ಕೇಂದ್ರ ಸರ್ಕಾರದ ಒತ್ತಾಯಪೂರ್ವಕ ಹಿಂದಿ ಹೇರಿಕೆ ವಿರೋಧಿಸಿ ಹಾಗೂ ರಾಷ್ಟ್ರೀಯ ಹಿಂದಿ ದಿವಸ ಆಚರಣೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ವತಿಯಿಂದ ಹಾವೇರಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಗುತ್ತಲ ರಸ್ತೆಯ ಕರವೇ ಕಚೇರಿಯಿಂದ ಸಗೂರ ಕರಿಯಪ್ಪ ವೃತ್ತದವರೆಗೆ ಪ್ರತಿಭಟನಾ ರಾಯಲಿ ನಡೆಸಿದ ಕರವೇ ಕಾರ್ಯಕರ್ತರು ವೃತ್ತದಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಈ ಕೂಡಲೇ ಸಂವಿಧಾನಕ್ಕೆ ತಿದ್ದುಪಡಿ ತಂದು ಸಂವಿಧಾನದ 8ನೇ ಪರಿಚ್ಛೇದದಲ್ಲಿ ಉಲ್ಲೇಖಿಸಿರುವ ಎಲ್ಲ 22 ಭಾಷೆಗಳನ್ನೂ ಅಧಿಕೃತ, ಆಡಳಿತ ಭಾಷೆಗಳನ್ನಾಗಿ ಮಾಡಬೇಕು. ಹಿಂದಿಗೆ ಅನೈತಿಕವಾಗಿ ವಿಶೇಷ ಮನ್ನಣೆ ನೀಡುವ ಸಂವಿಧಾನದ 343ರಿಂದ 351ನೇ ವಿಧಿಗಳನ್ನು ರದ್ದುಪಡಿಸಿ ಎಲ್ಲ ಭಾಷೆಗಳೂ ಒಕ್ಕೂಟದ ದೃಷ್ಟಿಯಲ್ಲಿ ಸಮಾನ ಎಂದು ಸಾರಬೇಕು. ರಾಜ್ಯದಲ್ಲಿ ಎಲ್ಲ ಕೇಂದ್ರ ಸರ್ಕಾರಿ ಇಲಾಖೆಗಳು, ಉದ್ಯಮಗಳಲ್ಲಿ ಕನ್ನಡವೇ ಆಡಳಿತ ಭಾಷೆಯಾಗಬೇಕು. ಎಲ್ಲ ಬಗೆಯ ಪತ್ರ ವ್ಯವಹಾರಗಳೂ ಕನ್ನಡದಲ್ಲೇ ನಡೆಯಬೇಕು ಎಂದು ಆಗ್ರಹಿಸಿದರು.
ಇದನ್ನು ಓದಿದ್ದೀರಾ? ರಾಮನಗರ | ಹಿರಿಯ ಪತ್ರಕರ್ತ ದಿ.ಮೋಹನ್ ಕುಮಾರ್ ಮಗನ ಮೇಲೆ ಮಾರಣಾಂತಿಕ ಹಲ್ಲೆ; ಕೊಲೆ ಯತ್ನ
ಪ್ರತಿಭಟನೆಯಲ್ಲಿ ಕರವೇ ಜಿಲ್ಲಾಧ್ಯಕ್ಷ ಗಿರೀಶ ಬಾರ್ಕಿ, ರಾಜ್ಯ ಕಾರ್ಯದರ್ಶಿ ಕರಬಸಯ್ಯ ಬಸರಿಹಳ್ಳಿಮಠ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮೀ ಗುಡಮಿ, ತಾಲೂಕು ಅಧ್ಯಕ್ಷ ಹಾಲೇಶ ಹಾಲಣ್ಣನವರ, ಮಾರುತಿ ಪೂಜಾರ, ಸಿಖಂದರ್ ವಾಲಿಕಾರ, ಬಿ.ಎಚ್.ಬಣಕಾರ, ಹಸನಸಾಬ ಹತ್ತಿಮತ್ತೂರ, ಅಶೋಕ ಹೊಸಮನಿ, ಅಬ್ಬು ಕೊಡಮಗ್ಗಿ, ಶಿವಾನಂದ ಪೂಜಾರ, ಬಸವರಾಜ ಅರಳಿ, ಕಾಳಪ್ಪ ಬಡಿಗೇರ, ಸತ್ಯವತಿ ಕಡೇರ, ಲಕ್ಷ್ಮೀಶ ಮೇಲೂರಿ, ಬಸಲಿಂಗಪ್ಪ ನರಗುಂದ, ಇಮಾಮಸಾಬ ತಿಮಾಪೂರ, ಬಸವರಾಜ ಕಡೆಮನಿ ಸೇರಿದಂತೆ ಜಿಲ್ಲೆಯ ಹಲವು ಕಾರ್ಯಕರ್ತರು ಹಾಜರಿದ್ದರು.
