ಹಿಂದುಳಿದ ವರ್ಗಗಳ ಒಳಿತಿಗಾಗಿ ಹೋರಾಡಿದ ಜೀವ ಜೆ. ಶ್ರೀನಿವಾಸನ್ ಇನ್ನಿಲ್ಲ

Date:

Advertisements
ಸರ್ಕಾರಿ ಅಧಿಕಾರಿಯಾಗಿ, ಹಿಂದುಳಿದ ಆಯೋಗದ ಸದಸ್ಯರಾಗಿ, ಹಿಂದುಳಿದ ಒಕ್ಕೂಟಗಳ ಸಂಸ್ಥಾಪಕ ಅಧ್ಯಕ್ಷರಾಗಿ ಕೆಲಸ ಮಾಡಿದ ಜೆ. ಶ್ರೀನಿವಾಸನ್ ಅವರ ಮಾತುಗಳನ್ನು ಯಾವ ಸರ್ಕಾರಗಳೂ ಕಿವಿಗೊಟ್ಟು ಕೇಳಲಿಲ್ಲ. ಚುನಾವಣೆ ಎದುರಾದಾಗ ಆ ಶೋಷಿತ ಸಮುದಾಯಗಳ ಪರ ದೊಡ್ಡ ಗಂಟಲಿನಲ್ಲಿ ಮಾತನಾಡುವುದು, ಅಧಿಕಾರಕ್ಕೇರುತ್ತಿದ್ದಂತೆ ನಿರ್ಲಕ್ಷಿಸುವುದು ಇವತ್ತಿಗೂ ನಿಂತಿಲ್ಲ. ಹಿಂದುಳಿದ ವರ್ಗಗಳ ಒಳಿತಿಗಾಗಿ ಹೋರಾಡಿದ ಜೆ. ಶ್ರೀನಿವಾಸನ್ ಇವತ್ತಿಲ್ಲ...

‘ನಾನೊಬ್ಬ ಸಾಮಾನ್ಯ ಅಧಿಕಾರಿ. ನನ್ನ ಸೇವಾವಧಿಯಲ್ಲಿ ದೇವರಾಜ ಅರಸು ಸಂಪರ್ಕಕ್ಕೆ ಬಂದು, ಅವರ ಮೇರುವ್ಯಕ್ತಿತ್ವಕ್ಕೆ ಮಾರುಹೋದವನು. ಅವರ ಜನಪರ ಕೆಲಸಗಳಿಂದ ಪ್ರಭಾವಿತನಾದವನು. ಅವರಲ್ಲಿದ್ದ ಮಾನವೀಯತೆಗೆ ಮನಸೋತವನು. ಸರಕಾರಿ ಅಧಿಕಾರಿಯಾಗಿದ್ದು, ಕಾನೂನು ಕಾಯ್ದೆಗಳಡಿ ಕೆಲಸ ಮಾಡುತ್ತಲೇ ಜನ ಕೊಟ್ಟ ಅಧಿಕಾರವನ್ನು ಜನರಿಗಾಗಿ ಬಳಸುವುದನ್ನು ಅವರಿಂದ ಕಲಿತವನು. ಮತ್ತು ಅವರು ಕಂಡ ಕನಸನ್ನು ನನ್ನ ಕೈಲಾದಷ್ಟು ನನಸು ಮಾಡಲು ಇಂದಿಗೂ ಆ ಮಾರ್ಗದಲ್ಲಿಯೇ ನಡೆಯುತ್ತಿರುವವನು’ ಎಂದಿದ್ದ ಜೆ. ಶ್ರೀನಿವಾಸನ್ ಇಂದಿಲ್ಲ.

