- ಯಡಗಿಮದ್ರಾ ಗ್ರಾಮದಲ್ಲಿ ಎಸ್‌ಯುಸಿಐ ಸಾರ್ವಜನಿಕ ಸಭೆ
- ಎಸ್‌ಯುಸಿಐ ಅಭ್ಯರ್ಥಿ ಕೆ ಸೋಮಶೇಖರ್ ಬೆಂಬಲಕ್ಕೆ ಮನವಿ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಗಳ ವಿರುದ್ಧ ಎಸ್‌ಯುಸಿಐ (ಕಮ್ಯುನಿಸ್ಟ್) ನಿರಂತರ ಹೋರಾಟ ನಡೆಸುತ್ತಿದೆ. ಪ್ರಸ್ತುತ ಚುನಾವಣೆಯಲ್ಲಿ ಯಾದಗಿರಿ ಕ್ಷೇತ್ರದಲ್ಲಿ ಎಸ್‌ಯುಸಿಐನಿಂದ ಕೆ ಸೋಮಶೇಖರ್ ಸ್ಪರ್ಧಿಸುತ್ತಿದ್ದು, ಅವರನ್ನು ಬೆಂಬಲಿಸಬೇಕು ಎಂದು ಪಕ್ಷದ ಮುಖಂಡರು ಮನವಿ ಮಾಡಿದ್ದಾರೆ.
ಯಾದಗಿರಿಯ ಯಡಗಿಮದ್ರಾ ಗ್ರಾಮದಲ್ಲಿ ಪಕ್ಷವು ಸಾರ್ವಜನಿಕ ಸಭೆಯನ್ನು ಹಮ್ಮಿಕೊಂಡಿತ್ತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪಕ್ಷದ ರಾಜ್ಯ ಸೆಕ್ರಟೇರಿಯೆಟ್ ಸದಸ್ಯ ವಿ.ಎನ್ ರಾಜಶೇಖರ್, “ಇದುವರೆಗೆ ರಾಜ್ಯವನ್ನಾಳಿದ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ – ಪಕ್ಷಗಳು ಯಾತ್ರೆಯ ಮೇಲೆ ಯಾತ್ರೆಗಳ ಮೂಲಕ ತಮ್ಮ ಕಾರ್ಯಕರ್ತರಲ್ಲಿ ಗೆಲುವಿನ ವಿಶ್ವಾಸ ಮೂಡಿಸಲು ಹಗಲಿರುಳು ಬೆವರು ಸುರಿಸುತ್ತಿವೆ” ಎಂದು ಲೇವಡಿ ಮಾಡಿದರು.
“ಅಧಿಕಾರದಲ್ಲಿರುವಾಗ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಒಳಜಗಳ, ಜನವಿರೋಧಿ ನೀತಿಗಳನ್ನು ಅನುಸರಿಸಿದ ಪ್ರಮುಖವಾಗಿ ಬಿಜೆಪಿ ಮಾತ್ರವಲ್ಲದೆ ಉಳಿದ ಎರಡು ಪಕ್ಷಗಳ ನಾಯಕರು ಸಹ ಈಗ ಜನರ ಮುಂದೆ ಅಧಿಕಾರಕ್ಕಾಗಿ ಪೈಪೋಟಿ ನಡೆಸುತ್ತಿದ್ದಾರೆ” ಎಂದರು.
“ಚುನಾವಣೆಯನ್ನೂ ಒಂದು ಹೋರಾಟದ ಕಣವಾಗಿ ಪರಿಗಣಿಸಿರುವ ಎಸ್‌ಯುಸಿಐ(ಸಿ) ಪಕ್ಷವು, ಮಿತಿ ಮೀರಿದ ಭ್ರಷ್ಟಾಚಾರ, ಬೆಲೆ ಏರಿಕೆ, ನಿರುದ್ಯೋಗ, ರೈತರ ಸಮಸ್ಯೆಗಳು, ಕಾರ್ಮಿಕರ ಹಕ್ಕುಗಳ ದಮನ, ದುಬಾರಿ ಶಿಕ್ಷಣ – ಆರೋಗ್ಯ, ನಗರಗಳಲ್ಲಿ ಮೂಲಸೌಕರ್ಯದ ಕೊರತೆ, ತೀವ್ರತರ ಆರ್ಥಿಕ ಅಸಮಾನತೆ ಇಂತಹ ಜ್ವಲಂತ ಸಮಸ್ಯೆಗಳ ವಿರುದ್ಧ ಹೋರಾಟ ಕಟ್ಟುತ್ತಾ ಬಂದಿದೆ. ಜನರ ಹಿತಕ್ಕಾಗಿ ಚುನಾವಣಾ ಕಣಕ್ಕಿಳಿದಿದೆ” ಎಂದು ತಿಳಿಸಿದರು.
