ದೇಶದ ಪ್ರತಿಯೊಂದು ಮಗುವಿಗೂ ಗುಣಾತ್ಮಕ ಹಾಗೂ ಸಮಾನ ಶಿಕ್ಷಣದ ಅವಶ್ಯವಿದೆ ಎಂದು ನಿವೃತ್ತ ನ್ಯಾ.ನಾಗಮೋಹನ ದಾಸ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಬೆಳಗಾವಿ ಜಿಲ್ಲೆಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 14ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
“ಭಾರತ ದೇಶವು ಶಿಕ್ಷಣ ಕ್ಷೇತ್ರದಲ್ಲಿ ಸಮಾನ ಮತ್ತು ಗುಣಾತ್ಮಕ ಶಿಕ್ಷಣದ ಕೊರತೆಯಿಂದ ಬಳಲುತ್ತಿದೆ. ದಿನೇ ದಿನೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶಿಕ್ಷಣ ಕ್ಷೇತ್ರಕ್ಕೆ ನೀಡುವ ಹಣಕಾಸಿನ ನೆರವನ್ನು ಕಡಿಮೆ ಮಾಡುತ್ತಿವೆ. ಇದರಿಂದ, ಬಡವರ ಮಕ್ಕಳು ಶುಲ್ಕ ಕಟ್ಟಲಾಗದೆ ಶಿಕ್ಷಣವನ್ನು ಮೊಟಕುಗೊಳಿಸುತ್ತಿದ್ದಾರೆ. ಇದು ದೇಶಕ್ಕೆ ಒಳ್ಳೆದಲ್ಲ” ಎಂದರು.
ಜಗತ್ತಿನ ಸಮಸ್ಯೆಗಳ ಮಾತನಾಡುತ್ತ, ಮಹಾಯುದ್ಧಗಳ ಕುರಿತು ಮೆಲುಕು ಹಾಕಿದರು. “ಭಾರತ ದೇಶವು ಜಾತಿ, ಧರ್ಮ ಬೇಧವಿಲ್ಲದೆ ಅಭಿವೃದ್ಧಿಪಥದತ್ತ ಸಾಗಲು ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವೇ ಕಾರಣ ಹಾಗೂ ಯುವಜನರು ದೇಶದ ಮಿಡಿತ ತಿಳಿಯಬೇಕೆಂದರೆ, ವಿಶ್ಲೇಷಣಾತ್ಮಕವಾಗಿ ಬರೆದಿರುವ ಸಂವಿಧಾನ ಓದು ಕೈಪಿಡಿಯನ್ನು ಓದಬೇಕು” ಎಂದು ಸಲಹೆ ನೀಡಿದರು. ಇದೇ ವೇಳೆ ವಿವಿಯ ವಿವಿಧ ವಿಭಾಗಗಳ ಅಂತಿಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಿದರು.
ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ವಿವಿಗೆ ಅವಶ್ಯವಿರುವ ಮೂಲ ಸೌಕರ್ಯಗಳನ್ನು ಒದಗಿಸಲಾಗುವುದು” ಎಂದು ಭರವಸೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲಪತಿಗ ಸಿ ಎಂ ತ್ಯಾಗರಾಜ ಮಾತನಾಡಿ, ವಿವಿ ಸ್ಥಾಪನೆಗೆ ಶ್ರಮಿಸಿದ ಹಲವಾರು ಮಹನೀಯರನ್ನು ಸ್ಮರಿಸಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಈ ಸುದ್ದಿ ಓದಿದ್ದೀರಾ? ಕಾರ್ಕಳ ಪರಶುರಾಮ ಪ್ರತಿಮೆ ವಿವಾದ | ಶಾಸಕ ಸುನಿಲ್ ಪ್ರಚಂಡ ಸುಳ್ಳುಗಾರ: ಕಾಂಗ್ರೆಸ್ ಮುಖಂಡ ಉದಯ್ ಶೆಟ್ಟಿ
ಕುಲಸಚಿವ ಸಂತೋಷ ಕಾಮಗೌಡ ಅವರು ಕಾರ್ಯಕ್ರಮಕ್ಕೆ ಆಗಮಿಸಿದ್ದ ಅತಿಥಿಗಳನ್ನು ಸ್ವಾಗತಿಸಿ, ವಿವಿಯ ಹಲವಾರು ಸಾಧನೆಗಳನ್ನು ವರದಿಯ ವಾಚಿಸುವುದರ ಮೂಲಕ ಪ್ರಸ್ತುತ ಪಡಿಸಿ, ವಿವಿಯ ಮುನ್ನೋಟದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯ ಮೇಲೆ ಮೌಲ್ಯಮಾಪನ ಕುಲಸಚಿವ ಪ್ರೊ.ರವೀಂದ್ರ ಎನ್ ಕದಮ್, ಹಣಕಾಸು ಅಧಿಕಾರಿ ಎಂ ಎ ಸ್ವಪ್ನ, ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಇದ್ದರು.