ಆರ್‌ಎಸ್‌ಎಸ್‌ ಎಚ್ಚರಿಕೆಗೂ ಬಗ್ಗದ ಯತ್ನಾಳ್ ಮಿತ್ರ ಪಡೆ; ಮುಂದುವರೆದ ಬಂಡಾಯ

Date:

Advertisements
ಬಿಜೆಪಿ ಮುಖಂಡರೊಂದಿಗೆ ಆರ್‌ಎಸ್‌ಎಸ್‌ ಸಭೆ ನಡೆದ ಮಾರನೆಯ ದಿನವೇ, ಆ ಸಭೆ ಸಫಲವಾಗಿಲ್ಲ ಎಂಬುದನ್ನು ಯತ್ನಾಳ್‌ ತಂಡ ಬಹಿರಂಗಗೊಳಿಸಿದೆ. ಶುಕ್ರವಾರ, ಯತ್ನಾಳ್‌ ಮತ್ತು ಸಂಗಡಿಗರು ರಾಜ್ಯಪಾಲರ ಕಚೇರಿಗೆ ಭೇಟಿ ನೀಡಿದ್ದು, ಮತ್ತೆ ಬಂಡಾಯದ ಬಾವುಟ ಹಾರಿಸಿದ್ದಾರೆ.

ರಾಜ್ಯ ಬಿಜೆಪಿಯಲ್ಲಿ ಹಗ್ಗ-ಜಗ್ಗಾಟ ಬಹಿರಂಗವಾಗಿಯೇ ನಡೆಯುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಭ್ರಷ್ಟಾಚಾರ, ಹಗರಣ, ಅವ್ಯವಹಾರಗಳ ಜೊತೆಗೆ ಪಕ್ಷದೊಳಗಿನ ಒಗ್ಗಟ್ಟಿನ ಕೊರತೆ, ಬಂಡಾಯ, ಅಸಮಾಧಾನಗಳ ಕಾರಣದಿಂದ ಬಿಜೆಪಿ ಹೀನಾಯವಾಗಿ ಸೋಲುಂಡಿದೆ. ಲೋಕಸಭಾ ಚುನಾವಣೆಯಲ್ಲಿ ಹಿಂದುತ್ವ, ಮತೀಯವಾದ ಹಾಗೂ ಮೋದಿ ಮುಖ ನೋಡಿ ಜನರು ಮತ ಚಲಾಯಿಸಿದ್ದರಿಂದ ಬಿಜೆಪಿ ಒಂದಷ್ಟು ಸ್ಥಾನಗಳನ್ನು ಗೆದ್ದುಕೊಂಡಿದ್ದು ಬಿಟ್ಟರೆ, ಪಕ್ಷದ ಸಂಘಟನೆಯಲ್ಲಿ ಬಿಜೆಪಿ ಭಾರೀ ಹಿಂದುಳಿದಿದೆ. ಮತ್ತೆ, ಕೋಮು ಗಲಭೆ, ಸಂಘರ್ಷದ ಬಗ್ಗೆ ಪ್ರಚೋದನಕಾರಿ ಹೇಳಿಕೆ ನೀಡಲು ಆರಂಭಿಸಿದೆ.

ಪಾಕಿಸ್ತಾನ, ಮುಸ್ಲಿಮರ ಬಗ್ಗೆ ಹೇಳಿಕೆ ಕೊಡುತ್ತಲೇ ಕೆಲವು ಬಿಜೆಪಿ ನಾಯಕರು ಸುದ್ದಿಯಲ್ಲಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಬಿಜೆಪಿ ನಾಯಕರು ಆಂತರಿಕ ಭಿನ್ನಾಭಿಪ್ರಾಯ, ಬಂಡಾಯ, ಆರೋಪ-ಪ್ರತ್ಯಾರೋಪಗಳ ಕಾರಣಕ್ಕಾಗಿಯೇ ಸದ್ದು ಮಾಡುತ್ತಿದ್ದಾರೆ. ಸುದ್ದಿಯಾಗುತ್ತಿದ್ದಾರೆ. ರಾಜ್ಯ ಬಿಜೆಪಿಯಲ್ಲಿನ ಬಂಡಾಯವನ್ನು ಶಮನ ಮಾಡುವಲ್ಲಿ ಪ್ರಧಾನಿ ಮೋದಿ ಆದಿಯಾಗಿ ಬಿಜೆಪಿ ಹೈಕಮಾಂಡ್ ವಿಫಲವಾಗಿದೆ. ರಾಜ್ಯ ಬಿಜೆಪಿ ನಾಯಕರನ್ನ ಹತೋಟಿಗೆ ತರಲು ಆರ್‌ಎಸ್‌ಎಸ್‌ ಮುಂದಾಗಿದ್ದು, ಗುರುವಾರ ಬೆಂಗಳೂರಿನಲ್ಲಿ ಬಿಜೆಪಿ ನಾಯಕರು, ಮುಖಂಡರನ್ನೊಳಗೊಂಡ ಸಭೆ ನಡೆಸಿದೆ.

