ನಾಡಹಬ್ಬ ದಸರೆಗೆಂದು ಬಂದಿದ್ದ ಎರಡು ಆನೆಗಳ ನಡುವೆ ಗುದ್ದಾಟ ನಡೆದಿದ್ದರಿಂದ ಆತಂಕ ಸೃಷ್ಟಿಯಾದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.
ದಸರಾಕ್ಕೆಂದು ಬಂದಿದ್ದ ಧನಂಜಯ ಹಾಗೂ ಕಂಜನ್ ಎಂಬ ಆನೆಗಳ ನಡುವೆ ಗುದ್ದಾಟ ನಡೆದಿದ್ದು, ಈ ವೇಳೆ ಕಂಜನ್ ಆನೆಯ ಮೇಲೆ ಕುಳಿತಿದ್ದ ಮಾವುತ ಕೆಳಕ್ಕೆ ಬಿದ್ದಿದ್ದಾನೆ.
ಮೈಸೂರು ಅರಮನೆಯ ಆವರಣದಿಂದ ಹೊರಕ್ಕೆ ಓಡಿ ಬಂದ ಕಂಜನ್ ಹಾಗೂ ಧನಂಜಯ ಆನೆಗಳು, ನೋಡನೋಡುತ್ತಿದ್ದಂತೆಯೇ ಸಾರ್ವಜನಿಕರಲ್ಲಿ ಆತಂಕದ ವಾತಾವರಣ ಸೃಷ್ಟಿಸಿತು.
ಮಾವುತನನ್ನ ಕೆಳಕ್ಕೆ ಬೀಳಿಸಿ ಹೊರಕ್ಕೆ ಬಂದಿದ್ದ ಕಂಜನ್ ಆನೆಯನ್ನು ನಿಯಂತ್ರಿಸಲು ಹರಸಾಹಸ ಪಟ್ಟು, ಕೊನೆಗೆ ನಿಯಂತ್ರಣ ಸಾಧಿಸಲು ಸಾಧ್ಯವಾಯಿತು. ಆನೆಗಳ ಜಗಳ ಕಂಡವರು ದಿಕ್ಕಾಪಾಲಾಗಿ ಓಡಿದ್ದಾರೆ.
ಅರಮನೆಯ ಜಯಮಾರ್ತಾಂಡ ದ್ವಾರದ ಮೂಲಕ ಹೊರಗಡೆ ಬಂದ ಆನೆಗಳು, ರಸ್ತೆಯ ಕಡೆಗೆ ಓಡಿತು.
ಮಾವುತ- ಕಾವಾಡಿಗಳ ಚಾಣಾಕ್ಷತದಿಂದ ಆನೆಗಳ ಆಟೋಟಕ್ಕೆ ಬ್ರೇಕ್ ಹಾಕಲಾಯಿತು. ಬಳಿಕ ಆನೆಗಳನ್ನು ಅರಮನೆಗೆ ಕರೆ ತರುವಲ್ಲಿ ಸಿಬ್ಬಂದಿ ಯಶಸ್ವಿಯಾದರು. ಸದ್ಯ ಎರಡೂ ಆನೆಗಳನ್ನು ಕೋಡಿಸೋಮೇಶ್ವರ ದೇವಸ್ಥಾನ ಸಮೀಪ ಕಟ್ಟಿ ಹಾಕಲಾಗಿದೆ ಎಂದು ತಿಳಿದು ಬಂದಿದೆ.
ಆನೆಗಳ ಜಗಳದ ವೀಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ದಸರಾ ಸಿದ್ಧತೆಯ ನಡುವೆ ಈ ರೀತಿಯ ಬೆಳವಣಿಗೆ ಆಗಿರುವುದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿತು.
