ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮುನಿರತ್ನ, ಗುತ್ತಿಗೆದಾರ ಚೆಲುವರಾಜು ಎಂಬುವವರೊಂದಿಗೆ ಕಮಿಷನ್ ವಿಚಾರವಾಗಿ ನಡೆದ ಮಾತುಕತೆಯಲ್ಲಿ, ದಲಿತ ಸಮುದಾಯ, ಒಕ್ಕಲಿಗ ಸಮುದಾಯ ಹಾಗೂ ಮಹಿಳೆಯರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಪ್ರಕರಣ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಈ ಪ್ರಕರಣ ಸಂಬಂಧ ರಾಮನಗರ ಜಿಲ್ಲೆಯ ಕನಕಪುರದ ವಿವಿಧ ಪ್ರಗತಿಪರ ಮತ್ತು ದಲಿತ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಶಾಸಕರನ್ನು ವಜಾ ಮಾಡುವಂತೆ ಆಗ್ರಹಿಸಿ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಗ್ರೇಡ್ 2 ತಹಶೀಲ್ದಾರ್ ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದ ನಂತರ, ಪ್ರಗತಿಪರ ಸಂಘಟನೆಗಳ ಅಧ್ಯಕ್ಷ ಕುಮಾರಸ್ವಾಮಿ ಮಾತನಾಡಿ, “ಶಾಸಕ ಮುನಿರತ್ನ ಸಾಂವಿಧಾನಿಕ ಸ್ಥಾನಕ್ಕೆ ತಕ್ಕ ರೀತಿಯಲ್ಲಿ ವರ್ತಿಸದೇ, ದಲಿತ ಮತ್ತು ಒಕ್ಕಲಿಗ ಸಮುದಾಯದವರು ಮತ್ತು ಮಹಿಳೆಯರ ಬಗ್ಗೆ ಅವಮಾನಕಾರಿ ಭಾಷೆ ಬಳಸಿದ್ದಾರೆ. ಇಂತಹ ವ್ಯಕ್ತಿಗಳು ಶಾಸಕರಾಗಿ ಮುಂದುವರೆಯಲು ಅರ್ಹರಲ್ಲ. ಅವರ ರಾಜಕೀಯ ಹಿನ್ನೆಲೆ ಮತ್ತು ರೌಡಿ ಸಂಸ್ಕೃತಿಯನ್ನು ಗಮನಿಸಿದರೆ, ಅವರ ಈ ವರ್ತನೆ ಸಂವಿಧಾನಕ್ಕೆ ಮಾರಕವಾಗಿದೆ” ಎಂದು ತೀವ್ರವಾಗಿ ಖಂಡಿಸಿದರು.

ದಲಿತ ಸಂಘಟನೆಗಳು ಮತ್ತು ಪ್ರಗತಿಪರ ಸಂಘಟನೆಗಳು ಈ ಘಟನೆಯನ್ನು ರಾಜ್ಯದ ದಲಿತ ಸಮುದಾಯದ ಮೇಲಿನ ನಿಂದನೆಯಾಗಿ ನೋಡುವಂತೆ ಆಗ್ರಹಿಸಿವೆ. ಈ ಹಿನ್ನೆಲೆಯಲ್ಲಿ, ಅವರು ರಾಜ್ಯಪಾಲ ಮತ್ತು ವಿಧಾನಸಭಾ ಸ್ಪೀಕರ್ ಅವರಿಗೆ ಮನವಿ ಸಲ್ಲಿಸಿದ್ದು, ಮುನಿರತ್ನರನ್ನು ತಕ್ಷಣವೇ ಶಾಸಕರ ಸ್ಥಾನದಿಂದ ವಜಾ ಮಾಡುವಂತೆ ಕೇಳಿಕೊಂಡಿದ್ದಾರೆ.
ಪ್ರಗತಿಪರ ಸಂಘಟನೆಯ ಇನ್ನೊಬ್ಬ ಪ್ರಮುಖ ಸದಸ್ಯ, ಹಿರಿಯ ದಲಿತ ಮುಖಂಡ ಜೆ ಎಂ ಶಿವಲಿಂಗಯ್ಯ ಮಾತನಾಡಿ, ಇತ್ತೀಚಿಗೆ ದಲಿತ ಸಮುದಾಯದ ಮೇಲೆ ನಡೆಯುತ್ತಿರುವ ಶೋಷಣೆ ಮತ್ತು ನಿಂದನೆಗಳನ್ನು ತೀವ್ರವಾಗಿ ಖಂಡಿಸುತ್ತೇನೆ. ಮುನಿರತ್ನರನ್ನು ಮಾತ್ರವಲ್ಲದೆ, ದಲಿತ ವಿರೋಧಿ ನಾಯಕರನ್ನು ರಾಜ್ಯದಿಂದ ಗಡಿಪಾರು ಮಾಡುವವರೆಗೆ ನಾವು ಹೋರಾಟ ತೀವ್ರಗೊಳಿಸುತ್ತೇವೆ” ಎಂದು ತಿಳಿಸಿದರು.

ಈ ವೇಳೆ, ಕನಕಪುರದ ಪ್ರಗತಿಪರ ಸಂಘಟನೆಗಳು ಗುರುವಾರ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಮುನಿರತ್ನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ.
ಸಂಘಟನೆಯ ಪ್ರಮುಖರು, ರಾಜ್ಯ ರೈತ ಸಂಘದ ರಾಜ್ಯ ಸಂಚಾಲಕ ಚೀಲೂರು ಮುನಿರಾಜು, ದಲಿತ ಸಂಘಟನೆಗಳ ಪ್ರಶಾಂತ್ ಹೊಸದುರ್ಗ, ಮಾಳಗಾಳು ದಿನೇಶ್, ಮತ್ತು ಇನ್ನೂ ಹಲವರು ಮನವಿ ಸಲ್ಲಿಸುವ ಸಂದರ್ಭದಲ್ಲಿ ಉಪಸ್ಥಿತರಿದ್ದರು.
