನು ಒದಗಿಸುವ ಒಂದೇ ಒಂದು ಪಿಎಸ್‌ಯು, ಅಣೆಕಟ್ಟು ಅಥವಾ ವಿಶ್ವ ಗುಣಮಟ್ಟದ ವಿಶ್ವವಿದ್ಯಾನಿಲಯವನ್ನು ನಿರ್ಮಿಸಲು ಸಾಧ್ಯವಾಗಲಿಲ್ಲ. ಆದರೆ, ತಮ್ಮ ಸ್ನೇಹಿತರಾಗಿರುವ ದೊಡ್ಡ ಕಾರ್ಪೊರೇಟ್‌ ಉದ್ಯಮಿಗಳಿಗೆ ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಗೆ ಸಾರ್ವಜನಿಕ ಆಸ್ತಿಗಳನ್ನು ಮಾರಾಟ ಮಾಡುವುದು, ಸಾರ್ವಜನಿಕ ವಲಯದ ಉದ್ಯಮಗಳನ್ನು ಮುಚ್ಚುವುದು ಮತ್ತು ದುರ್ಬಲಗೊಳಿಸುವುದನ್ನು ಕೇಂದ್ರ ಸರ್ಕಾರ ಮಾಡುತ್ತಲೇ ಬರುತ್ತಿದೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಮತಾ ರಾಜೀನಾಮೆ – ಭಾವನಾತ್ಮಕ ರಾಜಕೀಯವೇಕೆ?

ಕಳೆದ ಒಂದೂವರೆ ವರ್ಷದಿಂದ ಈಶಾನ್ಯ ರಾಜ್ಯ ಮಣಿಪುರ ಹೊತ್ತಿ ಉರಿಯುತ್ತಿದೆ. ನೂರಾರು ಸಾವುಗಳಾಗಿವೆ. ಸಾವಿರಾರು ಮಂದಿ ತಮ್ಮ ಮೂಲ ನೆಲೆಯನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಯುವಕರು, ವಿದ್ಯಾರ್ಥಿಗಳಿಗೆ ಮುಂದಿನ ಭವಿಷ್ಯ ಏನು ಎಂದು ಚಿಂತಾಕ್ರಾಂತರಾಗಿದ್ದಾರೆ. ದೇಶ ವಿದೇಶಗಳಿಗೆ ಪ್ರವಾಸ ಮಾಡುವ ಪ್ರಧಾನಿ ನರೇಂದ್ರ ಮೋದಿ ಸಂಘರ್ಷಪೀಡಿತ ಮಣಿಪುರಕ್ಕೆ ಒಮ್ಮೆಯೂ ಭೇಟಿ ನೀಡಿಲ್ಲ. ಮೂರನೇ ಬಾರಿ ಪ್ರಧಾನಿಯಾಗಿ ಆಯ್ಕೆಯಾದಾಗಲು ಮಣಿಪುರದ ಬಗ್ಗೆ ಚಕಾರವೆತ್ತಿಲ್ಲ. ಬೂದಿ ಮುಚ್ಚಿದ ಕೆಂಡದಂತಿದ್ದ ಮಣಿಪುರದಲ್ಲಿ ಮತ್ತೆ ಗಲಭೆ ಶುರುವಾಗಿದೆ. ದೇಶವಿದೇಶಗಳ ಸಮಸ್ಯೆಗಳ ಬಗ್ಗೆ ಮಾತನಾಡುವ, ರಾಯಬಾರಿಗಳನ್ನು ಕಳಿಸುವ ಪ್ರಧಾನಿ ನರೇಂದ್ರ ಮೋದಿಯವರು ಮಣಿಪುರದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದಿರುವುದು ನಿಜಕ್ಕೂ ನೋವಿನ ಸಂಗತಿ.  

