ಈ ದಿನ ಸಂಪಾದಕೀಯ | ಒಂದು ದೇಶ ಒಂದು ಚುನಾವಣೆ- ಒಕ್ಕೂಟ ವ್ಯವಸ್ಥೆ ಧ್ವಂಸಕ್ಕೆ ಅಡಿಗಲ್ಲು

Date:

Advertisements
ಭಾರತ ಎಂದರೆ, ಹಲವು ಧರ್ಮಗಳ, ನೂರಾರು ಭಾಷೆಗಳ, ಸಾವಿರಾರು ಜಾತಿಗಳ, ಭಿನ್ನ ಆಚಾರ-ವಿಚಾರಗಳ, ವೈವಿಧ್ಯಮಯ ಬದುಕಿನ ದೇಶ. ಇದನ್ನೇ ಉಸಿರಾಗಿಸಿಕೊಂಡಿರುವ ನಾವು ಮೋದಿ - ಶಾಗಳ ಆಟಕ್ಕೆ ಬಗ್ಗದೆ, ರಾಜ್ಯಗಳ ಸ್ವಾಯತ್ತತೆ, ವಿಕೇಂದ್ರೀಕರಣ, ಪ್ರಾದೇಶೀಕರಣಗಳನ್ನು ಗಟ್ಟಿಗೊಳಿಸುವತ್ತ ಹೆಜ್ಜೆ ಹಾಕೋಣ. ಒಕ್ಕೂಟ ವ್ಯವಸ್ಥೆಯನ್ನು ಧ್ವಂಸಗೊಳಿಸುವ ವಿಚ್ಛಿದ್ರಕಾರಿಗಳ ಷಡ್ಯಂತ್ರವನ್ನು ಸೋಲಿಸೋಣ.

ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅಧ್ಯಕ್ಷತೆಯ ಉನ್ನತ ಮಟ್ಟದ ಸಮಿತಿಯು ಏಕಕಾಲಕ್ಕೆ ಚುನಾವಣೆ ನಡೆಸುವ ಸಂಬಂಧ ನೀಡಿದ ಶಿಫಾರಸುಗಳನ್ನು ಕೇಂದ್ರ ಸಚಿವ ಸಂಪುಟ ಅಂಗೀಕರಿಸಿದೆ.

ಅಂಗೀಕರಿಸಿದ ತಕ್ಷಣ ಕೇಂದ್ರ ಗೃಹ ಸಚಿವ ಅಮಿತ್ ಶಾ, ‘ಕೇಂದ್ರ ಸಂಪುಟದ ತೀರ್ಮಾನವು ದೇಶದಲ್ಲಿ ಚುನಾವಣಾ ವ್ಯವಸ್ಥೆಯ ಸುಧಾರಣೆಗೆ ದೈತ್ಯ ಹೆಜ್ಜೆ ಆಗಲಿದೆ’ ಎಂದು ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಬಿಜೆಪಿಯ ರಾಜಕೀಯ ತಂತ್ರಗಾರಿಕೆಯನ್ನು ಬಹಳ ಹತ್ತಿರದಿಂದ ಕಂಡಿರುವ ಹಿರಿಯ ರಾಜಕಾರಣಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಕೆಲವು ರಾಜ್ಯಗಳ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಜನರ ಗಮನ ಬೇರೆಡೆಗೆ ಸೆಳೆಯಲು ಕೇಂದ್ರ ಸರ್ಕಾರ ಈ ತಂತ್ರ ಹೂಡಿದೆ’ ಎಂದಿದ್ದಾರೆ.

ಇವೆರಡು ಪರ-ವಿರೋಧ ಅಭಿಪ್ರಾಯಗಳು ಆಯಾಯ ರಾಜಕೀಯ ಪಕ್ಷಗಳ ನಿಲುವು-ಧೋರಣೆಗಳನ್ನು ಹೇಳುತ್ತವೆ. ಹಾಗೆಯೇ ಉನ್ನತ ಮಟ್ಟದ ಸಮಿತಿಯಲ್ಲಿದ್ದ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿಗಳಲ್ಲಿ ಒಂಬತ್ತು ಮಂದಿ ಒಂದು ದೇಶ ಒಂದು ಚುನಾವಣೆಗೆ ಬೆಂಬಲ ನೀಡಿದರೆ, ಮೂವರು ಆಕ್ಷೇಪಣೆಯನ್ನು ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ‘ಭಾರತದ ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇದು ಭಿನ್ನ ದನಿ, ಮುನ್ನೆಲೆಗೆ ಬರಬೇಕಾದ್ದು, ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವಂಥಾದ್ದು.