ಆರ್‌ಎಸ್‌ಎಸ್ ಮುಖಂಡ ಮುಕುಂದ್ ಮತ್ತು‌ ಬಿ.ಎಲ್ ಸಂತೋಷ್‌ ಹಾಗೂ ಸಂಘದ ಪ್ರಮುಖ ಮುಖಂಡರು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ, ವಿಜಯಪುರ ಶಾಸಕ ಬಸನಗೌಡ ಯತ್ನಾಳ್ ಸೇರಿದಂತೆ ಬಿಜೆಪಿಯ ಹಲವರನ್ನು ಕರೆಸಿಕೊಂಡು ಸಭೆ ನಡೆಸಿದ್ದಾರೆ. ವಿಜಯೇಂದ್ರ ಮತ್ತು ಯತ್ನಾಳ್ ಅವರನ್ನು ಮುಖಾಮುಖಿ ಕೂರಿಸಿಕೊಂಡು ಅಭಿಪ್ರಾಯ ಸಂಗ್ರಹಿಸಿದ್ದಾರೆ. ಇಬ್ಬರಿಗೂ ಖಡಕ್ ಎಚ್ಚರಿಕೆಯನ್ನೂ ನೀಡಿದ್ದಾರೆ. ರಾಜ್ಯದಲ್ಲಿ ಎಲ್ಲರೂ ಒಗ್ಗಟ್ಟಿನಲ್ಲಿ ಹೋಗಬೇಕು. ಒಗ್ಗಟ್ಟಿನ ಮಂತ್ರ ಜಪಿಸಬೇಕೆಂದು ಸೂಚನೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

Advertisements

ಅಂದಹಾಗೆ, ಮಾಜಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಮತ್ತು ಅವರ ಮಗ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಯತ್ನಾಳ್ ನಿರಂತರವಾಗಿ ಕೆಂಡಕಾರುತ್ತಲೇ ಇದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕೊರೋನ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಬರೋಬ್ಬರಿ 40,000 ಕೋಟಿ ರೂ. ಹಗರಣ ನಡೆದಿದೆ ಎಂದು ಯತ್ನಾಳ್ ಪದೇ ಪದೇ ಆರೋಪಿಸುತ್ತಲೇ ಇದ್ದಾರೆ. ಕೋವಿಡ್ ಹಗರಣದ ಬಗ್ಗೆ ಕಾಂಗ್ರೆಸ್‌ ಸರ್ಕಾರ ತನಿಖೆಯನ್ನೂ ನಡೆಸಿದ್ದು, 2,200 ಕೋಟಿ ರೂ. ಅವ್ಯವಹಾರ ನಡೆದಿರುವ ಬಗ್ಗೆ ತನಿಖಾ ಸಮಿತಿ ವರದಿ ನೀಡಿದೆ ಎನ್ನಲಾಗಿದೆ.

ಹಗರಣ ಮಾತ್ರವಲ್ಲದೆ, ಮುಖ್ಯಮಂತ್ರಿ ಹುದ್ದೆ, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ವಿಷಯವಾಗಿ ಯತ್ನಾಳ್ ಆಗಾಗ್ಗೆ ಯಡಿಯೂರಪ್ಪ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಇದ್ದಾರೆ. ಇತ್ತೀಚೆಗೆ, ಆಪಾದಿತ ಮುಡಾ ಅಕ್ರಮದ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸಿತ್ತು. ಈ ಪಾದಯಾತ್ರೆ ಹೊಂದಾಣಿಕೆ ರಾಜಕಾರಣದ ಭಾಗವಾಗಿದೆ ಎಂದು ಯತ್ನಾಳ್ ಆರೋಪಿಸಿದ್ದರು. ಪಾದಯಾತ್ರೆಯಿಂದ ಹೊರಗುಳಿದಿದ್ದರು.

