ದಲಿತರ ಬಗ್ಗೆ ಅವಹೇಳನಕಾರಿ ಭಾಷೆ ಬಳಸಿರುವ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಕರ್ನಾಟಕ ಜನಶಕ್ತಿಯ ಸಿದ್ದರಾಜು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಸಕರ ಸಮುದಾಯ ವಿರೋಧಿ, ದಲಿತ ವಿರೋಧಿ ಮಾತುಗಳಿಗೆ ರಾಜ್ಯ ಮತ್ತು ಒಕ್ಕೂಟದ ಬಿಜೆಪಿ ಪಕ್ಷದ ವರಿಷ್ಠರು ಕಠಿಣ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇತ್ತಿಚಿನ ದಿನಗಳಲ್ಲಿ, ಹಲವಾರು ಬಿಜೆಪಿ ನಾಯಕರಿಂದ ಕೋಮು ಭಾವನೆಗಳನ್ನು ಕೆರಳಿಸುವ ಪ್ರಚೋದನಕಾರಿ ಹೇಳಿಕೆಗಳು ಹೆಚ್ಚಾಗಿದ್ದು, ಇವು ಸಮಾಜಕ್ಕೆ ಕೆಟ್ಟ ಸಂದೇಶವನ್ನು ನೀಡುತ್ತಿವೆ. ಶಾಸಕ ಮುನಿರತ್ನ ಕೂಡಾ ಬೆಂಕಿ ಹಚ್ಚುವವರ ಸಾಲಿನಲ್ಲಿ ಸೇರ್ಪಡೆಗೊಂಡಿದ್ದಾರೆ” ಎಂದು ಸಿದ್ದರಾಜು ಆಕ್ರೋಶ ವ್ಯಕ್ತಪಡಿಸಿದರು.
ಮುನಿರತ್ನ, ಬಿಬಿಎಂಪಿ ಗುತ್ತಿಗೆದಾರನಿಗೆ ಹಣ ತಂದುಕೊಡಲು ಒತ್ತಾಯಿಸುವುದರ ಜೊತೆಗೆ, ಜಾತಿ ಭೇದ ಹುಟ್ಟಿಸುವ ರೀತಿಯ ಅವಹೇಳನಕಾರಿ ಮಾತುಗಳನ್ನು ಆಡಿದ್ದಾರೆ. ದಲಿತ, ಒಕ್ಕಲಿಗ ಎಂಬ ಪದಗಳನ್ನು ಬಳಸುವ ಮೂಲಕ ಜಾತಿಯ ನಡುವಿನ ಸಾಮರಸ್ಯ ಹಾಳು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಅಲ್ಲದೆ, ಗುತ್ತಿಗೆದಾರನ ಮನೆಯ ಹೆಣ್ಣು ಮಕ್ಕಳ ಬಗ್ಗೆ ತೀವ್ರ ಅವಹೇಳನಕಾರಿ, ಅಸಭ್ಯ ಮಾತುಗಳನ್ನು ಆಡಿದ್ದಾರೆ ಎಂದು ಕಿಡಿಕಾರಿದರು.
ಇದನ್ನು ಓದಿದ್ದೀರಾ? ಧಾರವಾಡ | ಮುಸ್ಲಿಮರನ್ನು ಅನುಮಾನದಿಂದ ನೋಡುವುದನ್ನು ನಿಲ್ಲಿಸಬೇಕು: ಡಾ. ಕೆ ಆರ್ ದುರ್ಗಾದಾಸ್
“ಇಂತಹ ಸಂಸ್ಕೃತಿ ಹೀನ ವ್ಯಕ್ತಿಯನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು. 10 ವರ್ಷಗಳ ಕಾಲ ರಾಜಕೀಯ ನಿರ್ಬಂಧ ವಿಧಿಸಿ, ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ. ಮುನಿರತ್ನನಂತಹ ವ್ಯಕ್ತಿಗೆ ತಕ್ಕ ಶಿಸ್ತು ಮತ್ತು ದಂಡನೆಯ ಅಗತ್ಯವಿದೆ. ಇಂತಹ ಅಸಭ್ಯ ಕೃತ್ಯಗಳು ಪುನಃ ನಡೆದರೆ, ಸಮಾಜವು ಸಂಕಷ್ಟಕ್ಕೆ ಒಳಗಾಗಲಿದೆ. ಕರ್ನಾಟಕ ಜನಶಕ್ತಿ ಮುನಿರತ್ನನ ಕೃತ್ಯವನ್ನು ಖಂಡಿಸುತ್ತದೆ. ಇಂತಹವರನ್ನು ಸಮಾಜ ತಿರಸ್ಕರಿಸಬೇಕು ಎಂದು ಸಿದ್ದರಾಜು ತಿಳಿಸಿದರು.
