ಹೊಸ ಓದು | ದುಃಖ ಆರದ ನೆಲದಲ್ಲಿ, ದಲಿತರ ಕರುಣೆಯಲ್ಲಿ… ಮರುಹುಟ್ಟುವ ದೇಶ

Date:

Advertisements
'ದುಃಖ ಆರದ ನೆಲದಲ್ಲಿ' ಪುಸ್ತಕದ ಒಂದೊಂದು ಲೇಖನವೂ ಒಂದೊಂದು ಕಥೆಯನ್ನು ಹೇಳುತ್ತವೆ. ಮುಟ್ಟಿಸಿಕೊಳ್ಳದವರೊಂದಿಗೆ ಮಾತಾಡುತ್ತವೆ. ಸಂಬಂಜ ಅನ್ನೋದು ದೊಡ್ಡದು ಕನಾ ಎನ್ನುತ್ತವೆ. ಆದರೆ ಕೇಳುವ ಕಿವಿಗಳೆಷ್ಟಿವೆ ಎಂಬುದನ್ನು ಕಾದು ನೋಡಬೇಕಿದೆ. 

ಹೋಮರನ ‘ಇಲಿಯಡ್’ ಮಹಾಕಾವ್ಯದಿಂದ ಪ್ರೇರಣೆ ಪಡೆದು ಚಿತ್ರಿಸಿದ ಸಿನೆಮಾ ‘ಟ್ರಾಯ್’. ಈ ಸಿನೆಮಾದಲ್ಲಿ ಟ್ರಾಯ್ ಮತ್ತು ಗ್ರೀಸ್ ನಡುವೆ ಯುದ್ಧ ಏರ್ಪಟ್ಟಿರುತ್ತದೆ. ಇದರಲ್ಲಿ ಟ್ರಾಯ್‌ನ ಮಹಾರಾಜ ಪ್ರಿಯಾಮ್‌ನ ಮಗ ‘ಹೆಕ್ಟರ್’, ಗ್ರೀಕ್ ವೀರಯೋಧ ‘ಅಕಿಲಿಸ್’ನ ತಮ್ಮನನ್ನು ಕೊಂದ ಕಾರಣಕ್ಕಾಗಿ ಕಾಳಗದಲ್ಲಿ ಅಕಿಲಿಸ್‌ನಿಂದ ಕೊಲ್ಲಲ್ಪಡುತ್ತಾನೆ. ಅಕಿಲಿಸ್ ಅಷ್ಟಕ್ಕೇ ಸಮಾಧಾನಗೊಳ್ಳದೆ ಹೆಕ್ಟರ್‌ನ ಶವವನ್ನು ಕುದುರೆರಥಕ್ಕೆ ಕಟ್ಟಿ ಎಳೆದೊಯ್ದು ಸೇನಾ ಬಿಡಾರದಲ್ಲಿರಿಸಿಕೊಳ್ಳುತ್ತಾನೆ. ಈ ಎಲ್ಲಾ ಸನ್ನಿವೇಶವನ್ನು ಕಣ್ಣಾರೆ ಕಂಡ ಮಹಾರಾಜ ಪ್ರಿಯಾಮ್, ಮಗನ ಅಂತಿಮ ಕ್ರಿಯೆಗಾಗಿ ಶವವನ್ನು ಟ್ರಾಯ್ ನಗರಕ್ಕೆ ಮರಳಿ ತರಲು ಶತ್ರು ಪಾಳಯದ ಯೋಧ ಅಕಿಲಿಸ್ ಬಿಡಾರಕ್ಕೆ ಮುಖಗವಸು ತೊಟ್ಟು ಆತನನ್ನು ಭೇಟಿಯಾಗುತ್ತಾನೆ. ಅಕಿಲಿಸ್‌ನ ‘ಎರಡೂ ಕೈಗಳಿಗೆ ಮುತ್ತಿಟ್ಟು’ ಈ ಕೆಳಗಿನ ಮಾತುಗಳನ್ನು ಆಡುತ್ತಾನೆ.

‘ನನಗಾಗಿರುವಷ್ಟು ನೋವು ಈ ಹಿಂದೆ ಇನ್ಯಾರಿಗೂ ಆಗಿರಲಿಕ್ಕಿಲ್ಲ. ನನ್ನ ಮಗನನ್ನು ಕೊಂದ ಮನುಷ್ಯನ ಕೈಗಳಿಗೆ ಈಗ ತಾನೆ ಮುತ್ತಿಕ್ಕಿದ್ದೇನೆ’.