ಕೊಳ್ಳೇಗಾಲದ ಮಧ್ಯಮವರ್ಗದ ಕುಟುಂಬದಿಂದ ಬಂದ ಜೆ. ಶ್ರೀನಿವಾಸನ್(ಜನನ-1939) ವಿಶೇಷ ಜಿಲ್ಲಾಧಿಕಾರಿಯಾಗಿ ನಿವೃತ್ತರಾದವರು. ಎಸೆಸೆಲ್ಸಿವರೆಗೆ ಕೊಳ್ಳೇಗಾಲದಲ್ಲಿ ಓದಿ, ನಂತರ ಮೈಸೂರಿನಲ್ಲಿ ಪದವಿ, ಮನಃಶಾಸ್ತ್ರದಲ್ಲಿ ಪಿಎಚ್.ಡಿ  ಮಾಡುವಾಗಲೇ, ಸರಕಾರಿ ಕೆಲಸ ಸಿಕ್ಕಿದ್ದರಿಂದ, ಓದನ್ನು ಅರ್ಧಕ್ಕೆ ನಿಲ್ಲಿಸಿದವರು.

ವಿದ್ಯಾರ್ಥಿ ದೆಸೆಯಿಂದಲೇ ಸಂಘಟನೆ, ಹೋರಾಟ, ಚಳವಳಿಗಳಲ್ಲಿ ಭಾಗವಹಿಸುತ್ತಿದ್ದ ಶ್ರೀನಿವಾಸನ್, ಸಹಜವಾಗಿಯೇ ಸಮಾಜಮುಖಿ ತತ್ವ ಸಿದ್ಧಾಂತಗಳತ್ತ ಆಕರ್ಷಿತರಾಗಿ ಹಿಂದುಳಿದವರ ಪರ ನಿಂತವರು. 1971ರಲ್ಲಿ ಗೆಜೆಟೆಡ್ ಆಫೀಸರ್ ಹುದ್ದೆಗೆ ಆಯ್ಕೆಯಾಗಿ, ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗಲೇ, ಪುತ್ತೂರಿನ ತಹಶೀಲ್ದಾರ್ ಆಗಿ ನೇಮಕಗೊಂಡವರು. ಆನಂತರ ಸಾಗರ, ತುಮಕೂರಿನಲ್ಲಿ ಎಸಿ, ಬೆಂಗಳೂರಿನಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದವರು; 1991ರಲ್ಲಿ ವಿಶೇಷ ಜಿಲ್ಲಾಧಿಕಾರಿಯಾಗಿ ನಿವೃತ್ತರಾದವರು. 1994-95ರಲ್ಲಿ ನಿವೃತ್ತ ನ್ಯಾಯಮೂರ್ತಿ ಕುದೂರು ನಾರಾಯಣ ರೈ ಅಧ್ಯಕ್ಷತೆಯ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯರಾಗಿದ್ದವರು. ಆ ನಂತರ ರಾಜ್ಯದಲ್ಲಿ ಹಿಂದುಳಿದ ಜಾತಿಗಳ ಒಕ್ಕೂಟವನ್ನು ಅಸ್ತಿತ್ವಕ್ಕೆ ತಂದು, ಸಂಸ್ಥಾಪಕ ಅಧ್ಯಕ್ಷರಾಗಿದ್ದರು.   

