ಮೃತಪಟ್ಟ ತಂದೆಯ ಶವ ಸಾಗಿಸಲು ಆ್ಯಂಬುಲೆನ್ಸ್ ವ್ಯವಸ್ಥೆ ಸಿಗದ ಕಾರಣ ಮಕ್ಕಳು ಬೈಕ್‌ನಲ್ಲೇ ಶವ ಸಾಗಿಸಿದ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ವೈ.ಎನ್ ಹೊಸಕೋಟೆಯಲ್ಲಿ ನಡೆದಿದೆ.
ಅನಾರೋಗ್ಯದ ಕಾರಣ ಹೊನ್ನೂರಪ್ಪ(80) ಎಂಬವರನ್ನು ವೈ.ಎನ್ ಹೊಸಕೋಟೆಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬುಧವಾರ ಮಧ್ಯಾಹ್ನ 108 ಆ್ಯಂಬುಲೆನ್ಸ್‌ನಲ್ಲಿ ಕರೆ ತರಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಹೊನ್ನೂರಪ್ಪ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಆಸ್ಪತ್ರೆಯಲ್ಲಿ ಶವ ಸಾಗಿಸಲು ಯಾವುದೇ ವಾಹನದ ಸೌಲಭ್ಯಗಳಿರಲಿಲ್ಲ. ಈ ಹಿನ್ನೆಲೆಯಲ್ಲಿ ಅನಾರೋಗ್ಯದ ವೇಳೆ ಕರೆತಂದಿದ್ದ 108 ಆ್ಯಂಬುಲೆನ್ಸ್‌ನಲ್ಲೇ ಊರಿಗೆ ಶವ ಸಾಗಿಸಲು ಸಿಬ್ಬಂದಿಗಳಲ್ಲಿ ಮಕ್ಕಳು ವಿನಂತಿಸಿದ್ದಾರೆ. ಆದರೆ, 108 ಆ್ಯಂಬುಲೆನ್ಸ್‌ನಲ್ಲಿ ಮೃತಪಟ್ಟ ಬಳಿಕ ಶವ ಸಾಗಿಸುವಂತಿಲ್ಲ ಎಂಬ ನಿಯಮ ಇರುವುದರಿಂದ ಶವ ಕೊಂಡೊಯ್ಯಲು ನಿರಾಕರಿಸಿದ್ದಾರೆ. ಈ ವೇಳೆ ಸಿಬ್ಬಂದಿ ಹಾಗೂ ಹೊನ್ನೂರಪ್ಪ ಕುಟುಂಬದವರ ನಡುವೆ ಸಣ್ಣಮಟ್ಟಿನ ವಾಗ್ವಾದ ಕೂಡ ನಡೆದಿರುವುದಾಗಿ ತಿಳಿದುಬಂದಿದೆ.
ಕೊನೆಗೆ ದಾರಿ ಕಾಣದಾಗದೆ, ಇಬ್ಬರು ಮಕ್ಕಳಾದ ಗೋಪಾಲಪ್ಪ, ಚಂದ್ರಣ್ಣ ಎಂಬುವವರು ಬೈಕ್‌ನಲ್ಲೇ ತಂದೆಯ ಶವವನ್ನು ಕುಳ್ಳಿರಿಸಿಕೊಂಡು ವೈ.ಎನ್ ಹೊಸಕೋಟೆಯಿಂದ ಸುಮಾರು 6 ಕಿಲೋಮೀಟರ್ ದೂರವಿರುವ ದಳವಾಯಿಹಳ್ಳಿಗೆ ಶವ ಸಾಗಿಸಿರುವುದಾಗಿ ತಿಳಿದುಬಂದಿದೆ.
ಇದನ್ನು ಓದಿದ್ದೀರಾ? ಕಾರ್ಕಳ ಪರಶುರಾಮ ಪ್ರತಿಮೆ ವಿವಾದ | ಶಾಸಕ ಸುನಿಲ್ ಪ್ರಚಂಡ ಸುಳ್ಳುಗಾರ: ಕಾಂಗ್ರೆಸ್ ಮುಖಂಡ ಉದಯ್ ಶೆಟ್ಟಿ
ಬೈಕಿನಲ್ಲಿ ಶವವನ್ನು ಸಾಗಿಸುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಗೃಹ ಸಚಿವರ ತವರು ಜಿಲ್ಲೆಯಲ್ಲಿ ಈ ಬೆಳವಣಿಗೆ ನಡೆದಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ವೈ.ಎನ್ ಹೊಸಕೋಟೆಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶವ ಸಾಗಿಸಲು ಸರ್ಕಾರ ಹಾಗೂ ಆರೋಗ್ಯ ಇಲಾಖೆಯು ಶೀಘ್ರವೇ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿದ್ದಾರೆ. ವೈ.ಎನ್ ಹೊಸಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ.