ಈ ಮೇಲಿನ ಭಾವ ‘ದುಃಖ ಆರದ ನೆಲದಲ್ಲಿ’ ಕೃತಿಯನ್ನು ಓದುವ ಪ್ರತಿಯೊಬ್ಬರಿಗೂ ಪದೇ ಪದೇ ಅನುಭವಕ್ಕೆ ಬರುತ್ತದೆ. ಈ ಕೃತಿಯಲ್ಲಿನ ಪ್ರಿಯಾಮ್ ‘ಸುಬ್ಬು ಹೊಲೆಯಾರ್’. ಪ್ರಿಯಾಮ್‌ನಂತೆ ರಾಜ್ಯವಿಲ್ಲವಷ್ಟೆ. ಆದರೆ ಅಸ್ಪೃಶ್ಯತೆಯ ಕಾರಣಕ್ಕೆ ದಲಿತೇತರರು ದಲಿತರ ಮೇಲೆ ನಡೆಸುತ್ತಿರುವ ದೌರ್ಜನ್ಯಗಳಿಂದಾಗಿ ದಿನವೂ ಮಕ್ಕಳನ್ನು ಕಳೆದುಕೊಳ್ಳುತ್ತಲೇ ಇರುವುದನ್ನು ಕಂಡು ಸುಬ್ಬಣ್ಣ ಕನಲುತ್ತಿದ್ದಾರೆ. ಆಗುತ್ತಿರುವ ದೌರ್ಜನ್ಯಗಳು ಕೊನೆಯಾಗಬೇಕೆಂಬ ಆಶಯದಿಂದ ಈ ಲೇಖನಗಳ ಸಂಗ್ರಹದ ಮೂಲಕ ಮುಟ್ಟಿ ನೋಡಿಕೊಳ್ಳುವ ಪ್ರಶ್ನೆಗಳನ್ನು ಓದುಗರ ಮುಂದೆ ಇಟ್ಟಿದ್ದಾರೆ.

Advertisements

ಸುಬ್ಬಣ್ಣನದ್ದು ದಯಾಪರ ಮನಸ್ಸು. ಪ್ರತಿನಿತ್ಯ ಕಾಣುವ, ಕೇಳುವ, ಅನುಭವಿಸುವ ದೌರ್ಜನ್ಯ-ಕ್ರೌರ್ಯಕ್ಕೆ ತಣ್ಣಗೆ ಪ್ರತಿಕ್ರಿಯಿಸುವ ಸುಬ್ಬಣ್ಣ ಬಳಸುವ ಭಾಷೆಗೆ ಬಹಳ ತೂಕವಿರುತ್ತದೆ. ಕಣ್ತೇವದೊಂದಿಗೆ ಮೂಗು ಸವರಿಕೊಂಡು ಮಾತಿಗಿಳುವುದು ಅವರಿಗೆ ರೂಢಿಯಾಗಿದೆ. ಆಗಾಗ ನಮ್ಮಂತವರು ರೋಸಿ ಹೋಗಿ ರೇಗಿದ್ದೂ ಇದೆ. ಇಂತಹ ಸುಬ್ಬಣ್ಣನಿಗೆ ಸಿಟ್ಟು ಬಂದಿದೆ ಎಂದರೆ ಜಗದ ಕೌರ್ಯ ಹೆಚ್ಚಾಗಿದೆ ಎಂದೇ ಅರ್ಥ.

ಸುಬ್ಬಣ್ಣನ ಕಾವ್ಯ ಶಕ್ತಿ ಕನ್ನಡ ನಾಡಿಗೆ ಚಿರಪರಿಚಿತ. ‘ಸೂಜಿಗಾತ್ರದ ಕೊಳವೆಯಿಂದ ಮನುಷ್ಯನೊಬ್ಬನ ಹಾಡು’ ಕವನ ಸಂಕಲನದಲ್ಲಿ ಕಾಡಿದ ಜಾತಿವಾದ, ಅಸ್ಪೃಶ್ಯತೆಯೇ ಇಂದಿಗೂ ಅವರಿಗೆ ಕಾಡುತ್ತಿದೆ. ಏಕೆಂದರೆ ಜಗವು ಚಲಿಸಿದಂತೆ ಕಂಡರೂ ಮತ್ತಲ್ಲೇ ನಿಂತಿರುವ ಮೇಲ್ಜಾತಿ ಮನಸ್ಥಿತಿಗಳು ಅಲುಗಾಡಿದ್ದಾರೆಯೇ ಎಂಬ ಅನುಮಾನ ಅವರನ್ನು ತೀವ್ರವಾಗಿ ಕಾಡಿದೆ. ಅದಕ್ಕೆ ಸಾಕ್ಷಿಗಳೂ ಸಹ ಕಣ್ಣಿಗೆ ರಾಚುವಂತೆ ಸಿಗುತ್ತವೆ.

