ಎಚ್‌ಡಿಕೆ -ಯಡಿಯೂರಪ್ಪ ಜಂಟಿ ಹಗರಣ | ಕುಮಾರಸ್ವಾಮಿ ರಾಜೀನಾಮೆಗೆ ಸಚಿವರ ಒತ್ತಾಯ

Date:

Advertisements

ಬೆಂಗಳೂರು ಗಂಗೇನಹಳ್ಳಿ ಬಡಾವಣೆ ಸರ್ವೇ ನಂಬರ್ 7/1ಬಿ, 7/1 ಸಿ ಮತ್ತು 7/1 ಡಿ ರಲ್ಲಿನ 1 ಎಕರೆ 11 ಗುಂಟೆ ಸರ್ಕಾರಿ ಜಮೀನನ್ನು ಮಾಜಿ ಸಿಎಂಗಳಾದ ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಜಂಟಿಯಾಗಿ ಮೃತಪಟ್ಟವರ ಹೆಸರಲ್ಲಿ ಡಿನೋಟಿಫೈ ಮಾಡಿ ಕುಮಾರಸ್ವಾಮಿ ಅವರ ಬಾಮೈದುನನ ಹೆಸರಲ್ಲಿ ನೋಂದಣಿ ಮಾಡಿದ್ದಾರೆ. ಈ ಮೂಲಕ ಸಾರ್ವಜನಿಕರ ಸ್ವತ್ತನ್ನು ಅಕ್ರಮವಾಗಿ, ವ್ಯವಸ್ಥಿತವಾಗಿ ಲೂಟಿ ಮಾಡಿದ್ದಾರೆ. ನಾವು ದಾಖಲೆ ಸಹಿತ ಆರೋಪ ಮಾಡುತ್ತಿದ್ದೇವೆ. ಕುಮಾರಸ್ವಾಮಿ ಅವರು ಇದಕ್ಕೆ ಸ್ಪಷ್ಟನೆ ನೀಡಬೇಕು. ತಾವು ಮಾಡಿದ್ದು ಸಕ್ರಮವೋ ಅಕ್ರಮವೋ ಎಂಬುದನ್ನು ರಾಜ್ಯದ ಜನರಿಗೆ ತಿಳಿಸಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಒತ್ತಾಯಿಸಿದರು.

ಈ ದಿನ.ಕಾಮ್‌ ತನಿಖಾ ವರದಿ ಆಧರಿಸಿ ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಸಚಿವರಾದ ದಿನೇಶ್‌ ಗುಂಡೂರಾವ್‌ ಮತ್ತು ಸಂತೋಷ್‌ ಲಾಡ್‌ ಜೊತೆ ಪತ್ರಿಕಾಗೋಷ್ಠಿ ನಡೆಸಿ ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಇಬ್ಬರ ಭೂ ಹಗರಣದ ದಾಖಲೆ ಬಿಡುಗಡೆ ಮಾಡಿ ಅವರು ಮಾತನಾಡಿದರು.

“ಬೆಂಗಳೂರು ಗಂಗೇನಹಳ್ಳಿ ಗ್ರಾಮದ ಸರ್ವೇ ನಂಬರ್ 7/1ಬಿ, 7/1 ಸಿ ಮತ್ತು 7/1 ಡಿ ರಲ್ಲಿನ 1 ಎಕರೆ 11 ಗುಂಟೆ ಜಮೀನನ್ನು ಬಡಾವಣೆ ನಿರ್ಮಾಣಕ್ಕಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) 1976 ರಲ್ಲೇ ಭೂ ಸ್ವಾಧೀನ ಮಾಡಿಕೊಂಡಿದೆ. 1976 ರಲ್ಲಿ ಆರಂಭವಾದ ಭೂ ಸ್ವಾಧೀನ ಪ್ರಕ್ರಿಯೆ 1978ರಲ್ಲಿ ಮುಗಿದಿದೆ. ಆದರೆ, ಹೆಚ್.ಡಿ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ತನಗೆ ಸಂಬಂಧವೇ ಇಲ್ಲದ ಈ ಪ್ರಕರಣದಲ್ಲಿ ಅತ್ಯುತ್ಸಾಹ ತೋರಿದ್ದು ಏಕೆ” ಎಂದು ಕಟುವಾಗಿ ಪ್ರಶ್ನಿಸಿದರು.

