ಕಲ್ಯಾಣ ಕರ್ನಾಟಕದ ವಿಮೋಚನೆಗಾಗಿ ನಮ್ಮ ಭಾಗದ ಅನೇಕರ ತ್ಯಾಗ ಬಲಿದಾನಗಳಿವೆ. ಆಗಸ್ಟ್ 15 ರಂದು ದೇಶಕ್ಕೆ ಸ್ವಾತಂತ್ರ‍್ಯ ದೊರಕಿದರೂ ನಮ್ಮ ಭಾಗಕ್ಕೆ ಸ್ವಾತಂತ್ರ್ಯ ಸಿಕ್ಕಿರಲಿಲ್ಲ. ಈ ಭಾಗದ ಜನರ ಹೋರಾಟದ ಫಲವಾಗಿ 13 ತಿಂಗಳು ತಡವಾಗಿ ನಮಗೆ ಸ್ವಾತಂತ್ರ‍್ಯ ಸಿಕ್ಕಿತ್ತು ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.
ಬೀದರ್ ನಗರದ ಜಿಲ್ಲಾ ನೆಹರು ಕ್ರೀಡಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ʼಅಂದಿನ ಬ್ರಿಟೀಷರ ಒಡೆದಾಳುವ ನೀತಿಯಿಂದ ಭಾರತದ 565 ಸಂಸ್ಥಾನಗಳು ತಮಗೆ ಇಷ್ಷವಾದ ಕಡೆ ಸೇರಬಹುದು ಎಂದು ಹೇಳಿ ನಮ್ಮ ದೇಶಕ್ಕೆ ಸ್ವಾತಂತ್ರ‍್ಯ ನೀಡಿದಾಗ ಹೈದರಾಬಾದಿನ ನಿಜಾಮರು ಪಾಕಿಸ್ತಾನಕ್ಕೆ ಸೇರುವುದಾಗಿ ಹೇಳಿದರು. ನಿಜಾಮರ ರಜಾಕಾರರ ಪಡೆ ಈ ಭಾಗದ ಹಳ್ಳಿ-ಹಳ್ಳಿಗಳಿಗೆ ತೆರಳಿ ಜನರ ಮೇಲೆ ನಿರಂತರ ದೌರ್ಜನ್ಯ, ಮನೆಗಳ ಲೂಟಿ ಮಾಡಿದರು. ಗೋರ್ಟಾ ಹತ್ಯಾಕಾಂಡ ಸೇರಿದಂತೆ ಅನೇಕ ಘಟನೆಗಳು ಜರುಗಿದ್ದವುʼ ಎಂದರು.
ʼರಮಾನಂದ ತೀರ್ಥರ ನೇತ್ರತ್ವದಲ್ಲಿ ನಮ್ಮ ಭಾಗದ ಅನೇಕರು ಕಲ್ಯಾಣ ಕರ್ನಾಟಕದ ವಿಮೋಚನೆಗಾಗಿ ಹೋರಾಡಿದ್ದವರನ್ನು ಇಂದು ನಾವು ಸ್ಮರಿಸಬೇಕಿದೆ. ಉಕ್ಕಿನ ಮನುಷ್ಯ ಸರ್ದಾರ ವಲ್ಲಭಭಾಯಿ ಪಟೇಲರ ಧೃಡ ನಿರ್ಧಾರದಿಂದ ನಮ್ಮ ಭಾಗಕ್ಕೆ ಸ್ವಾತಂತ್ರ‍್ಯ ದೊರಕಿತು. ಇಂದು ಈ ಭಾಗದ ಹಬ್ಬದ ದಿನವಾಗಿದೆ. ಆ.15 ರಂದು ದೇಶಕ್ಕೆ ಸ್ವಾತಂತ್ರ‍್ಯ ಸಿಕ್ಕರು ನಮ್ಮ ಭಾಗದ ಬೀದರ, ಕಲಬುರಗಿ ಹಾಗೂ ರಾಯಚೂರು ಜಿಲ್ಲೆಗಳಿಗೆ ಸ್ವಾತಂತ್ರ‍್ಯ ಸಿಕ್ಕಿರಲಿಲ್ಲʼ ಎಂದರು.