2012ರಲ್ಲಿ ಪ್ರತಿ 18 ನಿಮಿಷಗಳಿಗೆ ಒಂದರಂತೆ ದಲಿತರ ಮೇಲೆ ದೌರ್ಜನ್ಯವಾಗುತ್ತಿತ್ತು. ಪ್ರತಿ ದಿನ 3 ದಲಿತ ಮಹಿಳೆಯರ ಮೇಲೆ ಅತ್ಯಾಚಾರವಾಗುತ್ತಿತ್ತು. ದಿನಕ್ಕೊಂದು ದಲಿತರ ಹತ್ಯೆಯಾಗುತ್ತಿತ್ತು. 2021ರಷ್ಟೊತ್ತಿಗೆ ಪ್ರತಿ 6 ನಿಮಿಷಕ್ಕೊಂದು ದಲಿತರ ಮೇಲೆ ದೌರ್ಜನ್ಯವಾಗಿದೆ. ಪ್ರತಿ ದಿನ 14 ಅತ್ಯಾಚಾರ ನಡೆಯುತ್ತಿದೆ. ಅದರಲ್ಲಿ 4 ದಲಿತ ಮಕ್ಕಳನ್ನು ಮುಕ್ಕಿ ತಿಂದಿರುವುದಾಗಿದೆ. ಪ್ರತಿ ದಿನ 3 ದಲಿತರನ್ನು ಕೊಂದು ಮುಗಿಸುತ್ತಿದ್ದಾರೆ. ಇಂತಹ ನರಕಸದೃಶ ನೆಲದಲ್ಲಿ ಸುಬ್ಬಣ್ಣ ತಮ್ಮ ಜನರ ದುಃಖದ ಕಣ್ಣೀರು ಎಂದು ಆರುತ್ತದೋ ಎಂದು ತಬರನಂತೆ ಕನಸು ಕಾಣುತ್ತಿದ್ದಾರೆ. ಜೊತೆಗೆ ದುಃಖ ಆರುತ್ತದೆಯೇ ಎಂಬ ಪ್ರಶ್ನೆಯನ್ನೂ ಜಗದ ಮುಂದೆ ಇಟ್ಟಿದ್ದಾರೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಒಂದು ದೇಶ ಒಂದು ಚುನಾವಣೆ- ಒಕ್ಕೂಟ ವ್ಯವಸ್ಥೆ ಧ್ವಂಸಕ್ಕೆ ಅಡಿಗಲ್ಲು

ಇಲ್ಲಿನ ಲೇಖನಗಳು ಕಥೆಯಂತೆ ಸುಬ್ಬಣ್ಣನವರ ಬದುಕಿನ ಸುತ್ತ ಸುತ್ತುತ್ತವೆ. ಆ ಕಾರಣಕ್ಕೆ ಇದನ್ನು ಆತ್ಮಕತೆಯೆಂದೂ ಹೇಳಬಹುದು. ನೆನಪಿಡಿ, ಇದು ಒಂದೇ ಗುಕ್ಕಿಗೆ ಓದಿ ಮುಗಿಸುವ ಪುಸ್ತಕವಲ್ಲ. ಒಂದು ಲೇಖನ ಓದಿದ ನಂತರ ಸಮಯ ಬೇಕು, ಸಾವರಿಸಿಕೊಳ್ಳಲು. ಮತ್ತೊಂದು ಅಮಾನವೀಯ ಘಟನೆಗೆ ಎದುರಾಗಲು. ಹಾಗೆಂದು ಇಲ್ಲಿ ಕನಸಿಲ್ಲವೆಂದಲ್ಲ. ಕುಸಿದು ಕೆಳ ಕೂತಾಗಲೆಲ್ಲ ಕೈಹಿಡಿದೆತ್ತಲು ಬುದ್ಧ, ಬಸವಣ್ಣ, ಅಂಬೇಡ್ಕರ್, ಗಾಂಧಿ ಜತೆಗಿದ್ದಾರೆ ಮತ್ತು ಎಲ್ಲವನ್ನೂ ಸಾವರಿಸಿಕೊಂಡು ಪುಟಿದೇಳುವ ಸುಬ್ಬಣ್ಣನ ಅನುಭವದ ಮಾತುಗಳಿವೆ.

ಸುಬ್ಬಣ್ಣ ದಲಿತ ಸಂಘರ್ಷ ಸಮಿತಿಯ ಶಿಬಿರದಲ್ಲಿ ಪಾಲ್ಗೊಂಡ ದಿನದಿಂದ ಹಿಡಿದು ಇಂದಿನವರೆಗೂ ತಾವು ಅವಮಾನಕ್ಕೆ ಈಡಾದ ಮತ್ತು ತಮ್ಮ ಸುತ್ತಮುತ್ತ ತರತಮದ ಬದುಕನ್ನು ಎದುರಿಸುತ್ತಿರುವ ಬದುಕುಗಳ ಬೆಂಕಿಯ ಬೇಗುದಿಗೆ ನೀರು ಹರಿಸುವ ಕೆಲಸ ಮಾಡಿದ್ದಾರೆ. ಅಲ್ಲಲ್ಲಿ ಭೂಮಿಯಷ್ಟು ಭಾರವಾದ ನೋವಿದೆ. ಕೇರಿಯಷ್ಟು ಕರುಣೆಯ ತಾವಿದೆ. ಪ್ರವಾಹದಂತಹ ಸಿಟ್ಟೂ ಇದೆ.