Advertisements

“ಜಮೀನಿನ ವಾರಸುದಾರರಿಗೆ ಸಂಬಂಧವೇ ಇಲ್ಲದ ಯಾರೋ ಬೇನಾಮಿ ವ್ಯಕ್ತಿ ರಾಜಶೇಖರಯ್ಯ ಎಂಬವರು 1978ರಲ್ಲಿ ಭೂ ಸ್ವಾಧೀನಗೊಂಡ ಜಮೀನಿಗೆ ಡಿನೋಟಿಫೈ ಮಾಡಲು 2007ರಲ್ಲಿ ಸಿಎಂ ಕುಮಾರಸ್ವಾಮಿಯವರಿಗೆ ಅರ್ಜಿ ಹಾಕಿದ್ದಾರೆ. ಅಸಲಿಗೆ ರಾಜಶೇಖರಯ್ಯನಿಗೂ ಜಮೀನಿಗೂ ಸಂಬಂಧವೇ ಇಲ್ಲ. ಈತ ಯಾರು ಅಂತ ಈವರೆಗೆ ಗೊತ್ತಿಲ್ಲ. ಆದರೆ, ಈ ಅರ್ಜಿ ಬಂದ ಕೂಡಲೇ ಕುಮಾರಸ್ವಾಮಿಯವರು ಅದೇ ದಿನ ಅಧಿಕಾರಿಗಳಿಗೆ ಪತ್ರ ಬರೆದು ಈ ಅರ್ಜಿ ಮೇಲೆ ಕ್ರಮ ಕೈಗೊಳ್ಳಲು ಸೂಚಿಸುತ್ತಾರೆ. ಆದರೆ, ಅಧಿಕಾರಿಗಳು “1976ರಲ್ಲಿ ಆರಂಭಗೊಂಡ ಈ ಜಮೀನಿನ ಭೂ ಸ್ವಾಧೀನ ಪ್ರಕ್ರಿಯೆ 1978ರಲ್ಲಿ ಮುಗಿದಿದೆ. ಹೀಗಾಗಿ ಭೂಸ್ವಾಧೀನ ಮಾಡಲು ಬರಲ್ಲ” ಎಂದು ಸ್ಪಷ್ಟವಾಗಿ ಉತ್ತರಿಸಿದ್ದರು. ಆದರೂ, ಈ ವಿಚಾರವನ್ನು ಕೈಬಿಡದ ಕುಮಾರಸ್ವಾಮಿಯವರು “ಈ ಬಗ್ಗೆ ಮತ್ತೊಮ್ಮೆ ಚರ್ಚಿಸಿ ಕಾನೂನು ಪ್ರಕಾರ ಕ್ರಮ ವಹಿಸಿ” ಎಂದು ಅಧಿಕಾರಿಗಳಿಗೆ ಸೂಚಿಸಿದ್ದು ಏಕೆ? ಇದೇ ಸಂದರ್ಭದಲ್ಲಿ ಈ ಜಮೀನಿನ ಅಸಲಿ ಮಾಲೀಕರಾದ 21 ಜನರ ಜೊತೆ ಕುಮಾರಸ್ವಾಮಿಯವರ ಅತ್ತೆಯವರು ಜಿಪಿಎ (general power of attorney)ಮಾಡಿಕೊಳ್ತಾರೆ. ಇದಾದ ಮೇಲೆ ಅಧಿಕಾರ ಹೊಂದಾಣಿಕೆ ಸಮಸ್ಯೆಯಿಂದ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ಉರುಳಿ ಕುಮಾರಸ್ವಾಮಿ ರಾಜೀನಾಮೆ ನೀಡ್ತಾರೆ. ಆನಂತರ ಯಡಿಯೂರಪ್ಪನವರು ಸಿಎಂ ಆಗ್ತಾರೆ. ಆದರೆ, ಅಲ್ಲಿಯವರೆಗೆ ಹಾವು ಮುಂಗಸಿಯಂತೆ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದರೂ ಸಹ ಇದೇ ಅರ್ಜಿ ಮೇಲೆ ಕ್ರಮವಹಿಸಲು ಯಡಿಯೂರಪ್ಪನವರು ಅಧಿಕಾರಿಗಳಿಗೆ ಸೂಚಿಸಿದ್ದು ಏಕೆ” ಎಂದೂ ಸಚಿವ ಕೃಷ್ಣ ಬೈರೇಗೌಡ ಅವರು ಪ್ರಶ್ನಿಸಿದರು.