Advertisements

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಬೇಕು ಎಂಬ ಪ್ರಸ್ತಾವದ ಬಗ್ಗೆ ಹಲವು ರಾಜ್ಯ ಸರ್ಕಾರಗಳು ಮತ್ತು ಪ್ರಾದೇಶಿಕ ಪಕ್ಷಗಳ ವಿರೋಧವಿದೆ. ಹಲವು ಪ್ರಾದೇಶಿಕ ಪಕ್ಷಗಳು ಈ ಬಗ್ಗೆ ಈಗಾಗಲೇ ತಮ್ಮ ವಿರೋಧವನ್ನು ದಾಖಲಿಸಿವೆ. ಏಕಕಾಲದಲ್ಲಿ ಚುನಾವಣೆ ನಡೆಸುವುದರಿಂದ ಚುನಾಯಿತ ಸರ್ಕಾರದ ಅವಧಿಯನ್ನು ಮೊಟಕುಗೊಳಿಸುತ್ತದೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷಕ್ಕೇ ಹೆಚ್ಚು ಅನುಕೂಲವಾಗುತ್ತದೆ. ಅಲ್ಲದೇ ಈ ವ್ಯವಸ್ಥೆಯು ರಾಷ್ಟ್ರಪತಿ ಆಳ್ವಿಕೆಯನ್ನು ಹೇರಲು ಪದೆ ಪದೇ ಅವಕಾಶ ಮಾಡಿಕೊಡುತ್ತದೆ. ಇದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂದು ಹಲವು ಪ್ರಾದೇಶಿಕ ಪಕ್ಷಗಳು ಪ್ರತಿರೋಧ ಒಡ್ಡಿವೆ. 

ಏಕಕಾಲದಲ್ಲಿ ಚುನಾವಣೆ ಎನ್ನುವುದು ಭಾರತಕ್ಕೆ ಹೊಸದೇನೂ ಅಲ್ಲ. ಕಾನೂನು ಆಯೋಗವು 1983ರಲ್ಲಿ ತನ್ನ ವಾರ್ಷಿಕ ವರದಿಯಲ್ಲಿ ಈ ಬಗ್ಗೆ ಉಲ್ಲೇಖಿಸಿತ್ತು. ‘ಏಕಕಾಲದಲ್ಲಿ ಚುನಾವಣೆ ನಡೆಯುವುದರಿಂದ ಚುನಾವಣಾ ವೆಚ್ಚದಲ್ಲಿ ಭಾರಿ ಇಳಿಕೆಯಾಗಲಿದೆ. ಸರ್ಕಾರಿ ನೌಕರರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜನೆ ಮಾಡುವುದು ಕಡಿಮೆಯಾಗುವ ಕಾರಣ, ಅವರ ಮುಖ್ಯ ಕರ್ತವ್ಯದಲ್ಲಿ ಉತ್ಪಾದಕತೆ ಹೆಚ್ಚಲಿದೆ. ರಾಜಕೀಯ ಪಕ್ಷಗಳೂ ಚುನಾವಣೆ ಬಿಟ್ಟು, ಆಡಳಿತದತ್ತ ಗಮನಕೊಡಲು ಸಾಧ್ಯವಾಗುತ್ತದೆ’ ಎಂದು ವಿವರಿಸಿತ್ತು. 1999ರಲ್ಲಿ, 2002ರಲ್ಲಿ ಹಾಗೂ 2018ರಲ್ಲಿ ಕಾನೂನು ಆಯೋಗವು ಮತ್ತೆ ಮತ್ತೆ ಈ ಬಗ್ಗೆ ಪ್ರಸ್ತಾಪಿಸಿತ್ತು. ಈ ಮಧ್ಯೆ 2015ರಲ್ಲಿ ಸಂಸದೀಯ ಸ್ಥಾಯಿ ಸಮಿತಿಯು ಏಕಕಾಲದಲ್ಲಿ ಚುನಾವಣೆಯ ಕಾರ್ಯಸಾಧ್ಯತೆಗಳ ಕುರಿತು ವರದಿಯನ್ನು ಸಿದ್ಧಪಡಿಸಿ, ಆಗುವ ಅನುಕೂಲ ಮತ್ತು ಎದುರಾಗುವ ತೊಡಕುಗಳತ್ತಲೂ ಗಮನ ಹರಿಸಿತ್ತು. 2017ರಲ್ಲಿ ನೀತಿ ಆಯೋಗವೂ ಇಂತಹ ಅಧ್ಯಯನ ನಡೆಸಿ, ಏಕಕಾಲದಲ್ಲಿ ಚುನಾವಣೆ ನಡೆಸುವುದರ ಪರವಾಗಿಯೇ ವರದಿ ನೀಡಿತ್ತು.