ಮಾತ್ರವಲ್ಲದೆ, ಪಾದಯಾತ್ರೆ ಪ್ರತಿಯಾಗಿ ಯತ್ನಾಳ್‌ ಮತ್ತು ಸಂಗಡಿಗರು ಕೂಡಲಸಂಗಮದಿಂದ ಬಳ್ಳಾರಿಗೆ ಪ್ರತ್ಯೇಕ ಪಾದಯಾತ್ರೆ ನಡೆಸಲು ನಿರ್ಧರಿಸಿದ್ದರು. ಗಮನಾರ್ಹವಾಗಿ, ಈ ಸಭೆಯಲ್ಲಿ ಮೈಸೂರು-ಕೊಡಗು ಮಾಜಿ ಸಂಸದ ಪ್ರತಾಪ್ ಸಿಂಹ ಭಾಗಿಯಾಗಿದ್ದರು. ಇದು, ಪ್ರತಾಪ್ ಸಿಂಹ ಕೂಡ ಯತ್ನಾಳ್ ಬಳಗ ಸೇರಿದ್ದಾರೆ ಎಂಬ ಚರ್ಚೆಯನ್ನು ಹುಟ್ಟುಹಾಕಿತ್ತು.

ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ವಿಜಯೇಂದ್ರ ಪಕ್ಷದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟನೆ ಮಾಡುವಲ್ಲಿ ವಿಫಲರಾಗುತ್ತಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ವಿಜಯೇಂದ್ರ ಅವರ ತವರು ಶಿವಮೊಗ್ಗದಲ್ಲಿಯೇ ಮಾಜಿ ಸಚಿವ ಕೆ.ಎಸ್‌ ಈಶ್ವರಪ್ಪ ಬಂಡಾಯ ಎದ್ದಿದ್ದರು. ವಿಜಯೇಂದ್ರ ಅವರ ಸಹೋದರ ಬಿ.ವೈ ರಾಘವೇಂದ್ರ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಈಶ್ವರಪ್ಪ ಅವರನ್ನು ಸಮಾಧಾನ ಪಡಿಸುವಲ್ಲಿ, ಬಂಡಾಯವನ್ನು ತಣಿಸುವಲ್ಲಿ ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಎಲ್ಲ ನಾಯಕರು ವಿಫಲರಾಗಿದ್ದರು. ಅಂತಿಮವಾಗಿ, ಈಶ್ವರಪ್ಪ ಅವರನ್ನು ಪಕ್ಷದಿಂದ ಅಮಾನತು ಮಾಡುವುದರೊಂದಿಗೆ ಶಿವಮೊಗ್ಗ ಮೇಲಾಟ ಮುಗಿದುಹೋಯಿತು.

ಈ ವರದಿ ಓದಿದ್ದೀರಾ?: ಒಕ್ಕೂಟ ವ್ಯವಸ್ಥೆ ಉಳಿಯಲು ಸಾಮುದಾಯಿಕವಾಗಿ ಸೆಣಸುವ ಅಗತ್ಯವಿದೆ: ಡಾ ಜಿ ರಾಮಕೃಷ್ಣ

ರಾಜ್ಯ ಬಿಜೆಪಿಯಲ್ಲಿ ತನ್ನದು ಮತ್ತು ತನ್ನ ಕುಟುಂಬದ್ದೇ ಹಿಡಿತ ಇರಬೇಕೆಂದು ಯಡಿಯೂರಪ್ಪ ಹವಣಿಸುತ್ತಿದ್ದಾರೆ. ಅವರ ಈ ಹಪಾಹಪಿತನವನ್ನು ಬಿಜೆಪಿಯ ಹಲವರು ವಿರೋಧಿಸುತ್ತಿದ್ದಾರೆ. ಅದರಲ್ಲೂ, ಯತ್ನಾಳ್ ಅಂತವರು ಬಹಿರಂಗವಾಗಿಯೇ ಮಾತನಾಡುತ್ತಿದ್ದಾರೆ.

