ಕೊಪ್ಪಳದ ಅಟಲ್ ಬಿಹಾರಿ ವಾಜಪೇಯಿ ಮಹಾವಿದ್ಯಾಲಯ ಕಾಲೇಜಿನ ಪ್ರವೇಶಾತಿ ಶುಲ್ಕವು ಏಕಾಏಕಿ ಹೆಚ್ಚಿಸಿರುವುದರಿಂದ ಆಕ್ರೋಶಗೊಂಡ ಕಾನೂನು ಪದವಿ ವಿದ್ಯಾರ್ಥಿಗಳು, ಶುಲ್ಕ ಕಡಿತಗೊಳಿಸಬೇಕು ಎಂದು ಆಗ್ರಹಿಸಿ ಕಾಲೇಜು ಮುಂಭಾಗ ಪ್ರತಿಭಟಿಸಿದರು.
2023-24ನೇ ಸಾಲಿನಲ್ಲಿದ್ದ ₹22450 ಶುಲ್ಕವನ್ನು, ₹30,000ಕ್ಕೆ ಹೆಚ್ಚಿಸಲಾಗಿದೆ. ಇದು ಖಂಡನೀಯ. ಇದು ಎಲ್ಲ ದ್ವಿತೀಯ ಮತ್ತು ತೃತೀಯ ವರ್ಷದ ವಿದ್ಯಾರ್ಥಿಗಳಿಗೆ ಹೊರೆಯಾಗಿ ಪರಿಣಮಿಸುತ್ತಿದೆ. ತಕ್ಷಣ ಕಾಲೇಜಿನ ಆಡಳಿತ ಮಂಡಳಿಯವರು ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಶುಲ್ಕ ಕಡಿತಗೊಳಿಸಿ, ವಿದ್ಯಾರ್ಥಿಗಳ ಕಲಿಕೆ ಸುಗಮ ಮಾಡಲು ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಕಲ್ಯಾಣ ಕರ್ನಾಟಕ ಹಿಂದುಳಿದ ಭಾಗ. ಇಲ್ಲಿ ಬರುವ ವಿದ್ಯಾರ್ಥಿಗಳಲ್ಲಿ ಹಲವಾರು ಬಡತನದ ವರ್ಗದವರು. ಅದರಲ್ಲೂ ಹೆಚ್ಚಿನವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರು. ಏಕಾಏಕಿ ಶುಲ್ಕ ಹೆಚ್ಚಿಸಿದರೆ ಮಕ್ಕಳ ಜೀವನ ಕತ್ತಲೆಯಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹೆಸರು ಹೇಳಲು ಇಚ್ಛಿಸದ ಕಾಲೇಜು ವಿದ್ಯಾರ್ಥಿಯೋರ್ವ ಮಾತನಾಡಿ, ಹಿಂದೆ ಕಾಲೇಜು ಪ್ರವೇಶಾತಿಗೆ ಹಾಜರಿಪಡಿಸಿದಾಗ ಮುಂದಿನ ಎರಡು ವರ್ಷ ಶುಲ್ಕ ಕಡಿಮೆಗೊಳಿಸಲಾಗುವುದು ಎಂದು ಭರವಸೆ ನೀಡಿದ್ದರು. ಏಕಾಏಕಿ ದಿಢೀರನೆ ಶುಲ್ಕ ಹೆಚ್ಚಿಸಿರುವುದು ಇದು ಯಾವ ನ್ಯಾಯ? ಹಿಂದಿನ ವರ್ಷ ಕಾಲೇಜು ಸೇರಲು ಬಂದಾಗ ಪ್ರವೇಶಾತಿ ಶುಲ್ಕವನ್ನು ಪಾವತಿಸಲಾಗದೆ ಹಲವಾರು ಸಹೋದರ ಸಹೋದರಿಯರು ಕಾನೂನು ಪದವಿ ಪಡೆಯುವುದರಿಂದ ವಂಚಿತರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಕಾನೂನು ಪದವಿ ಪಡೆಯುವುದರಿಂದ ವಂಚಿತರಾದ ಇತರೆ ವಿದ್ಯಾರ್ಥಿಗಳ ಸಾಲಿಗೆ ನಮ್ಮನ್ನು ಸೇರಲು ಅವಕಾಶ ಮಾಡಿಕೊಡಬೇಡಿ. ಏಕಾಏಕಿ ಹೆಚ್ಚಿಸಿರುವುದರಿಂದ ನಮ್ಮ ವಿದ್ಯಾಭ್ಯಾಸಕ್ಕೆ ಕಲ್ಲು ಹಾಕಬೇಡಿ ಎಂದು ಕಾನೂನು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ಮೈಸೂರು | ದಸರಾಕ್ಕೆ ಬಂದಿದ್ದ ಆನೆಗಳ ನಡುವೆ ಗುದ್ದಾಟ: ದಿಕ್ಕಾಪಾಲಾಗಿ ಓಡಿದ ಜನ!
ಕಾಲೇಜು ಮಂಡಳಿ ದ್ವಿತೀಯ ಮತ್ತು ತೃತೀಯ ವರ್ಷದಲ್ಲಿ ಕಡಿಮೆಗೊಳಿಸಲಾಗುವುದು ಎಂದು ಹೇಳಿದ್ದರು. ಆದರೆ, 2023-24 ನೇ ಸಾಲಿನಲ್ಲಿ ದ್ವಿತೀಯ ಮತ್ತು ತೃತೀಯ ವರ್ಷದ ವಿದ್ಯಾರ್ಥಿಗಳಿಗೆ ₹22450ರ ಜೊತೆಗೆ ಅಭಿವೃದ್ಧಿ ಶುಲ್ಕವಾಗಿ ₹1000ಗಳನ್ನು ಹೆಚ್ಚುವರಿಯಾಗಿ ಪಾವತಿಸಿಕೊಂಡಿದ್ದಾರೆ. ಪ್ರಥಮ ವರ್ಷದ ವಿದ್ಯಾರ್ಥಿಗಳಿಂದ ₹22450 ರ ಜೊತೆಗೆ ಅಭಿವೃದ್ಧಿ ಶುಲ್ಕವಾಗಿ ₹3000ಗಳನ್ನು ಹೆಚ್ಚುವರಿಯಾಗಿ ಪಾವತಿಸಿಕೊಂಡಿದ್ದಾರೆ. ಆದರೆ, ನೀಡಿದ ಭರವಸೆಯ ವಿರುದ್ಧವಾಗಿ ಪ್ರಸ್ತುತ 2024-25ನೇ ಸಾಲಿನಲ್ಲಿ ಏಕಾಏಕಿ ₹7550 ಅನ್ನು ಹೆಚ್ಚಿಸಿರುವುದು ಖಂಡನೀಯ ಎಂದು ವಿದ್ಯಾರ್ಥಿಗಳು ಕಿಡಿಕಾರಿದ್ದಾರೆ.
ಕಾಲೇಜು ಆವರಣದಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು, ಶುಲ್ಕ ಕಡಿತಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