ಬೀದರ ಜಿಲ್ಲೆಗೆ 500 ಕೋಟಿ ಅನುದಾನ :
ʼಬೀದರ ಜಿಲ್ಲೆ ಒಂದು ಕಾಲದಲ್ಲಿ ಎರಡು ಸಾಮ್ರಾಜ್ಯಗಳಿಗೆ ರಾಜ್ಯಧಾನಿಯಾಗಿತ್ತು. ಬಿದರಿ ಕಲೆ ನಮ್ಮ ಜಿಲ್ಲೆಯ ಹೆಗ್ಗಳಿಕೆಯಾಗಿದೆ. ಮಹಮ್ಮದ್ ಗವಾನರ ಕಾಲದಲ್ಲಿ ಬೀದರನಲ್ಲಿ ಅಂತರಾಷ್ಟ್ರೀಯ ವಿಶ್ವವಿದ್ಯಾಲಯ ಇತ್ತು. ಜಗತ್ತಿಗೆ ಸಾಮಾಜಿಕ ನ್ಯಾಯ ಕೊಟ್ಟ ಪ್ರಥಮ ಸಂಸತ್ತಿನ ಪರಿಕಲ್ಪನೆ ನೀಡಿದ್ದು ಬಸವಕಲ್ಯಾಣದ ಅನುಭವ ಮಂಟಪ, ವಡ್ಡಾರಾಧನೆ, ಮಿತಾಕ್ಷರ ಸಂಹಿತೆ ಪುಸ್ತಕಗಳು ಇದೇ ಜಿಲ್ಲೆಯಲ್ಲಿ ಬರೆಯಲ್ಪಟ್ಟಿದೆ ಎಂಬುದು ಹೆಮ್ಮೆಯ ಸಂಗತಿಯಾಗಿದೆʼ ಎಂದರು.

ʼಮೈಸೂರು ಭಾಗಕ್ಕೆ ಹೋಲಿಸಿದರೆ ನಮ್ಮ ಭಾಗ ಹಿಂದುಳಿದ ಭಾಗವಾಗಿತ್ತು. ಇದಕ್ಕಾಗಿ ಅನೇಕರು ಹೋರಾಟ ಮಾಡಿದ್ದಾರೆ. ಮಾಜಿ ಸಚಿವರಾದ ವೈಜನಾಥ ಪಾಟೀಲ್, ಭೀಮಣ್ಣ ಖಂಡ್ರೆ ಸೇರಿದಂತೆ ಅನೇಕರ ಹೋರಾಟದ ಫಲವಾಗಿ 371 (ಜೆ) ವಿಶೇಷ ಸ್ಥಾನವನ್ನು 2013 ರಲ್ಲಿ ದೊರಯಿತು. ಇದು ವಿಶೇಷ ಚರಿತ್ರೆಯ ದಿನವಾಗಿದೆ. 371(ಜೆ) ಗಾಗಿ ಲೋಕಸಭೆಯಲ್ಲಿ ತಿದ್ದುಪಡಿಗಾಗಿ ಧರ್ಮಸಿಂಗ್, ಮಲ್ಲಿಕಾರ್ಜುನ ಖರ್ಗೆ ಅವರು ವಿಶೇಷ ಕಾಳಜಿ ವಹಿಸಿ ಅವಿರೋಧವಾಗಿ 371(ಜೆ) ತಿದ್ದುಪಡಿ ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದರುʼ ಎಂದು ಸ್ಮರಿಸಿದರು.
ʼ371 (ಜೆ) ಜಾರಿಯಾದ ಬಳಿಕ ಈ ಭಾಗದ ಶಿಕ್ಷಣ, ಮೆಡಿಕಲ್, ಇಂಜಿನೀಯರಿಂಗ್, ಉದ್ಯೋಗ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಈ ಸಲ ಬೀದರ ಜಿಲ್ಲೆಗೆ 500 ಕೋಟಿ ಅನುದಾನ ಬಂದಿದೆ. ಕ್ರಿಯಾ ಯೋಜನೆ ತಯಾರಿಸಲಾಗುವುದು. ಎಲ್ಲಾ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ನಮ್ಮ ಸರಕಾರ ಮಹಿಳೆಯರ ಸಬಲೀಕರಣಕ್ಕಾಗಿ ಜಾರಿಗೊಳಿಸಿದ 5 ಗ್ಯಾರಂಟಿ ಯೋಜನೆಗಳಿಂದ ಜನರಿಗೆ ಅನುಕೂಲವಾಗಿದೆʼ ಎಂದರು.
