“ಹೆಣ್ಣೊಂದು ಕಲಿತರೆ, ಶಾಲೆಯೊಂದು ತೆರೆದಂತೆ” ಎಂಬ ನಾಣ್ಣುಡಿಯಂತೆ ಎಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ನೀಡಲಾಗಿದೆಯೋ ಆ ನಾಡುಗಳು ಪ್ರಗತಿಯತ್ತ ದಾಪುಗಾಲು ಹಾಕುತ್ತಿವೆ ಎಂದು ನ್ಯಾ. ಬಿ ಟಿ ವಿಶ್ವನಾಥ್ ಅಭಿಪ್ರಾಯಪಟ್ಟರು.
ಮೈಸೂರಿನ ಬನ್ನೂರು ಹೋಬಳಿಯ ಯಾಚೇನಹಳ್ಳಿಯಲ್ಲಿ ರಾಮಕೃಷ್ಣ ಸೇವಾ ಕೇಂದ್ರ ಟ್ರಸ್ಟ್ ಆಯೋಜಿಸಿದ್ದ ‘ವಿಶ್ವಮಾನವ ಮೌಲ್ಯ ಚಿಂತನ ಸತ್ಸಂಗ-15’ ಕಾರ್ಯಕ್ರಮದಲ್ಲಿ “ಮಹಿಳಾ ಪಾತ್ರ” ಕುರಿತ ವಿಚಾರ ಮಂಡನೆ ಮಾಡಿ ಮಾತನಾಡಿದರು.
“ಮಹಿಳೆಯರಿಗೆ ಪುರುಷರಷ್ಟೇ ರಾಜಕೀಯ, ಹಣಕಾಸು ಹಾಗೂ ಸಾಮಾಜಿಕ ಸಮಾನತೆ ದೊರೆತರೆ ಮಾತ್ರ ವಿಶ್ವಮಾನವ ಧರ್ಮ ಸ್ಥಾಪನೆ ಸಾಧ್ಯ. ಉದಾಹರಣೆಗೆ, ಸ್ವೀಡನ್‌ನಿಂದ ಶೇ.45ರಷ್ಟು ಮಂದಿ ಮಹಿಳೆಯ ಪರವಾಗಿದ್ದು, ಅಲ್ಲಿ ಮಹಿಳೆಯರಿಗೆ ಸಮಾನ ಅವಕಾಶಗಳನ್ನು ನೀಡಲಾಗಿದೆ. ಇದರಿಂದ ಆ ನಾಡು ಪ್ರಗತಿಯತ್ತ ಸಾಗಲು ಸಾಧ್ಯವಾಯಿತು” ಎಂದು ವಿವರಿಸಿದರು.
“ಇಡೀ ನೆಲದಲ್ಲಿ ಯಹೂದಿ ಸಮುದಾಯದವರು ಶೇ.20ರಷ್ಟು ನೊಬೆಲ್ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಆದರೆ ಅವರ ಜನ ಎಣಿಕೆ ಕೇವಲ ಶೇ.1ರಷ್ಟು ಮಾತ್ರ. ಆದರೂ ನೊಬೆಲ್ ಪ್ರಶಸ್ತಿಗಳಲ್ಲಿ ಅತಿಹೆಚ್ಚು ಸಾಧನೆ ಮಾಡಿದ್ದಾರೆ. ಇದಕ್ಕೆ ಕಾರಣ, ಯಹೂದಿ ಸಮುದಾಯದಲ್ಲಿ ಮಹಿಳೆಯರಿಗೆ ಪುರುಷರಷ್ಟೇ ಸಮಾನ ಅವಕಾಶಗಳನ್ನು ನೀಡಲಾಗಿರುವುದು” ಎಂದು ಮಾಹಿತಿ ನೀಡಿದರು.
“ಇಡೀ ವಿಶ್ವದಲ್ಲಿ ಡೆನ್ಮಾರ್ಕ್, ಇಟಲಿ, ಆಸ್ಟ್ರೇಲಿಯಾ, ಯುನೈಟೆಡ್ ಸ್ಟೇಟ್ಸ್, ಟರ್ಕಿ, ಮೆಕ್ಸಿಕೋ ಹಾಗೂ ಜರ್ಮನಿಯಂತಹ 10 ನಾಡುಗಳಲ್ಲಿ ಮಹಿಳೆಯರಿಗೆ ಹೆಚ್ಚು ಸಮಾನತೆ ನೀಡಲಾಗಿದೆ. ಇದರಿಂದಾಗಿ ಈ ನಾಡುಗಳು ಪ್ರಗತಿ ಸಾಧಿಸಲು ಸಾಧ್ಯವಾಗಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಜಾತಿಯ ಗೋಡೆಗಳನ್ನು ಕೆಡವಿ, ಸೇತುವೆ ಕಟ್ಟುವ ಕೆಲಸ ಆಗಬೇಕಿದೆ: ಸಾಣೇಹಳ್ಳಿ ಸ್ವಾಮೀಜಿ
ಶ್ರೀರಾಮಕೃಷ್ಣ ಸೇವಾ ಕೇಂದ್ರ ಟ್ರಸ್ಟಿನ ಶ್ರೀನಾದಾನಂದನಾಥ ಅಧ್ಯಕ್ಷತೆ ವಹಿಸಿದ್ದರು. ಅಪರ ಜಿಲ್ಲಾಧಿಕಾರಿ ಡಾ. ಎಚ್ ಎಲ್ ನಾಗರಾಜ್, ಕೆ ಜಿ ವಿಜಯಕುಮಾರ್, ಡಾ. ಮಾದೇಶ್, ಎಂಜಿನಿಯರ್ ಜಿ ಎನ್ ಕೆಂಪರಾಜು, ಡಾ. ಆದಿತ್ಯಗೌಡ, ‘ನುಡಿ ಕರ್ನಾಟಕ’ದ ಸಂಪಾದಕ ಎನ್. ನಾಗೇಶ್, ಸಂತೋಷ್, ಟಿ ಡಿ ನಾಗರಾಜ್, ವೈರಮುಡಿ, ಪಾವನಿ, ನೆಲದನಿ ಬಳಗದ ಮಂಗಲ ಲಂಕೇಶ್, ಸುಬ್ರಮಣ್ಯ ಸೇರಿದಂತೆ ಬಹುತೇಕರು ಇದ್ದರು.