ಯೌವನದ ದಿನಗಳಲ್ಲಿ ದಲಿತ ಸಂಘರ್ಷ ಸಮಿತಿಯ ಪ್ರೊ. ಬಿ.ಕೃಷ್ಣಪ್ಪನವರ ಹಾಗೂ ಚಂದ್ರಪ್ರಸಾದ್ ತ್ಯಾಗಿಯವರ ಪ್ರಭಾವಕ್ಕೆ ಒಳಗಾಗುವ ಸುಬ್ಬಣ್ಣ, ಅವರೇ ಹೇಳುವಂತೆ 80ರ ದಶಕದಲ್ಲಿ ದಸಂಸ ಶಿಬಿರದಿಂದ ಜಗತ್ತನ್ನು ನೋಡುವ ರೀತಿಯನ್ನು ಕಲಿತವರು. ಹಾಗಾಗಿ ದಲಿತ ಜೀತಗಾರನ ಹೆಣವನ್ನು ಕಡೆಯ ಬಾರಿ ನೋಡಲು ಬಂದ ಗೌಡ, ಹೆಣದ ತಲೆಗೆ ಒದ್ದು ಹೋಗುವುದರಿಂದ ಆರಂಭಿಸಿ ‘ಸದಾ ಎಚ್ಚರವಾಗಿರು, ಎಲ್ಲಾ ತಿಳಿಯುತ್ತದೆ’ ಎಂಬ ಬುದ್ಧಗುರುವಿನ ಮಾತಿನೊಂದಿಗೆ ಈ ಸಂಕಲನ ಕೊನೆಯಾಗುತ್ತದೆ. ಇಲ್ಲಿನ ಒಂದೊಂದು ಲೇಖನವೂ ಒಂದೊಂದು ಕಥೆಯನ್ನು ಹೇಳುತ್ತವೆ. ಮುಟ್ಟಿಸಿಕೊಳ್ಳದವರೊಂದಿಗೆ ಮಾತಾಡುತ್ತವೆ. ಸಂಬಂಜ ಅನ್ನೋದು ದೊಡ್ಡದು ಕನಾ ಎನ್ನುತ್ತವೆ. ಆದರೆ ಕೇಳುವ ಕಿವಿಗಳೆಷ್ಟಿವೆ ಎಂಬುದನ್ನು ಕಾದು ನೋಡಬೇಕಿದೆ. ಹಾಗೆಂದು ಜಡಗೊಂಡ ಸಮಾಜದೆದುರು ಸುಬ್ಬಣ್ಣ ನಿಂತಿಲ್ಲ, ಚಲಿಸುತ್ತಲೇ ಇದ್ದಾರೆ. ಚಲಿಸುವಂತೆ ಹೇಳುತ್ತಲೇ ಇದ್ದಾರೆ.

ಇಲ್ಲಿನ ಲೇಖನದಲ್ಲಿ ಹಿಂದೂ ನಾವೆಲ್ಲ ಒಂದೂ ಎನ್ನುವರ ಕಂಡರೆ ಬಹಳ ಕೋಪವಿದೆ. ಬಾಡಿಗೆ ಮನೆ ಕೊಡುವುದಿಲ್ಲ, ಕೊಟ್ಟರೂ ಮುಟ್ಟುವುದಿಲ್ಲ, ಮುಟ್ಟಿಸಿಕೊಳ್ಳುವುದಿಲ್ಲ, ನೂರಾರು ಕಂಡೀಶನ್ ಹಾಕದೆ ಒಳ ಬಿಡುವುದಿಲ್ಲ. ಹಾಗಿದ್ದರೂ ಛೇ ಪಾಪ! ಈ ರೋಗಕ್ಕೆ ಮದ್ದರೆವ ಡಾಕ್ಟರ್ ಇದ್ದಾರೆಯೇ ಎಂಬ ಕನಿಕರವಿದೆ.

ದೇವರು, ಧರ್ಮವನ್ನು ಪ್ರಾಣಿಗಳಂತೆ ಸಾಕಿಕೊಂಡವರು, ಅವರ ಉಪಯೋಗಕ್ಕೆ ನನ್ನಂತ ಕೆಳಜಾತಿಗಳನ್ನೂ ಸಾಕಿಕೊಂಡಿದ್ದರು ಎಂಬ ಎಚ್ಚರವಿದೆ. ಅದೇ ಜಾತಿಪದ್ಧತಿ ದಲಿತರನ್ನೂ ಒಡೆದು ಹಾಕಿರುವುದನ್ನು ಹಾಗೂ ಕಣ್ಮುಚ್ಚಿ ಅದನ್ನು ಪಾಲಿಸುವ ತನ್ನಪ್ಪನನ್ನು ಕಂಡರೆ ಸಿಟ್ಟಿದೆ.