ಇದರ ಮುಂದುವರೆದ ಭಾಗವಾಗಿ, ಮೋದಿ ನೇತೃತ್ವದ ಕೇಂದ್ರ ಸರ್ಕಾರ 2024ರ ಲೋಕಸಭೆ ಚುನಾವಣೆಗೆ ಕೇವಲ ಎಂಟು ತಿಂಗಳ ಮುನ್ನ ತರಾತುರಿಯಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಿತು. ಆ ಸಮಿತಿಗೆ ತಮ್ಮ ಆದೇಶವನ್ನು ನಡುಬಗ್ಗಿಸಿ ಪಾಲಿಸುವವರನ್ನೇ ನೇಮಿಸಲಾಯಿತು. ಪ್ರಜ್ಞಾಪೂರ್ವಕವಾಗಿಯೇ ವಿರೋಧಪಕ್ಷಗಳನ್ನು ಹೊರಗಿಡಲಾಯಿತು. ಒಂದು ದೇಶ ಒಂದು ಚುನಾವಣೆ ಪ್ರಸ್ತಾಪದ ಹಿಂದಿನ ಉದ್ದೇಶ ರಾಜಕೀಯ ಸುಧಾರಣೆ ಎಂಬ ಕತೆ ಕಟ್ಟಲಾಯಿತು. ಆದರೆ ಅಲ್ಲಿ ಪ್ರಜಾಪ್ರಭುತ್ವದ ರೀತಿ-ನೀತಿಯೇ ಕಣ್ಮರೆಯಾಗಿತ್ತು.

ಇದನ್ನು ಓದಿದ್ದೀರಾ:? ಈ ದಿನ ಸಂಪಾದಕೀಯ | ಮೋಶಾ ಮಸಲತ್ತು- ಕೇಜ್ರೀವಾಲ್ ಸವಾಲು

ಹೊಸ ಚುನಾವಣಾ ವ್ಯವಸ್ಥೆ ಜಾರಿಗೆ ಬರಬೇಕಾದರೆ ಮೊದಲು ಪ್ರಜಾಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತರಬೇಕು. ಇದರ ಜೊತೆಗೆ ಸಂವಿಧಾನದ ಕನಿಷ್ಠ ಐದು ಪರಿಚ್ಛೇದಗಳಿಗೆ ತಿದ್ದುಪಡಿ ತರಬೇಕು. ಈಗಿನ ವ್ಯವಸ್ಥೆಯಲ್ಲಿ, ಆಳುವ ಎನ್‌ಡಿಎ ಸರ್ಕಾರಕ್ಕೆ ಸಂವಿಧಾನ ತಿದ್ದುಪಡಿಗೆ ಬೇಕಾದಷ್ಟು ಸದಸ್ಯರ ಸಂಖ್ಯೆಯ ಕೊರತೆ ಇದೆ. ಇದನ್ನು ಕಾರ್ಯರೂಪಕ್ಕೆ ತರುವುದು ಕಷ್ಟವಿದೆ. ಇವೆಲ್ಲವೂ ನರೇಂದ್ರ ಮೋದಿ ಅವರ ಸರ್ಕಾರಕ್ಕೆ ಗೊತ್ತಿದೆ. ಗೊತ್ತಿದ್ದೂ ದೇಶದ ಜನರಲ್ಲಿ ಗೊಂದಲ ಹುಟ್ಟುಹಾಕಲು, ಗಮನ ಬೇರೆಡೆಗೆ ಸೆಳೆಯಲು ಹಾಗೂ ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಒಂದು ದೇಶ ಒಂದು ಚುನಾವಣೆಯನ್ನು ಮುನ್ನೆಲೆಗೆ ತರಲಾಗಿದೆ.