ʼಬೀದರನಲ್ಲಿ ಕಳೆದ ವರ್ಷ 15 ಲಕ್ಷ ಸಸಿಗಳನ್ನು ನೆಡಲಾಗಿತ್ತು. ಈ ವರ್ಷ 18 ಲಕ್ಷ ಸಸಿಗಳನ್ನು ನೆಟ್ಟಿದ್ದೇವೆ. 2025-26 ನೇ ಸಾಲಿಗೆ ಜಿಲ್ಲೆಯಲ್ಲಿ 25 ಲಕ್ಷ ಸಸಿಗಳನ್ನು ನೆಡಲಾಗುವುದು. ಮಕ್ಕಳು ಮುಂದಿನ ಪ್ರಜೆಗಳು ಮನೆಗೊಂದು ಸಸಿಗಳನ್ನು ನೆಡಬೇಕು. ಬೀದರ್ ತಾಲೂಕಿನ ಹೊನ್ನಿಕೇರಿಯಲ್ಲಿ 15 ಕೋಟಿ ವೆಚ್ಚದಲ್ಲಿ ಇಕೋ ಟೂರಿಸಂ ನಿರ್ಮಿಸಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲಾಗುವುದು. ದೇವ-ದೇವ ವನ ಅಭಿವೃದ್ಧಿಗಾಗಿ ವಿಸ್ತೃತ ಯೋಜನಾ ವರದಿ ತಯ್ಯಾರಿಸಿ ಬರುವ ಮಾರ್ಚ್ ಒಳಗಡೆ ಅನುಷ್ಠಾನ ಮಾಡುತ್ತೇವೆ. ರಾಜ್ಯದಲ್ಲಿ ಕಡಿಮೆ ಅರಣ್ಯ ಪ್ರದೇಶ ಇರುವ ಬೀದರ, ಕಲಬುರಗಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಯ ಹಸಿರಿಕರಣಕ್ಕೆ ಹೆಚ್ಚಿನ ಅನುದಾನ ನೀಡಲಾಗುವುದುʼ ಎಂದು ಆಶ್ವಾಸನೆ ನೀಡಿದರು.
ಬೀದರ್ ಜಿಲ್ಲೆಗೆ 15 ಸಾವಿರ ಮನೆ ಮಂಜೂರು :
ʼಕಿತ್ತೂರು ರಾಣಿ ಚೆನ್ನಮ್ಮ, ಮೊರಾರ್ಜಿ ದೇಸಾಯಿ ಹಾಗೂ ಅಂಬೇಡ್ಕರ್ ವಸತಿ ಶಾಲೆಗಳು ಸೇರಿದಂತೆ ಇತರೆ ಎಲ್ಲಾ ವಸತಿ ಶಾಲೆಗಳ ಕಟ್ಟಡ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕೋಟ್ಯಂತರ ರೂಪಾಯಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಹಾಗೂ ರಾಜ್ಯ ಸರ್ಕಾರದಿಂದ ನೀಡಲಾಗುತ್ತಿದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸುವ ಕಾರ್ಯ ಮಾಡುತ್ತಿದ್ದೇವೆ. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಮರಾಠಾ ಅಭಿವೃದ್ಧಿ ನಿಗಮ, ದೇವರಾಜ ಅರಸು ಅಭಿವೃದ್ಧಿ ನಿಗಮ, ತಾಂಡಾ ಅಭಿವೃದ್ಧಿ ನಿಗಮ ಸೇರಿದಂತೆ ಇತರೆ ವಿವಿಧ ಅಭಿವೃದ್ದಿ ನಿಗಮಗಳ ಮೂಲಕ ಜನರಿಗೆ ಸರ್ಕಾರದ ಸೌಲಭ್ಯಗಳನ್ನು ಒದಗಿಸುವ ಕೆಲಸ ಮಾಡಲಾಗುತ್ತಿದೆʼ ಎಂದು ಹೇಳಿದರು.

