- ಮೃತದೇಹ ಪತ್ತೆಯಾಗುವ ಮೊದಲು ಫೇಸ್‌ಬುಕ್ ಲೈವ್ ಮಾಡಿದ್ದ ಅರ್ಚಕ
- ಮೃತರು ತಮ್ಮ 12ನೇ ವಯಸ್ಸಿನಿಂದ ಅಯೋಧ್ಯೆ ದೇಗುಲದಲ್ಲಿ ವಾಸಿಸುತ್ತಿದ್ದರು
ಪೊಲೀಸರ ಕಿರುಕುಳದ ಆರೋಪದ ನಂತರ ಅಯೋಧ್ಯೆ ದೇವಸ್ಥಾನದ ಕೊಠಡಿಯೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅರ್ಚಕರೊಬ್ಬರ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.
ರಾಮ್ ಶಂಕರ್ ದಾಸ್ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಸ್ಥಳೀಯ ಪೊಲೀಸರು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದರು. ಏತನ್ಮಧ್ಯೆ, ಪೊಲೀಸ್ ಅಧಿಕಾರಿಗಳು ಅರ್ಚಕರು ಮಾದಕ ವ್ಯಸನಿಯಾಗಿದ್ದು, ಅವರು ಮಾಡಿರುವ ಆರೋಪಗಳು ಆಧಾರರಹಿತ ಎಂದಿದ್ದಾರೆ.
28ರಿಂದ 30 ವರ್ಷ ವಯಸ್ಸಿನವರು ಎಂದು ಅಧಿಕಾರಿಗಳು ಹೇಳಿರುವ ರಾಮ್ ಶಂಕರ್ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಫೇಸ್‌ಬುಕ್ ಲೈವ್‌ನಲ್ಲಿ ತಮಗೆ ಇಬ್ಬರು ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಮತ್ತು ಹಣಕ್ಕಾಗಿ ಬೇಡಿಕೆಯಿಟ್ಟಿದ್ದಾರೆ. ನಾನು ಆ ಹಣವನ್ನು ಎಲ್ಲಿಂದ ತರಬೇಕು ಎಂದು ತಿಳಿದಿಲ್ಲ ಎಂದು ಆರೋಪಿಸಿದ್ದರು.
ಈ ಸುದ್ದಿ ಓದಿದ್ದೀರಾ? ನಾವು ಕೊಟ್ಟ ಮಾತು ಉಳಿಸಿಕೊಳ್ಳುವ ಜನ, ಪ್ರಣಾಳಿಕೆ ಭರವಸೆ ಈಡೇರಿಸುತ್ತೇವೆ: ಮಲ್ಲಿಕಾರ್ಜುನ ಖರ್ಗೆ
“ಈ ವರ್ಷದ ಜನವರಿಯಲ್ಲಿ ಮುಖ್ಯ ಅರ್ಚಕ ರಾಮ್ ಸರಣ್ ದಾಸ್ ನಾಪತ್ತೆಯಾದ ನಂತರ ರಾಮ್ ಶಂಕರ್ ದಾಸ್ ದೇವಸ್ಥಾನದಲ್ಲಿ ಒಬ್ಬರೇ ಉಳಿದುಕೊಂಡಿದ್ದರು. ಸೋಮವಾರ ಬೆಳಿಗ್ಗೆ ನರಸಿಂಗ ದೇವಸ್ಥಾನದ ಅರ್ಚಕರು ‘ಎಷ್ಟು ಬಾರಿ ಬಡಿದರೂ ರಾಮ್ ಶಂಕರ್ ಕೋಣೆಯ ಬಾಗಿಲು ತೆರೆಯುತ್ತಿಲ್ಲ’ ಎಂದು ದೂರು ನೀಡಿದ್ದರು. ನಮ್ಮ ತಂಡ, ಎಸ್‌ಪಿ ಮತ್ತು ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ದೇವಾಲಯದ ಕೋಣೆಯ ಬಾಗಿಲುಗಳನ್ನು ಒಡೆದು ನೋಡಿದ ನಂತರ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದೆ. ಅಯೋಧ್ಯೆಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮುನಿರಾಜ್ ಅವರು ಈ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಿದ್ದಾರೆ” ಎಂದು ಅಯೋಧ್ಯೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಧುವನ್ ಕುಮಾರ್ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ರಾಮ್ ಶಂಕರ್ ತಮ್ಮ 12ನೇ ವಯಸ್ಸಿನಿಂದ ದೇವಸ್ಥಾನದಲ್ಲಿ ವಾಸಿಸುತ್ತಿದ್ದರು. ಅವರ ಎಲ್ಲ ವಿಡಿಯೋಗಳನ್ನು ತನಿಖೆ ಮಾಡಲಾಗುವುದು. ಸಂಗ್ರಹಿಸಿದ ಸಾಕ್ಷ್ಯಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಈ ವರ್ಷದ ಜನವರಿಯಲ್ಲಿ, ದೇವಾಲಯದ ಪ್ರಧಾನ ಅರ್ಚಕ 80 ವರ್ಷದ ರಾಮ್ ಸರಣ್ ದಾಸ್, ಪ್ರಯಾಗ್‌ರಾಜ್‌ಗೆ ಹೋದವರು ಮರಳಿ ಬಂದಿರಲಿಲ್ಲ. ಆರಂಭದಲ್ಲಿ ಅವರ ಬಗ್ಗೆ ನಾಪತ್ತೆ ಪ್ರಕರಣ ದಾಖಲಿಸಲಾಗಿತ್ತು. ನಂತರ ಸುಮಾರು ಎರಡು ತಿಂಗಳ ನಂತರ, ಅದನ್ನು ಅಪಹರಣದ ದೂರಿಗೆ ಬದಲಾಯಿಸಲಾಗಿತ್ತು.