Advertisements

ಸರಕಾರಿ ಸೇವಾವಧಿಯ ನಂತರ, ಜನಪರ ಹೋರಾಟಗಳಲ್ಲಿ ಗುರುತಿಸಿಕೊಂಡ ಶ್ರೀನಿವಾಸನ್, ಹಿಂದುಳಿದವರ ಫೆಡರೇಷನ್ ಹುಟ್ಟು ಹಾಕಿದರು. ಹಿಂದುಳಿದ ಜಾತಿ ಜನಾಂಗಗಳ ಸಮನ್ವಯ ಸಮಿತಿ ಕಟ್ಟಿ, ಮಂಡಲ್ ವರದಿ ಪರ ವಾದ, ಚರ್ಚೆ ಮತ್ತು ಹೋರಾಟದಲ್ಲಿ ಭಾಗಿಯಾದವರು. ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯರಾಗಿ, ದೇವರಾಜ ಅರಸು ಸಂಶೋಧನಾ ಸಂಸ್ಥೆಯ ಸಲಹಾ ಸಮಿತಿ ಸದಸ್ಯರಾಗಿ 9 ವರ್ಷ ಸೇವೆ ಸಲ್ಲಿಸಿದವರು. ದೇವರಾಜ ಅರಸು ಶತಮಾನೋತ್ಸವ ಸಮಿತಿಯಲ್ಲಿ ಸದಸ್ಯರಾಗಿದ್ದು, ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದ ಸಾಮಾಜಿಕ, ಆರ್ಥಿಕ ಸ್ಥಿತಿಗತಿಯನ್ನು, ಅಂಕಿ-ಅಂಶಗಳನ್ನು, ವರದಿಗಳನ್ನು ಸಿದ್ಧಪಡಿಸುತ್ತ ಹಾಗೂ ಕಾಲಕಾಲಕ್ಕೆ ಸರಕಾರಕ್ಕೆ ಬೇಕಾದ ಉಪಯುಕ್ತ ಸಲಹೆ ಸೂಚನೆಗಳನ್ನು ನೀಡುತ್ತ ನಿವೃತ್ತ ಬದುಕನ್ನು ಸದುಪಯೋಗಪಡಿಸಿಕೊಂಡವರು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತರಾದ ಶ್ರೀನಿವಾಸನ್, ಅಹಿಂದ ಸಮುದಾಯಗಳನ್ನು ಒಗ್ಗೂಡಿಸುವ ಪ್ರಯತ್ನದಲ್ಲಿ ನಿರಂತರವಾಗಿ ಮಾರ್ಗದರ್ಶನ ಮಾಡಿದವರು.

ಇದನ್ನು ಓದಿದ್ದೀರಾ?: ಪರಿಶಿಷ್ಟರ ಕಾಲೇಜು ಶಿಕ್ಷಣ | ಡಾ ಅಂಬೇಡ್ಕರ್ ಆಶಯ ಇನ್ನೂ ಈಡೇರಿಲ್ಲ

ದೇವರಾಜ ಅರಸು ಅವರನ್ನು ಅಪಾರವಾಗಿ ಇಷ್ಟಪಡುತ್ತಿದ್ದ ಜೆ. ಶ್ರೀನಿವಾಸನ್‌ರನ್ನು ಕಾಣಲು, ಮಾತನಾಡಿಸಲು ಏಳು ವರ್ಷಗಳ ಹಿಂದೆ, ಪ್ಯಾಲೆಸ್ ಗುಟ್ಟಳ್ಳಿಯ ಅವರ ಮನೆಗೆ ಹೋಗಿದ್ದೆ. ಎರಡು ಮೂರು ದಿನಗಳ ಆ ಸುದೀರ್ಘ ಮಾತುಕತೆಯುದ್ದಕ್ಕೂ ಹಿಂದುಳಿದ ವರ್ಗ, ಮೀಸಲಾತಿ, ಸಂವಿಧಾನ, ರಾಜಕೀಯ ಅಧಿಕಾರ, ಸಾಮಾಜಿಕ ಸ್ಥಿತಿಗತಿ ಕುರಿತು ವಿವರವಾಗಿ ಮಾತನಾಡಿದ್ದರು. ಕರ್ನಾಟಕದ ಅದೆಷ್ಟೋ ಸಮುದಾಯಗಳು ಮೀಸಲಾತಿಯ ಸೌಲಭ್ಯ ಪಡೆಯದೆ, ರಾಜಕೀಯ ಅಧಿಕಾರ ವಂಚಿತರಾಗಿರುವುದರ ಹಿಂದೆ ಅಧಿಕಾರಿಗಳು ಮತ್ತು ರಾಜಕಾರಣಿಗಳ ಪಾತ್ರ ಕುರಿತು ಕಟುಸತ್ಯಗಳನ್ನೇ ಬಿಚ್ಚಿಟ್ಟಿದ್ದರು.