ಇದಲ್ಲದೆ ಪ್ರಧಾನಿ ಮೋದಿ ಮತ್ತು ಅವರ ಪಟಾಲಂ ಗೋವಿನ ವಿಷಯವನ್ನು ಮತ್ತೆ ಮುನ್ನಲೆಗೆ ತಂದಿದ್ದಾರೆ. ಗಣೇಶ ಹಬ್ಬದ ಸಂದರ್ಭದಲ್ಲಿ ಕರುವಿಗೆ ವಿಶೇಷ ಪೂಜೆ ಸಲ್ಲಿಸಿ ನಾಮಕರಣವನ್ನು ಮಾಡಲಾಗಿದೆ. ಇದಕ್ಕಾಗಿಯೆ ದೊಡ್ಡ ಸಮಾರಂಭ ಏರ್ಪಡಿಸಿ ಪತ್ರಕರ್ತರ ಒಂದು ದೊಡ್ಡ ಬಳಗವನ್ನು ಫೋಟೋ ಸೆಷನ್‌ಗೆ ಕರೆಸಲಾಗಿತ್ತು. ಗೋವಿನ ಬಗ್ಗೆ ಅತೀವ ಪ್ರೀತಿ ತೋರುವ ಬಿಜೆಪಿ ನಾಯಕರು ಮತ್ತು ಅವರ ಪರಿವಾರ ಇಬ್ಬಗೆಯ ನೀತಿ ಅನುಸರಿಸುತ್ತಿದ್ದಾರೆ. ಒಂದು ಕಡೆ ಕಾಮಧೇನುವಿನ ಬಗ್ಗೆ ಅಪಾರ ಪ್ರೀತಿ ತೋರಿಸಿ ಗೋಮಾಂಸದ ಹೆಸರಿನಲ್ಲಿ ದೇಶಾದ್ಯಂತ ಅಮಾಯಕರನ್ನು ಹತ್ಯೆ ಮಾಡಿದರೆ, ಮತ್ತೊಂದು ಕಡೆ ವಿದೇಶಗಳಿಗೆ ಲಕ್ಷಾಂತರ ಟನ್‌ ಗೋಮಾಂಸ ರಫ್ತು ಮಾಡಿ ನೂರಾರು ಕೋಟಿ ವರಮಾನ ಗಳಿಸುತ್ತಿದೆ.

ಕಳೆದ ವರ್ಷ ಭಾರತವು 1,422 ಸಾವಿರ ಟನ್ ಗೋಮಾಂಸ ರಫ್ತು ಮಾಡಿದೆ ಎಂದು ಅಂಕಿಅಂಶಗಳು ಹೇಳುತ್ತವೆ. ಇದೇ ಪ್ರಮಾಣ ಮುಂದಿನ ಒಂದು ದಶಕದವರೆಗೂ ಇರಲಿದೆ ಎಂದು ಅಂದಾಜಿಸಲಾಗಿದೆ. ಜೊತೆಗೆ, 2026ರ ವೇಳೆಗೆ 19.3 ಲಕ್ಷ ಟನ್ ಗೋಮಾಂಸ ರಫ್ತು ಮಾಡುವ ಮೂಲಕ ಅತಿ ಹೆಚ್ಚು ಗೋಮಾಂಸ ರಫ್ತು ಮಾಡುವ ವಿಶ್ವದ ಅತಿ ದೊಡ್ಡ ರಾಷ್ಟ್ರದ ಸ್ಥಾನವನ್ನು ಭಾರತ ಕಾಯ್ದುಕೊಳ್ಳಲಿದೆ. ವಿಶ್ವದ ಒಟ್ಟು ಗೋಮಾಂಸ ರಫ್ತಿನ ಪೈಕಿ ಶೇಕಡ 16 ರಷ್ಟು ಪಾಲು ಭಾರತದ್ದಾಗಿರಲಿದೆ. ಗೋಮಾಂಸ ರಫ್ತು ವಿರೋಧಿಸುತ್ತಿರುವ ಬಿಜೆಪಿ ಗೋಮಾಂಸ ರಫ್ತು ಮಾಡುವ ವ್ಯಕ್ತಿಯಿಂದಲೇ ಪಕ್ಷಕ್ಕೆ ಕೋಟ್ಯಂತರ ಅನುದಾನವನ್ನು(ಪಾರ್ಟಿ ಫಂಡ್) ಪಡೆದುಕೊಳ್ಳುತ್ತಿರುವುದು ಚುನಾವಣಾ ಬಾಂಡ್‌ಗಳ ಹಗರಣದಲ್ಲಿ ಬಯಲಾಗಿತ್ತು.

