ಕಳೆದ ಒಂದು ವರ್ಷದಿಂದ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ನಡೆಯುತ್ತಿದೆ. ಈವರೆಗೆ ಸಾವಿರಾರು ಜನರು ಸಾವನ್ನಪ್ಪಿದ್ದಾರೆ. ಇದೀಗ, ಮಣಿಪುರ ಸರ್ಕಾರದ ಗ್ರಾಹಕ ವ್ಯವಹಾರಗಳ ಸಚಿವ ಎಲ್ ಸುಸಿಂದ್ರೋ ಅವರ ಆಪ್ತ ಸಹಾಯಕರನ್ನು ಶಸ್ತ್ರಸಜ್ಜಿತ ಗುಂಪೊಂದು ಅಪಹಿರಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಚಿವ ಎಲ್ ಸುಸಿಂದ್ರೋ ಅವರ ಆಪ್ತ ಸಹಾಯಕ ಎಸ್ ಸೊಮೊರೆಂಡ್ರೋ (43) ಅವರನ್ನು ಇಂಫಾಲ್ ಪೂರ್ವ ಜಿಲ್ಲೆಯಲ್ಲಿರುವ ಅವರ ನಿವಾಸದ ಬಳಿ ಗುಂಪೊಂದು ಅಪಹರಿಸಿದೆ. ಅಪಹರಣದ ಹೊಣೆಯನ್ನು ಯಾವುದೇ ಗುಂಪು ಹೊತ್ತುಕೊಂಡಿಲ್ಲ. ಅವರ ರಕ್ಷಣೆಗಾಗಿ ಪೊಲೀಸರು ಹುಡುಕಾಟ ಮತ್ತು ತನಿಖೆ ನಡಸುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಿಷ್ಣುಪುರ ಜಿಲ್ಲೆಯಲ್ಲಿ ಗುರುವಾರ ರಾತ್ರಿ, ಮಣಿಪುರ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಓಯಿನಮ್ ನಬಕಿಶೋರ್ ಅವರ ಮನೆ ಮೇಲೆ ಶಸ್ತ್ರಸಜ್ಜಿತ ಗುಂಪೊಂದು ದಾಳಿ ಮಾಡಿತ್ತು. ಐದಕ್ಕೂ ಹೆಚ್ಚು ಮಂದಿ ಮೇಲೆ ಗುಂಡಿನ ದಾಳಿ ನಡೆಸಿ, ಹತ್ಯೆಗೈದಿತ್ತು. ಈ ಘಟನೆ ನಡೆದ ಒಂದು ದಿನದ ಬಳಿಕ, ಸಚಿವರ ಆಪ್ತ ಸಹಾಯಕನ ಅಪಹರಣವಾಗಿದೆ.
ಅಪಹರಣ ಸ್ಥಳದಲ್ಲಿ ಬಿದ್ದಿದ್ದ ಖಾಲಿ ಕಾಟ್ರಿಡ್ಜ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಿಷ್ಣುಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
“ಅವರನ್ನು ರಕ್ಷಿಸಲು ಪೊಲೀಸರು ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ನಾವು ಕೆಲವರ ಮೇಲೆ ನಿಗಾ ಇಡುತ್ತಿದ್ದೇವೆ. ತನಿಖೆ ನಡೆಯುತ್ತಿರುವುದರಿಂದ ಹೆಚ್ಚಿನ ವಿವರ ನೀಡಲಾಗದು” ಎಂದು ಮಣಿಪುರ ಸರ್ಕಾರದ ಭದ್ರತಾ ಸಲಹೆಗಾರ ಕುಲ್ದೀಪ್ ಸಿಂಗ್ ಹೇಳಿದ್ದಾರೆ.