ಏಕಕಾಲಕ್ಕೆ ಚುನಾವಣೆಯನ್ನು ನಡೆಸುವ ಕುರಿತಾಗಿ ಮಾಜಿ ರಾಷ್ಟ್ರಪತಿ ಕೋವಿಂದ್ ನೇತೃತ್ವದ ಸಮಿತಿ ಸಲ್ಲಿಸಿದ ‘ಒಂದು ದೇಶ ಒಂದು ಚುನಾವಣೆ’ ವರದಿಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ವರದಿಯಾಗಿದೆ.
“ಕೇಂದ್ರ ಸರ್ಕಾರವು ಈ ಅಧಿಕಾರವಧಿಯಲ್ಲಿಯೇ ಒಂದು ದೇಶ ಒಂದು ಚುನಾವಣೆಯನ್ನು ಜಾರಿಗೆ ತರಲಿದೆ” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದ ಒಂದು ದಿನದ ಬಳಿಕ ಕೇಂದ್ರ ಸಚಿವ ಸಂಪುಟ ಸಮ್ಮತಿ ನೀಡಿದೆ.
ಲೋಕಸಭೆ ಚುನಾವಣೆ ಘೋಷಣೆಗೂ ಮುನ್ನ ಮಾಜಿ ರಾಷ್ಟ್ರಪತಿ ಕೋವಿಂದ್ ನೇತೃತ್ವದ ಸಮಿತಿ ಮಾರ್ಚ್‌ನಲ್ಲಿ ವರದಿ ಸಲ್ಲಿಸಿತ್ತು. ವರದಿಯನ್ನು ಸಂಪುಟದ ಮುಂದೆ ಪ್ರಸ್ತಾಪಿಸಲಾಗಿದ್ದು, ಸಚಿವ ಸಂಪುಟ ಅಸ್ತು ಎಂದಿದೆ.
ಕೋವಿಂದ್ ನೇತೃತ್ವದ ಉನ್ನತ ಮಟ್ಟದ ಸಮಿತಿಯು ಮೊದಲ ಹಂತವಾಗಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ಶಿಫಾರಸು ಮಾಡಿದೆ. ಹಾಗೆಯೇ ಇದಾದ 100 ದಿನಗಳಲ್ಲೇ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲೂ ಸಮಿತಿ ಶಿಫಾರಸು ಮಾಡಿದೆ.
ಸಮಿತಿಯು ಮಾಡಿದ ಶಿಫಾರಸುಗಳ ಅನುಷ್ಠಾನವನ್ನು ಪರಿಶೀಲಿಸಲು ‘ಅನುಷ್ಠಾನ ಗುಂಪು’ ಸ್ಥಾಪಿಸಲು ಸಮಿತಿಯು ಪ್ರಸ್ತಾಪಿಸಿದೆ.