ಅಂದಿನ ಸಿಎಂ ಯಡಿಯೂರಪ್ಪನವರ ಸೂಚನೆಗೆ ಸ್ಪಷ್ಟವಾಗಿ ಉತ್ತರಿಸಿದ್ದ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ಜ್ಯೋತಿರಾಮಲಿಂಗಂ “ಗಂಗೇನಹಳ್ಳಿ ಬಡಾವಣೆಯ ಸರ್ವೇ ನಂಬರ್ 7/1ಬಿ, 7/1 ಸಿ ಮತ್ತು 7/1 ಡಿ ರಲ್ಲಿನ 1 ಎಕರೆ 11 ಗುಂಟೆ ಜಮೀನನ್ನು16/2 ಅನ್ವಯ ಈಗಾಗಲೇ ಭೂ ಸ್ವಾಧೀನ ಮಾಡಿಕೊಳ್ಳಲಾಗಿದೆ. ಹೀಗಾಗಿ ಡಿನೋಟಿಫೈ ಮಾಡಲು ಸಾಧ್ಯವಿಲ್ಲ” ಎಂದು ಬರೆದಿದ್ದರು. ಆದರೆ, ಯಡಿಯೂರಪ್ಪನವರು ಪ್ರಧಾನ ಕಾರ್ಯದರ್ಶಿಗಳ ಅಭಿಪ್ರಾಯ ಗಾಳಿಗೆ ತೂರಿ ಸಂಬಂಧಿತ ಫೈಲ್ ಮೇಲೆ ಭೂಸ್ವಾಧೀನ ಕೈಬಿಡಲು ಆದೇಶಿಸಿದೆ ಎಂದು ಬರೆದಿದ್ದಾರೆ. 1978 ರಲ್ಲಿ ಭೂ ಸ್ವಾಧೀನ ಆಗಿರುವ ಜಮೀನಿಗೆ 2009-10 ರಲ್ಲಿ ಡಿನೋಟಿಫೈ ಮಾಡಿದ್ದಾರೆ” ಎಂದು ದಾಖಲೆಗಳ ಸಮೇತ ಅವರು ಆರೋಪಿಸಿದರು.

“ಇದು ಕಾಕತಾಳೀಯ ಅಂತಿರೋ ವ್ಯವಸ್ಥಿತ, ಪ್ರಾಯೋಜಿತ ಆಲೋಚಿತ ಅಕ್ರಮ ಅಂತಿರೋ ದರೋಡೆ ಅಂತಿರೋ, ಒಟ್ಟಾರೆ 1 ಎಕರೆ 11 ಗುಂಟೆ ಜಮೀನನ್ನು ಯಡಿಯೂರಪ್ಪ ಅವರನ್ನು ಉಪಯೋಗಿಸಿಕೊಂಡು ಡಿನೋಟಿಫೈ ಮಾಡಿಕೊಳ್ಳಲಾಗುತ್ತೆ. ಯಾರ ಜಮೀನಿಗೆ ಡಿನೋಟಿಫೈ ಆಗಿತ್ತು ಆತ ಸತ್ತೇ ಹೋಗಿದ್ದ, ಮೃತಪಟ್ಟವನ ಹೆಸರಿಗೆ ಡಿನೋಟಿಫೈ ಮಾಡಿದ್ದಾರೆ. ಸತ್ತು ಹೋದವನಿಂದ ಕುಮಾರಸ್ವಾಮಿಯವರ ಅತ್ತೆ ಹೆಸರಿಗೆ ಜಿಪಿಎ (general power of attorney) ಮಾಡಲಾಗಿದೆ. ಅವರಿಂದ ಕುಮಾರಸ್ವಾಮಿ ಅವರ ಬಾಮೈದನಿಗೆ ನೋಂದಣಿ ಮಾಡಿಕೊಡಲಾಗಿದೆ. ನೂರಾರು ಕೋಟಿ ಮೌಲ್ಯ ಇರುವ ಬಡವರಿಗೆ ನಿವೇಶನಗಳನ್ನು ಕಲ್ಪಿಸಬೇಕಾದ ಸ್ವತ್ತು, ಸರ್ಕಾರ ಭೂ ಸ್ವಾಧೀನ ಮಾಡಿ ಮುಗಿಸಿದ್ದ ಜಮೀನು ಹೀಗೆ ಅಕ್ರಮವಾಗಿ ಇಬ್ಬರು ಮಾಜಿ ಸಿಎಂಗಳ ಜಂಟಿ ಕಾರ್ಯಾಚರಣೆಯಿಂದ ಕಬಳಿಕೆಯಾಗಿದೆ.