ʼಈ ವರ್ಷ ನಮ್ಮ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ಮಳೆಯಿಂದ ಹಾನಿಯಾದ ಬೆಳೆಗಳಿಗೆ ಸರಕಾರದ ಮಾನದಂಡದ ಪ್ರಕಾರ ರೈತರಿಗೆ ಪರಿಹಾರ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ರೈತರ ಇನ್ನೂ ಅನೇಕ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು. ಅನ್ನ, ವಸತಿ ಪ್ರತಿಯೊಬ್ಬರ ಹಕ್ಕು ವಸತಿ ರಹಿತರಿಗೆ ಮನೆಗಳನ್ನು ನೀಡಲಾಗುವುದು. 15 ಸಾವಿರ ಮನೆಗಳು ಜಿಲ್ಲೆಗೆ ಮಂಜೂರಾತಿಯಾಗಿವೆ. ನೀರಾವರಿ ಯೋಜನೆಗಳನ್ನು ಹಂತ- ಹಂತವಾಗಿ ಮಾಡಲಾಗುವುದು. ʼಕಲ್ಯಾಣ ಪಥʼ ಯೋಜನೆಯಡಿ ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಇದರಿಂದ ರೈತರು ಬೆಳೆದ ಬೆಳೆಗಳು ಮಾರುಕಟ್ಟೆಗೆ ಸಾಗಿಸಲು ಅನುಕೂಲವಾಗಲಿದೆʼ ಎಂದು ಹೇಳಿದರು.
ಜಿಲ್ಲೆಯಲ್ಲಿ ಕೈಗಾರೀಕರಣ ಆಗಬೇಕಿದೆ. ರದ್ದಾದ ಬೀದರ ವಿಮಾನ ನಿಲ್ದಾಣದ ಸಂಚಾರ ಪ್ರಾರಂಭಿಸಲಾಗುವುದು. ಬೀದರ ಜಿಲ್ಲಾ ಸಂಕೀರ್ಣದ ಕಟ್ಟಡದ ಶಂಕುಸ್ಥಾಪನೆಗೆ ಚಾಲನೆ ನೀಡಲಾಗುವುದು. ನೀರಾವರಿ ಯೋಜನೆ, ರಿಂಗ್ ರಸ್ತೆ, ಕರೇಜ್ ಸೇರಿದಂತೆ ಬೀದರ್ ಸರ್ವಾಂಗೀಣ ಅಭಿವೃದ್ಧಿಗೆ ಬದ್ದರಾಗಿದ್ದೇವೆʼ ಎಂದು ಭರವಸೆ ನೀಡಿದರು.

ಕಾರ್ಯಕ್ರಮಕ್ಕೂ ಮುನ್ನ ಬೆಳಿಗ್ಗೆ ಸರ್ದಾರ್ ವಲ್ಲಭಭಾಯಿ ಪಟೇಲರ ಭಾವಚಿತ್ರದ ಮೆರವಣಿಗೆ ಬಸವೇಶ್ವರ ವೃತ್ತದಿಂದ ಜಿಲ್ಲಾ ನೆಹರು ಕ್ರೀಡಾಂಗಣದವರೆಗೆ ನಡೆಯಿತು. ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ಮಕ್ಕಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ಸನ್ಮಾನಿಸಿದರು. ವಿವಿಧ ಶಾಲಾ-ಕಾಲೇಜಿನ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜಿಲ್ಲಾ ನೆಹರು ಕ್ರೀಡಾಂಗಣದಲ್ಲಿ ಜರುಗಿದವು.
ಈ ಸುದ್ದಿ ಓದಿದ್ದೀರಾ? ʼಈ ದಿನʼದ ತನಿಖಾ ವರದಿಗೆ ವ್ಯಾಪಕ ಪ್ರಶಂಸೆ; ಕುಮಾರಸ್ವಾಮಿ ರಾಜೀನಾಮೆಗೆ ಒತ್ತಾಯ
ಈ ಕಾರ್ಯಕ್ರಮದಲ್ಲಿ ಬೀದರ ಸಂಸದ ಸಾಗರ್ ಖಂಡ್ರೆ, ಬೀದರ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಕೆ.ಬೆಲ್ದಾಳೆ, ನಗರಸಭೆ ಅಧ್ಯಕ್ಷ ಮೊಹ್ಮದ ಗೌಸ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಬೀದರ ಉಪ ಅರಣ್ಯ ಸಂರಕ್ಷಣಾಧಿಕಾರಿ ವಾನತಿ. ಎಂ., ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ವಿವಿಧ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕರು ಸೇರಿದಂತೆ ಗಣ್ಯರು, ಸಾರ್ವಜನಿಕರು ಪಾಲ್ಗೊಂಡಿದ್ದರು.