ಕೊಪ್ಪಳ ಜಿಲ್ಲೆಯಲ್ಲಿ ಅಂತರ್ಜಾತಿ ವಿವಾಹವಾಗಿದ್ದ ಯುವತಿಗೆ ವಿಷವುಣಿಸಿ ಕೊಲೆ ಮಾಡಿದ ಪ್ರಕರಣವನ್ನು ಖಂಡಿಸಿ ವಿಠಲಾಪುರ ಚಲೋ ಜಾಥಾವು ಕರ್ನಾಟಕ ಜನಶಕ್ತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ನಡೆಯಿತು.
ವಿಠಲಾಪುರ ಗ್ರಾಮದಿಂದ ಗಂಗಾವತಿ ನಗರದ ಡಿವೈಎಸ್‌ಪಿ ಕಚೇರಿಗೆ ತೆರಳಿದ ಪ್ರತಿಭಟನಾಕಾರರು, ಡಿವೈ ಎಸ್ ಪಿ ಸಿದ್ಧಲಿಂಗಪ್ಪ ಗೌಡ ಅವರಿಗೆ ಹಕ್ಕೊತ್ತಾಯ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ದಲಿತ ಮುಖಂಡ ಕರಿಯಪ್ಪ ಗುಡಿಮನಿ, “ಪ್ರೀತಿಸಿ ,ನಂಬಿಸಿ ವಿವಾಹವಾಗಿ ಆಕೆಯನ್ನು ಮಾದಿಗ ಜಾತಿ ಸೇರಿದ ಕಾರಣಕ್ಕೆ ವಿಷವುಣಿಸಿ ಹತ್ಯೆ ಮಾಡಲಾಗಿದೆ ಎಂದರೆ ಬೇಸರದ ಸಂಗತಿ. ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಪದೇ ಪದೇ ಬೆಳಕಿಗೆ ಬರುತ್ತಿದೆ ಹಾಗೂ ದಿನನಿತ್ಯ ಹೆಚ್ಚಾಗುತ್ತಿವೆ. ಇದಕ್ಕೆ ಕಡಿವಾಣ ಹಾಕುವುದಕ್ಕೆ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿರ್ಲಕ್ಷ್ಯವೇ ಕಾರಣ” ಎಂದು ಹೇಳಿದರು.

ಘಟನೆಗೆ ಸಂಬಂಧಿಸಿದಂತೆ ಯುವತಿ ಕುಟುಂಬಸ್ಥರು ಕನಕಗಿರಿ ಪೊಲೀಸ್ ಠಾಣೆಗೆ ದೂರು ಕೊಡಲು ಹೋದರೆ ಕೇಸ್ ತೆಗೆದುಕೊಳ್ಳದೆ ಸತಾಯಿಸಿ, ಹಿಂದೇಟು ಹಾಕಿದ್ದಾರೆ. ಠಾಣೆಯಲ್ಲಿ ಪಾಳೆಗಾರಿಕೆ ಆಳ್ವಿಕೆ ನಡೆಯುತ್ತಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳಬೇಕು ಎಂದರು.
ಜಾಥಾವನ್ನುದ್ದೇಶಿಸಿ ಮಾತನಾಡಿದ ವಕೀಲರಾದ ಹುಸೇನಪ್ಪ ಹಂಚಿನಾಳ, “ಜಿಲ್ಲೆಯ ಪ್ರತಿ ಹೋಟೆಲ್‌ಗಳಲ್ಲಿ, ದೇವಸ್ಥಾನಗಳಲ್ಲಿ ಹಾಗೂ ಇನ್ನಿತರ ಸ್ಥಳಗಳಲ್ಲಿ ಜಾತಿ ತಾರತಮ್ಯ ಮಾಡಬಾರದು ಎಂದು ಸೂಚನೆಗಳು ಹಾಕಬೇಕು. ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ಇಲಾಖೆ ಇಂತಹ ಘಟನೆಗಳು ಸಂಭವಿಸಿದರೆ ಅದನ್ನು ಸರಿಯಾಗಿ ವಿಚಾರಣೆ ನಡೆಸುತ್ತಿಲ್ಲ ಹಾಗೂ ಜಾಗೃತಿ ಮೂಡಿಸುವುದಕ್ಕೆ ಮುಂದಾಗುತ್ತಿಲ್ಲ. ಜಿಲ್ಲೆಯನ್ನು ದೌರ್ಜನ್ಯ ಪೀಡಿತ ಜಿಲ್ಲೆ ಎಂದು ಸರಕಾರ ಘೋಷಣೆ ಮಾಡಿ, ಪರಿಹಾರ ಒದಗಿಸಬೇಕು ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ದಾವಣಗೆರೆ | ಮರಳಿನ ವಿಚಾರಕ್ಕೆ ಎರಡು ಗ್ರಾಮಸ್ಥರ ನಡುವೆ ಘರ್ಷಣೆ: ಚಾಕು ಇರಿತಕ್ಕೊಳಗಾಗಿದ್ದ ಓರ್ವ ಮೃತ್ಯು
ಜಾಥಾದಲ್ಲಿ ಕರ್ನಾಟಕ ಜನಶಕ್ತಿ ಮುಖಂಡ ಕುಮಾರ್ ಸಮತಳ, ಕೆವಿಎಸ್ ಮುಖಂಡ ದುರುಗೇಶ್ ಬರಗೂರು , ಹಿರಿಯ ಸಾಹಿತಿ ಅಲ್ಲಮ ಪ್ರಭು ಬೆಟ್ಟದೂರು, ಟಿ ರತ್ನಾಕರ, ಶ್ರೀನಾಥ ಪೂಜಾರಿ, ಶುಕ್ರರಾಜ, ಸಿರಾಜ್ ಸಿದ್ದಾಪುರ, ಮಾರೆಪ್ಪ ಹರವಿ, ಎಂ ಆರ್ ಭೇರಿ, ಗುರುಬಸವ ಇನ್ನಿತರರು ಹಾಜರಿದ್ದರು.