‘ಹಿಂದೊಮ್ಮೆ ನಾನು ಸರ್ಕಾರಿ ಅಧಿಕಾರಿಯಾಗಿದ್ದಾಗ, ಚುನಾವಣೆಗಾಗಿ ತುರ್ತಾಗಿ ಮೀಸಲಾತಿ ಪಟ್ಟಿಯನ್ನು ಸಿದ್ಧಪಡಿಸಲಾಯಿತು. ಆ ಬೆಳವಣಿಗೆಗಳು ಇನ್ನೂ ನನ್ನ ನೆನಪಿನಲ್ಲಿವೆ. ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಮೀಸಲಾತಿಗೆ ಅರ್ಹವಾದ ಜಾತಿಗಳ ಪಟ್ಟಿಯನ್ನು ತರಾತುರಿಯಲ್ಲಿ ಕಳಿಸಬೇಕಾದ ಅನಿವಾರ್ಯತೆ ಇತ್ತು. ಶಿಕ್ಷಣ ಮತ್ತು ಉದ್ಯೋಗದಲ್ಲಿನ ಮೀಸಲಾತಿಗೆ ಬಳಕೆಯಾಗುತ್ತಿದ್ದ ಜಾತಿಗಳ ಪಟ್ಟಿಯನ್ನೇ ಉಪ ಕಾರ್ಯದರ್ಶಿಯೊಬ್ಬರು ಸಣ್ಣಪುಟ್ಟ ಬದಲಾವಣೆಗಳೊಂದಿಗೆ ಕಳುಹಿಸಿದರು. ಅದೇ ಪಟ್ಟಿ ರಾಜಕೀಯ ಮೀಸಲಾತಿಗೂ ಅನ್ವಯವಾಗುವಂತೆ ಅನುಮೋದನೆ ನೀಡಲಾಯಿತು. ರಾಜಕೀಯ ಮೀಸಲಾತಿಯ ಘನತೆ, ಮಹತ್ವ, ಪ್ರಾಮುಖ್ಯ ಈ ಯಾವುದರ ಅರಿವೂ ಇಲ್ಲದೆ ಪಟ್ಟಿ ಅಂತಿಮಗೊಳಿಸಲಾಯಿತು’ ಎಂದು ಆಡಳಿತಾತ್ಮಕ ಅಧ್ವಾನಗಳನ್ನು ಅರುಹಿದ್ದರು.

ಅದರಿಂದ ಹಲವು ಸಮುದಾಯಗಳಿಗೆ ಆದ ಅನ್ಯಾಯ ಇವತ್ತಿಗೂ ಸರಿಹೋಗಿಲ್ಲ. ಹಿಂದುಳಿದ ವರ್ಗಗಳಿಗೆ ಇರುವ ಶೇ. 27ರಷ್ಟು ಮೀಸಲಾತಿಯನ್ನು ಕೆಲವೇ ಸಮುದಾಯಗಳು ಬಳಸಿಕೊಂಡಿವೆ. 15ರಿಂದ 20 ಜಾತಿಗಳು ಹೆಚ್ಚು ಪಾಲು ಪಡೆದಿವೆ. ಒಟ್ಟಾರೆ ಸ್ಥಳೀಯ ಸಂಸ್ಥೆಗಳಲ್ಲಿ ಪ್ರಾತಿನಿಧ್ಯ ಪಡೆದಿರುವ ಜಾತಿಗಳ ಸಂಖ್ಯೆ 50 ದಾಟುವುದಿಲ್ಲ. ಎಲ್ಲ ಸಮುದಾಯಗಳಿಗೂ ಪ್ರಾತಿನಿಧ್ಯ ಒದಗಿಸುವುದು ಕಷ್ಟ ಎಂಬುದು ಸತ್ಯ. ಪಟ್ಟಿಯಲ್ಲೇ ಇಲ್ಲದ ಸಮುದಾಯಗಳನ್ನು ಏನು ಮಾಡುವುದು ಎಂಬ ಪ್ರಶ್ನೆಯೂ ಈ ಸಂದರ್ಭದಲ್ಲಿ ಎದುರಾಗುತ್ತದೆ ಎಂದಿದ್ದರು. ಮುಂದುವರೆದು, ಶಕ್ತಿವಂತರು, ಬಲಾಢ್ಯರು, ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಮುಂದುವರಿದವರು ಮೀಸಲಾತಿಯನ್ನು ಬಳಸಿಕೊಂಡು ರಾಜಕೀಯ ಪ್ರಾತಿನಿಧ್ಯ ಪಡೆದುಕೊಳ್ಳುತ್ತಿದ್ದಾರೆ. ಈಗ ಇರುವ ಮೀಸಲಾತಿ ಪಟ್ಟಿ ಪರಿಪಕ್ವವಾದುದಲ್ಲ ಎಂದು ಷರಾ ಬರೆದಿದ್ದರು.

