ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಬೀದರ್ ಜಿಲ್ಲಾಡಳಿತ ಸಂಕೀರ್ಣ ಮತ್ತು ಬೀದರ ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸುವ ಕನಸು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡುವ ಮೂಲಕ ಜಿಲ್ಲೆಯ ಜನರ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ.
ಕಲಬುರ್ಗಿಯಲ್ಲಿ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಜರುಗಿದ ಸಚಿವ ಸಂಪುಟದಲ್ಲಿ ಜಿಲ್ಲೆಯ ಎರಡು ಪ್ರಮುಖ ಬೇಡಿಕೆಗಳಾಗಿದ್ದವು, ನಿರೀಕ್ಷೆಯಂತೆ ಸಂಪುಟ ಅಸ್ತು ಎಂದಿದೆ. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮತ್ತು ಪೌರಾಡಳಿತ ಸಚಿವ ರಹೀಮ್ ಖಾನ್ ಅವರ ಇಚ್ಚಾಶಕ್ತಿ ಪ್ರದರ್ಶನದ ಫಲವಾಗಿ ಎರಡು ಹಕ್ಕೊತ್ತಾಯಗಳಿಗೆ ರಾಜ್ಯ ಸರ್ಕಾರ ಸಮ್ಮತಿ ನೀಡಿದ್ದು ಜಿಲ್ಲೆಗೆ ಕೊಡುಗೆ ಸಿಕ್ಕಂತಾಗಿದೆ.
ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಜಿಲ್ಲಾಡಳಿತ ಭವನಕ್ಕೆ ಮೊದಲ ಬಾರಿಗೆ ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ 48.28 ಕೋಟಿ ರೂ.ಅನುದಾನ ಕೂಡ ಬಿಡುಗೆಯಾಗಿತ್ತು. ಆದರೆ ಸರ್ಕಾರ ಬದಲಾವಣೆ, ನಿವೇಶನ ಗೊಂದಲ, ರಾಜಕೀಯ ನಾಯಕರ ಇಚ್ಚಾಶಕ್ತಿ ಕೊರತೆಯಿಂದಾಗಿ ಜಿಲ್ಲಾಡಳಿತ ಭವನ ಕಟ್ಟಡ ನಿರ್ಮಾಣ ಎಂಬುದು ಕನಸಾಗಿಯೇ ಉಳಿದಿತ್ತು.

ಬೀದರ್ ಜಿಲ್ಲೆಯ ಕಚೇರಿಗಳ ಸಂಕೀರ್ಣ ಕಟ್ಟಡ ನಿರ್ಮಾಣ ಕಾಮಗಾರಿಗೆ ಈಗಾಗಲೇ ₹48.28 ಕೋಟಿ ಅನುಮೋದನೆ ನೀಡಿದ ಸರ್ಕಾರದ ಆದೇಶ ಹಿಂಪಡೆದು ₹59.80 ಕೋಟಿ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆಗೆ ಇದೀಗ ಸರ್ಕಾರ ಅಸ್ತು ನೀಡಿದೆ. ಶೀಘ್ರದಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ, ಕಾಮಗಾರಿಯನ್ನು ಆರಂಭಿಸಬೇಕಿದೆ.
ಬಿಜೆಪಿ ಸರ್ಕಾರ ತನ್ನ ಬಜೆಟ್‌ನಲ್ಲಿ ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಘೋಷಿಸಲಾಗಿತ್ತು. ಆದರೆ, ತಾಂತ್ರಿಕ ಕಾರಣ, ಷರತ್ತುಗಳ ಕಾರಣದಿಂದ ಅನುಷ್ಠಾನಕ್ಕೆ ವಿಳಂಬವಾಗಿತ್ತು. ಪೌರಾಡಳಿತ ಸಚಿವ ರಹೀಂ ಖಾನ್ ತವರು ಕ್ಷೇತ್ರದಲ್ಲೇ ಹಿನ್ನಡೆಗೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಪಾಲಿಕೆಗೆ ಬೇಕಾದ ಎಲ್ಲ ಷರತ್ತುಗಳನ್ನು ಪೂರೈಸಿದ್ದ ಬೀದರ ನಗರಸಭೆ, ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಇದೀಗ ಬೀದರ್ ನಗರಸಭೆ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಲು ಸರ್ಕಾರ ನಿರ್ಣಯ ಕೈಗೊಂಡಿದೆ.