‘ನನ್ನ ದೊಡ್ಡಯ್ಯ, ನಿನಗೆ ಹೆಡ್ಡಯ್ಯನೇ?’ ಎಂಬ ಲೇಖನವು ಕನ್ನಡ ಸಾಹಿತ್ಯ ಲೋಕದಲ್ಲಿ ‘ದಲಿತ ಕಾಳಜಿ’ ಕುರಿತ ಆರೋಗ್ಯಕರ ವಾಗ್ವಾದವನ್ನು ಸೂಕ್ಷ್ಮವಾಗಿ ತಿಳಿಸುತ್ತದೆ. ಇದರಲ್ಲಿ ಐನೋರಿಗೆ ಅಕ್ಕಿ ಕೊಟ್ಟು ಬಂದ ಚೀಲದ ಕತೆಯು ಲಂಕೇಶರ ‘ಉಲ್ಲಂಘನೆ’ ಕಥೆ ಹಿಂದಿನ ಕಾರಣವನ್ನೂ ತಿಳಿಸುತ್ತದೆ. ಅಗ್ನಿ ಶ್ರೀಧರ್ ಮತ್ತು ಚಂದ್ರಶೇಖರ ಪಾಟೀಲರಿಗೆ ಹಿಂದೆ ಬರೆದ ಎರಡು ಪತ್ರಗಳೂ ಸಹ ನಮ್ಮ ಗಮನ ಸೆಳೆಯುತ್ತವೆ. ಸರಿಯಾದ ಪ್ರಶ್ನೆ ಕೇಳೋಕೆ ಯಾರಾದರೇನಂತೆ ಎಂಬ ‘ಖಡಕ್’ ಗಟ್ಟಿತನ ಇಲ್ಲಿದೆ. ಅಷ್ಟೇ ಅಲ್ಲ ಇಂಗ್ಲಿಷ್ ಪಾಠವನ್ನೂ ಮಾಡಲಾಗಿದೆ. ಒಂದನೇ ತರಗತಿಯಿಂದ ಇಂಗ್ಲಿಷ್ ಕಲಿಸುವುದು ನಮ್ಮ ಮಕ್ಕಳಿಗೆ ಎಷ್ಟು ಮುಖ್ಯ ಎಂಬುದನ್ನೂ ತಿಳಿಸಲಾಗಿದೆ.

ಮುಖ್ಯಮಂತ್ರಿಯೊಬ್ಬರು ದಲಿತರ ಮನೆಯಲ್ಲಿ ವಾಸ್ತವ್ಯ ಹೂಡಿದ್ದು, ಸುಬ್ಬಣ್ಣನಿಗೆ ಅವಮಾನದಂತೆ ಕಂಡಿದೆ. ಇದು ದಲಿತರೊಳಗೆ ಎಚ್ಚೆತ್ತಿರುವ ಅಂಬೇಡ್ಕರ್ ಪ್ರಜ್ಞೆಯ ಪ್ರತೀಕವಾಗಿದೆ. ‘ದೇವರ ಮುಂದೆ ಸಮಾನರಾಗುವುದು ಪಕ್ಕಕ್ಕಿರಲಿ, ನಮಗೆ ಮನುಷ್ಯರ ಮುಂದೆ ಸಮಾನರಾಗುವುದು ಮುಖ್ಯ’ ಎಂಬ ಬಾಬಾಸಾಹೇಬ್ ಅಂಬೇಡ್ಕರ್ ಅವರ ಮಾತನ್ನು ಪ್ರತಿ ಲೇಖನವೂ ಕೂಗಿ ಹೇಳುತ್ತವೆ. ಈ ಕೆಳಗಿನ ಅಮೆರಿಕನ್ ಕಪ್ಪುಕ್ರಾಂತಿಕಾರಿ ಮಾಲ್ಕಮ್‌ ಎಕ್ಸ್ ಮಾತುಗಳನ್ನು ನೆನಪಿಸುತ್ತವೆ:

”ನಾವೆಲ್ಲರೂ ಇಲ್ಲಿ, ಈ ದೇಶದಲ್ಲಿ, ಬಿಳಿಯನಿಂದ ರಾಜಕೀಯ ದಬ್ಬಾಳಿಕೆ, ಬಿಳಿಯನಿಂದ ಆರ್ಥಿಕ ಶೋಷಣೆ ಮತ್ತು ಬಿಳಿಯನಿಂದ ಸಾಮಾಜಿಕ ಅವನತಿಯನ್ನು ಅನುಭವಿಸುತ್ತಿದ್ದೇವೆ. ಈ ರೀತಿ ಮಾತನಾಡುವುದರಿಂದ ನಾವು ಬಿಳಿಯರ ವಿರೋಧಿಗಳೆಂದು ಅರ್ಥವಲ್ಲ, ಬದಲಾಗಿ ನಾವು ಶೋಷಣೆಯ ವಿರೋಧಿಗಳು, ಅವನತಿಯ ವಿರೋಧಿಗಳು, ದಬ್ಬಾಳಿಕೆಯ ವಿರೋಧಿಗಳು ಎಂದರ್ಥ. ಹಾಗಾಗಿ ನಾವು ಬಿಳಿಯರ ವಿರೋಧಿಗಳಾಗಬಾರದೆಂದು ಬಿಳಿಯ ವ್ಯಕ್ತಿ ಬಯಸಿದರೆ, ಅವನು ನಮ್ಮ ಮೇಲೆ ದಬ್ಬಾಳಿಕೆ ಮಾಡುವುದನ್ನು, ಶೋಷಣೆ ಮಾಡುವುದನ್ನು ಹಾಗೂ ಕೀಳಾಗಿಸುವುದನ್ನು ನಿಲ್ಲಿಸಲಿ.”

ಇಲ್ಲಿ ‘ಬಿಳಿಯ’ನ ಜಾಗದಲ್ಲಿ ‘ಮೇಲ್ಜಾತಿ ಹಿಂದೂ’ ಸೇರಿಸಿಕೊಂಡರೆ ಭಾರತಕ್ಕೆ ಸಲೀಸಾಗಿ ಅನ್ವಯವಾಗುತ್ತದೆ. ‘ದುಃಖ ಆರದ ನೆಲದಲ್ಲಿ’ ಮೂಲಕ ದಲಿತೇತರರೊಂದಿಗೆ ಸಂವಾದಿಸುವ, ದಲಿತ ಚಳವಳಿ ಎದೆಯೊಳಗೆ ಹಚ್ಚಿಟ್ಟ ದೀಪದ ಬೆಳಕಿನಲ್ಲಿಯೇ ದಲಿತ ನಾಯಕರನ್ನೂ ಪ್ರಶ್ನಿಸುವ, ತನ್ನೊಳಗನ್ನೂ ಪ್ರಶ್ನಿಸಿಕೊಳ್ಳುವ ಸುಬ್ಬಣ್ಣ ಕನ್ನಡ ಜನತೆಗೆ ಮತ್ತೊಂದು ‘ಗಂಭೀರ’ ಪುಸ್ತಕವನ್ನು ನೀಡಿದ್ದಾರೆ.

