ಸರ್ಕಾರಿ ಅಧಿಕಾರಿಯಂತೆ ನಟಿಸಿ, ಮದುವೆಯ ನೆಪದಲ್ಲಿ 50ಕ್ಕೂ ಹೆಚ್ಚು ಮಹಿಳೆಯರಿಗೆ ವಂಚಿಸಿದ್ದ ಆರೋಪಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಆತ ಸಂತ್ರಸ್ತ ಮಹಿಳೆಯರಿಂದ ಹಣ, ಒಡವೆಗಳನ್ನು ದೋಚಿದ್ದಾನೆಂದು ವರದಿಯಾಗಿದೆ.
ಆರೋಪಿಯನ್ನು ಮುಕೀಮ್ ಅಯೂಬ್ ಖಾನ್ ಎಂದು ಗುರುತಿಸಲಾಗಿದೆ. ಆತ, ವಿವಿಧ ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ಗಳ ಮೂಲಕ ಮುಸ್ಲಿಂ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ವಂಚಿಸಿದ್ದಾನೆ. ಆತನ ವಂಚನೆಗೆ ತುತ್ತಾದ ಎಲ್ಲ ಮುಸ್ಲಿಂ ಮಹಿಳೆಯರು ಶ್ರೀಮಂತ ಕುಟುಂಬಗಳಿಗೆ ಸೇರಿದವರಾಗಿದ್ದಾರೆ. ಓರ್ವ ಸಂತ್ರಸ್ತೆ ನ್ಯಾಯಾಂಗದಲ್ಲಿ ಅಧಿಕಾರಿಯಾಗಿದ್ದಾರೆ ಎಂದು ವರದಿಯಾಗಿದೆ.
ಆರೋಪಿಯ ವಂಚನೆಗಳ ಬಗ್ಗೆ ವಿವರಗಳನ್ನು ಹಂಚಿಕೊಂಡಿರುವ ಡಿಸಿಪಿ (ಅಪರಾಧ) ಎಸ್‌ಕೆ ಸೈನ್, “ಮುಕೀಮ್ ಬಗ್ಗೆ ನಮಗೆ ರಹಸ್ಯ ಮಾಹಿತಿ ಸಿಕ್ಕಿದೆ. ಆತ ಮದುವೆಯ ನೆಪದಲ್ಲಿ ಹಲವಾರು ಮಹಿಳೆಯರನ್ನು ವಂಚಿಸಿದ್ದಾನೆ. ಆತನ ವಂಚನೆಗಳ ಬಗ್ಗೆ ಹಲವು ರಾಜ್ಯಗಳ ಪೊಲೀಸರಿಂದ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ” ಎಂದು ತಿಳಿಸಿದ್ದಾರೆ.
“ಆರೋಪಿ ನೆಲೆಸಿದ್ದ ಹಲವಾರು ಗೌಪ್ಯ ಸ್ಥಳಗಳ ಮೇಲೆ ಪೊಲೀಸ್ ತಂಡಗಳು ದಾಳಿ ನಡೆಸಿವೆ. ಆತ ನಿರಂತರವಾಗಿ ತನ್ನ ವಾಸ್ತವ್ಯವನ್ನು ಬದಲಿಸುತ್ತಿದ್ದನು. ಆರೋಪಿ ಮುಕೀಮ್ ಗುಜರಾತ್‌ನಿಂದ ದೆಹಲಿಗೆ ಬರುತ್ತಿರುವ ಬಗ್ಗೆ ಖಚಿತ ಮಾಹಿತಿ ಸಿಕ್ಕಿದ್ದರಿಂದಾಗಿ, ಆತನನ್ನು ನಿಜಾಮುದ್ದೀನ್ ರೈಲು ನಿಲ್ದಾಣದಲ್ಲಿ ಬಂಧಿಸಲು ಸಾಧ್ಯವಾಯಿತು” ಎಂದು ವಿವರಿಸಿದ್ದಾರೆ.
“ಸರ್ಕಾರಿ ಅಧಿಕಾರಿಯಂತೆ ನಟಿಸುವ ಮೂಲಕ ಮುಸ್ಲಿಂ ಸಮುದಾಯದ ಅವಿವಾಹಿತೆಯರು, ವಿಧವೆಯರು ಹಾಗೂ ವಿಚ್ಛೇದಿತ ಮಹಿಳೆಯರನ್ನು ಗುರಿಯಾಗಿಸಿಕೊಳ್ಳುತ್ತಿದ್ದನು. ಮಹಿಳೆಯರೊಂದಿಗೆ ನಾಚೂಕಿನಿಂದ ಮಾತನಾಡುವ ಮೂಲಕ, ಉತ್ತಮ ಬಾಂಧವ್ಯ ಬೆಳೆಸಿಕೊಳ್ಳುತ್ತಿದ್ದನು. ಬಳಿಕ, ಮದುವೆಯಾಗುವುದಾಗಿ ನಂಬಿಸಿ ಹಣ, ಒಡವೆಗಳನ್ನು ದೋಚುತ್ತಿದ್ದನು” ಎಂದು ಪೊಲೀಸರು ತಿಳಿಸಿದ್ದಾರೆ.