ತಮ್ಮದೇ ಪಡೆ ಕಟ್ಟುತ್ತಿರುವ ಯತ್ನಾಳ್ ಜೊತೆಗೆ, ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ ಸೇರಿದಂತೆ ಹಲವರು ಕೈಜೋಡಿಸಿದ್ದಾರೆ. ಸೋಮಣ್ಣ, ಅರವಿಂದ್ ಬೆಲ್ಲದ್ ಮತ್ತು ಬಸವರಾಜ ಬೊಮ್ಮಾಯಿ ಲಿಂಗಾಯತ ಬಣ ರಚಿಸಿಕೊಂಡಿದ್ದಾರೆ. ಒಕ್ಕಲಿಗ ಸಮುದಾಯದ ಪ್ರೀತಂ ಗೌಡ, ಪ್ರತಾಪ ಸಿಂಹ, ಸಿ.ಟಿ.ರವಿ, ಅಶ್ವಥ್ ನಾರಾಯಣ ಕೂಡ ಮತ್ತೊಂದು ಬಣ ಕಟ್ಟಿಕೊಂಡಿದ್ದಾರೆ. ವಿಶ್ವೇಶ್ವರ ಹೆಗಡೆ ಕಾಗೇರಿ, ಪ್ರಲ್ಹಾದ್ ಜೋಶಿ, ಸುರೇಶ ಕುಮಾರ್, ತೇಜಸ್ವಿ ಸೂರ್ಯ ಅವರು ಬ್ರಾಹ್ಮಣರ ಗುಂಪು ಕಟ್ಟಿದ್ದಾರೆ. ಆರ್. ಅಶೋಕ್, ರೇಣುಕಾಚಾರ್ಯ, ಜೆ.ಸಿ. ಮಾಧುಸ್ವಾಮಿಗಳು ಯಾವ ಕಡೆಯೂ ಗುರುತಿಸಿಕೊಳ್ಳದೆ, ಬೇಲಿ ಮೇಲಿದ್ದಾರೆ. ಹೀಗೆ, ಬಿಜೆಪಿಯಲ್ಲಿ ಜಾತಿ, ಗುಂಪುಗಳ ಆಧಾರದ ಮೇಲೆ ಒಬ್ಬೊಬ್ಬರು ಒಂದೊಂದು ದಿಕ್ಕಾಗಿದ್ದಾರೆ. ಈ ಎಲ್ಲ ಬಣ-ಗುಂಪುಗಳು ಮತ್ತೊಬ್ಬರ ಮಾತನ್ನು ಕೂಡ ಕೇಳುವುದಿಲ್ಲ. ಒಬ್ಬರ ವಿರುದ್ಧ ಮತ್ತೊಬ್ಬರು ಕತ್ತಿ ಮಸೆಯುವುದೂ ನಿಂತಿಲ್ಲ.

ಈ ಬಂಡಾಯವನ್ನು ಶಮನ ಮಾಡಲು ಆರ್‌ಎಸ್‌ಎಸ್‌ ಯತ್ನಿಸುತ್ತಿದ್ದು, ಗುರುವಾರ ಸಭೆ ನಡೆಸಿದೆ. ಸಭೆಯಲ್ಲಿ ಎಲ್ಲರೂ ಒಟ್ಟಿಗೆ ಕೆಲಸ ಮಾಡಬೇಕು. ಕಾಂಗ್ರೆಸ್‌ ಸರ್ಕಾರದ ವಿರುದ್ಧ ಜನಾಭಿಪ್ರಾಯ ರೂಪಿಸಬೇಕು. ಮಾತ್ರವಲ್ಲದೆ, ಯತ್ನಾಳ್‌ ತಂಡ ನಿರ್ಧರಿಸಿದ್ದ ಬಳ್ಳಾರಿ ಪಾದಯಾತ್ರೆಯನ್ನು ಪಕ್ಷದ ಎಲ್ಲರೂ ಒಟ್ಟಿಗೆ ನಡೆಸಬೇಕು ಎಂದು ಸೂಚನೆ ನೀಡಿದೆ ಎಂದು ವರದಿಯಾಗಿದೆ.