ದುಃಖ ಆರದ ನೆಲದಲ್ಲಿ ಪುಸ್ತಕಕ್ಕಾಗಿ ಸಂಪರ್ಕಿಸಿ: 99720 89471

ಸುಬ್ಬು ಹೊಲೆಯಾರ್1
ವಿಕಾಸ್ ಮೌರ್ಯ
ವಿಕಾಸ್ ಮೌರ್ಯ
+ posts

ವಿಜ್ಞಾನ ಶಿಕ್ಷಕ, ಬರಹಗಾರ, ಹೋರಾಟಗಾರ. ದಲಿತ ಸೈದ್ಧಾಂತಿಕ ಪ್ರಜ್ಞೆಯನ್ನು ತನ್ನ ಬರಹ ಮತ್ತು ಹೋರಾಟದ ಮೂಲಕ ವಿಸ್ತರಿಸುತ್ತಿರುವವರು. ಲೇಖನಗಳ ಸಂಗ್ರಹ 'ಚಮ್ಮಟಿಕೆ', 'ನೀಲವ್ವ' ಎಂಬ ಕಥಾಸಂಕಲನ ಪ್ರಕಟ. ಆಫ್ರಿಕನ್ ಅಮೆರಿಕನ್ ಬರಹಗಾರ ಫೆಡರಿಕ್ ಡಾಗ್ಲಾಸ್ ನ ಆತ್ಮಕಥೆಯನ್ನು 'ಕಪ್ಪು ಕುಲುಮೆ' ಎಂಬ ಹೆಸರಿನಲ್ಲಿ ಕನ್ನಡೀಕರಿಸಿದ್ದಾರೆ. 'ಸಾವಿತ್ರಿ ಬಾಯಿ ಫುಲೆ ಮತ್ತು ನಾನು' ಎಂಬ ಅನುವಾದಿತ ಕೃತಿ ಹಾಗೂ ಎಲಿನಾರ್ ಝೆಲಿಯೇಟ್ ಅವರ 'Ambedkar's World: The making of Babasaheb Ambedkar and the Dalit movement' ಕೃತಿಯನ್ನು 'ಅಂಬೇಡ್ಕರ್ ಜಗತ್ತು' ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಿದ್ದು, ದಲಿತ ಸಂವೇದನೆಯನ್ನು ಅಕ್ಷರಮುಖಿ ನಿರ್ವಚನದ ಆಚೆಗೂ ಪಡಿಮೂಡಿಸುತ್ತಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ವಿಕಾಸ್ ಮೌರ್ಯ
ವಿಕಾಸ್ ಮೌರ್ಯ
ವಿಜ್ಞಾನ ಶಿಕ್ಷಕ, ಬರಹಗಾರ, ಹೋರಾಟಗಾರ. ದಲಿತ ಸೈದ್ಧಾಂತಿಕ ಪ್ರಜ್ಞೆಯನ್ನು ತನ್ನ ಬರಹ ಮತ್ತು ಹೋರಾಟದ ಮೂಲಕ ವಿಸ್ತರಿಸುತ್ತಿರುವವರು. ಲೇಖನಗಳ ಸಂಗ್ರಹ 'ಚಮ್ಮಟಿಕೆ', 'ನೀಲವ್ವ' ಎಂಬ ಕಥಾಸಂಕಲನ ಪ್ರಕಟ. ಆಫ್ರಿಕನ್ ಅಮೆರಿಕನ್ ಬರಹಗಾರ ಫೆಡರಿಕ್ ಡಾಗ್ಲಾಸ್ ನ ಆತ್ಮಕಥೆಯನ್ನು 'ಕಪ್ಪು ಕುಲುಮೆ' ಎಂಬ ಹೆಸರಿನಲ್ಲಿ ಕನ್ನಡೀಕರಿಸಿದ್ದಾರೆ. 'ಸಾವಿತ್ರಿ ಬಾಯಿ ಫುಲೆ ಮತ್ತು ನಾನು' ಎಂಬ ಅನುವಾದಿತ ಕೃತಿ ಹಾಗೂ ಎಲಿನಾರ್ ಝೆಲಿಯೇಟ್ ಅವರ 'Ambedkar's World: The making of Babasaheb Ambedkar and the Dalit movement' ಕೃತಿಯನ್ನು 'ಅಂಬೇಡ್ಕರ್ ಜಗತ್ತು' ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಿದ್ದು, ದಲಿತ ಸಂವೇದನೆಯನ್ನು ಅಕ್ಷರಮುಖಿ ನಿರ್ವಚನದ ಆಚೆಗೂ ಪಡಿಮೂಡಿಸುತ್ತಿದ್ದಾರೆ.

3 COMMENTS

  1. ಮಕ್ಕಳಿಗೆ ಒಂದನೇ ತರಗತಿಯಿಂದ ಇಂಗ್ಲೀಶ್ ಕಲಿಕೆ:
    ಮಕ್ಕಳ ಮೊದಲ ಕಲಿಕೆ ತಾಯಿನುಡಿ/ಪರಿಸರದ ನುಡಿಯಲ್ಲಾಗಬೇಕೆಂಬುದು ಎಲ್ಲಾ ಕಲಿಕೆಯರಿಗರ / ವಿಜ್ನಾನಿಗಳ ನಿಲುವು. ಇದನ್ನೂ ಕೇಳಿಯೂ ಒಂದನೇ ತರಗತಿಯಿಂದ ಇಂಗ್ಲೀಶಿನಲ್ಲಿ ಕಲಿಕೆ ಹಳ್ಳಿಗಾಡಿನ,ಬಡವರ ಮಕ್ಕಳ ಕಲಿಕೆಯನ್ನು ಕುಗ್ಗಿಸುತ್ತದೆ ಎಂಬ ದಿಟವನ್ನು ಮತ್ತೆ ನೆನೆಯಬೇಕಿದೆ.
    ಇಂಗ್ಲೀಶ್ ಪರಿಸರ/ಇಂಗ್ಲೀಶ್ ಕಲಿತ ತಾಯ್ತಂದೆಯರಿರುವ ಮಕ್ಕಳು ಒಂದನೇ ತರಗತಿಯಿಂದ ಇಂಗ್ಲೀಶ್ ಕಲಿಕೆಗೆ ಒಗ್ಗಬಹುದು.ಆದರೆ, ೯೦-೯೯ ಮಕ್ಕಳಿಗೆ ಇಂಗ್ಲೀಶಿನಲ್ಲಿ ಕಲಿಕೆ ಒಗ್ಗುವುದಿಲ್ಲ.ಬೇಕಾಗಿಯೂ ಇಲ್ಲ. ಈ ಬಗೆಗೆ Linguist Dr. D N Shakaraಬಟ್ ಆಳವಾಗಿ ಅರಿಕೆಮಾಡಿ ಬರೆದಿರುವ ಹೊತ್ತಗೆಗಳನ್ನು ಓದಬಹುದು.
    ಬರಹಗಾರರೇ ತಿಳಿಸಿರುವಂತೆ so called”ಮುಟ್ಟಬಾರದವರು” ಹಾಗು ಉಳಿದ ಬಡವರು ಈ ನಿಟ್ಟಿನಲ್ಲಿ ದಿಕ್ಕು ತಪ್ಪಬಾರದು.