ಬೀದರ್ ನಗರಸಭೆ ಮಹಾನಗರ ಪಾಲಕೆಯಾದ ಬಳಿಕ ಅದರ ವ್ಯಾಪ್ತಿಗೆ 9 ಗ್ರಾಮ ಪಂಚಾಯಿತಿಗಳ 32 ಗ್ರಾಮಗಳನ್ನು ಸೇರ್ಪಡೆಯಾಗಲಿವೆ. ಹಾಲಿ ನಗರಸಭೆಗೆ ಬೀದರ್ ತಾಲೂಕಿನ ಚಿಕ್ಕಪೇಟ, ಹಮೀಲಾಪುರ, ಕಬಿರವಾಡಾ, ಓಡವಾಡ, ತಾಜಲಾಪುರ, ಚಿಟ್ಟಾ, ಚಿಟ್ಟಾವಾಡಿ, ಅಮಲಾಪುರ, ಗೋರನಳ್ಳಿ, ಜಮೀಸ್ತಾನಪುರ, ಅಲಿಯಾಬಾದ್ ಹಾಗೂ ಕೋಳಾರ(ಕೆ) ಗ್ರಾಮಗಳನ್ನು ಸೇರಿಸಲಾಗುವುದು ಎಂದು ಸಂಪುಟ ನಿರ್ಣಯಿಸಿದೆ.
ಬೀದರ ಜಿಲ್ಲೆಯ ಹೊನ್ನಿಕೇರಿ ಮೀಸಲು ಅರಣ್ಯ ಮತ್ತು ಇತರೆ ಜೀವವೈವಿಧ್ಯ ಪ್ರದೇಶಗಳಲ್ಲಿ ಪರಸರ ಪ್ರವಾಸೋದ್ಯಮ ಮತ್ತು ಸಂರಕ್ಷಣಾತ್ಮಕ ಕಾಮಗಾರಿಗಳನ್ನು ಕೈಗೊಳ್ಳಲು ಅಗತ್ಯವಿರುವ ಒಟ್ಟು ಮೊತ್ತ ₹15 ಕೋಟಿಗಳಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅನುದಾನದಿಂದ ಹಂಚಿಕೆ ಮಾಡಿ ವೆಚ್ಚ ಭರಿಸಲು ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ಒಪ್ಪಿದೆ.
ಬೀದರ್ ತಾಲೂಕಿನ ಶಹಾಪುರ ಮೀಸಲು ಅರಣ್ಯ ಪ್ರದೇಶದಲ್ಲಿನ ದೇವ ವನ ಟ್ರೀ- ಪಾರ್ಕ್‌ನಲ್ಲೂ ₹16.12 ಕೋಟಿ ವೆಚ್ಚದಲ್ಲಿ ಪರಿಸರ ಪ್ರವಾಸೋದ್ಯಮ, ಸಂರಕ್ಷಣಾತ್ಮಕ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ.
ಇದನ್ನೂ ಓದಿ : ಬೀದರ್ | ಕನಸಾಗಿಯೇ ಉಳಿದ ಜಿಲ್ಲಾಡಳಿತ ಕಚೇರಿಗಳ ಸಂಕೀರ್ಣ!
ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ 12 ಪರಿಶಿಷ್ಟ ಜಾತಿ ಮತ್ತು ಒಂದು ಪರಿಶಿಷ್ಟ ವರ್ಗಗಳ ಒಟ್ಟು 13 ವಸತಿ ಶಾಲೆಗಳಿಗೆ ಅಂದಾಜು ವೆಚ್ಚ ₹286.00 ಕೋಟಿಗಳಲ್ಲಿ (ಪ.ಜಾತಿ – 264.00 ಕೋಟಿ ಪ.ವರ್ಗ-22.00 ಕೋಟಿ) ಸ್ವಂತ ಕಟ್ಟಡ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ನೀಡಲು ಒಪ್ಪಿಗೆ.