ಯಾದಗಿರಿ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಕೆ ಸೋಮಶೇಖರ್ ಅವರು ಮಾರ್ಕ್ಸ್‌ವಾದಿ ಚಿಂತಕ ಶಿವದಾಸ್ ಘೋಷ್ ವಿಚಾರಗಳಿಗೆ ಆಕರ್ಷಿತರಾಗಿ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಜನತೆಯ ಧ್ವನಿಯನ್ನು ವಿಧಾನಸಭೆಯಲ್ಲಿ ಎತ್ತಿ ಹಿಡಿಯುವಂತಹ ನೈಜ ಅಭ್ಯರ್ಥಿಯಾಗಿದ್ದಾರೆ. ಹೋರಾಟಗಳ ಅಗ್ನಿಕುಂಡದಲ್ಲಿ ಹೊರಹೊಮ್ಮಿರುವ ಪಕ್ಷದ ಅಭ್ಯರ್ಥಿಯನ್ನು ಜನ ಗೆಲ್ಲಿಸಬೇಕು” ಎಂದು ಮನವಿ ಮಾಡಿದರು.
ಅಭ್ಯರ್ಥಿ ಕೆ ಸೋಮಶೇಖರ್ ಮಾತನಾಡಿ, “ಸಧ್ಯಕ್ಕೆ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರದ ದುರಾಡಳಿತ, ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಬಿಜೆಪಿಯ ಶಾಸಕರು, ಸಚಿವರು ಭ್ರಷ್ಟಾಚಾರದಲ್ಲಿ ಸಿಕ್ಕಿಹಾಕಿಕೊಂಡರೂ ಅವರೆಲ್ಲಾ ಕಾನೂನು ಮೀರಿದವರಾಗಿದ್ದಾರೆ. ತಮ್ಮ ದುಷ್ಕೃತ್ಯಗಳನ್ನು ಮರೆಮಾಚಲು ಬಿಜೆಪಿಯು ಪದೇಪದೆ ಕೋಮುವಾದಿ ವಿಭಜಕ ವಿಚಾರಗಳನ್ನು ಮುನ್ನೆಲೆಗೆ ತರುತ್ತಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಸಮಸ್ಯೆಗಳ ಆಗರವಾದ ತಾಯಿ-ಮಕ್ಕಳ ಸರ್ಕಾರಿ ಆಸ್ಪತ್ರೆ; ಪೋಷಕರ ನರಳಾಟ
ಜಿಲ್ಲಾ ಸಮಿತಿಯ ಸದಸ್ಯ ಶರಣಗೌಡ ಗೂಗಲ್ ಮಾತನಾಡಿ, “ಕೋವಿಡ್‌ನಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ಜನತೆ ಬೆಲೆ ಏರಿಕೆ, ನಿರುದ್ಯೋಗ, ಹಣದುಬ್ಬರ, ಶಿಕ್ಷಣ, ಆರೋಗ್ಯಗಳ ವ್ಯಾಪಾರೀಕರಣ, ಎಲ್ಲೆ ಮೀರಿದ ಭ್ರಷ್ಟಾಚಾರಗಳಿಂದ ನಲುಗಿ ಹೋಗಿದ್ದಾರೆ. ಕೇಂದ್ರ ಮತ್ತು ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರ ಜನರನ್ನು ಡಬಲ್ ಆಗಿ ದೋಚುತ್ತಿದೆ” ಎಂದು ಆರೋಪಿಸಿದರು.
ಹೋರಾಟದ ರಾಜಕೀಯವನ್ನು ಚುನಾವಣೆಗಳ ಸಂದರ್ಭದಲ್ಲೂ ಜನರ ಬಳಿಗೆ ಒಯ್ಯಲು ಎಸ್.ಯು.ಸಿ.ಐ. ಕಮ್ಯುನಿಸ್ಟ್ ಪಕ್ಷವು ಏಕಾಂಗಿಯಾಗಿ ಸ್ಪರ್ಧೆ ಮಾಡುತ್ತಿದೆ. ಹಾಗಾಗಿ ದುಡಿಯುವ ಜನತೆ, ರೈತರ, ವಿದ್ಯಾರ್ಥಿ, ಯುವಜನ, ಮಹಿಳೆಯರ ಪರ ಹೋರಾಟದ ದನಿಯನ್ನು ಶಾಸನ ಸಭೆಯಲ್ಲಿ ಎತ್ತಿ ಹಿಡಿಯುವ ಉದ್ದೇಶದಿಂದ ಸ್ಪರ್ಧೆಸುತ್ತಿರುವ ಎಸ್ ಯುಸಿಐ(ಸಿ)ಗೆ ಮತ ನೀಡಿ ಗೆಲ್ಲಿಸಬೇಕೆಂದು ಈ ಮೂಲಕ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಸಂಘಟನಾ ಸಮಿತಿ ಸದಸ್ಯರಾದ ಡಿ ಉಮಾದೇವಿ, ರಾಮಲಿಂಗಪ್ಪ ಬಿ. ಎನ್, ಜಮಾಲ್ ಸಾಬ್ ಹಾಗೂ ಸದಸ್ಯರಾದ ಸಿದ್ದಣ್ಣ ಗೂಗಲ್, ಶಿಲ್ಪಾ ಬಿ ಕೆ, ಸುಭಾಷ್ ಬಿ ಕೆ ಸೇರಿದಂತೆ ನೂರಾರು ಗ್ರಾಮಸ್ಥರು ಪಾಲ್ಗೊಂಡಿದ್ದರು.