ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ಪ್ರಣಾಳಿಕೆಯಲ್ಲಿ ಒಳಮೀಸಲಾತಿ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿತ್ತು. ಮೂಗಿಗೆ ತುಪ್ಪ ಸವರಿ ಈಗ ಮಾತು ತಪ್ಪಿದ ಸರಕಾರವಾಗಿದೆ. ಅಕ್ಟೋಬರ್ 9ರ ಒಳಗೆ ಒಳಮೀಸಲಾತಿ ಜಾರಿ ಮಾಡುವುದಕ್ಕೆ ಗಡುವು ದಿನ ಎಂದು ಒಳ ಮೀಸಲಾತಿ ಸಂಚಾಲಕ ಹರಿರಾಮ್ ತಿಳಿಸಿದರು.
ರಾಯಚೂರು ಜಿಲ್ಲೆಯ ಮಸ್ಕಿ ನಗರದ ಭ್ರಮರಾಂಭ ಕಲ್ಯಾಣ್ ಮಂಟಪದಲ್ಲಿ ಒಳ ಮೀಸಲಾತಿ ಐಕ್ಯ ಹೋರಾಟ ಸಮಿತಿ ವತಿಯಿಂದ ಜಾರಿಗಾಗಿ ಐಕ್ಯ ಹೋರಾಟ ಬೃಹತ್ ರ್‍ಯಾಲಿ ಹಾಗೂ ಬಹಿರಂಗ ಸಭೆಯಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಅವರು ಮಾತನಾಡಿದರು.
ಚುನಾವಣೆಗೂ ಮುಂಚೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಳ ಮೀಸಲಾತಿ ಜಾರಿ ನಾವು ಮಾಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಬಿಡುಗಡೆ ಮಾಡಿದ್ದರು. ಮತ ಬ್ಯಾಂಕ್ ಪಡೆದು ಅಧಿಕಾರ ಚುಕ್ಕಾಣಿ ಹಿಡಿದು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಭಾರತ ದೇಶದ ಬಹುತೇಕ ರಾಜ್ಯದಲ್ಲಿ ಜನಸಂಖ್ಯೆಯ ಪ್ರಕಾರ ಪಂಜಾಬ್, ತಮಿಳುನಾಡು, ಆಂಧ್ರಪ್ರದೇಶ ಸೇರಿ ಆಯಾ ಭಾಗದ ರಾಜ್ಯ ಸರಕಾರ ಒಳ ಮೀಸಲಾತಿ ಜಾರಿ ಮಾಡಿದೆ. ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದ್ದರೂ ಕೂಡ ರಾಜ್ಯ ಸರಕಾರ ಜಾರಿಗೆ ಮಾಡಲು ಹಿಂದೇಟು ಹಾಕುತ್ತಿದೆ. ಹಿಂದೆ ಬಿಜೆಪಿಗೆ ತಕ್ಕ ಪಾಠ ಕಲಿಸಿದ್ದೇವೆ. ಮುಂದೆ ನೀವು ಜಾರಿ ಮಾಡಿಲ್ಲ ಅಂದರೆ ಬುಡದಿಂದ ಕಿತ್ತು ಎಸೆಯುತ್ತವೆ ಎಂದು ಎಚ್ಚರಿಕೆ ನೀಡಿದರು.
ಚುನಾವಣೆ ಸಮಯದಲ್ಲಿ ನಮ್ಮ ಮಾದಿಗ ಸಮುದಾಯವು ಪರಿಶ್ರಮ ಪಟ್ಟು ಅಧಿಕಾರಕ್ಕೆ ತಂದ ಋಣ ಸಿದ್ದರಾಮಯ್ಯ ಅವರು ಮರೆಯಬಾರದು ಎಂದು ತಿಳಿಸಿದರು.
ನಂತರ ಮಾತನಾಡಿದ ಒಳ ಮೀಸಲಾತಿ ಹೋರಾಟಗಾರ ಸಂತೋಷ್ ಕೋಡಿಹಳ್ಳಿ, ಕಾಂಗ್ರೆಸ್ ಪಕ್ಷವು 2022ರಲ್ಲಿ ಚಿತ್ರದುರ್ಗ ಜಿಲ್ಲೆಯ ಪರಿಶಿಷ್ಟ ಜಾತಿ ಪರಿಶಿಷ್ಠ ಪಂಗಡಗಳ ಬೃಹತ್ ಸಮಾವೇಶವನ್ನು ಆಯೋಜಿಸಿ ಹಿರಿಯ ನಾಯಕರ ಸಮ್ಮುಖದಲ್ಲಿಯೇ ಸರ್ಕಾರ ರಚನೆಯಾದ ಮೊದಲ ಅಧಿವೇಶನದಲ್ಲಿಯೇ ಮೀಸಲಾತಿ ಬೇಡಿಕೆಯನ್ನು ಜಾರಿ ಮಾಡುತ್ತೇವೆ ಎಂದು ಘೋಷಿಸಿತ್ತು. ಆದರೂ ಇದುವರೆಗೂ ಸಕಾರಾತ್ಮಕವಾದ ನಿಲುವನ್ನು ಕೈಗೊಳ್ಳದೆ ಮಾಡುತ್ತೇವೆ, ನೋಡುತ್ತೇವೆ ಎಂದು ಕಾಲಹರಣ ಮಾಡುತ್ತಿದ್ದಾರೆ ಎಂದು ಹೇಳಿದರು.
ಇದನ್ನು ಓದಿದ್ದೀರಾ? ರಾಯಚೂರು | ಶಾಲಾ ಪ್ರಾರ್ಥನೆಯ ವೇಳೆಯಲ್ಲಿ ಹೃದಯಾಘಾತ: 8ನೇ ತರಗತಿ ವಿದ್ಯಾರ್ಥಿ ಸಾವು
ತಾವು ಘೋಷಿಸಿದ ಪಂಚ ಗ್ಯಾರಂಟಿಗಳ ಅನುಷ್ಠಾನಕ್ಕಾಗಿ ರೂ.6೦ ಸಾವಿರ ಕೋಟಿ ಅನುದಾನವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಿಟ್ಟ ಅನುದಾನದಿಂದಲೇ ಬಳಕೆ ಮಾಡಿದಾಗಲೂ ನಮ್ಮ ಸಮುದಾಯಗಳು ಅತ್ಯಂತ ಸಾಮಾಧಾನದಿಂದ ತಮ್ಮ ಬೆಂಬಲಕ್ಕೆ ನೈತಿಕವಾಗಿ ನಿಂತಿರುವುದನ್ನು ತಾವುಗಳು ಸೂಕ್ಷ್ಮವಾಗಿ ಗಮನಿಸಿದಂತೆ ಕಾಣುತ್ತಿಲ್ಲ ಎಂದರು.
ಪ್ರತಿಭಟನೆಯಲ್ಲಿ ರಾಜ್ಯ ಸಮಿತಿ ಮುಖಂಡ ಅಂಬಣ್ಣ ಅರೊಲಿಕರ್, ಕರಿಯಪ್ಪ ಗುಡಿಮನಿ ,ಎಚ ಬಿ ಮುರಾರಿ , ಬಾಲಸ್ವಾಮಿ ಕೊಡ್ಲಿ , ಭಾಸ್ಕರ್ ಪ್ರಸಾದ , ಎಂ ಆರ್ ಭೇರಿ ,ಹನುಮಂತಪ್ಪ , ಅಬ್ರಾಹಂ ಹೊನ್ನಟಗಿ, ಸೇರಿದಂತೆ ನುರಾರು ಮುಖಂಡರು ಭಾಗವಹಿಸಿದ್ದರು.