ಸರ್ಕಾರದ ಆದೇಶದ ಪ್ರತಿಯ ಮೇಲೆ ಅಂದಿನ ಸಿಎಂ ಯಡಿಯೂರಪ್ಪ ಅವರ ಕೈ ಬರಹ ಸ್ಪಷ್ಟವಾಗಿದೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಆದೇಶಿಸಿದ್ದನ್ನು ಯಡಿಯೂರಪ್ಪ ಡಿನೋಟಿಫೈ ಮಾಡಿದ್ದಾರೆ. ಜಮೀನು ಕುಮಾರಸ್ವಾಮಿ ಅವರ ಬಾಮೈದುನನ ಪಾಲಾಗಿದೆ. ಈ ಇಬ್ಬರೂ ಸೇರಿ ಬಡವರ ಆಸ್ತಿ ಲಪಟಾಯಿಸಿರುವುದು ಕರ್ನಾಟಕದ ಜನರಿಗೆ ಮಾಡಿದ ಅನ್ಯಾಯ, ಮೋಸ ಅಲ್ವೇ? ಇದು ವ್ಯವಸ್ಥಿತ ವಂಚನೆ ಹೌದಾ ಅಲ್ವಾ? ಇದು ಸಾರ್ವಜನಿಕರ ಸ್ವತ್ತನ್ನು ವ್ಯವಸ್ಥಿತವಾಗಿ ಲೂಟಿ ಮಾಡಿರುವ ಪ್ರಕರಣ” ಎಂದರು.

ಈ ಹಗರಣ 2007-10ರಲ್ಲಿ ನಡೆದಿದೆ. 2013ರಿಂದ ಕಾಂಗ್ರೆಸ್‌ ಸರ್ಕಾರ ಇತ್ತು. 2015ರಲ್ಲಿ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. 2018ರವರೆಗೂ ಕಾಂಗ್ರೆಸ್‌ ಸರ್ಕಾರ ಯಾವುದೇ ಕ್ರಮ ಜರುಗಿಸಿಲ್ಲ. ನಾಲ್ಕು ವರ್ಷ ವಿರೋಧ ಪಕ್ಷದಲ್ಲಿದ್ದಾಗಲೂ ಈ ಹಗರಣದ ಬಗ್ಗೆ ಮಾತಾಡಿಲ್ಲ. ಈಗಲಾದರೂ ಈ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೀರಾ ಎಂಬ ಈ ದಿನ.ಕಾಮ್ ಪ್ರಶ್ನೆಗೆ ಉತ್ತರಿಸಿದ ಅವರು, “ಈ ಪ್ರಕರಣದ ವಿರುದ್ಧ ಲೋಕಾಯುಕ್ತ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಪ್ರಕರಣವನ್ನು ವಜಾ ಮಾಡುವಂತೆ ಯಡಿಯೂರಪ್ಪನವರು ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್‌ನಲ್ಲಿ ಅಪೀಲು ವಜಾ ಆಗಿ 25,000 ರೂಪಾಯಿ ದಂಡ ಹಾಕಿದ್ದಾರೆ. ಹೀಗಾಗಿ ಲೋಕಾಯುಕ್ತ ತಕ್ಷಣ ಈ ಪ್ರಕರಣದ ತನಿಖೆ ಪೂರೈಸಿ ಈ ಬಗ್ಗೆ ವರದಿ ನೀಡಬೇಕು. ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು. ಈ ಪ್ರಕರಣವನ್ನು ನಮ್ಮ ಸರ್ಕಾರ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಿದೆ” ಎಂದರು.

ಕುಮಾರಸ್ವಾಮಿ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ನಂತರ ಸ್ಪಷ್ಟೀಕರಣ ನೀಡಲಿ ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಆಗ್ರಹಿಸಿದರು.