ಸರ್ಕಾರಿ ಅಧಿಕಾರಿಯಾಗಿ, ಹಿಂದುಳಿದ ಆಯೋಗದ ಸದಸ್ಯರಾಗಿ, ಹಿಂದುಳಿದ ಒಕ್ಕೂಟಗಳ ಸಂಸ್ಥಾಪಕ ಅಧ್ಯಕ್ಷರಾಗಿ ಕೆಲಸ ಮಾಡಿದ ಜೆ. ಶ್ರೀನಿವಾಸನ್ ಅವರ ಮಾತುಗಳನ್ನು ಯಾವ ಸರ್ಕಾರಗಳೂ ಕಿವಿಗೊಟ್ಟು ಕೇಳಲಿಲ್ಲ. ಚುನಾವಣೆ ಎದುರಾದಾಗ ಆ ಶೋಷಿತ ಸಮುದಾಯಗಳ ಪರ ದೊಡ್ಡ ಗಂಟಲಿನಲ್ಲಿ ಮಾತನಾಡುವುದು, ಅಧಿಕಾರಕ್ಕೇರುತ್ತಿದ್ದಂತೆ ನಿರ್ಲಕ್ಷಿಸುವುದು ಇವತ್ತಿಗೂ ನಿಂತಿಲ್ಲ. 

ಕಳೆದ ಆರು ತಿಂಗಳ ಹಿಂದೆ ಅವರಿಗೆ ಫೋನ್ ಮಾಡಿದಾಗ, ‘ಕಾಲು ಮುರಿದುಕೊಂಡು ಮನೆಯಲ್ಲಿ ಕೂತಿದ್ದೇನೆ, ಮನೆಗೇ ಬಂದುಬಿಡಿ’ ಎಂದಿದ್ದರು. ಎದ್ದು ಓಡಾಡಲಾಗದೆ, ಬೆಡ್ ಬಂಧಿಯಾಗಿದ್ದ ಶ್ರೀನಿವಾಸನ್‌ರ ಸ್ಥಿತಿ, ಹಿಂದುಳಿದ ವರ್ಗಗಳ ಸದ್ಯದ ಸ್ಥಿತಿಗೆ ರೂಪಕದಂತಿತ್ತು. ಆ ಕ್ಷಣದಲ್ಲೂ ಕೂಡ ಅರಸು ಬಗ್ಗೆ ಅತೀವ ಪ್ರೀತಿಯಿಂದ ಮಾತನಾಡಿದರು. ಅರಸು ಮತ್ತು ಅವರ ಕೊನೆಯ ಭೇಟಿ ಇಲ್ಲಿದೆ, ನೋಡಿ.  