ಬಿಜೆಪಿಗೆ ಗೋವು ಮತ ತಂದುಕೊಡುವ ಕಾಮಧೇನು ಎಂಬುದು ಗೊತ್ತಿದೆ. ಈ ಕಾರಣಕ್ಕಾಗಿಯೇ ಗೋವಿನ ವಿಚಾರವನ್ನು ಧರ್ಮ, ಆಚರಣೆ, ಸಂಪ್ರದಾಯದ ಹೆಸರಿನಲ್ಲಿ ವೈಭವೀಕರಿಸುವ ಕೆಲಸವನ್ನು ಕೇಸರಿ ಪಕ್ಷ ನಿರಂತರವಾಗಿ ಮಾಡುತ್ತಿದೆ. ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದು ಹತ್ತು ವರ್ಷ ಆದರೂ ಗೋಮಾಂಸ ರಫ್ತು ಕಡಿಮೆಯಾಗಲಿಲ್ಲ. ಸದ್ಯ ಗೋಮಾಂಸ ರಫ್ತಿನಲ್ಲಿ ಭಾರತ ಎರಡನೇ ಸ್ಥಾನಕ್ಕೇರಿದೆ. ಪ್ರಮುಖವಾಗಿ ಗೋಮಾಂಸ ರಫ್ತು ಮಾಡುವ ಕಂಪನಿಗಳನ್ನು ನಡೆಸುತ್ತಿರುವವರು ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಗುಜರಾತಿನವರು.

ಇದನ್ನು ಓದಿದ್ದೀರಾ: ಕೇಜ್ರಿವಾಲ್ ‘ನಾನು ಪ್ರಾಮಾಣಿಕ’ ಎನ್ನುತ್ತಿರುವುದೇಕೆ?

ಗೋವಿನ ಮೇಲೆ ನಿಜವಾದ ಭಕ್ತಿ ಇದ್ದಿದ್ದರೆ ಬಿಜೆಪಿ ಪ್ರಾಬಲ್ಯ ಇರುವ ರಾಜ್ಯಗಳಲ್ಲಿ ಸಂಪೂರ್ಣ ನಿಷೇಧ ಮಾಡಬೇಕಿತ್ತು. ಆದರೆ ಇಂತಹ ದೃ‍ಢವಾದ ಯಾವುದೇ ನಿರ್ಧಾರವನ್ನು ಬಿಜೆಪಿ ತೆಗೆದುಕೊಂಡಿಲ್ಲ. ಗೋಮಾಂಸ ರಫ್ತು ಮಾಡುವ ಕಂಪನಿಗಳಿಂದಲೇ ದೇಣಿಗೆ ಪಡೆಯುವ ಬಿಜೆಪಿ ನಾಯಕರು ಗೋವಿನ ಹೆಸರಿನಲ್ಲಿ ಮತ ಕೇಳುತ್ತಾರೆ. ಭಾವನಾತ್ಮಕವಾಗಿ ಜನರನ್ನು ಪ್ರಚೋದಿಸುತ್ತಾ ಗೋಮಾಂಸ ಸೇವಿಸುವ ಒಂದು ಸಮುದಾಯವನ್ನು ಕೀಳಾಗಿ ನಿಂದಿಸುವ ಬಿಜೆಪಿ ನಾಯಕರು ಗೋಮಾಂಸ ರಫ್ತಿನ ಬಗ್ಗೆ ಮಾತನಾಡುವುದಿಲ್ಲ. ಗೋಹತ್ಯೆ ನಿಷೇಧ ಮಾಡಬೇಕು ಎಂದು ಒತ್ತಾಯಿಸುವುದು ಇಲ್ಲ. ಪ್ರಧಾನಿ ಹಾಗೂ ಬಿಜೆಪಿ ನಾಯಕರು ಮುಂದಿನ ದಿನಗಳಲ್ಲಾದರೂ ಭಾವನಾತ್ಮಕ ವಿಷಯಗಳಾದ ದೇವರು, ಧರ್ಮ ಮುಂತಾದ ವಿಷಯಗಳನ್ನು ಬಿಟ್ಟು ಅಭಿವೃದ್ಧಿಯ ಕಡೆ ಗಮನಹರಿಸುವರೇ?

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗದಗ | ಮುಶಿಗೇರಿ ವಸತಿ ನಿಲಯಕ್ಕೆ ಮೂಲ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಗೋಳು ಕೇಳೋರ್ಯಾರು?

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ವಸತಿ...

Download Eedina App Android / iOS

X