ಕೇಜ್ರಿವಾಲ್ ‘ನಾನು ಪ್ರಾಮಾಣಿಕ’ ಎನ್ನುತ್ತಿರುವುದೇಕೆ?

Date:

Advertisements
ಆಮ್ ಆದ್ಮಿ ಪಕ್ಷದ ಕೇಜ್ರಿವಾಲ್ ಕಷ್ಟಪಟ್ಟು ಕಟ್ಟಿಕೊಂಡಿದ್ದ 'ಕ್ಲೀನ್' ಇಮೇಜ್ ಕಳಚಿಬಿದ್ದಿದೆ. ಅಬಕಾರಿ ಹಗರಣದ ಮೂಲಕ ಹೋಗಿರುವ ಮಾನವನ್ನು ರಾಜೀನಾಮೆ ಎಂಬ ಅಧಿಕಾರ ತ್ಯಾಗ ಮಾಡುವ ಮೂಲಕ ಗಳಿಸುವರೇ, ದೆಹಲಿಯನ್ನು ಮತ್ತೊಮ್ಮೆ ಗೆದ್ದು ಮೋದಿಯನ್ನು ಮಣಿಸುವರೇ... 

ಅಬಕಾರಿ ಹಗರಣದ ಆರೋಪ ಹೊತ್ತು ಆರು ತಿಂಗಳ ಜೈಲುವಾಸ ಮುಗಿಸಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಆಮ್ ಆದ್ಮಿ ಪಕ್ಷದ ಸಂಸ್ಥಾಪಕ ಅರವಿಂದ್ ಕೇಜ್ರಿವಾಲ್, ‘ನಾನು ಪ್ರಾಮಾಣಿಕ ಎಂದು ದೆಹಲಿ ಜನರು ಪ್ರಮಾಣಪತ್ರ ನೀಡುವವರೆಗೂ ಮುಖ್ಯಮಂತ್ರಿ ಸ್ಥಾನದಲ್ಲಿ ಕೂರುವುದಿಲ್ಲ’ ಎಂದಿದ್ದಾರೆ.

ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಅರವಿಂದ ಕೇಜ್ರಿವಾಲ್ ಘೋಷಿಸಿರುವುದರ ಹಿಂದೆ, ದೆಹಲಿ ಜನರಿಂದ ತಾವೊಬ್ಬ ಅಪ್ಪಟ ಪ್ರಾಮಾಣಿಕ ಎಂಬ ಪ್ರಮಾಣಪತ್ರ ಪಡೆಯುವ ಇರಾದೆ ಇದೆ. ಇನ್ನೊಂದು, ಕಳಚಿರುವ ಕಾಮನ್ ಮ್ಯಾನ್ ಇಮೇಜ್ ಉಳಿಸಿಕೊಳ್ಳುವ ತಂತ್ರಗಾರಿಕೆಯೂ ಅಡಗಿದೆ.

ಅದಕ್ಕಿಂತಲೂ ಮುಖ್ಯವಾಗಿ, ಸುಪ್ರೀಂ ಕೋರ್ಟ್‌ ಕೇಜ್ರಿವಾಲರಿಗೆ ಜಾಮೀನು ನೀಡಿ, ಕೆಲ ಕಠಿಣ ಷರತ್ತುಗಳನ್ನು ವಿಧಿಸಿದೆ. ಆ ಜಾಮೀನು ಷರತ್ತುಗಳಿಂದಾಗಿ ಅವರು ಮುಖ್ಯಮಂತ್ರಿ ಕಚೇರಿಗೆ ಹೋಗುವಂತಿಲ್ಲ, ಕಡತಗಳಿಗೆ ಸಹಿ ಮಾಡುವಂತಿಲ್ಲ. ಅಂದಮೇಲೆ ಮುಖ್ಯಮಂತ್ರಿಯಾಗಿದ್ದೂ ಪ್ರಯೋಜನವಿಲ್ಲ. ಹಾಗಾಗಿ, ಜಾಮೀನು ಸಿಕ್ಕಿದರೂ ಅಧಿಕಾರದಾಸೆ ಇಲ್ಲ ಎಂದು ತೋರಿಸಿಕೊಳ್ಳಲು ರಾಜೀನಾಮೆಯ ನಾಟಕ ಆಡುತ್ತಿದ್ದಾರೆ. ಷರತ್ತುಗಳನ್ನು ಉಲ್ಲಂಘಿಸದೆ ಅದರಿಂದ ರಾಜಕೀಯವಾಗಿ ಲಾಭ ಪಡೆಯಲು ಹವಣಿಸುತ್ತಿದ್ದಾರೆ.