”1981ರಲ್ಲಿ ನಾನು ಬೆಂಗಳೂರಿನಲ್ಲಿ, ವಿಧಾನಸೌಧದಲ್ಲಿ ಅಧೀನ ಕಾರ್ಯದರ್ಶಿಯಾಗಿ ಸೇವೆಯಲ್ಲಿದ್ದೆ. ಆಗ ಗುಂಡೂರಾವ್ ಮುಖ್ಯಮಂತ್ರಿ, ದೇವರಾಜ ಅರಸು ವಿರೋಧ ಪಕ್ಷದ ನಾಯಕರು. ಆ ಸಮಯದಲ್ಲಿ ನನ್ನ ಪರಿಚಿತರೊಬ್ಬರು 6 ಡಬ್ಬಿ ಪ್ರಿನ್ಸ್ ಟೊಬ್ಯಾಕೋ ತಂದುಕೊಟ್ಟರು. ಆ ಸಂದರ್ಭದಲ್ಲಿ, ನಮ್ಮ ರಾಜ್ಯದಲ್ಲಿ, ನನಗೆ ಗೊತ್ತಿದ್ದಂತೆ, ದೇವರಾಜ ಅರಸರನ್ನು ಬಿಟ್ಟರೆ ಬೇರಾರೂ ಪೈಪ್ ಸೇದುತ್ತಿರಲಿಲ್ಲ. ಹಾಗಾಗಿ ನನಗೆ ತಕ್ಷಣಕ್ಕೆ ಹೊಳೆದದ್ದು ಅರಸರೆ. ಆ ಡಬ್ಬಿಯ ನೆಪದಲ್ಲಾದರೂ ಅವರನ್ನು ನೋಡಬಹುದಲ್ಲ ಎಂದು, ಅವರಿದ್ದ ಕ್ರೆಸೆಂಟ್ ರಸ್ತೆಯ ಅವರ ಮನೆಗೆ ಹೋದೆ.

”ಅದು ಮೇ 20, 1982ರ ಆಜುಬಾಜು. ಸಂಜೆ ಐದೂಮುಕ್ಕಾಲು. ಯಾರೂ ಇರಲಿಲ್ಲ. ಒಳಗೆ ಹೋದೆ. ತೆಳುವಾದ ಕಾಟನ್ ಬಟ್ಟೆಯ ಅರ್ಧ ತೋಳಿನ ಬನಿಯನ್ ಹಾಕ್ಕೊಂಡು ಒಬ್ಬರೇ ಕೂತಿದ್ದರು. ನನ್ನನ್ನು ಗುರುತು ಹಿಡಿದ ಅರಸು, ‘ಏನ್ ಶ್ರೀನಿವಾಸ್, ಹೇಗಿದ್ದೀರ’ ಎಂದರು. ‘ಚೆನ್ನಾಗಿದೀನಿ ಬುದ್ಧಿ’ ಅಂದೆ. ‘ಟೀ ಕುಡಿರಿ’ ಎಂದರು. ಅವರ ಮುಂದೆ ನಿಲ್ಲೋದು, ಕೂತ್ಕೊಳ್ಳೋದು ಎಲ್ಲವೂ ಮುಜುಗರ. ಆ ಸ್ಥಿತಿಯಲ್ಲಿಯೇ ಕೂತು ಟೀ ಕುಡಿದೆ. ಆಮೇಲೆ ಟೊಬ್ಯಾಕೋ ಕೊಟ್ಟೆ. ಅವರೂ ಟೀ ಕುಡಿದು ಪೈಪ್‌ನ ಕುಟ್ಟಿ ಕಿಟ್ಟ ತೆಗೆದು ಹೊಸದಾಗಿ ಟೊಬ್ಯಾಕೋ ತುಂಬಿ ಪೈಪ್ ಹಚ್ಚಿದರು. ಒಂದು ಧಂ ಎಳೆದು, ‘ಯಾವುದರಲ್ಲಿ ಬಂದಿದ್ದೀರಾ’ ಎಂದರು. ಆಗ ನನ್ನ ಬಳಿ ಫಿಯೆಟ್ ಕಾರಿತ್ತು. ಕಾರಲ್ಲಿ ಎಂದೆ. ‘ಏನಾದ್ರು ಕೆಲಸ ಇದೆಯಾ’ ಎಂದರು. ಇಲ್ಲ ಅಂದೆ. ‘ಇಲ್ಲೇ ಹೋಗಿಬರೋಣ, ಬನ್ನಿ’ ಎಂದರು.

