- ರಾಜಕಾರಣಕ್ಕೆ ಮರಳುವ ಸುಳಿವು ನೀಡಿದ್ದ ಮೋಹಕ ತಾರೆ
- ರಮ್ಯ ನೋಡಿ ಖುಷಿಯಾದ ಪ್ರಿಯಾಂಕಾ ಗಾಂಧಿ
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಚುನಾವಣಾ ಕಣ ರಂಗೇರುತ್ತಿದೆ. ಎಲ್ಲ ರಾಜಕೀಯ ಪಕ್ಷಗಳು ಅಬ್ಬರದ ಪ್ರಚಾರವನ್ನು ಶುರುವಿಟ್ಟುಕೊಂಡಿವೆ. ಈ ನಡುವೆ ಸಕ್ರಿಯ ರಾಜಾಕಾರಣಕ್ಕೆ ಮರಳುವ ಸುಳಿವು ನೀಡಿದ್ದ ನಟಿ, ಮಾಜಿ ಸಂಸದೆ ರಮ್ಯ ಮಂಗಳವಾರ ಮಂಡ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರವಿಕುಮಾರ್ ಗೌಡ ಪರ ಪ್ರಚಾರ ನಡೆಸಿದ್ದಾರೆ.
ಕಾಂಗ್ರೆಸ್‌ನ ತಾರಾ ಪ್ರಚಾರಕರ ಪಟ್ಟಿಯಲ್ಲಿ ರಮ್ಯ ಅವರ ಹೆಸರು ಕೂಡ ಸೇರ್ಪಡೆಯಾಗಿತ್ತು. ಈ ಹಿನ್ನೆಲೆ ರಮ್ಯ ಯಾವ ಕ್ಷೇತ್ರದಿಂದ ಚುನಾವಣಾ ಪ್ರಚಾರ ಆರಂಭಿಸಲಿದ್ದಾರೆ ಎಂಬ ಕುತೂಹಲ ಅವರ ಅಭಿಮಾನಿಗಳಲ್ಲಿ ಮನೆ ಮಾಡಿತ್ತು. ಈ ಹಿಂದೆ ತಾವು ಪ್ರತಿನಿಧಿಸುತ್ತಿದ್ದ ಮಂಡ್ಯ ಲೋಕಸಭಾ ಕ್ಷೇತ್ರದಿಂದಲೇ ನಟಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.
ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ಕೈ ಅಭ್ಯರ್ಥಿ ರವಿಕುಮಾರ್ ಗೌಡ ಭರ್ಜರಿ ಪ್ರಚಾರ ನಡೆಸಿದ್ದಾರೆ. ಇದೇ ವೇದಿಕೆಯಲ್ಲಿ ರಮ್ಯ ಕೂಡ ಕಾಣಿಸಿಕೊಂಡಿದ್ದು, ರವಿಕುಮಾರ್ ಅವರನ್ನು ಗೆಲ್ಲಿಸುವಂತೆ ಮತದಾರರಲ್ಲಿ ಮನವಿ ಮಾಡಿದ್ದಾರೆ.
ವೇದಿಕೆಯ ಮೇಲೆ ರಮ್ಯರನ್ನು ಕಂಡು ಸಂತೋಷ ವ್ಯಕ್ತಪಡಿಸಿರುವ ಪ್ರಿಯಾಂಕಾ ಗಾಂಧಿ, “ಬಹಳ ದಿನಗಳ ನಂತರ ದಿವ್ಯ ಅವರನ್ನು ನೋಡಿ ಖುಷಿಯಾಯಿತು” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಸಿದ್ದರಾಮಯ್ಯ ಬೆಂಬಲಕ್ಕೆ ನಿಂತ ಶಿವರಾಜ್ ಕುಮಾರ್
“ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಕಾಂಗ್ರೆಸ್‌ನಿಂದ ಅವಕಾಶ ನೀಡಲಾಗಿತ್ತು. 6 ಕ್ಷೇತ್ರಗಳನ್ನು ಸೂಚಿಸಿ ಆ ಪೈಕಿ ಒಂದನ್ನು ಆಯ್ಕೆ ಮಾಡಿಕೊಳ್ಳುವಂತೆ ಆಫರ್ ನೀಡಲಾಗಿತ್ತು. ಆದರೆ, ಸದ್ಯ ಚುನಾವಣೆಗೆ ಸ್ಪರ್ಧಿಸಲು ನಾನು ಸಿದ್ಧಳಾಗಿಲ್ಲ. ಹೀಗಾಗಿ ಚುನಾವಣೆಗೆ ಸ್ಪರ್ಧಿಸಲು ನಿರಾಕರಿಸಿದೆ. ಬಿಜೆಪಿ ಮತ್ತು ಜೆಡಿಎಸ್‌ನಿಂದಲೂ ಸ್ಥಾನಮಾನದ ಆಫರ್ ಇತ್ತು. ಆದರೆ, ಎಂದಿಗೂ ಕಾಂಗ್ರೆಸ್ ಜೊತೆಗೆ ಇರಲು ಇಷ್ಟಪಡುತ್ತೇನೆ. ಸದ್ಯದಲ್ಲೇ ರಾಜಕಾರಣಕ್ಕೆ ಮರಳುತ್ತೇನೆ” ಎಂದಿದ್ದರು.