ರಾಜ್ಯ ವ್ಯಾಪ್ತಿಯ ತಾಲೂಕು ಆಡಳಿತ ಸೌಧ ಕಟ್ಟಡಗಳ ಹೆಸರನ್ನು ‘ಪ್ರಜಾಸೌಧ’ ತಾಲೂಕು ಆಡಳಿತ ಕೇಂದ್ರ ಎಂಬುದಾಗಿ ಬದಲಿಸಲು ಮತ್ತು ಏಕರೂಪ ವಿಸ್ತೀರ್ಣ ವಿನ್ಯಾಸ ಹಾಗೂ ಒಂದು ತಾಲೂಕು ಆಡಳಿತ ಸೌಧ ಕಟ್ಟಡಗಳನ್ನು ತಲಾ ₹8.60 ಕೋಟಿಗಳಲ್ಲಿ ನಿರ್ಮಿಸಲು ಸಂಪುಟ ಒಪ್ಪಿಗೆ ಸೂಚಿಸಿದೆ.
ಕಲ್ಯಾಣ ಕರ್ನಾಟಕ ಪ್ರದೇಶ ವ್ಯಾಪ್ತಿಯಲ್ಲಿ ಹೊಸದಾಗಿ ರಚನೆಯಾದ ಒಟ್ಟು 16 ತಾಲೂಕುಗಳ ಎಲ್ಲಾ ತಾಲೂಕು ಮಟ್ಟದ ಕಚೇರಿಗಳನ್ನು ಒಂದೇ ಸೂರಿನಡಿ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಹಾಗೂ ಕಟ್ಟಡಕ್ಕೆ ಅಗತ್ಯವಿರುವ ಎಲ್ಲ ಮೂಲಭೂತ ಸೌಲಭ್ಯಗಳನ್ನು ಒಳಗೊಂಡಂತೆ ತಾಲೂಕು ಆಡಳಿತ ಸೌಧ ನಿರ್ಮಾಣಕ್ಕೆ ಒಟ್ಟು ₹137.60 ಕೋಟಿ ಅಂದಾಜು ಮೊತ್ತದಲ್ಲಿ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ನೀಡಿ ಹೊಸ ತಾಲೂಕುಗಳ ಅಭಿವೃದ್ಧಿಗೆ ಉತ್ತೇಜನ ನೀಡಿದೆ.
ಈ ಸುದ್ದಿ ಓದಿದ್ದೀರಾ? ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ; ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ
ಮೊದಲ ಹಂತದಲ್ಲಿ 9 ಮತ್ತು ಎರಡನೇ ಹಂತದಲ್ಲಿ 7 ಹೊಸ ತಾಲೂಕಗಳಲ್ಲಿ ತಾಲೂಕು ಆಡಳಿತ ಸೌಧ ಕಟ್ಟಡಗಳನ್ನು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಸಹಯೋಗದೊಂದಿಗೆ ನಿರ್ಮಿಸಲು ಸರ್ಕಾರ ಒಪ್ಪಿಗೆ ನೀಡಿದ್ದು, ಅದರಲ್ಲಿ ಮೊದಲ ಹಂತದಲ್ಲಿ ಬೀದರ್ ಜಿಲ್ಲೆಯ ಹೊಸ ತಾಲೂಕು ಕಮಲನಗರ ಹಾಗೂ ಎರಡನೇ ಹಂತದಲ್ಲಿ ಬೀದರ್ ಜಿಲ್ಲೆಯ ಚಿಟಗುಪ್ಪ, ಹುಲಸೂರ ತಾಲೂಕು ಆಡಳಿತ ಸೌಧ ಕಟ್ಟಡಕ್ಕೆ ತಲಾ ₹8.60 ಕೋಟಿ ಮೊತ್ತದಲ್ಲಿ ನಿರ್ಮಾಣ ಪ್ರಸ್ತಾವನೆಗೆ ಸಂಪುಟ ಅನುಮೋದನೆ ನೀಡಿದೆ.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.
Congrats Balaji take serious steps for Karanja Garden like Mysore Brindavan Garden this leads create lot employment opportunities for Bidar people