  2. ಮಕ್ಕಳಿಗೆ ಒಂದನೇ ತರಗತಿಯಿಂದ ಇಂಗ್ಲೀಶ್ ಕಲಿಕೆ:
    ಮಕ್ಕಳ ಮೊದಲ ಕಲಿಕೆ ತಾಯಿನುಡಿ/ಪರಿಸರದ ನುಡಿಯಲ್ಲಾಗಬೇಕೆಂಬುದು ಎಲ್ಲಾ ಕಲಿಕೆಯರಿಗರ / ವಿಜ್ನಾನಿಗಳ ನಿಲುವು. ಇದನ್ನೂ ಕೇಳಿಯೂ ಒಂದನೇ ತರಗತಿಯಿಂದ ಇಂಗ್ಲೀಶಿನಲ್ಲಿ ಕಲಿಕೆ ಹಳ್ಳಿಗಾಡಿನ,ಬಡವರ ಮಕ್ಕಳ ಕಲಿಕೆಯನ್ನು ಕುಗ್ಗಿಸುತ್ತದೆ ಎಂಬ ದಿಟವನ್ನು ಮತ್ತೆ ನೆನೆಯಬೇಕಿದೆ.
    ಇಂಗ್ಲೀಶ್ ಪರಿಸರ/ಇಂಗ್ಲೀಶ್ ಕಲಿತ ತಾಯ್ತಂದೆಯರಿರುವ ಮಕ್ಕಳು ಒಂದನೇ ತರಗತಿಯಿಂವದ ಇಂಗ್ಲೀಶ್ ಕಲಿಕೆಗೆ ಒಗ್ಗಬಹುದು.ಆದರೆ, ೯೦-೯೯ ಮಕ್ಕಳಿಗೆ ಇಂಗ್ಲೀಶಿನಲ್ಲಿ ಕಲಿಕೆ ಒಗ್ಗುವುದಿಲ್ಲ.ಬೇಕಾಗಿಯೂ ಇಲ್ಲ. ಈ ಬಗೆಗೆ Linguist Dr. D N Shakaraಬಟ್ ಆಳವಾಗಿ ಅರಿಕೆಮಾಡಿ ಬರೆದಿರುವ ಹೊತ್ತಗೆಗಳನ್ನು ಓದಬಹುದು.
    ಬರಹಗಾರರೇ ತಿಳಿಸಿರುವಂತೆ so called”ಮುಟ್ಟಬಾರದವರು” ಹಾಗು ಉಳಿದ ಬಡವರು ಈ ನಿಟ್ಟಿನಲ್ಲಿ ದಿಕ್ಕು ತಪ್ಪಬಾರದು.

  3. ತಮ್ಮ ತಾಯಿನುಡಿಯಲ್ಲಿ ಕಲಿಕೆ ಕಟ್ಟಿಕೊಂಡಿರುವ ಕೊರಿಯಾ,ಜಪಾನ್,ಪ್ರಾನ್ಸ್ ಮುಂತಾದ ನಾಡುಗಳು ಚೆನ್ನಾಗಿ ಏಳಿಗೆ ಕಂಡಿರುವಾಗ, ತಾಯಿನುಡಿ ಹೊರತಾದ ನುಡಿಯಲ್ಲಿ ಕಲಿಕೆ ಕಟ್ಟುತ್ತಿರುವ ಬಾರತ,ಆಪ್ರಿಕಾದ ನಾಡುಗಳು ಕಲಿಕೆಯಲ್ಲಿ ಮುಗ್ಗರಿಸಿರುವುದನ್ನು ಕಂಡೂ ಮತ್ತೆ ತಾಯಿನುಡಿ ಕಲಿಕೆಯನ್ನು ಕಡೆಗಣಿಸುವುದು ಸರಿಯಲ್ಲ.
    ನಮ್ಮಲ್ಲಿ ಕನ್ನಡದ ಹೆದರಲ್ಲಿ ಸಂಸ್ಕೃತ ಪದಗಳ ಹೊರೆಯಿಂದ ಸಿಕ್ಕಲಾಗಿರುವ ಕನ್ನಡವನ್ನು ಕಲಿಕೆಯಲ್ಲಿ ಬಳಸುತ್ತಿರುವುದರಿಂದ ಆಗುತ್ತಿರುವ ತೊಂದರೆಯನ್ನು ಈ ಬಗೆಗೆ ಶಂಕರಬಟ್ಟರ ಒರೆತಗಳನ್ನು ಓದಬೇಕೆನ್ನುವುದು ನನ್ನ ನಿಲುವು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X