ಆದರೆ, ಬಿಜೆಪಿ ಮುಖಂಡರೊಂದಿಗೆ ಆರ್‌ಎಸ್‌ಎಸ್‌ ಸಭೆ ನಡೆದ ಮಾರನೆಯ ದಿನವೇ, ಆ ಸಭೆ ಸಫಲವಾಗಿಲ್ಲ ಎಂಬುದನ್ನು ಯತ್ನಾಳ್‌ ತಂಡ ಬಹಿರಂಗಗೊಳಿಸಿದೆ. ಶುಕ್ರವಾರ, ಯತ್ನಾಳ್‌ ಮತ್ತು ಸಂಗಡಿಗರು ರಾಜ್ಯಪಾಲರ ಕಚೇರಿಗೆ ಭೇಟಿ ನೀಡಿದ್ದು, ಮತ್ತೆ ಬಂಡಾಯದ ಬಾವುಟ ಹಾರಿಸಿದ್ದಾರೆ. ಈ ಭೇಟಿ ಪೂರ್ವನಿಯೋಜಿತವೆಂದು ಅವರು ಹೇಳಿಕೊಂಡಿದ್ದಾರೆ. ಆದಾಗ್ಯೂ, ಪಕ್ಷದ ಯಾವೊಬ್ಬ ಪದಾಧಿಕಾರಿಯೂ ಅವರ ಭೇಟಿಯ ಸಮಯದಲ್ಲಿ ಜೊತೆಗಿರಲಿಲ್ಲ. ಮಾತ್ರವಲ್ಲದೆ, ಅವರ ರಾಜಭವನ ಭೇಟಿಯ ಬಗ್ಗೆ ಬಿಜೆಪಿ ಕಾರ್ಯಾಲಯಕ್ಕೆ ಮಾಹಿತಿಯೇ ಇರಲಿಲ್ಲ ಎಂಬ ವಿಚಾರ ಪಕ್ಷದಲ್ಲಿ ಸಾಮರಸ್ಯವಿಲ್ಲ ಎಂಬ ಸಂದೇಶ ನೀಡಿದೆ.

ಯತ್ನಾಳ್ ಮತ್ತು ಸಂಗಡಿಗರ ನಡೆಯು ಪಕ್ಷದ ಶಿಷ್ಟಾಚಾರಕ್ಕೆ ವಿರುದ್ಧವಾಗಿದೆ ಎಂಬ ಅಸಮಾಧಾನಗಳು ಬಿಜೆಪಿಯೊಳಗೆ ಕೇಳಿಬರುತ್ತಿವೆ. ಆರ್‌ಎಸ್‌ಎಸ್‌ ಮುಖಂಡರು ಸಭೆ ನಡೆಸಿದರೂ, ಯತ್ನಾಳ್‌ ಪಡೆ ತನ್ನ ಧೋರಣೆಯನ್ನಾಗಲೀ, ನಡೆಯನ್ನಾಗಲೀ ಬದಲಿಸಿಕೊಂಡಿಲ್ಲ. ಆರ್‌ಎಸ್‌ಎಸ್‌ ನಾಯಕರ ಎಚ್ಚರಿಕೆಯ ಮಾತುಗಳೂ ಅವರಿಗೆ ಪಥ್ಯವಾಗಿಲ್ಲ. ರಾಜ್ಯ ಬಿಜೆಪಿ ಬೀದಿಕಾಳಗ ಸದ್ಯಕ್ಕಂತೂ ನಿಲ್ಲುವುದಿಲ್ಲ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಜೆಪಿ-ಆರ್‌ಎಸ್‌ಎಸ್‌ ಜತೆ ಕೈ ಜೋಡಿಸುವ ಪ್ರಶ್ನೆಯೇ ಇಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್

ನಾನು ಅಪ್ಪಟ ಕಾಂಗ್ರೆಸ್ಸಿಗ. ಹುಟ್ಟಿನಿಂದ ಕಾಂಗ್ರೆಸ್ಸಿಗ. ಜೀವ ಇರುವ ತನಕವೂ ಕಾಂಗ್ರೆಸ್ಸಿಗನಾಗಿಯೇ...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

ಅಲೆಮಾರಿ ಸಮುದಾಯಗಳಿಗೆ ಸಾಂವಿಧಾನಿಕ ನ್ಯಾಯ ಸಿಗಲಿ: ಚಲನಚಿತ್ರ ನಿರ್ದೇಶಕಿ ಸುಮನ್ ಕಿತ್ತೂರು

ಪರಿಶಿಷ್ಟ ಜಾತಿ ಒಳಮೀಸಲಾತಿ ವಿಚಾರದಲ್ಲಿ ಅಲೆಮಾರಿ ಸಮುದಾಯಗಳಿಗೆ ಸಾಂವಿಧಾನಿಕ ನ್ಯಾಯ ಸಿಗಲಿ...

Download Eedina App Android / iOS

X