- ದೆಹಲಿ ಅಬಕಾರಿ ನೀತಿ ಪ್ರಕರಣ ಸಂಬಂಧಿಸಿ ರಾಘವ್ ಚಡ್ಡಾ ಸೇರಿ ಅನೇಕರ ಹೆಸರು ಉಲ್ಲೇಖ
- ಅಬಕಾರಿ ನಿತಿ ಹಗರಣ ಪ್ರಕರಣದಲ್ಲಿ ಬಂಧಿತನಾಗಿರುವ ಮನೀಶ್ ಸಿಸೋಡಿಯಾ
ದೆಹಲಿ ಅಬಕಾರಿ ನೀತಿ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ (ಇ.ಡಿ) ಸಲ್ಲಿಸಿರುವ ಪೂರಕ ಆರೋಪ ಪಟ್ಟಿಯಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಅವರ ಹೆಸರನ್ನು ಉಲ್ಲೇಖಿಸಿದೆ ಎಂದು ಮಂಗಳವಾರ (ಮೇ 2) ವರದಿಯಾಗಿದೆ.
ದೆಹಲಿ ಅಬಕಾರಿ ನೀತಿ ಪ್ರಕರಣದ ಬಗ್ಗೆ ಇ.ಡಿ ತನಿಖೆ ನಡೆಸುತ್ತಿದೆ. ಇ.ಡಿ ತನ್ನ ದೋಷಾರೋಪ ಪಟ್ಟಿಯಲ್ಲಿ ಚಡ್ಡಾ ಅವರನ್ನು ಆರೋಪಿಯಾಗಿ ಹೆಸರಿಸಿಲ್ಲ. ಆದರೆ ಪಟ್ಟಿಯಲ್ಲಿ ಚಡ್ಡಾ ಅವರ ಹೆಸರು ಸೇರಿಸಿದೆ ಎಂದು ಮಾಧ್ಯಮಗಳ ವರದಿ ಹೇಳಿದೆ.
ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಇ.ಡಿ ಸಲ್ಲಿಸಿದ ಪೂರಕ ದೋಷಾರೋಪ ಪಟ್ಟಿಯಲ್ಲಿ ತಮ್ಮ ಹೆಸರನ್ನು ಆರೋಪಿಯಾಗಿ ಹೆಸರಿಸಲಾಗಿದೆ ಎಂದು ಮಾಧ್ಯಮಗಳು ತಪ್ಪಾಗಿ ಬಿಂಬಿಸುತ್ತಿವೆ ಎಂದು ಚಡ್ಡಾ ಕಿಡಿಕಾರಿದ್ದಾರೆ.
“ದೆಹಲಿ ಅಬಕಾರಿ ನೀತಿ ಪ್ರಕರಣ ಸಂಬಂಧ ನನ್ನನ್ನು ಆರೋಪಿಯನ್ನಾಗಿ ಇ.ಡಿ ದೋಷಾರೋಪ ಪಟ್ಟಿಯಲ್ಲಿ ಹೆಸರಿಸಲಾಗಿದೆ ಎಂಬ ಮಾಧ್ಯಮ ವರದಿಗಳು ಸುಳ್ಳು. ನನ್ನ ಘನತೆಗೆ ಕುಂದು ತರಲು ಹೀಗೆ ಮಾಡಲಾಗುತ್ತಿದೆ. ನಾನು ಇ.ಡಿ ವರದಿಯಲ್ಲಿ ಆರೋಪಿ ಅಥವಾ ಶಂಕಿತನಾಗಿ ಹೆಸರಿಸಲ್ಪಟ್ಟಿಲ್ಲ” ಎಂದು ಚಡ್ಡಾ ಸುದ್ದಿಗಾರರಿಗೆ ಸ್ಪಷ್ಟಪಡಿಸಿದರು.
“ಪ್ರಕರಣ ಸಂಬಂಧ ಕೆಲವು ಸಭೆಗಳಲ್ಲಿ ಹಾಜರಿದ್ದರು ಎಂದು ನನ್ನ ಹೆಸರನ್ನು ಉಲ್ಲೇಖಿಸಲಾಗಿದೆ. ಆದರೆ ಈ ಕುರಿತು ಸ್ಪಷ್ಟ ಆಧಾರಗಳಿಲ್ಲ” ಎಂದು ರಾಘವ್ ಚಡ್ಡಾ ಹೇಳಿದ್ದಾರೆ.
ಇ.ಡಿ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಸಂಜಯ್ ಸಿಂಗ್ ಸೇರಿ ಪಕ್ಷದ ಇತರ ನಾಯಕರನ್ನು ಹೆಸರಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಕೇರಳ | ವಂದೇ ಭಾರತ್ ಎಕ್ಸ್‌ಪ್ರೆಸ್ ಮೇಲೆ ಕಲ್ಲು ತೂರಾಟ
ಬಂಧಿತ ಮಾಜಿ ಸಚಿವ ಮನೀಶ್ ಸಿಸೋಡಿಯಾ ಅವರ ಮನೆಯಲ್ಲಿ ನಡೆದ ಸಭೆಯಲ್ಲಿ ರಾಘವ್ ಚಡ್ಡಾ ಅವರು ಭಾಗವಹಿಸಿದ್ದರು. ರದ್ದುಗೊಂಡಿರುವ ಅಬಕಾರಿ ನೀತಿಯನ್ನು ತರುವ ಯೋಜನೆಯ ಬಗ್ಗೆ ಉದ್ಯಮಿಗಳೊಂದಿಗೆ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಇ.ಡಿ ತಿಳಿಸಿದೆ.
ದೆಹಲಿ ಅಬಕಾರಿ ನೀತಿ ಪ್ರಕರಣ ಸಂಬಂಧಿಸಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಫೆಬ್ರವರಿಯಲ್ಲಿ ಬಂಧಿಸಲಾಯಿತು.