”ನಾನು ಕಾರಿನ ಹಿಂದಿನ ಡೋರ್ ತೆಗೆದು, ಕೂರಿ ಎಂದು ಹೇಳುವಂತೆ ಅವರ ಮುಖ ನೋಡಿದೆ. ಅವರು, ‘ಇಲ್ಲ ಮುಂದೆಯೇ ಕೂತ್ಕೋತೀನಿ’ ಎಂದು ಕೂತರು. ‘ದೇವನಹಳ್ಳಿ ಕಡೆ ನಡಿರಿ’ ಎಂದರು. ಹೋಗ್ತಾಯಿದ್ದ ಹಾಗೆ ‘ಪೆಟ್ರೋಲ್ ಇದೆಯಾ’ ಎಂದರು. ಅದೇಕೋ ತುಂಬಾ ಬೇಸರದ ಮೂಡ್‌ನಲ್ಲಿದ್ದರು. ಅವರ ಪ್ರತಿ ಮಾತಿನಲ್ಲೂ ನೋವು, ವಿಷಾದ ಮಡುಗಟ್ಟಿತ್ತು.

”ದೇವನಹಳ್ಳಿ ಹತ್ತಿರದ ವೆಂಕಟಗಿರಿ ಕೋಟೆಯ ದೊಡ್ಡ ಕೆರೆ ಬಳಿ ಕಾರು ನಿಲ್ಲಿಸಲು ಹೇಳಿದರು. ಕೆರೆ ಏರಿ ಹತ್ತಿ ನಿಂತರು. ಏರಿ ಮೇಲಿನ ಕಲ್ಲು ಬೆಂಚಿನ ಮೇಲೆ ಕೂತು ಕೆರೆಯನ್ನು ಧ್ಯಾನಸ್ಥ ಸ್ಥಿತಿಯಲ್ಲಿ ದಿಟ್ಟಿಸತೊಡಗಿದರು. ಪಕ್ಕದಲ್ಲಿದ್ದ ಕಲ್ಲು ಬೆಂಚನ್ನು ತೋರಿಸಿ, ಕೂತ್ಕೋ ಅಂದು ಮತ್ತೆ ಪೈಪ್ ಹಚ್ಚಿದರು. ‘ಜನಸಾಮಾನ್ಯರಿಗಾಗಿ ಏನೇನು ಮಾಡಬೇಕಾಗಿತ್ತು, ಅದೆಲ್ಲವನ್ನು ಮಾಡಲಾಗಲಿಲ್ಲ’ ಎಂದು ಮೌನವಾದರು. ‘ವಿಶೇಷವಾಗಿ ನೇಕಾರರು, ಬೆಸ್ತರು, ಮಡಿವಾಳರ ಬಗ್ಗೆ ಮಾಡಬೇಕಿತ್ತು…’ ಅಂದು ಆರ್ಥಿಕವಾಗಿ, ಸಾಮಾಜಿಕವಾಗಿ ತುಂಬ ವಿವರವಾಗಿ ಮಾತನಾಡಿದರು.

