ವಲಯ ಮಟ್ಟದ ಕ್ರೀಡಾಕೂಟ ನಡೆದ ಸಂದರ್ಭದಲ್ಲಿ ಮೈಗೂರ ಗ್ರಾಮದ ಶಿವಾನಂದ ಮಠದ ಗುರುಪ್ರಸಾದ ಸ್ವಾಮಿ, ದಲಿತ ಮಕ್ಕಳಿಗೆ ಮಠದಲ್ಲಿ ಪ್ರವೇಶ ಇಲ್ಲವೆಂದು ಹೇಳಿರುವುದನ್ನು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ(ನಾಗವಾರ ಬಣ) ಬಾಗಲಕೋಟೆ ಜಿಲ್ಲಾ ಸಂಚಾಲಕ ಹನುಮಂತ ಚಿಮ್ಮಲಗಿ ತೀವ್ರವಾಗಿ ಖಂಡಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನಲ್ಲಿ ಪತ್ರಿಕೆ ಹೇಳಿಕೆ ನೀಡಿರುವ ಅವರು, “ಜಮಖಂಡಿ ತಾಲೂಕಿನ ಮೈಗೂರ ಗ್ರಾಮದ ಶಿವಾನಂದ ಮಠದಲ್ಲಿ ದಲಿತ ಮಕ್ಕಳಿಗೆ ಪ್ರವೇಶ ನಿರಾಕರಣೆ ಮಾಡಿದ್ದಾರೆ. ಜಾತೀಯತೆಯನ್ನು ಹೋಗಲಾಡಿಸಲು ದಲಿತರನ್ನು ಎಲ್ಲ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ಹೇಳುತ್ತಾರೆ. ಸಮಾನತೆಯ ಮನೋಭಾವ ಹೊಂದಿ ಎಲ್ಲರೂ ಒಂದೇ ಎಂಬ ಭಾವನೆ ಮೂಡಬೇಕು. ಸತ್ಕಾರ್ಯಗಳಲ್ಲಿ ಒಳ್ಳೆಯ ಮನಸ್ಸು ಇರಬೇಕು. ಯಾರೂ ಕೂಡ ಮಠಮಾನ್ಯಗಳಲ್ಲಿ ಜಾತೀಯತೆಯನ್ನು ಮಾಡದೆ ಎಲ್ಲ ಜನಾಂಗದ ಭಕ್ತರು ಒಂದೇ ಎನ್ನುವ ಮಠಗಳೂ ಇವೆ. ಆದರೆ ಜಾತಿಯತೆ ಮಾಡುವ ಯಾವುದೇ ಮಠಗಳು ಇದ್ದರು ಅಂತಹ ಮಠ ಹಾಗೂ ಮಠದ ಸ್ವಾಮಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
“ಮಠಗಳು ಸಮಾನತೆಯನ್ನು ತರಬೇಕು, ಜ್ಯಾತಿ ವ್ಯವಸ್ಥೆಯನ್ನು ಮೆಟ್ಟಿನಿಲ್ಲುವ ಮಠಗಳು ಇರಬೇಕು. ಮಠಗಳಿಗೆ ಯಾವುದೇ ಜಾತಿ ಜನಾಂಗದ ಭಕ್ತರು ಹೋದರೂ ಅವರ ಮನಸ್ಸು ಪರಿವರ್ತನೆಯಾಗಿ ಅಜ್ಞಾನದಿಂದ ಸುಜ್ಞಾನದ ಮಾರ್ಗದ ಕಡೆಗೆ ಬದಲಾವಣೆ ಹೊಂದುವಂತ ಮಠಗಳು ಇದ್ದರೆ ಮಾತ್ರ ಅವು ಮಠಗಳು ಅನಿಸುತ್ತವೆ. ಶಿವಾನಂದ ಮಠದ ಗುರುಸ್ವಾಮಿಗಳ ಹಾಗೆ ಮಠಗಳು ಇದ್ದರೆ ಇಂತಹ ಸ್ವಾಮಿಗಳಿಂದ ಬದಲಾವಣೆ ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಇವರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
“ಇಂತಹ ಅಸ್ಪೃಶ್ಯತೆ ಆಚರಣೆ ಮಾಡುವಂತಹ ಘಟನೆಗಳು ನಮ್ಮ ಜಿಲ್ಲೆಯಲ್ಲಿ ಆಗಲಿ, ಬೇರೆ ಜಿಲ್ಲೆಗಳಲ್ಲೇ ಆಗಲಿ ನಡೆಯದಂತೆ ನೋಡಿಕೊಳ್ಳಬೇಕು. ಸ್ವಾಮಿಗಳು ದಲಿತರ ಬಳಿ ಕ್ಷಮೆ ಕೇಳಬೇಕು. ಒಂದುವೇಳೆ ಅವರ ತಪ್ಪನ್ನು ತಿದ್ದುಕೊಳ್ಳದೆ ಹೋದಲ್ಲಿ ಜಿಲ್ಲೆಯಲ್ಲಿ ತೀವ್ರವಾದ ಪ್ರತಿಭಟನೆ ಮಾಡಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಗದಗ | ‘ಜಿಮ್ಸ್’ನಿಂದ ಬಡವರ ದರೋಡೆ : ಆಸ್ಪತ್ರೆಯ ವಿರುದ್ಧ ಸೂಕ್ತ ಕ್ರಮಕ್ಕೆ ದಲಿತ ಸಂಘಟನೆಗಳ ಒಕ್ಕೂಟ ಆಗ್ರಹ
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ನಾಗವಾರ ಬಣದ ಜಿಲ್ಲಾ ಸಂಘಟನಾ ಸಂಚಾಲಕರಾದ ಆನಂದ ದೊಡ್ಡಮನಿ, ಮುತ್ತಣ್ಣ ಮೇತ್ರಿ, ಕೃಷ್ಣಮೂರ್ತಿ ನಾಯ್ಕರ, ಜಿಲ್ಲಾ ಖಜಾಂಚಿ ಸಂಗಣ್ಣ ಮಡ್ಡಿ, ಜಿಲ್ಲಾ ಸಮಿತಿ ಸದಸ್ಯ ಪ್ರಭು ದೊಡ್ಡಮನಿ, ತಾಲೂಕ ಸಂಚಾಲಕ ಶಂಕ್ರಪ್ಪ ದೊಡ್ಡಮನಿ, ತಾಲೂಕು ಸಂಘಟನಾ ಸಂಚಾಲಕರಾದ ಮೌನೇಶ ಜಾಮುನಿ, ನಾಗಪ್ಪ ದೊಡ್ಡಮನಿ, ತಾಲೂಕು ಖಜಾಂಚಿ ಯಲ್ಲಪ್ಪ ಪಾತ್ರೋಟಿ, ಯಮನಪ್ಪ ಹೂವಿನಹಳ್ಳಿ, ಈರಣ್ಣ ಕೋಲಕಾರ, ಮಲ್ಲೇಶಿ ನಾಯ್ಕರ ಸೇರಿದಂತೆ ಮುಂತಾದವರು ಇದ್ದರು.