Advertisements

ಜೊತೆಗೆ, ಆಮ್ ಆದ್ಮಿ ಪಕ್ಷ ಅಧಿಕಾರದಲ್ಲಿರುವ ದೆಹಲಿಯ ಅಧಿಕಾರಾವಧಿ ಫೆಬ್ರವರಿ 2025ಕ್ಕೆ ಮುಗಿಯಲಿದೆ. ಚುನಾವಣಾ ಆಯೋಗ ಮನಸ್ಸು ಮಾಡಿ ಮಹಾರಾಷ್ಟ್ರ, ಜಾರ್ಖಂಡ್ ರಾಜ್ಯಗಳ ಜೊತೆಗೆ ದೆಹಲಿ ವಿಧಾನಸಭಾ ಚುನಾವಣೆಯ ದಿನಾಂಕವನ್ನು ಘೋಷಿಸಿದರೆ, ನವೆಂಬರ್ ಅಥವಾ ಡಿಸೆಂಬರ್‍‌ನಲ್ಲಿ ಚುನಾವಣೆ ನಡೆಯಲೂಬಹುದು. ಹಾಗಾಗಿ ಸಿಗುವ ಮೂರ್‍ನಾಲ್ಕು ತಿಂಗಳ ಮುಖ್ಯಮಂತ್ರಿ ಕುರ್ಚಿಗಿಂತ, ಕಳೆದುಹೋಗಿರುವ ಇಮೇಜ್ ಅನ್ನು ವೃದ್ಧಿಸಿಕೊಳ್ಳುವುದು ಇಂದಿನ ತುರ್ತಾಗಿದೆ. ಅದಕ್ಕಾಗಿ ಅಧಿಕಾರತ್ಯಾಗವನ್ನು ಅಸ್ತ್ರವನ್ನಾಗಿ ಬಳಸುತ್ತಿದ್ದಾರೆ. ದಲಿತ ಅಥವಾ ಮಹಿಳೆಯೊಬ್ಬರನ್ನು ಸಿಎಂ ಸ್ಥಾನದಲ್ಲಿ ಕೂರಿಸುವ ಮೂಲಕ, ದಲಿತರ-ಮಹಿಳೆಯರ ಮನ ಗೆಲ್ಲಲು ನೋಡುತ್ತಿದ್ದಾರೆ. ಮತ್ತೆ ಸಾಮಾನ್ಯನ ಸೋಗು ಹಾಕಿ, ಜನರ ಮುಂದೆ ನಿಲ್ಲಲು, ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಬೇಕಾದ ಕಸರತ್ತಿನಲ್ಲಿ ಮುಳುಗಿದ್ದಾರೆ. ಈ ಎಲ್ಲ ದೂರಾಲೋಚನೆಗಳೂ ಈ ರಾಜೀನಾಮೆಯ ಹಿಂದೆ ಅಡಗಿದೆ.

ದೇಶದ ಜನ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ಜೋಭದ್ರಗೇಡಿ ಆಡಳಿತವನ್ನು ಹಾಗೂ ಭ್ರಷ್ಟಾಚಾರವನ್ನು ಕಂಡಿದ್ದರು. ಬೇಸತ್ತಿದ್ದರು. ಬೇರೆ ಆಯ್ಕೆಗಳಿಲ್ಲದಿರುವಾಗ, ಅನಿವಾರ್ಯವಾಗಿ ಕಡಿಮೆ ಕಳ್ಳರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಅಂತಹ ಸಂದರ್ಭದಲ್ಲಿ ಭ್ರಷ್ಟಾಚಾರ ವಿರೋಧಿ ಆಂದೋಲನದ ಮೂಲಕ, ಸಾಮಾನ್ಯರ ನಡುವಿನಿಂದ ಎದ್ದುಬಂದ ಅರವಿಂದ್ ಕೇಜ್ರಿವಾಲ್ ರನ್ನು ‘ನಮ್ಮ ನಿಜ ಪ್ರತಿನಿಧಿ’ ಎಂದು ನಂಬಿದರು. ನಂಬುವುದಷ್ಟೇ ಅಲ್ಲ, ದೆಹಲಿ ಅಧಿಕಾರವನ್ನು ದಯಪಾಲಿಸಿದರು. ಸಿಕ್ಕ ಅಧಿಕಾರವೆಂಬ ಅಪೂರ್ವ ಅವಕಾಶವನ್ನು ಅರವಿಂದ ಕೇಜ್ರಿವಾಲ್ ಬಹಳ ಬುದ್ಧಿವಂತಿಕೆಯಿಂದ ಬಳಸಿಕೊಂಡರು. ಮನುಷ್ಯರ ಮೂಲಭೂತ ಆದ್ಯತೆಗಳಾದ ಆರೋಗ್ಯ, ಶಿಕ್ಷಣ ಮತ್ತು ವಿದ್ಯುತ್ ಕ್ಷೇತ್ರಗಳಲ್ಲಿ ಬದಲಾವಣೆಗಳನ್ನು ತಂದರು. ಜನಪರ ಆಡಳಿತದ ಭರವಸೆ ಹುಟ್ಟಿಸಿದರು.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಮಮತಾ ರಾಜೀನಾಮೆ – ಭಾವನಾತ್ಮಕ ರಾಜಕೀಯವೇಕೆ?

