ಮಂಡ್ಯ ನಗರಸಭೆಯ ಅಸಡ್ಡೆಯ ಪರಿಣಾಮವಾಗಿ ಸಾವಿರಾರು ಜನರು ನಿತ್ಯವೂ ಉಪಯೋಗಿಸಬೇಕಾದ ಊರೊಟ್ಟಿನ ಶೌಚಾಲಯದ ಬಾಗಿಲು ಮುಚ್ಚಿದೆ. ಸಾರ್ವಜನಿಕರಿಗೆ ಶೌಚಾಲಯ ವ್ಯವಸ್ಥೆಯಿಲ್ಲದೆ ಪರದಾಡುವಂತಾಗಿದೆ ಎಂದು ಕರ್ನಾಟಕ ಜನಶಕ್ತಿ ಜಿಲ್ಲಾ ಕಾರ್ಯದರ್ಶಿ ಸಿದ್ದರಾಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಪ್ರಕಟಣೆಗೆ ನೀಡಿರುವ ಅವರು, “ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಪಕ್ಕದಲ್ಲೇ ಕಟ್ಟಿರುವ ಊರೊಟ್ಟಿನ ಶೌಚಾಲಯಕ್ಕೆ ಬೀಗ ಬಿದ್ದಿದ್ದು, ಕಳೆದ ಒಂದು ವರ್ಷದಿಂದ ಉಪಯೋಗಕ್ಕಿಲ್ಲದಂತಾಗಿರುವುದು ಅತ್ಯಂತ ಬೇಸರದ ವಿಷಯವಾಗಿದೆ. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಈ ಶೌಚಾಲಯಗಳು ಈಗ ನಾಗರಿಕರ ಪ್ರಯೋಜಕ್ಕೆ ಬಾರದಂತಾಗಿವೆ. ನಗರಸಭೆಯ ನಿರ್ವಹಣೆ ಕೊರತೆಯಿಂದ ಈ ಶೌಚಾಲಯ ಮುಚ್ಚಿದ್ದು, ಸಾರ್ವಜನಿಕರು ತೀವ್ರ ತೊಡಕು ಅನುಭವಿಸುತ್ತಿದ್ದಾರೆ” ಎಂದು ಹರಿಹಾಯ್ದರು.
“ಜಿಲ್ಲಾ ಕಚೇರಿ ಕೆಲಸಕ್ಕೆಂದು ನಿತ್ಯವೂ ಸಾವಿರಾರು ಜನರು ಬರುತ್ತಾರೆ. ಶೌಚಾಲಯದ ಕೊರತೆಯಿಂದ ಸಾರ್ವಜನಿಕರು ತೊಡಕು ಅನುಭವಿಸುತ್ತಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಂತಹ ಪ್ರಮುಖ ಸ್ಥಳದಲ್ಲಿ ಶೌಚಾಲಯ ವ್ಯವಸ್ಥೆ ನಿರ್ವಹಿಸದ ಮಟ್ಟಿಗೆ ನಗರಸಭೆಯ ಆಡಳಿತ ವಿಫಲವಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ʼಈ ದಿನʼ ವರದಿಗೆ ಎಚ್ಚೆತ್ತ ಅಧಿಕಾರಿಗಳು; ನ್ಯೂಮಂಡ್ಲಿ ಉರ್ದು ಶಾಲೆಗೆ ಬಿಇಒ ಭೇಟಿ, ಸಮಸ್ಯೆ ಬಗೆಹರಿಸುವ ಭರವಸೆ
“ಜಿಲ್ಲಾಧಿಕಾರಿ ಕಚೇರಿ ಬಳಿ ನಿತ್ಯವೂ ವಿವಿಧ ಹೋರಾಟಗಳು ಮತ್ತು ಪ್ರತಿಭಟನೆಗಳು ನಡೆಯುತ್ತವೆ. ಹೀಗಾಗಿ, ಪ್ರತಿಭಟನಾಕಾರರು ಕೂಡ ಮೂತ್ರ ವಿಸರ್ಜನೆಗಾಗಿ ಅನುಕೂಲಕರ ಜಾಗವಿಲ್ಲದೇ ತೊಂದರೆ ಅನುಭವಿಸುತ್ತಿದ್ದಾರೆ. ಸಾರ್ವಜನಿಕರ ಉಪಯೋಗಕ್ಕೆ ಶೌಚಾಲಯವನ್ನು ಸರಿಪಡಿಸಿ ಮತ್ತೆ ತೆರೆಯಬೇಕು” ಎಂದು ಒತ್ತಾಯಿಸಿದರು.
ಊರೊಟ್ಟಿನ ವ್ಯವಸ್ಥೆ ಏಳಿಗೆಗೆ ಆದ್ಯತೆ ಕೊಟ್ಟು ಮಂಡ್ಯ ಜಿಲ್ಲಾಡಳಿತ ಮತ್ತು ನಗರಸಭೆ ಅಧಿಕಾರಿಗಳು ಕೂಡಲೇ ಈ ಸಮಸ್ಯೆ ಬಗೆಹರಿಸಿ, ಶೌಚಾಲಯವನ್ನು ಪುನಃ ಕಾರ್ಯ ಎಸಗುವಂತೆ ಮಾಡಬೇಕಿದೆ ಎಂದು ಆಗ್ರಹಿಸಿದರು.