“ನಾವು ಕುಮಾರಸ್ವಾಮಿ ಅವರ ಡಿನೋಟಿಫೀಕೇಷನ್‌ ಹಗರಣದ ಸಂಪೂರ್ಣ ದಾಖಲೆ ಇಟ್ಟುಕೊಂಡು ಆರೋಪ ಮಾಡುತ್ತಿದ್ದೇವೆ. ಅವರು ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ವಿರುದ್ಧ ಮಾಡಿದ ಆರೋಪದಲ್ಲಿ ಮುಖ್ಯಮಂತ್ರಿಯವರ ಯಾವುದೇ ದಾಖಲೆ ನೀಡಿಲ್ಲ. ಈಗ ಬಿಜೆಪಿಯವರು ರಾಜ್ಯಪಾಲರ ಬಳಿಗೆ ಹೋಗಿ ದೂರು ಕೊಡಬೇಕು. ರಾಷ್ಟ್ರಪತಿಗಳು ಮುಡಾ ಪ್ರಕರಣದಲ್ಲಿ ಆಸಕ್ತಿ ತೋರಿದ್ದರು. ಈಗ ಈ ಪ್ರಕರಣದ ಬಗ್ಗೆಯೂ ರಾಷ್ಟ್ರಪತಿಗಳು ಮಾತನಾಡಲಿ ಎಂದು ಒತ್ತಾಯಿಸಿದರು.

ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಮಾತನಾಡಿ, ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರ ಇಲ್ಲದಿದ್ದರೂ ಸುಳ್ಳು ಆರೋಪ ಮಾಡಿ ಪಾದಯಾತ್ರೆ ಮಾಡಿದ ಬಿಜೆಪಿಯವರು ಈ ಪ್ರಕರಣದ ಬಗ್ಗೆ ಮಾತನಾಡಲಿ ಎಂದರು. ಕಾಂಗ್ರೆಸ್‌ ವಕ್ತಾರರಾದ ರಮೇಶ್‌ ಬಾಬು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

ಅಲೆಮಾರಿ ಸಮುದಾಯಗಳಿಗೆ ಸಾಂವಿಧಾನಿಕ ನ್ಯಾಯ ಸಿಗಲಿ: ಚಲನಚಿತ್ರ ನಿರ್ದೇಶಕಿ ಸುಮನ್ ಕಿತ್ತೂರು

ಪರಿಶಿಷ್ಟ ಜಾತಿ ಒಳಮೀಸಲಾತಿ ವಿಚಾರದಲ್ಲಿ ಅಲೆಮಾರಿ ಸಮುದಾಯಗಳಿಗೆ ಸಾಂವಿಧಾನಿಕ ನ್ಯಾಯ ಸಿಗಲಿ...

ಚಿತ್ರದುರ್ಗ | ಒಳಮೀಸಲಾತಿ ವರ್ಗೀಕರಣದಲ್ಲಿ ಅಲೆಮಾರಿಗಳಿಗೆ ಅನ್ಯಾಯ ಸರಿಪಡಿಸಿ; ಮಹಾನಾಯಕ ದಲಿತ ಸೇನೆ

ಒಳಮೀಸಲಾತಿ ವರ್ಗೀಕರಣದಲ್ಲಿ ಅಲೆಮಾರಿಗಳಿಗೆ ಪ್ರತ್ಯೇಕ ಮೀಸಲಾತಿ ಕಲ್ಪಿಸಿ ಸಾಮಾಜಿಕ ನ್ಯಾಯ ಎತ್ತಿ...

ಕರ್ನಾಟಕ ಕೃಷಿ ಇಲಾಖೆಯಿಂದ ರೈತರಿಗೆ ಡಿಜಿಟಲ್ ಬಲ: ಬಿಇಎಲ್ ಜೊತೆ ಒಡಂಬಡಿಕೆ

ಕೃಷಿ ಸೇವೆಗಳು ರೈತರಿಗೆ ಇನ್ನಷ್ಟು ಸುಲಭವಾಗಿ ದತ್ತಾಂಶ ಆಧಾರಿತವಾಗಿ ಮತ್ತು ಅವಶ್ಯಕತೆಗೆ...

Download Eedina App Android / iOS

X