ಜೆ ಶ್ರೀನಿವಾಸನ್101

”ಆಮೇಲೆ ಏನನ್ನಿಸಿತೋ, ‘ನೀನು ಅಲ್ಲಿದ್ದೀಯಾ, ನೀನೇ ಯಾಕೆ ಸಿಎಂಗೆ ಒಂದು ಮಾತು ಹೇಳಬಾರದು’ ಅಂದರು. ‘ನಾನು ಅಧೀನ ಅಧಿಕಾರಿ ಬುದ್ಧಿ, ನನ್ನ ಮಾತು ಅವರು ಹೇಗೆ ರಿಸೀವ್ ಮಾಡ್ತರೋ ಏನೋ’ ಅಂದೆ. ಸುಮ್ಮನಾದರು. ಮತ್ತೆ ನಾನೆ, ‘ನೀವೊಂದು ಪತ್ರ ಬರೆದು ಕೊಡಿ, ಅದನ್ನು ತಗಂಡೋಗಿ ಗುಂಡೂರಾವ್‌ರಿಗೆ ಕೊಟ್ಟು, ಅರಸು ಪತ್ರ ಕೊಟ್ಟಿದಾರೆ, ಇಂಥಿಂಥ ಕೆಲಸ ಆಗಬೇಕಂತೆ, ಅಂತ ಹೇಳತೀನಿ’ ಅಂದೆ.

”ಆಗಲಿ ಎಂದ ಅರಸು, ಒಂದೆರಡು ದಿನದಲ್ಲಿ ಯಾವ್ಯಾವ ಸಮುದಾಯಗಳು ಹಿಂದುಳಿದಿವೆ, ಅವುಗಳನ್ನು ಮೇಲೆತ್ತಲು ಎಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು, ಸರಕಾರ ಮತ್ತು ಅಧಿಕಾರಿಗಳು ಆ ಕಾರ್ಯಕ್ರಮಗಳಿಗೆ ಹೇಗೆ ಸ್ಪಂದಿಸಬೇಕು ಎಂಬುದೆಲ್ಲವನ್ನು ಕ್ರೋಡೀಕರಿಸಿ ದೊಡ್ಡ ಪತ್ರವನ್ನು ಬರೆದು ಕಳುಹಿಸಿಕೊಟ್ಟರು. ನಾನು ಅದನ್ನು ತೆಗೆದುಕೊಂಡುಹೋಗಿ ಗುಂಡೂರಾಯರಿಗೆ ಕೊಟ್ಟು, ಹೇಳಿದೆ. ಅದಕ್ಕವರು ತುಂಬಾ ಸಂತೋಷದಿಂದಲೇ ಫೋನ್ ಮಾಡಿ ಮಾತನಾಡಲು ನೋಡಿದರು, ಸಿಗಲಿಲ್ಲ. ಅಷ್ಟೇ… ಅದಾದ ಹದಿನೈದು ದಿನಕ್ಕೆ ಅರಸು ಇನ್ನಿಲ್ಲ ಎಂಬ ಸುದ್ದಿ ಬಂತು” ಎಂದಿದ್ದರು.

ಈಗ ಜೆ. ಶ್ರೀನಿವಾಸನ್ ಕೂಡ ಇಲ್ಲ ಎಂಬ ಸುದ್ದಿ ಬಂದಿದೆ.

Basavaraju Megalkeri
+ posts

ಲೇಖಕ, ಪತ್ರಕರ್ತ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಟ್ಟಣ ಪಂಚಾಯತ್ ಚುನಾವಣೆ: ಮೂರರಲ್ಲಿ ಕಾಂಗ್ರೆಸ್‌ಗೆ ಮೇಲುಗೈ; ಎರಡರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಜಯ

ಕರ್ನಾಟಕದಲ್ಲಿ ಐದು ಪ್ರದೇಶಗಳು ತಾಲೂಕು ಸ್ಥಾನಕ್ಕೇರಿದ ಬಳಿಕ ರಚನೆಯಾದ ಪಟ್ಟಣ ಪಂಚಾಯಿತಿಗೆ...

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

ಸಾರ್ವಜನಿಕ ಸಭೆಯಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಬುಧವಾರ(ಆಗಸ್ಟ್ 20) ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಡೆದ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ...

Download Eedina App Android / iOS

X