ರಾಜ್ಯದಲ್ಲಿ ಡ್ರಗ್ ಜಾಲದ ಬೇರುಗಳನ್ನು ಕತ್ತರಿಸಲು ಸರ್ಕಾರ ತೀರ್ಮಾನಿಸಿದೆ. ಗೃಹ ಸಚಿವರ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಸೆ.18) ಮಾದಕ ವಸ್ತುಗಳ ಹಾವಳಿ ಮತ್ತು ನಿಯಂತ್ರಣ ಕುರಿತಂತೆ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿದ ಬಳಿಕ ಮಾಧ್ಯಮಗೋಷ್ಠಿ ಕರೆದು ಮಾತನಾಡಿದರು.
“ಟಾಸ್ಕ್ ಫೋರ್ಸ್ ನಲ್ಲಿ ಆರೋಗ್ಯ ಸಚಿವರು, ಶಿಕ್ಷಣ ಸಚಿವರು, ವೈದ್ಯಕೀಯ ಶಿಕ್ಷಣ ಸಚಿವರು ಟಾಸ್ಕ್ ಫೋರ್ಸ್ ನಲ್ಲಿ ಇರುತ್ತಾರೆ. ಮೇಲಿಂದ ಮೇಲೆ ಸಭೆಗಳನ್ನು ನಡೆಸಿ, ಅಗತ್ಯ ಕಾರ್ಯತಂತ್ರ ರೂಪಿಸಲು ಸೂಚನೆ ನೀಡಲಾಗಿದೆ. ಠಾಣಾಧಿಕಾರಿಗಳಿಗೆ ಗೊತ್ತಿಲ್ಲದೆ ಡ್ರಗ್ ದಂಧೆ ನಡೆಯಲು ಸಾಧ್ಯವಿಲ್ಲ. ಹೀಗಾಗಿ ಠಾಣಾಧಿಕಾರಿ ಡಿವೈಎಸ್‌ಪಿ, ಎಸಿಪಿ ಮತ್ತು ಎಸ್‌ಪಿಗಳನ್ನು ಹೊಣೆ ಮಾಡಲು ತೀರ್ಮಾನಿಸಿದ್ದೇವೆ. ಇವರ ವಿರುದ್ಧವೇ ಕ್ರಮ ಖಚಿತ” ಎಂದು ಎಚ್ಚರಿಸಿದರು.
“ಅಗತ್ಯಬಿದ್ದರೆ ಹೊಸ ಕಾನೂನು ಮಾಡುತ್ತೇವೆ. ಇರುವ ಕಾನೂನನ್ನು ಇನ್ನಷ್ಟು ಗಟ್ಟಿ ಮಾಡಬೇಕಿದೆ. ಪೆಡ್ಲರ್ ಗಳಿಗೆ ಜೀವಾವಧಿ ಶಿಕ್ಷೆಯವರೆಗೂ ಕಠಿಣ ಶಿಕ್ಷೆ ವಿಧಿಸಲು ಕಾನೂನು ತಿದ್ದುಪಡಿಗೆ ಕ್ರಮ ಕೈಗೊಳ್ಳುತ್ತೇವೆ. ಎನ್‌ಸಿಸಿ, ಎನ್‌ಜಿಒಗಳನ್ನು ಬಲಗೊಳಿಸುವುದನ್ನು ಗುರಿಯಾಗಿಸಿಕೊಂಡಿದ್ದೇವೆ. ಪುನರ್ವಸತಿ ಕೇಂದ್ರಗಳನ್ನು ಹೆಚ್ಚಿಸಲು, ಡ್ರಗ್ ಹಾವಳಿ ತೊಡೆದು ಹಾಕಲು ಕ್ಷಿಪ್ರ ಮತ್ತು ತೀಕ್ಷ್ಣ ಸಮರ್ಪಕಗೊಳಿಸಲು ಕ್ರಮ ಕೈಗೊಳ್ಳಲಾಗುವುದು” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿ ಪ್ರಧಾನಿಯಾಗಿ ನೂರು ದಿನ: ಹಿನ್ನಡೆಯೋ, ಮುನ್ನಡೆಯೋ?
“ವಿದ್ಯಾರ್ಥಿ, ಯುವ ಜನರ ಮೇಲೆ, ಕುಟುಂಬಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿರುವುದನ್ನು ತಡೆಯಲು ಸರ್ಕಾರ ಸಿದ್ಧವಾಗಿದೆ. ಡ್ರಗ್ ಸೇವಿಸಿ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವ ಪ್ರಕರಣಗಳಿಗೆ ಬ್ರೇಕ್ ಹಾಕಲು ಪೊಲೀಸರಿಗೆ ಮುಕ್ತ ಅವಕಾಶ ಕೊಡುವ ಜೊತೆಗೆ ಅವರನ್ನೇ ಹೊಣೆ ಮಾಡಿ ಕ್ರಮ ತಗೊತೀವಿ” ಎಂದು ಹೇಳಿದರು.
“ಈಗಾಗಲೇ ಇರುವ ರಾಜ್ಯ ಮಟ್ಟದ ಸಮಿತಿಯಿಂದ ಮಾಹಿತಿ, ಅಭಿಪ್ರಾಯ ಸಂಗ್ರಹಿಸಿದ್ದೇವೆ. ಜಾಗೃತಿ ಮತ್ತು ಕಾರ್ಯಾಚರಣೆಯನ್ನು ಇನ್ನಷ್ಟು ತೀವ್ರವಾಗಿ ನಡೆಸಲು ಸ್ಪಷ್ಟ ಸೂಚನೆ ನೀಡಲಾಗಿದೆ. ಬೆಂಗಳೂರು ಪೂರ್ವ ವಿಭಾಗದಲ್ಲಿ ಡ್ರಗ್ ಹಾವಳಿ ತೀವ್ರವಾಗಿದೆ ಎನ್ನುವ ಮಾಹಿತಿ ಸಿಕ್ಕಿದೆ” ಎಂದರು.
“ಒಡಿಶಾ, ಆಂಧ್ರ, ಉತ್ತರ ಪ್ರದೇಶ ಸೇರಿ ಹಲವು ರಾಜ್ಯಗಳಿಂದ ಮಾದಕ ವಸ್ತು ರಾಜ್ಯಕ್ಕೆ ಆಮದು ಆಗುತ್ತಿದೆ. ಇದನ್ನು ತಡೆಯಲು ಹೊಸ ಕಾರ್ಯತಂತ್ರ ರೂಪಿಸುತ್ತಿದ್ದೇವೆ” ಎಂದು ಹೇಳಿದರು.

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.