ಆದರೆ ಪಕ್ಷದ ಬಲವರ್ಧನೆ, ವಿಸ್ತರಣೆ ಬಗ್ಗೆ ಯೋಚಿಸಿದಂತೆಲ್ಲ ಆಮ್ ಆದ್ಮಿ ಕೂಡ ಮತ್ತೊಂದು ರಾಜಕೀಯ ಪಕ್ಷದಂತೆಯೇ, ಅದೇ ಹಳೆ ಭ್ರಷ್ಟಾಚಾರದ ಜಾಡಿಗೇ ಬಿದ್ದಿತ್ತು. ಪಂಜಾಬ್ ರಾಜ್ಯವನ್ನು ಗೆದ್ದಿದ್ದು ಅವರ ಕೃತ್ಯಗಳಿಗೆ ಕುಮ್ಮಕ್ಕು ಕೊಟ್ಟಂತಾಯಿತು. ಆಮ್ ಆದ್ಮಿ ಕೂಡ ಅಧಿಕಾರವನ್ನು ಬಳಸಿ ಹಣ ಸಂಗ್ರಹಿಸುವ ಸವಕಲು ಹಾದಿಯನ್ನೇ ಹಿಡಿದಿತ್ತು. ಆಮ್ ಆದ್ಮಿ ಎಂದು ಜನಸಾಮಾನ್ಯರನ್ನು ಮುಂದೆ ಮಾಡುತ್ತಿತ್ತೇ ಹೊರತು, ಪಾರ್ಟಿಯಲ್ಲಿ ಅರವಿಂದ್ ಕೇಜ್ರಿವಾಲ್‌ದೇ ಅಂತಿಮ ನಿರ್ಧಾರವಾಗಿತ್ತು. ಸರ್ವಾಧಿಕಾರಿಯ ಸುಳಿವನ್ನೂ ನೀಡಿತ್ತು. ಪಕ್ಷ ತೊರೆದ ನಾಯಕರು ಕೇಜ್ರಿವಾಲ್‌ರ ಮತ್ತೊಂದು ಮುಖವನ್ನು ಬಯಲಿಗಿಟ್ಟಿದ್ದೂ ಆಯಿತು.

ಏತನ್ಮಧ್ಯೆ, ದೇಶದ ಹೃದಯಭಾಗದಲ್ಲಿ ಗೆಲ್ಲಲಾಗದೆ ಭಾರೀ ಮುಖಭಂಗಕ್ಕೆ ಒಳಗಾಗಿದ್ದ ಬಿಜೆಪಿ, ಇಂತಹ ಅವಕಾಶಕ್ಕಾಗಿ ಕಾದಿತ್ತು. ಅದಕ್ಕೆ ತಕ್ಕಂತೆ ಅಬಕಾರಿ ನೀತಿ ಹಗರಣ ಅವರ ಕೈಗೆ ಅನಾಯಾಸವಾಗಿ ಸಿಕ್ಕಿತ್ತು. ಮುಖ್ಯಮಂತ್ರಿ ಕೇಜ್ರಿವಾಲ್, ಉಪಮುಖ್ಯಮಂತ್ರಿಯಾಗಿದ್ದ ಮನೀಶ್‌ ಸಿಸೋಡಿಯಾ, ಎಎ‍ಪಿ ಮುಖಂಡ ಸಂಜಯ್‌ ಸಿಂಗ್‌, ಬಿಆರ್‌ಎಸ್‌ ನಾಯಕಿ ಕೆ.ಕವಿತಾ ಸೇರಿದಂತೆ ಹಲವರ ಮೇಲೆ ಇಡಿ ಮತ್ತು ಸಿಬಿಐ ದಾಳಿ ಮಾಡಿಸಿ, ಕಂಬಿ ಹಿಂದೆ ಕೂರಿಸಿತು.

