ಶಾಸಕ ಮುನಿರತ್ನ ಭ್ರಷ್ಟಾಚಾರ, ಅನ್ಯಾಯ, ಹನಿಟ್ರ್ಯಾಪ್ ಮಾಫಿಯಾ ಸಮರ್ಥಿಸಿಕೊಳ್ಳುತ್ತಿರುವ ಬಿಜೆಪಿ ನಾಯಕರಿಗೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಛೀಮಾರಿ
ಅತ್ಯಾಚಾರ, ಸೆಕ್ಸ್ ಹನಿಟ್ರ್ಯಾಪ್, ಏಡ್ಸ್ ಹರಡಿಸುವ ವ್ಯವಸ್ಥಿತ ಮಾಫಿಯಾದಲ್ಲಿ ಶಾಸಕ ಮುನಿರತ್ನ ಭಾಗಿಯಾಗಿದ್ದು, ಇಂತಹವರನ್ನು ಸಮರ್ಥಿಸಿಕೊಳ್ಳುತ್ತಿರುವ ಬಿಜೆಪಿಯ ಆರ್.ಅಶೋಕ್ ಮತ್ತು ಕೇಂದ್ರ ಸಚಿವ ಕುಮಾರಸ್ವಾಮಿಗೆ ಮಾನ, ಮರ್ಯಾದೆ ಇಲ್ಲ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಕಿಡಿಕಾರಿದರು.
ಚಿಕ್ಕಬಳ್ಳಾಪುರ ನಗರದ ಜಿಲ್ಲಾಧಿಕಾರಿ ಕಚೇರಿಯ ಜಿಪಂ ಸಭಾಂಗಣದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಜೋಡಿಗ್ರಾಮಗಳ ಪಹಣಿ ವಿತರಣೆ ಕಾರ್ಯಕ್ರಮದ ಭಾಗವಹಿಸಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಮುನಿರತ್ನ ಭ್ರಷ್ಟಾಚಾರಿ ಎಂಬುದು ಎಲ್ಲರಿಗೂ ತಿಳಿದಿದ್ದ ವಿಚಾರ. ಅವರ ಮನೆಯಲ್ಲೇ ಬಿಬಿಎಂಪಿ ಬಿಲ್ ಬರೀತಾರೆ ಎಂಬುದು ಮೊದಲೇ ತಿಳಿದಿತ್ತು. ಗುತ್ತಿಗೆದಾರನ ಬಳಿ ಲಂಚ ಕೇಳಿರುವುದು, ಸರಕಾರಿ ಮಹಿಳಾ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು, ಅವರನ್ನು ಹೆದರಿಸಿ, ರಾಜಕಾರಣಿಗಳನ್ನ ಹನಿಟ್ರ್ಯಾಪ್ ಮಾಡಿರುವುದು ದೂರುಗಳಿಂದ ಬೆಳಕಿಗೆ ಬಂದಿದೆ ಎಂದರು.
ಬಿಜೆಪಿ ನಾಯಕರ ಕುಮ್ಮಕ್ಕು ಶಂಕೆ :
ವ್ಯವಸ್ಥಿತವಾದ ಏಡ್ಸ್ ಮತ್ತು ಹನಿಟ್ರ್ಯಾಪ್ ಮಾಫಿಯಾ ನಡೆಸುತ್ತಿದ್ದರು ಎಂಬುದು ನಿಜಕ್ಕೂ ಅಘಾತಕಾರಿ ವಿಚಾರವಾಗಿದ್ದು, ಬಿಜೆಪಿಯ ಮಹಿಳಾ ಮೋರ್ಚಾ ಕಾರ್ಯಕರ್ತೆ ನೀಡಿದ ದೂರಿನಿಂದ ಇದು ಬೆಳಕಿಗೆ ಬಂದಿದೆ. ಬಿಜೆಪಿ ಪಕ್ಷದವರೇ ದೂರು ನೀಡಿದ್ದರೂ, ಮುನಿರತ್ನ ಅವರನ್ನ ಸಮರ್ಥಿಸಿಕೊಳ್ಳುತ್ತಿರುವುದನ್ನ ನೋಡಿದರೆ, ಈ ಎಲ್ಲಾ ಅಕ್ರಮಗಳಿಗೆ ಬಿಜೆಪಿ ನಾಯಕರೂ ಕುಮ್ಮಕ್ಕು ನೀಡಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದರು.
ಭ್ರಷ್ಟಾಚಾರ ಅಷ್ಟೇ ಅಲ್ಲ, ದಲಿತರ, ಒಕ್ಕಲಿಗರ ನಿಂದನೆ, ಸೆಕ್ಸ್ ಟ್ರ್ಯಾಪ್, ಏಡ್ಸ್ ಮಾಫಿಯಾ ಕುರಿತು ತನಿಖೆಯಾಗಬೇಕೆಂದು ಈಗಾಗಲೇ ಸಿಎಂ ಅವರೊಂದಿಗೆ ಚರ್ಚಿಸಿದ್ದೇವೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದರೆ ಸೂಕ್ತ ತನಿಖೆಯಾಗಬೇಕು. ಇದರಿಂದ ಸತ್ಯ ಹೊರಬರಬೇಕು ಎಂದರು.
ಡಿನೋಟಿಫಿಕೇಶನ್ ಹಗರಣ ಎಸ್.ಐ.ಟಿ ತನಿಖೆಯಾಗಲಿ :
ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಇಬ್ಬರೂ ಸೇರಿ ಸ್ವಂತ ಲಾಭಕ್ಕಾಗಿ ಬೆಂಗಳೂರಿನ ಗಂಗೇನಹಳ್ಳಿಯಲ್ಲಿ ನೂರಾರು ಕೋಟಿ ಬೆಲೆಬಾಳುವ 1.11 ಎಕರೆ ಜಾಗವನ್ನು ಡಿನೋಟಿಫೀಕೇಶನ್ ಮಾಡಿಸಿಕೊಂಡು ಅವರ ಕುಟುಂಬಸ್ಥರ ಹೆಸರಿಗೆ ಮಾಡಿಸಿಕೊಂಡಿರುವ ಕುರಿತು ದಾಖಲೆ ಸಮೇತ ಮುಂದಿಟ್ಟಿದ್ದೇವೆ. ಪ್ರಧಾನ ಕಾರ್ಯದರ್ಶಿಯವರ ಹಿಂಬರಹವನ್ನು ಉಲ್ಲಂಘಿಸಿ ಡಿನೋಟಿಪೀಕೇಶನ್ ಮಾಡಿದ್ದಾರೆ. ಸತ್ತವರ ಹೆಸರಲ್ಲಿ ಡಿನೋಟಿಫಿಕೇಶನ್ ಮಾಡಿದ್ದಾರೆ. ಇದರ ಬಗ್ಗೆ ಅವರು ಉತ್ತರ ಕೊಡಲಿ ಎಂದು ತಿರುಗೇಟು ನೀಡಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಜ್ವಲ್-ಮುನಿರತ್ನ ತೋರಿದ ಪಾತಕದ ಮಾದರಿ ಎಂಥವು? ಮಿಕ್ಕವರು ಅನುಸರಿಸಿದರೆ ಹೆಣ್ಣುಮಕ್ಕಳ ಪಾಡೇನು?
ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ನಗರ ಶಾಸಕ ಪ್ರದೀಪ್ ಈಶ್ವರ್, ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೇಶವರೆಡ್ಡಿ ಸೇರಿದಂತೆ ಇತರರಿದ್ದರು.