ಅಷ್ಟಕ್ಕೂ ಲೋಕಸಭೆ ಮತ್ತು ವಿಧಾನಸಭೆಗಳಿಗೆ ಬೇರೆ ಬೇರೆ ಕಾಲದಲ್ಲಿ ಚುನಾವಣೆ ಆಗುವುದು ನಮ್ಮ ಸಾಂವಿಧಾನಿಕ ಅಡಿಪಾಯದ ಎರಡು ಮೂಲಭೂತ ತತ್ವಗಳಾದ ಸಂಸದೀಯ ಪ್ರಜಾಪ್ರಭುತ್ವ ಮತ್ತು ಒಕ್ಕೂಟ ವ್ಯವಸ್ಥೆಗೆ ಒತ್ತುಕೊಡುವಂಥದ್ದು. ಆ ಮೂಲಕ ದೇಶದ ಹಲವು ರಾಜ್ಯಗಳು, ಆ ರಾಜ್ಯಗಳ ಭಾಷೆ, ಸಂಸ್ಕೃತಿ, ವೈವಿಧ್ಯತೆ, ಪ್ರಾದೇಶಿಕತೆ, ಚುನಾವಣೆಯ ಹಬ್ಬದಲ್ಲಿ ಸಣ್ಣ ಪುಟ್ಟ ಪಕ್ಷಗಳು ಪಾಲ್ಗೊಳ್ಳುವ ಮೂಲಕ ಒಕ್ಕೂಟ ವ್ಯವಸ್ಥೆಗೆ ಬೆಲೆ ಬರುತ್ತಿತ್ತು, ಮತ್ತಷ್ಟು ಗಟ್ಟಿಗೊಳ್ಳುತ್ತಿತ್ತು. ಆದರೆ, ಈಗ ಪ್ರಾದೇಶಿಕ ಅಸ್ಮಿತೆಯನ್ನೇ ಅಳಿಸಿ; ಅಲ್ಲಿ ಒಂದು ದೇಶ ಒಂದೇ ಪಕ್ಷ, ಒಬ್ಬನೇ ನಾಯಕ ಎನ್ನುವುದನ್ನು ಬಲವಂತವಾಗಿ ಹೇರುವ, ಅನಿವಾರ್ಯವಾಗಿ ಒಪ್ಪಿಕೊಳ್ಳುವ ಸ್ಥಿತಿಗೆ ದೂಡಲಾಗುತ್ತಿದೆ. ಅದು ಪ್ರಜಾಪ್ರಭುತ್ವವನ್ನು ಮಣ್ಣು ಮಾಡುತ್ತದೆ. ಸರ್ವಾಧಿಕಾರಿಯನ್ನು ಪ್ರತಿಷ್ಠಾಪಿಸುತ್ತದೆ.

ಆರ್‍ಎಸ್ಎಸ್ ಮತ್ತು ಭಾರತೀಯ ಜನತಾ ಪಕ್ಷದ ಮೂಲ ಮಂತ್ರವೇ ಒಂದು ರಾಷ್ಟ್ರ, ಹಿಂದು ರಾಷ್ಟ್ರ, ಒಂದು ಪಕ್ಷ, ಒಬ್ಬನೇ ನಾಯಕ. ಇದನ್ನು ಮರೆಮಾಚಲು ಒಂದು ದೇಶ ಒಂದು ಚುನಾವಣೆಯ ಮೂಲಕ ಶುದ್ಧ ರಾಜಕಾರಣ, ಬಿಗಿ ಆಡಳಿತ, ಖರ್ಚು, ಉತ್ಪಾದನೆಯ ನೆಪ ಹೇಳುತ್ತಿದ್ದಾರೆ. ಅಷ್ಟಕ್ಕೂ ಭಾರತ ಎಂದರೆ, ಹಲವು ಧರ್ಮಗಳ, ನೂರಾರು ಭಾಷೆಗಳ, ಸಾವಿರಾರು ಜಾತಿಗಳ, ಭಿನ್ನ ಆಚಾರ-ವಿಚಾರಗಳ, ವೈವಿಧ್ಯಮಯ ಬದುಕಿನ ದೇಶ. ಇದನ್ನೇ ಉಸಿರಾಗಿಸಿಕೊಂಡಿರುವ ನಾವು ಮೋದಿ – ಶಾಗಳ ಆಟಕ್ಕೆ ಬಗ್ಗದೆ, ರಾಜ್ಯಗಳ ಸ್ವಾಯತ್ತತೆ, ವಿಕೇಂದ್ರೀಕರಣ, ಪ್ರಾದೇಶೀಕರಣಗಳನ್ನು ಗಟ್ಟಿಗೊಳಿಸುವತ್ತ ಹೆಜ್ಜೆ ಹಾಕೋಣ. ಒಕ್ಕೂಟ ವ್ಯವಸ್ಥೆಯನ್ನು ಧ್ವಂಸಗೊಳಿಸುವ ವಿಚ್ಛಿದ್ರಕಾರಿಗಳ ಷಡ್ಯಂತ್ರವನ್ನು ಸೋಲಿಸೋಣ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಅವಾಂತರಕಾರಿ ಆಸಿಮ್ ಮುನೀರ್ ಮತ್ತು ಮೌನಿ ಮೋದಿ

ವಿಶ್ವಗುರು ಭಾರತದ ಪ್ರಧಾನಿ ಮೋದಿಯವರು ಅಮೆರಿಕ ಮತ್ತು ಚೀನಾ ದೇಶಗಳಿಗೆ ಸೆಡ್ಡು...

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

Download Eedina App Android / iOS

X