ಆ ಮೂಲಕ, ಸಾಮಾನ್ಯರ ಪ್ರತಿನಿಧಿ, ಪ್ರಾಮಾಣಿಕ, ಶುದ್ಧಹಸ್ತ ಎಂದೆಲ್ಲ ಹೆಸರು ಗಳಿಸಿದ್ದ ಅರವಿಂದ್ ಕೇಜ್ರಿವಾಲ್ ವ್ಯಕ್ತಿತ್ವಕ್ಕೆ ಭ್ರಷ್ಟಾಚಾರದ ಮಸಿ ಮೆತ್ತಿಕೊಳ್ಳುವಂತೆ ನೋಡಿಕೊಳ್ಳಲಾಯಿತು. ಅದಕ್ಕೆ ಬಿಜೆಪಿ ಐಟಿ ಸೆಲ್ ಮತ್ತು ಗೋದಿ ಮೀಡಿಯಾ ಕೂಡ ಸಹಕರಿಸಿತು. ದಾಳಿ, ವಿಚಾರಣೆ, ಜೈಲುವಾಸ, ಬಿಡುಗಡೆ- ಅಂತೆಲ್ಲ ಭಾರಿ ಸುದ್ದಿ ಮಾಡಿ, ‘ಇವರೂ ಅವರೇ’ ಎಂದು ಸಾಬೀತು ಮಾಡುವಲ್ಲಿ ಯಶಸ್ವಿಯಾಯಿತು.   

ಇದು ಬಿಜೆಪಿಯ ಹಿಡನ್ ಅಜೆಂಡಾ. ಮೋದಿಗೆ ಮದುವೆಯಾಗಿಲ್ಲ, ಮಕ್ಕಳಿಲ್ಲ, ಮನೆ-ಮಠವಿಲ್ಲ; ಅವರಿಗೇಕೆ ಹಣ ಎಂದು ಜನ ಮಾತನಾಡಿಕೊಳ್ಳಬೇಕು. ಮೋದಿ ಅಧಿಕಾರದಲ್ಲಿ ಮುಂದುವರೆಯುತ್ತಲೇ ಇರಬೇಕು. ಈ ಮುಂದುವರಿಕೆಗೆ ಕೇಜ್ರಿವಾಲ್ ಥರದವರು ಕಂಟಕರಾಗಿದ್ದರು. ದೆಹಲಿ, ಪಂಜಾಬ್ ಗೆದ್ದು ಗುಜರಾತಿನಲ್ಲಿ ಪೈಪೋಟಿಗಿಳಿದಿದ್ದರು. ಸಮಯ ಸಿಕ್ಕಾಗಲೆಲ್ಲ ಮೋದಿ ವಿರುದ್ಧ ಕಿಡಿಕಾರುತ್ತ, ವಿರೋಧಿ ಪಾಳೆಯದ ನಾಯಕರೊಂದಿಗೆ ಗುರುತಿಸಿಕೊಂಡಿದ್ದರು. ಅಬಕಾರಿ ಹಗರಣವನ್ನು ನಾಜೂಕಾಗಿ ಬಳಸಿಕೊಂಡ ಬಿಜೆಪಿ ಆಮ್ ಆದ್ಮಿ ಕೇಜ್ರಿವಾಲ್ ಕಳೆಗುಂದುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ಕಳೆದ ಹತ್ತು ವರ್ಷಗಳಿಂದ ಇಂಥದ್ದನ್ನು ಮಾಡಿಕೊಂಡು ಬರುತ್ತಲೇ ಬಲಿಷ್ಠ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿಗೆ ಇದೇನು ಹೊಸದಲ್ಲ.

ಆದರೆ ಆಮ್ ಆದ್ಮಿ ಪಕ್ಷಕ್ಕೆ ಹೊಸದು. ಕಷ್ಟಪಟ್ಟು ಕಟ್ಟಿಕೊಂಡಿದ್ದ ‘ಕ್ಲೀನ್’ ಇಮೇಜ್ ಕಳಚಿಬಿದ್ದಿದೆ. ಅಬಕಾರಿ ಹಗರಣದ ಮೂಲಕ ಹೋಗಿರುವ ಮಾನವನ್ನು ಕೇಜ್ರಿವಾಲ್ ಅಧಿಕಾರ ತ್ಯಾಗ ಮಾಡುವ ಮೂಲಕ ಗಳಿಸುವರೇ, ದೆಹಲಿಯನ್ನು ಮತ್ತೊಮ್ಮೆ ಗೆದ್ದು ಮೋದಿಯನ್ನು ಮಣಿಸುವರೇ… ಕಾದು ನೋಡಬೇಕು.

Basavaraju Megalkeri
+ posts

ಲೇಖಕ, ಪತ್ರಕರ್ತ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

Download Eedina App Android / iOS

X